ADVERTISEMENT

ನಿದ್ದೆ ಎಂದು ‘ನಿದ್ದೆ’ಗೆ ಜಾರಬೇಡಿ!

ಡಾ.ಕುಶ್ವಂತ್ ಕೋಳಿಬೈಲು
Published 31 ಜುಲೈ 2023, 23:30 IST
Last Updated 31 ಜುಲೈ 2023, 23:30 IST
   

ದಿನದಲ್ಲಿ ನಡೆದ ಘಟನೆಗಳನ್ನು ದೀರ್ಘಕಾಲದ ನೆನಪಾಗಿ ಪರಿವರ್ತಿಸುವುದರ ಜೊತೆಗೆ ನಮ್ಮ ಸುಪ್ತ ಜಾಗರೂಕತೆ ಮತ್ತು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುವಲ್ಲಿಯೂ ನಿದ್ದೆ ಪ್ರಮುಖ ಪಾತ್ರವನ್ನು ವಹಿಸುತ್ತದೆ.

***

ಸಮತೋಲನ ಆಹಾರ, ನಿತ್ಯ ವ್ಯಾಯಾಮ ಮತ್ತು ಸರಿಯಾದ ನಿದ್ದೆ ಉತ್ತಮವಾದ ಆರೋಗ್ಯಕ್ಕೆ ಬೇಕಾದ ಮೂರು ಆಧಾರ ಸ್ತಂಭಗಳು. ಆಹಾರ ಮತ್ತು ವ್ಯಾಯಾಮದ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ತಲೆಕೆಡಿಸಿಕೊಳ್ಳುವ ನಾವು ನಮ್ಮ ನಿದ್ದೆಯ ಅವಧಿ ಮತ್ತು ಗುಣಮಟ್ಟದ ಬಗ್ಗೆ ಎಚ್ಚರಿಕೆಯನ್ನು ವಹಿಸುವುದಿಲ್ಲ. ಹೆಚ್ಚು ನಿದ್ದೆ ಮಾಡುವವರನ್ನು ಸೋಮಾರಿಗಳೆಂದು ನಿಂದಿಸುವುದು ಮತ್ತು ಲೇವಡಿ ಮಾಡುವುದರ ಮೂಲಕ ನಾವು ಚೆನ್ನಾಗಿ ನಿದ್ದೆ ಮಾಡುವವರನ್ನು ಅಪಹಾಸ್ಯ ಮಾಡುತ್ತೇವೆ. ನಿದ್ದೆಯನ್ನು ನಿಯಂತ್ರಣ ಮಾಡಲು ಆಗದವರನ್ನು ನಾವು ದುರ್ಬಲರು ಮತ್ತು ಇಚ್ಛಾಶಕ್ತಿಯ ಕೊರತೆಯಿರುವವರು ಎಂದು ಮೌಲ್ಯಮಾಪನ ಮಾಡುತ್ತೇವೆ. ಬೇಜವಾಬ್ದಾರಿಯಿಂದ ವರ್ತಿಸಿದವರನ್ನೂ ನಾವು ‘ಏಕೆ ಈ ವಿಚಾರದಲ್ಲಿ ನಿದ್ದೆ ಮಾಡಿದಿರಿ’ ಎಂದು ಕುಹಕವಾಡುತ್ತೇವೆ.

ADVERTISEMENT

ಕ್ರಿಯಾಶೀಲ ಮನುಷ್ಯರು ಹೆಚ್ಚು ಕೆಲಸ ಮಾಡಲು ಅಡ್ಡ ಬರುವ ನಿದ್ದೆಯನ್ನು ಶಾಪವೆಂಬಂತೆ ಪರಿಗಣಿಸುವ ವಾತಾವರಣವೂ ಒಂದಾನೊಂದು ಕಾಲದಲ್ಲಿತ್ತು. ಎರಡನೆಯ ವಿಶ್ವಯುದ್ಧದಲ್ಲಿ ಫೈಟರ್ ಪೈಲೆಟ್‌ಗಳು ನಿದ್ದೆಯಿಲ್ಲದೆ ಕಾರ್ಯಾಚರಣೆ ಮಾಡುವ ಸಲುವಾಗಿ ಅವರನ್ನು ‘ಯ್ಯಾಫಿಟಮೈನ್ಸ್’ (Amphetamines) ಎಂಬ ಪದಾರ್ಥವನ್ನು ತಿನ್ನಿಸಲಾಗುತ್ತಿತ್ತು. ಎಂದರೆ, ನಮ್ಮ ಆರೋಗ್ಯದ ಅಡಿಪಾಯವಾದ ನಿದ್ದೆಗೆ ನಾವೇ ಹಲವು ಕಳಂಕಗಳನ್ನು ಅಂಟಿಸಿಬಿಟ್ಟಿದ್ದೇವೆ; ನಿದ್ದೆಯ ಅಗತ್ಯತೆ ಮತ್ತು ಪ್ರಾಮುಖ್ಯವನ್ನು ನಿರಂತರವಾಗಿ ಅಲ್ಲಗೆಳೆಯುತ್ತಬಂದಿದ್ದೇವೆ !

