ADVERTISEMENT

ಅಂಡಾಶಯದಲ್ಲಿ ಸಿಸ್ಟ್‌: ನಿವಾರಣೆ ಹೇಗೆ?

ಡಾ.ವೀಣಾ ಭಟ್ಟ
Published 8 ಸೆಪ್ಟೆಂಬರ್ 2023, 23:30 IST
Last Updated 8 ಸೆಪ್ಟೆಂಬರ್ 2023, 23:30 IST
   

ಸ್ಪಂದನದ ಅಭಿಮಾನಿ ನಾನು. ನನ್ನ ತಂಗಿ ಸರ್ಕಾರಿ ಉದ್ಯೋಗಿ. ಎರಡು ವರ್ಷಗಳ ಹಿಂದೆ ಹೆಮೋರೋಜಿಕ್ ಸಿಸ್ಟ್‌ ಆಗಿ ಅದು ಸುತ್ತಿದ ಕಾರಣ ಒಂದು ಅಂಡಾಶಯವನ್ನು ತೆಗೆಯಲಾಗಿದೆ. ಈಗ ಅವಳಿಗೆ ಮದುವೆ ನಿಕ್ಕಿಯಾಗಿದೆ. ಈಗ ಮತ್ತೊಂದು ಅಂಡಾಶಯದಲ್ಲಿ 2. ಸೆಂ.ಮೀಟರ್‌ ಸಿಸ್ಟ್‌ ಆಗಿದೆ. 21ದಿನಕ್ಕೆ ಮಾತ್ರೆ ಕೊಟ್ಟಿದ್ದಾರೆ. ವಾರದಲ್ಲಿ ಐದು ದಿನವಾದರೂ ಸುಸ್ತು, ಬಳಲಿಕೆ, ತೀವ್ರ ಬೆನ್ನುನೋವು, ನಿರಾಸಕ್ತಿ ಇರುತ್ತದೆ. ಈ ವಿಚಾರ ಭಾವಿ ಗಂಡನಿಗೆ ಗೊತ್ತಿಲ್ಲ. ತಾಯ್ತತನಕ್ಕೆ ತೊಂದರೆ ಇಲ್ಲ ಅಂತ ವೈದ್ಯರು ತಿಳಿಸಿದ್ದಾರೆ. ಮಗುವಾದರೆ ಸಿಸ್ಟ್‌ ಕಡಿಮೆಯಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಮುಂದಿನ ಜೀವನ ಹೇಗಿರಬೇಕು ಎಂಬುದನ್ನು ತಿಳಿಸಿ. 

 -ಹೆಸರು, ಊರು ತಿಳಿಸಿಲ್ಲ

ಉತ್ತರ: ನಿಮ್ಮ ತಂಗಿಗೆ ಒಂದೇ ಅಂಡಾಶಯ ತೆಗೆದಿರುವುದರಿಂದ ಭಯ ಪಡುವುದೇನೂ ಬೇಡ. ಇನ್ನೊಂದರಲ್ಲಿ ಸಿಸ್ಟ್‌ ಕೂಡ ಸಾಮಾನ್ಯವಾಗಿ ಅಂಡೋತ್ಪತ್ತಿಯ ನಂತರ ಕೋಶಿಕೆಯಲ್ಲಿನ ದ್ರವ ಹೀರಲ್ಪಡದೇ ಇದ್ದಾಗ ಬೆಳೆದಂಥ ಸಿಸ್ಟ್ ಆಗಿರುತ್ತದೆ. ಅದು ತಾನಾಗಿಯೇ ಒಡೆದು ಹೋಗಬಹುದು. ಚಿಂತೆ ಮಾಡಬೇಡಿ. ಈಗಾಗಲೇ ವೈದ್ಯರು ಸೂಕ್ತ ಮಾತ್ರೆಗಳನ್ನು ಕೊಟ್ಟಿರುವುದರಿಂದ ಬೇಗನೆ   ಕರಗಬಹುದು.
ತಾಯ್ತನದ ಸಾಮರ್ಥ್ಯ ಅಥವಾ ಅಂಡಾಶಯದ ಮೀಸಲು (ಒವೆರಿಯನ್ ರಿಸರ್ವ) ತಿಳಿಯಲು ಕೆಲವು ಪರೀಕ್ಷೆಗಳನ್ನ ನಿಮಗೆ ಈಗಾಗಲೇ ತಿಳಿಸಿದ್ದರೆ ಮಾಡಿಸಿ. ಅದಕ್ಕೂ ಮೊದಲು ಸರಿಯಾಗಿ ತಿಂಗಳು ತಿಂಗಳು ಮುಟ್ಟಾಗುತ್ತಿದ್ದರೆ ಅಂತಹ ಮಹಿಳೆಯರಲ್ಲಿ ಅಂಡೋತ್ಪತ್ತಿ ಸರಿಯಾಗಿ ಆಗುತ್ತಿದೆ ಎಂದುಸುಳಿವು ಸಿಕ್ಕಿಬಿಡುತ್ತದೆ. ಇಲ್ಲದಿದ್ದರೂ  ತಾಯ್ತನದ ಸಾಮರ್ಥ್ಯ ತಿಳಿಯಲು ಹಲವು ವಿಧಾನಗಳಿವೆ.  ಟ್ರಾನ್ಸ್ವೆಜೈನಲ್ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ ಎಂಬ ಸರಳವಾದ, ಹೆಚ್ಚಿನೆಡೆಯಲ್ಲಿ ಲಭ್ಯವಿರುವ ಪರೀಕ್ಷೆಯನ್ನು  ಮುಟ್ಟಾಗಿ 2ರಿಂದ 3ದಿನದೊಳಗೆ ಮಾಡಬೇಕು. ಆಂಟ್ರಲ್‌ಕೋಶಿಕೆಗಳ (1ರಿಂದ2ಮಿ.ಮಿ. ಗಾತ್ರದ) ಎಣಿಕೆ
10ರಿಂದ20ರೊಳಗೆ ಇದ್ದರೆ ಆಗ ಉತ್ತಮ ಅಂಡಾಶಯದ ಮೀಸಲು ಇದೆ ಎಂದು ಅರ್ಥ. ಈ ಪರೀಕ್ಷೆಯಿಂದ ಹಿಂದಿನ ಋತುಚಕ್ರದ ಕಾರ್ಪಸ್‌ಲೂಟಿಯಂ ಸಿಸ್ಟ್‌ಗಳೇನಾದರೂ ಇದೆಯೇ? ಅಂಡಾಶಯದ ಪರಿಮಾಣ ಎಷ್ಟಿದೆ? ಗರ್ಭಾಶಯದ ಒಳಪದರ, ಶ್ರೋಣಿಯಲ್ಲಿರುವ ಗಂಟುಗಳು ಎಲ್ಲವನ್ನು ತಿಳಿಯಲು ಸಾಧ್ಯವಾಗುತ್ತದೆ. ಇನ್ನು ರಕ್ತಪರೀಕ್ಷೆಯಲ್ಲಿ ಆಂಟಿಮುಲೇರಿಯನ್ ಹಾರ್ಮೋನು(ಎ.ಎಂ.ಹೆಚ್.)ಮಟ್ಟ ಸರಾಸರಿ 1ರಿಂದ3 ನ್ಯಾನೋಗ್ರಾಂ/ಮಿ.ಲಿ. ಇದ್ದರೆ ಅದು ಉತ್ತಮ ಅಂಡಾಶಯದ ಮೀಸಲು ಎನಿಸಿಕೊಳ್ಳುತ್ತದೆ. ಈ ಮಟ್ಟವೂ ಅನುವಂಶೀಯತೆ ಮತ್ತು ವಯಸ್ಸಿನ ಮೇಲೆ ಅವಲಂಬಿಸಿರುತ್ತದೆಯಾದರೂ ಕೆಲವು ಜೀವನಶೈಲಿ ಕ್ರಮಗಳಿಂದ ಎ.ಎಂ.ಹೆಚ್.ಮಟ್ಟ ಉತ್ತಮ ಪಡಿಸಿಕೊಳ್ಳಬಹುದು.

