ನೀವು ನಿಮ್ಮ ನಿದ್ರೆಯನ್ನು ಹಗುರವಾಗಿ ತೆಗೆದುಕೊಂಡಿದ್ದೀರಾ? ಹಾಗಾದರೆ ನೀವು ಈ ಬರೆಹವನ್ನು ಕಡ್ಡಾಯವಾಗಿ ಓದಲೇಬೇಕು; ಜೊತೆಗೆ ನಿಮ್ಮ ನಿಲುವನ್ನು ಸರಿಪಡಿಸಿಕೊಳ್ಳಲೇ ಬೇಕು.
ನಿದ್ರೆಯು ದೈನಂದಿನ ಯಾಂತ್ರಿಕ ಕ್ರಿಯೆಗಳಲ್ಲಿ ಒಂದಷ್ಟೆ – ಎಂದು ಅನೇಕರು ಪರಿಗಣಿಸಿರಬಹುದು. ಆದರೆ, ದೇಹಕ್ಕೂ ಮನಸ್ಸಿಗೂ ಸಂಪೂರ್ಣ ವಿಶ್ರಾಂತಿಯನ್ನು ಕೊಟ್ಟು, ಮರುದಿನದ ಚಟುವಟಿಕೆಗಳಿಗೆ ಚೈತನ್ಯವನ್ನು ತುಂಬುವ ಅಗಾಧ ಶಕ್ತಿಯು ನಿದ್ರೆಗೆ ಇದೆ. ಅಷ್ಟೇ ಅಲ್ಲ, ವೈದ್ಯವಿಜ್ಞಾನವು ವ್ಯಕ್ತಿಯ ನಿದ್ರೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ನಡುವೆ ಇರುವ ನೇರ ಸಂಬಂಧದ ಬಗ್ಗೆಯೂ ಈಗಾಗಲೇ ದೃಢಪಡಿಸಿದೆ. ನಿದ್ರೆಯು ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತದೆ.
ಶರೀರಕ್ಕೆ ತಗಲುವ ಯಾವುದೇ ಸೋಂಕು ನಮ್ಮನ್ನು ಆಯಾಸಗೊಳಿಸುವುದಷ್ಟೇ ಅಲ್ಲದೆ ನಿದ್ರೆಯನ್ನೂ ಹೆಚ್ಚಿಸುತ್ತದೆ. ಆದರೆ ನಿದ್ರೆ ಯಾವುದೇ ಕಾಯಿಲೆಗೆ ಅತ್ಯುತ್ತಮ ಔಷಧವಾಗಬಲ್ಲದು ಎಂಬುದನ್ನು ಎಲ್ಲರೂ ಅರಿತಿರಬೇಕು.
ಕೆಲವು ಬಗೆಯ ವೈರಾಣು ಮತ್ತು ಬ್ಯಾಕ್ಟೀರಿಯಾ ಸೋಂಕುಗಳು ವ್ಯಕ್ತಿಯ ನಿದ್ರೆಯ ಗುಣಮಟ್ಟವನ್ನು ವ್ಯತ್ಯಯಗೊಳಿಸುತ್ತವೆ. ಸಮರ್ಪಕ ನಿದ್ರೆಯಿಲ್ಲದೆ ವ್ಯಕ್ತಿ ನಿತ್ರಾಣನಾಗುತ್ತಾನೆ. ಈ ಬಗೆಯ ನಿದ್ರಾಹೀನತೆಯು ಪ್ರತಿರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ.