ಕೈಗಾರಿಕಾಗಳು ಮತ್ತು ವಿವಿಧ ವಾಣಿಜ್ಯ ಕ್ಷೇತ್ರಗಳು ಬೆಳೆದಂತೆ ದಿನದ ಇಪ್ಪತ್ತನಾಲ್ಕು ಗಂಟೆ ಕಾರ್ಯನಿರ್ವಹಿಸಬೇಕಾಗಿ ಬರುವ ಆಸ್ಪತ್ರೆ, ವಿಮಾನನಿಲ್ದಾಣ ಮತ್ತು ಕಾರ್ಖಾನೆಗಳಲ್ಲಿ ರಾತ್ರಿ ಪಾಳಿಯಲ್ಲಿ ಲಕ್ಷಾಂತರ ಜನರು ಕೆಲಸ ಮಾಡುತ್ತಿದ್ದಾರೆ. ಸರಿಯಾದ ನಿದ್ದೆಯಿಂದ ವಂಚಿತರಾಗುತ್ತಿರುವ ಜನರು ಜಾಸ್ತಿಯಾದಂತೆ, ನಿದ್ರಾಹೀನತೆಯು ಆರೋಗ್ಯದ ಮೇಲೆ ಉಂಟುಮಾಡುವ ದುಷ್ಪರಿಣಾಮಗಳೂ ಅನಾವರಣಗೊಳ್ಳುತ್ತಿವೆ.

ನಿದ್ದೆಯು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಎಷ್ಟು ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ. ಮನುಷ್ಯ ನಿದ್ದೆ ಮಾಡಿದಾಗ ಅವನ ಮೆದುಳಿನ ಎಲ್ಲಾ ಚಟುವಟಿಕೆಗಳು ನಿಲ್ಲುವುದಿಲ್ಲ. ಮೆದುಳಿನೊಳಗೆ ವಿವಿಧ ವಿದ್ಯುತ್ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತದೆ. ದಿನದಲ್ಲಿ ನಡೆದ ಘಟನೆಗಳನ್ನು ದೀರ್ಘಕಾಲದ ನೆನಪಾಗಿ ಪರಿವರ್ತಿಸುವುದರ ಜೊತೆಗೆ ನಮ್ಮ ಸುಪ್ತ ಜಾಗರೂಕತೆ ಮತ್ತು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುವಲ್ಲಿಯೂ ನಿದ್ದೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸ್ಪಷ್ಟವಾಗಿ ಆಲೋಚನೆ ಮಾಡುವುದರಿಂದ ಹಿಡಿದು ಭಾವನಾತ್ಮಕ ಸ್ಥಿರತೆಯನ್ನು ಕಾಯ್ದುಕೊಳ್ಳುವುದಕ್ಕೂ ಮನುಷ್ಯ ಉತ್ತಮವಾಗಿ ನಿದ್ದೆ ಮಾಡುವ ಅವಶ್ಯಕತೆಯಿದೆ. ಹೆಚ್ಚಿನ ರಸ್ತೆ ಅಪಘಾತಗಳು ಮತ್ತು ಪ್ರಪಂಚದ ದೊಡ್ಡ ಕೈಗಾರಿಕಾ ಮತ್ತು ಅಣುಶಕ್ತಿಯ ವಿಪತ್ತು ಸಂಭವಿಸಿದ ಪ್ರಕರಣಗಳ ತನಿಖೆಯ ಆಳದಲ್ಲಿ ನಿದ್ರಾಹೀನತೆಯ ಸಮಸ್ಯೆಗಳ ಛಾಯೆಯಿದೆ.