ADVERTISEMENT

ಜೀವನಕ್ರಮ ಹೀಗಿರಲಿ:  ಸಮತೂಕ ಕಾಯ್ದುಕೊಳ್ಳಿ, ಸಾಕಷ್ಟು ನೀರಿನ ಸೇವನೆ, ಸಮತೋಲನ ಆಹಾರ, ದಿನಾಲೂ 6ರಿಂದ8 ತಾಸು ನಿದ್ರೆ ಅತ್ಯಗತ್ಯ. ಧೂಮಪಾನ, ಮದ್ಯಪಾನ,  ಕೃತಕ ಪಾನೀಯಗಳು,  ಸಂಸ್ಕರಿಸಿದ ಆಹಾರ, ಬೇಕರಿ ತಿನಿಸುಗಳು. ಸುಗಂಧದ್ರವ್ಯಗಳ ಬಳಕೆ, ಸೌಂದರ್ಯವರ್ಧಕಗಳು, ಅತಿಯಾದ ಉಷ್ಣತೆಗೆ ತೆರೆದುಕೊಳ್ಳುವುದು ಬೇಡ. ಕಾಫಿ, ಟೀ, ಡೈರಿ ಉತ್ಪನ್ನಗಳ ಸೇವನೆ, ಪ್ರಾಣಿಜನ್ಯ ಕೊಬ್ಬು, ಸೋಯಾ ಉತ್ಪನ್ನಗಳ ಬಳಕೆ , ಪ್ಲಾಸ್ಟಿಕ್‌ ಬಳಕೆಯಿಂದ ದೂರವಿರಿ. 

ಆಹಾರದಲ್ಲಿ ಒಮೆಗಾ 3, ಮೇದೋ ಆಮ್ಲಗಳಿರುವ ಅಗಸೆ ಬೀಜ, ಒಣಹಣ್ಣು, ಕುಂಬಳಬೀಜ, ಸೂರ್ಯಕಾಂತಿ ಬೀಜ, ಚಿಯಾ, ಎಳ್ಳು, ಹಸಿರು ಸೊಪ್ಪು ತರಕಾರಿ, ವಿಟಮಿನ್‌ ಹಾಗೂ ಪ್ರೋಟಿನ್‌ಯುಕ್ತ ಆಹಾರ ಜತೆಗೆ ವೈದ್ಯರ ಸಲಹೆ ಮೇರೆಗೆ ಪೊಲಿಕ್‌ ಆಸಿಡ್‌ ಮಾತ್ರೆ ಸೇವಿಸಿ. ಧನಾತ್ಮಕ ಚಿಂತನೆ, ಧ್ಯಾನ, ಸೂರ್ಯನಮಸ್ಕಾರ ನಿತ್ಯದ ಭಾಗವಾಗಲಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.