ನಮಗೆಲ್ಲರಿಗೂ ತಿಳಿದಿರುವಂತೆ ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆಯು ವೈರಾಣು, ಬ್ಯಾಕ್ಟೀರಿಯಾ ಮತ್ತು ಇತರ ಪರಾವಲಂಬಿ ಸೂಕ್ಷ್ಮಾಣುಗಳು ಮತ್ತು ಅವು ಸ್ರವಿಸುವ ಹಾನಿಕಾರಕ ರಾಸಾಯನಿಕಗಳಂತಹ ಆಕ್ರಮಣಕಾರಕ ದಾಳಿಗಳಿಂದ ಶರೀರವನ್ನು ರಕ್ಷಿಸುತ್ತದೆ. ಹಲವು ಅಂಗಗಳು ಮತ್ತು ಜೀವಕೋಶಗಳನ್ನೊಳಗೊಂಡ ದೊಡ್ಡ ವ್ಯವಸ್ಥೆ ಇದಾಗಿದೆ. ಸಮರ್ಪಕ ನಿದ್ರೆಯು ಈ ಎಲ್ಲ ಅಂಗಗಳಿಗೆ ಮತ್ತು ಜೀವಕೋಶಗಳಿಗೆ ಹೊಸ ಚೈತನ್ಯವನ್ನು ಕೊಡುವುದಲ್ಲದೆ, ಮರುದಿನ ಕ್ಷಮತೆಯಿಂದ ಕಾರ್ಯನಿರ್ವಹಿಸಲು ಶರೀರ ಮತ್ತು ಮನಸ್ಸುಗಳನ್ನು ಅಣಿ ಮಾಡುತ್ತದೆ. ಕೇವಲ ನಿದ್ರೆಯ ಅವಧಿ ಮಾತ್ರವಲ್ಲದೆ, ಅದರ ಗುಣಮಟ್ಟ ಕೂಡ ಮಹತ್ವದ್ದು ಎಂಬುದನ್ನೂ ನಾವು ನೆನಪಿನಲ್ಲಿಡಬೇಕು.
ರಾತ್ರಿಪಾಳಿಯಲ್ಲಿ ಕೆಲಸ ಮಾಡುವವರಲ್ಲಿ ಸಮರ್ಪಕ ನಿದ್ರೆಯ ಕೊರತೆ ಉಂಟಾಗುವುದು ಸಹಜ. ಅಂಥವರಲ್ಲಿ ಸೋಂಕುಗಳು ಮತ್ತು ಕ್ಯಾನ್ಸರ್ ಸೇರಿದಂತೆ ಇತರ ದೀರ್ಘಕಾಲದ ಅಸಾಂಕ್ರಮಿಕ ಕಾಯಿಲೆಗಳ ಸಂಭವ ಹೆಚ್ಚು. ಹಾಗಾಗಿಯೇ ಇದೀಗ ವಿಶ್ವ ಆರೋಗ್ಯ ಸಂಸ್ಥೆಯು ರಾತ್ರಿ ಪಾಳಿ ಕೆಲಸವನ್ನು ‘ಸಂಭವನೀಯ ಕ್ಯಾನ್ಸರ್‌ಕಾರಕ’ ಎಂದು ವರ್ಗೀಕರಿಸಿದೆ. ನಿದ್ರೆಯ ಕೊರತೆಯು ದೇಹದ ಎಲ್ಲ ಅಂಗಾಂಗವ್ಯೂಹಗಳ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ; ವಿವಿಧ ಗ್ರಂಥಿಗಳು ಸ್ರವಿಸುವ ರಸದೂತಗಳ ಪ್ರಮಾಣದಲ್ಲಿಯೂ ವ್ಯತ್ಯಾಸವನ್ನು ತರುತ್ತದೆ.
ಸೋಂಕುಗಳ ಸಂಭವವನ್ನು ತಡೆಯಲು ದೇಹಕ್ಕೆ ನೀಡುವ ಲಸಿಕೆಯು ಸಹ ದಿನಕ್ಕೆ ಏಳು ಗಂಟೆಗಳ ಕಾಲ ನಿದ್ರೆ ಮಾಡುವವರಲ್ಲಿ ಹೆಚ್ಚು ಪರಿಣಾಮಕಾರಿ ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸಿವೆ. ಅಂತೆಯೇ ಐದು ತಾಸಿಗೂ ಕಡಿಮೆ ನಿದ್ರೆ ಮಾಡುವವರಲ್ಲಿ ಲಸಿಕೆಗಳು ಗರಿಷ್ಠ ಪರಿಣಾಮವನ್ನು ಬೀರುವಲ್ಲಿ ವಿಫಲವಾಗಿವೆ ಎಂಬುದೂ ಅಧ್ಯಯನಗಳಿಂದ ಸಾಬೀತಾಗಿದೆ.