ಹಗಲಾಗುವುದನ್ನು ಮತ್ತು ಕತ್ತಲಾಗುವುದನ್ನು ಗಮನಿಸುವ ಮೂಲಕ ಎಲ್ಲಾ ಜೀವಿಗಳಂತೆ ಮನುಷ್ಯನೂ ದಿನದ ಸಮಯವನ್ನು ಗ್ರಹಿಸಬಲ್ಲನು. ನಮ್ಮೊಳಗಿರುವ ನೈಸರ್ಗಿಕ ಗಡಿಯಾರವು ಮೆದುಳಿಗೆ ಈ ಮಾಹಿತಿಯನ್ನು ರವಾನಿಸುತ್ತಿರುತ್ತದೆ. ಕತ್ತಲಿಗೆ ಪ್ರತಿಕ್ರಿಯೆಯಾಗಿ ದೇಹದ ‘ಪೈನಿಯಲ್’ ಗ್ರಂಥಿಯಿಂದ ಹೊರಬರುವ ‘ಮೆಲಟೋನಿನ್’ ಎಂಬ ಹಾರ್ಮೋನ್‌ ದೇಹದ ಈ ಗಡಿಯಾರವನ್ನು ಚಾಲ್ತಿಯಲ್ಲಿಡುತ್ತದೆ. ಈ ಮೆಲಟೋನಿನ್ ಹಾರ್ಮೋನಿನಲ್ಲಿ ಏನಾದರೂ ವ್ಯತ್ಯಾಸವಾದರೆ ನಿದ್ರಾಹೀನತೆಯ ಸಮಸ್ಯೆಗಳು ಕಂಡುಬರುತ್ತದೆ. ನಮ್ಮ ದೇಹದ ಆರೋಗ್ಯವನ್ನು ನಿಯಂತ್ರಿಸುವ ಇತರೆ ನೂರಾರು ಹಾರ್ಮೋನ್‌ಗಳು ಸಮರ್ಪಕವಾಗಿ ಕೆಲಸ ಮಾಡುವಲ್ಲಿಯೂ ನಿದ್ದೆಯ ಪಾತ್ರವೂ ಪ್ರಮುಖವಾಗಿದೆ. ಮನೋರೋಗಗಳ ಜೊತೆಜೊತೆಗೆ ನಿದ್ರಾಹೀನತೆಯು ರಕ್ತದೊತ್ತಡ, ಸಕ್ಕರೆಕಾಯಿಲೆ, ಬೊಜ್ಜು ಮುಂತಾದ ಕಾಯಿಲೆಗಳಿಗೆ ಕಾರಣವಾಗುವುದರಿಂದ ಹಿಡಿದು ದೇಹದ ರೋಗನಿರೋಧಕ ಶಕ್ತಿಯನ್ನೂ ಕುಂದಿಸುತ್ತದೆ.

