ಧೂಮಪಾನ ಆರೋಗ್ಯಕ್ಕೆ ಮಾರಕ, ಅದು ಹೃದಯ, ರಕ್ತನಾಳಗಳು ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳ ಅಪಾಯ ವನ್ನು ಹೆಚ್ಚಿಸುತ್ತದೆ ಎಂಬುದು ಗೊತ್ತೇ ಇದೆ. ಆದರೆ, ಸಿಗರೇಟ್‌ನಲ್ಲಿರುವ ವಿಷ ಪದಾರ್ಥಗಳು ಪುರುಷ ಮತ್ತು ಮಹಿಳೆಯರಲ್ಲಿ ಫಲವಂತಿಕೆಯ ಮೇಲೆ ಕೂಡ ಪರಿಣಾಮ ಬೀರಬಹುದು; ಇದು ನಿಮಿರುವಿಕೆಯ ವೈಫಲ್ಯ ಮತ್ತು ಗರ್ಭಾವಸ್ಥೆಯಲ್ಲಿನ ತೊಂದರೆಗಳಿಗೂ ಕೂಡ ದಾರಿಮಾಡಿಕೊಡಬಹುದು.
ಧೂಮಪಾನದ ಚಟ ಪುರುಷರು ಮತ್ತು ಮಹಿಳೆಯರ ಮೇಲೆ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಆದರೆ, ಇಬ್ಬರಿಗೂ ಫಲವತ್ತತೆಯ ಸಂಕೀರ್ಣ ತೊಂದರೆಗಳು ಉಂಟಾಗಲು ಇದು ಕಾರಣವಾಗಬಹುದು. ದಿನಕ್ಕೆ 6–7 ಸಿಗರೇಟ್‌ಗಳಷ್ಟು ಸರಾಸರಿ ಧೂಮಪಾನ ಮಾಡುವವರಲ್ಲಿ ಗರ್ಭ ಧರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಉಂಟಾಗ ಬಹುದು. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಶೇ 13ರಷ್ಟು ಜೋಡಿಗಳಲ್ಲಿ ಫಲವಂತಿಕೆ ತೊಂದರೆಗಳಿಗೆ ಧೂಮಪಾನದ ಅಭ್ಯಾಸಗಳು ಕಾರಣವಾಗಿರಬಹುದು ಎಂಬುದು ತಿಳಿದುಬಂದಿದೆ. ಇದರಿಂದ ಜನ್ಮ ಪೂರ್ವದಲ್ಲಿಯೇ ಶಿಶುವಿನ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ಗರ್ಭಧರಿಸುವುದನ್ನು ಪರಿಗಣಿಸುವ ಮುನ್ನವೇ ಧೂಮಪಾನ ಬಿಡುವುದು ಉತ್ತಮ.
ಪುರುಷರಲ್ಲಿ ಧೂಮಪಾನದಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದರೊಂದಿಗೆ ಅವುಗಳ ಚಲನೆ ಇಳಿಕೆಯಾಗುವುದು, ವೀರ್ಯಾಣುವಿನ ಡಿಎನ್‌ಎ ವಿರೂಪ
ವಾಗುವುದು ಎಂದು ಯುರೋಪಿಯನ್ ಯುರಾಲಜಿ ವಿಶ್ಲೇಷಣೆ ತಿಳಿಸಿದೆ. ಹಾಗೆಯೇ ಪುರುಷರಲ್ಲಿ ಧೂಮಪಾ ನದಿಂದಾಗಿ ಐವಿಎಫ್ ಚಿಕಿತ್ಸೆಯಲ್ಲಿ ಕೂಡ ಯಶಸ್ಸಿನ ಪ್ರಮಾಣ ಇಳಿಕೆಯಾಗುತ್ತದೆ. ಪರೋಕ್ಷ ಧೂಮಪಾನವೂ ಕೂಡ ಅವರ ಪತ್ನಿಯರ ಫಲವಂತಿಕೆ ಮೇಲೆ ಹಾನಿಕಾರಕ ಪ್ರಭಾವ ಬೀರಬಹುದು.