ಕೇವಲ ನಿದ್ರೆಯ ಅವಧಿಯೊಂದೇ ಅದರ ಪರಿಣಾಮವನ್ನು ನಿರ್ಧರಿಸದು. ದಿನವೂ ನಿದ್ರೆಯ ವೇಳಾಪಟ್ಟಿ ಒಂದೇ ಸಮನಾಗಿರಬೇಕು. ಗುಣಮಟ್ಟ ಕೂಡ ಗರಿಷ್ಠ ಮಟ್ಟದ್ದಾಗಿರಬೇಕು. ಹಾಗಾದಾಗ ಮಾತ್ರ ವ್ಯಕ್ತಿ ಆರೋಗ್ಯವಂತನಾಗಿರುವುದು ಸಾಧ್ಯ.
ದಿನವೂ ನಿಗದಿತ ಸಮಯದಲ್ಲಿಯೇ ಮಲಗುವ ಮತ್ತು ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಿರಿ. ನಿಮ್ಮ ನಿದ್ರೆಯ ವೇಳಾಪಟ್ಟಿ ಸ್ಥಿರವಾಗಿರಲಿ. ಇದು ಉತ್ತಮ ಗುಣಮಟ್ಟದ ನಿದ್ರೆಯನ್ನು ಪಡೆಯಲು ಮೊಟ್ಟಮೊದಲ ಹೆಜ್ಜೆ.
ಹಗಲು ನಿದ್ರೆಯನ್ನು ಆದಷ್ಟು ತಪ್ಪಿಸಿ. ಇದರಿಂದ ರಾತ್ರಿ ಮಲಗಿದ ಕೂಡಲೇ ನಿದ್ರೆ ಆವರಿಸದೆ ಹಾಸಿಗೆಯಲ್ಲಿ ಹೊರಳಾಡುವಂತಾಗುತ್ತದೆ.
ಮಧ್ಯಾಹ್ನದ ಬಳಿಕ ಕಾಫಿ ಅಥವಾ ಚಹಾ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ. ಇದು ನರವ್ಯೂಹವನ್ನು ಪ್ರಚೋದಿಸುವುದರಿಂದ ನಿದ್ರೆಗೆ ಭಂಗವಾಗಬಹುದು.
ಮಲಗಲು ಅಣಿಯಾಗುವಾಗ ಮನಸ್ಸು ತಿಳಿಯಾಗಿರಲಿ. ಆತಂಕ, ಚಿಂತೆ ದುಗುಡ ತುಂಬಿದ ಮನಸ್ಸು ಸುಖನಿದ್ರೆಯನ್ನು ತಡೆಯುತ್ತದೆ. ಮಲಗುವ ಮುನ್ನ ದೀರ್ಘ ಉಸಿರಾಟ ಮತ್ತು ಧ್ಯಾನದಂತಹ ಪ್ರಕ್ರಿಯೆ ಕೂಡ ಮನಸ್ಸನ್ನು ಸ್ಥಿಮಿತದಲ್ಲಿಡಲು ನೆರವಾಗಬಹುದು.
ಹಗಲಿನಲ್ಲಿ ನಿರಂತರವಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿರಿ. ಕುಳಿತಲ್ಲಿಯೇ ಕುಳಿತಿರಬೇಡಿ. ಬೆಳಗಿನ ವ್ಯಾಯಾಮವನ್ನು ತಪ್ಪಿಸಬೇಡಿ.