ನಿದ್ದೆ ಸಮರ್ಪಕವಾಗಿದ್ದಾಗ ಮಾತ್ರ ಕನಸುಗಳು ಬೀಳಲು ಸಾಧ್ಯ. ನಿದ್ದೆಯಲ್ಲಿ ಬೀಳುವ ಕನಸುಗಳಿಗೂ ಮತ್ತು ನಮ್ಮ ಮಾನಸಿಕ ಆರೋಗ್ಯಕ್ಕಿರುವ ಸಂಬಂಧಗಳನ್ನು ಈಗ ವಿಶ್ಲೇಷಣೆ ಮಾಡಲಾಗುತಿದೆ. ನಮ್ಮ ಮನಸ್ಸಿನ ಭಾವನೆಗಳನ್ನು ಪರಿಷ್ಕರಿಸುವಲ್ಲಿ ಮತ್ತು ಅರ್ಥ ಮಾಡಿಕೊಳ್ಳುವಲ್ಲಿ ಕನಸುಗಳಿಗೆ ತಮ್ಮದೇ ಆದ ಪ್ರಾಮುಖ್ಯವಿದೆ. ವಿವಿಧ ವೈಜ್ಞಾನಿಕ ವರದಿಗಳು ಮನುಷ್ಯನ ದೇಹಕ್ಕೆ ಕನಿಷ್ಠ ಪಕ್ಷ ಏಳು ಗಂಟೆಗಳ ನಿದ್ದೆಯ ಅವಶ್ಯಕತೆಯಿದೆ ಎಂದು ಸ್ಪಷ್ಟ ಪಡಿಸಿದ್ದರೂ ತಮ್ಮ ದೇಹಕ್ಕೆ ಕಡಿಮೆ ಅವಧಿಯ ನಿದ್ದೆ ಸಾಕಾಗುತ್ತದೆ ಎಂದು ನಂಬುವವರಿದ್ದಾರೆ. ರಾತ್ರಿ ನಿದ್ದೆ ಕೆಡುವ ಸಂದರ್ಭ ಬಂದಲ್ಲಿ ನಾವು ಹಗಲು ನಿದ್ರಿಸುವ ಮೂಲಕ ತಮ್ಮ ದಿನದ ನಿದ್ದೆಯ ಅವಧಿಯನ್ನು ಸರಿದೂಗಿಸಿಕೊಳ್ಳಬಹುದೆಂಬ ತಪ್ಪಕಲ್ಪನೆಗಳು ನಮ್ಮಲ್ಲಿವೆ. ಅದಕ್ಕಿಂತಲೂ ಆಶ್ಚರ್ಯಕರವಾದ ಸಂಗತಿಯೆಂದರೆ ಹಾಸಿಗೆ ಮೇಲೆ ನಿದ್ದೆಯಿಲ್ಲದೆ ಹೊರಳಾಡಿದ ಸಮಯವನ್ನೂ ನಾವು ನಿದ್ದೆಯೆ ಸಾಲಿಗೆ ಸೇರಿಸುತ್ತೇವೆ!