ಹೀಗಾಗಿ ಪುರುಷರು ಧೂಮಪಾನ ಮಾಡುವಾಗ ಅದು ಅವರ ವೀರ್ಯಾಣು ಆರೋಗ್ಯವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ, ಅವರವರ ಪತ್ನಿಯ ಫಲವಂತಿಕೆಯನ್ನು ಕಡಿಮೆ ಮಾಡುತ್ತದೆ.
ದಿನವೊಂದಕ್ಕೆ 20 ಅಥವಾ ಹೆಚ್ಚಿನ ಸಿಗರೇಟುಗಳನ್ನು ಸೇದುವ ಅಭ್ಯಾಸ ಇರುವ ಪುರುಷರು ನಿಮಿರುವಿಕೆ ದೌರ್ಬಲ್ಯ ಹೊಂದುವರು. ಇದು ತೃಪ್ತಿಕರ ಲೈಂಗಿಕ ಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ.
ಮಹಿಳೆಯರಲ್ಲಿ..?
ಮಹಿಳೆಯರಲ್ಲಿ ಕೂಡ ಧೂಮಪಾನ ಗಂಭೀರ ತೊಂದರೆಗಳನ್ನು ಉಂಟು ಮಾಡಬಹುದು. ಪ್ರತಿ ದಿನ ಸೇದುವ ಪ್ರತಿ ಸಿಗರೇಟಿನೊಂದಿಗೆ ಗರ್ಭವತಿಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತಾ ಹೋಗತ್ತವೆ. ಫ್ಯಾಲೋಪಿಯನ್ ಕೊಳವೆಯಲ್ಲಿ ತಡೆ ಉಂಟಾಗುವುದರ ಜೊತೆಗೆ ಕೊಳವೆಯಲ್ಲಿ ಅಥವಾ ಹೊರಗಡೆ ಗರ್ಭ ಕಟ್ಟುವ ತೊಂದರೆ ಉಂಟಾಗಬಹುದು. ಅಂಡಾಶಯಗಳಲ್ಲಿ ಅಭಿವೃದ್ದಿ ಹೊಂದುತ್ತಿರುವ ಅಂಡಗಳಿಗೆ ಇದರಿಂದ ಮತ್ತಷ್ಟು ಹಾನಿ ಉಂಟಾಗುತ್ತದೆ. ಇದರಿಂದಾಗಿ ಬೆಳೆಯುತ್ತಿರುವ ಭ್ರೂಣಕ್ಕೆ ಹಾನಿ ಉಂಟಾಗುವುದಲ್ಲದೆ, ಗರ್ಭಪಾತದ ಅಪಾಯ ಹೆಚ್ಚಾಗುತ್ತದೆ. ಗರ್ಭಕೊರಳಿನ ಕ್ಯಾನ್ಸರ್ ಅಪಾಯ ಹೆಚ್ಚಾಗಬಹುದು.
ಈ ಮೇಲೆ ಹೇಳಿದ ಎಲ್ಲಾ ಸಮಸ್ಯೆಗಳು ನೇರವಾಗಿ ಧೂಮಪಾನದಿಂದ ಉಂಟಾಗದಿರಬಹುದು. ಆದರೆ ಧೂಮಪಾನ ಈ ತೊಂದರೆಗಳನ್ನು ಹೆಚ್ಚಾಗುವಂತೆ ಮಾಡುತ್ತದೆ. ಅಲ್ಲದೆ, ವ್ಯಕ್ತಿಗಳನ್ನು ಮತ್ತಷ್ಟು ಅಪಾಯಕ್ಕೆ ತಳ್ಳುತ್ತದೆ. ಧೂಮಪಾನವನ್ನು ಆದಷ್ಟು ಬೇಗ ತ್ಯಜಿಸುವುದೇ ಇದಕ್ಕಿರುವ ಏಕೈಕ ಪರಿಹಾರ.
(ಲೇಖಕ: ಫರ್ಟಿಲಿಟಿ ಸಲಹೆಗಾರ, ನೋವಾ ಐವಿಎಫ್ ಫರ್ಟಿಲಿಟಿ, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.