ಸಂಜೆಯ ವೇಳೆ ದೇಹವನ್ನು ಅತಿಯಾಗಿ ದಂಡಿಸುವ ವ್ಯಾಯಾಮಗಳು ಬೇಡ.
ರಾತ್ರಿಯ ಊಟ ಹಗುರವಾಗಿರಲಿ. ನೀವು ಮಲಗಲು ಹೊರಡುವ ಮೂರು ತಾಸಿಗೂ ಮೊದಲೇ ನಿಮ್ಮ ರಾತ್ರಿ ಊಟ ಮುಗಿದಿರಲಿ. ಊಟವಾದ ತಕ್ಷಣವೇ ಮಲಗಿದಾಗ ನಿದ್ರೆಯ ವೇಳೆಯಲ್ಲಿ ಶರೀರದಲ್ಲಾಗುವ ನಿರ್ವೀಶೀಕರಣ ಪ್ರಕ್ರಿಯೆಯು ಕುಂಠಿತಗೊಂಡು ಪ್ರತಿರಕ್ಷಣಾ ವ್ಯವಸ್ಥೆಯ ಕ್ಷಮತೆ ಕಡಿಮೆಯಾಗುತ್ತದೆ.
ರಾತ್ರಿ ಬೇಗ ಮಲಗಿ, ಬೆಳಿಗ್ಗೆ ಬೇಗನೇ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಿರಿ. ತಡರಾತ್ರಿಯವರೆಗೆ ಎಚ್ಚರವಿರುವ ಮತ್ತು ಬೆಳಿಗ್ಗೆ ಸೂರ್ಯೋದಯದ ನಂತರ ಏಳುವ ಅಭ್ಯಾಸ ಕೂಡ ಶರೀರದ ಜೈವಿಕ ಗಡಿಯಾರದ ಕಾರ್ಯವೈಖರಿಯಲ್ಲಿ ವ್ಯತ್ಯಯವನ್ನುಂಟುಮಾಡುತ್ತದೆ. ಇದು ನಮ್ಮ ಕ್ರಿಯಾಶೀಲತೆಯನ್ನು ಕಡಿಮೆಮಾಡುತ್ತದೆ.
ಮಲಗುವ ಕೋಣೆಯಲ್ಲಿ ಪ್ರಖರವಾದ ಬೆಳಕು ಬೇಡ. ಟಿವಿ, ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮಲಗುವ ಕೋಣೆಯಲ್ಲಿ ಬಳಸಬೇಡಿ. ಅಲ್ಲಿ ಮಂದ ಬೆಳಕಿನ ಪ್ರಶಾಂತ ವಾತಾವರಣವನ್ನು ಕಾಪಾಡಿಕೊಳ್ಳಿ.
ನೀವು ನಿದ್ರೆಯಲ್ಲಿ ಗೊರಕೆ ಹೊಡೆಯುತ್ತಿದ್ದರೆ ಅಥವಾ ಆ ವೇಳೆಯಲ್ಲಿ ಉಸಿರಾಟದೊಂದಿಗೆ ಇನ್ಯಾವುದೇ ರೀತಿಯ ಶಬ್ದ ಮಾಡುತ್ತಿದ್ದರೆ ಅಥವಾ ನಿದ್ರೆಯ ಬಳಿಕವೂ ನಿಮಗೆ ತಾಜಾತನದ ಭಾವವಿರದಿದ್ದರೆ ನೀವು ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಸಮಸ್ಯೆಯಿಂದ ಬಳಲುತ್ತಿರಬಹುದು. ಹಾಗಿದ್ದಾಗ ವೈದ್ಯರನ್ನು ಸಂಪರ್ಕಿಸಿ; ನಿಮ್ಮ ನಿದ್ರೆಯ ನಮೂನೆಯನ್ನು ತಿಳಿದುಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.