ವಾರದಲ್ಲಿ ಮೂರು ದಿನಗಳ ಕಾಲ ನಿದ್ರಾಹೀನತೆಯು ಕಾಡುತ್ತಿದ್ದರೆ ಮತ್ತು ಅಂತಹ ಸಮಸ್ಯೆಯಿಂದ ಯಾರಾದರು ಮೂರು ತಿಂಗಳುಗಳಿಗಿಂತ ಹೆಚ್ಚು ಸಮಯ ಬಳಲಿದರೆ ನಾವು ಅಂತವರನ್ನು ‘ನಿದ್ರಾಹೀನತೆ’ (Insomnia) ಕಾಯಿಲೆಯಿಂದ ಬಳಲುವವರೆಂದು ಪರಿಗಣಿಸುತ್ತೇವೆ. ನಿದ್ರಾಹೀನತೆಯ ಕಾಯಿಲೆಗೆ ನೀಡುವ ಔಷಧಿಯು ಮೆದುಳಿನ ಮೇಲೆ ದುಷ್ಪರಿಣಾಮ ಬೀರುವುದರಿಂದ ನಿದ್ರಾಹೀನತೆಗಾಗಿ ಯಾವುದೇ ಔಷಧಿಯನ್ನು ವೈದ್ಯರ ಸಲಹೆಯಿಲ್ಲದೆ ಪಡೆಯುವುದು ಅಪಾಯಕಾರಿಯಾಗಬಹುದು. ನಮ್ಮ ಜೀವನಪದ್ದತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ನಾವು ನಮ್ಮ ನಿದ್ದೆಯ ಗುಣಮಟ್ಟದ ಜೊತೆಗೆ ನಮ್ಮ ಆರೋಗ್ಯವನ್ನು ಸುಧಾರಿಸಬಹುದು. ಪ್ರತಿನಿತ್ಯ ನಿಗದಿತಿ ಸಮಯಕ್ಕೆ ಸರಿಯಾಗಿ ಮಲಗುವುದನ್ನು ಮತ್ತು ಏಳುವುದನ್ನು ರೂಢಿಸಿಕೊಂಡಲ್ಲಿ ನಮ್ಮ ದೇಹದಲ್ಲಿನ ನೈಸರ್ಗಿಕ ಗಡಿಯಾರ ಹೆಚ್ಚು ಸಮರ್ಪಕವಾಗಿ ಕೆಲಸ ಮಾಡುವುದು. ಇದರಿಂದಾಗಿ ನಾವು ಮಲಗಿದ ತಕ್ಷಣ ನಿದ್ದೆಗೆ ಜಾರಲು ಮತ್ತು ಉಲ್ಲಾಸದಿಂದ ಎದ್ದೇಳಲು ಸಹಾಯವಾಗುವುದು‌. ಮುಂಜಾನೆ ಎದ್ದ ನಂತರ ಪ್ರತಿನಿತ್ಯ ಇಪ್ಪತ್ತು ನಿಮಿಷಗಳ ಕಾಲ ಸೂರ್ಯನ ಬೆಳಕಿಗೆ ಮೈಯೊಡ್ಡುವುದರಿಂದ ದೇಹದ ನೈಸರ್ಗಿಕ ಗಡಿಯಾರವು ಹೆಚ್ಚು ಜಾಗೃತಗೊಳ್ಳುವುದು. ದಿನದಲ್ಲಿ ನಾವು ಮಾಡುವ ವ್ಯಾಯಾಮವು ನಮ್ಮ ರಾತ್ರಿ ವೇಳೆಯ ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಮಲಗುವ ಒಂದೆರಡು ಗಂಟೆಗಳ ಮೊದಲು ಕಾಫಿ ಅಥವಾ ಟೀ ಸೇವಿಸಿದಲ್ಲಿ ಅದು ನಿದ್ರಾಹೀನತೆಯ ಸಮಸ್ಯೆಯನ್ನು ಉಲ್ಬಣಿಸುತ್ತದೆ‌. ಮಲಗುವ ಕನಿಷ್ಠ ಒಂದು ಗಂಟೆಗಳ ಮೊದಲು ಟಿವಿ, ಮೊಬೈಲ್ ಅಥವಾ ಕಂಪ್ಯೂಟರ್ ಸ್ಕ್ರೀನ್ ವೀಕ್ಷಣೆ ಮಾಡಿದ್ದಲ್ಲಿ ಅದು ಮೆಲಟೋನಿನ್ ಹಾರ್ಮೋನುವಿನ ಉತ್ಪಾದನೆಯನ್ನು ತಡೆಯುವ ಕಾರಣದಿಂದ ಮಲಗುವ ಮೊದಲು ಸ್ಕ್ರೀನ್ ವೀಕ್ಷಣೆಯಿಂದ ದೂರವಿರುವುದು ಉತ್ತಮ. ಆಲ್ಕೊಹಾಲ್ ಮನುಷ್ಯನ ನಿದ್ದೆಯ ಗುಣಮಟ್ಟವನ್ನು ಹದಗೆಡಿಸುವುದರಿಂದ ನಿದ್ರಾಹೀನತೆಯಿಂದ ಬಳಲುವವರು ಕುಡಿತದಿಂದ ದೂರವಿರಬೇಕು.

ನಿದ್ದೆಯ ಪ್ರಾಮುಖ್ಯ ನಮಗೆ ಇತ್ತೀಚಿನ ದಿನಗಳಲ್ಲಿ ಗಮನಕ್ಕೆ ಬರುತ್ತಿರುವ ಕಾರಣ ವ್ಯಾಯಾಮ ಮತ್ತು ಆಹಾರದ ವಿಚಾರದಲ್ಲಿ‌ ಸಲಹೆ ನೀಡುವ ತಜ್ಞರಷ್ಟು ತಜ್ಞರು ನಿದ್ದೆಯ ವಿಚಾರದಲ್ಲಿ ಇಲ್ಲ. ಆರೋಗ್ಯವನ್ನು ಕಾಪಾಡಿಕೊಳ್ಳುದಕ್ಕೆ ಉತ್ತಮ ನಿದ್ದೆಯ ಅಗತ್ಯದ ಬಗ್ಗೆ ಜಾಗೃತಿ ಹೆಚ್ಚಾದಂತೆ ಜನರು ವ್ಯಾಯಾಮಶಾಲೆಗೆ ಹೋಗುವಷ್ಟು ಶಿಸ್ತು ಮತ್ತು ಬದ್ಧತೆಯಿಂದ ರಾತ್ರಿ ಸಮಯಕ್ಕೆ ಸರಿಯಾಗಿ ಮಲಗಲು ತಯಾರಾಗುವ ದಿನಗಳು ದೂರವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.