ADVERTISEMENT

ವಿಶೇಷ ಮಕ್ಕಳ ‘ಡಾ.ಸರ್ಜಿ’

ನೃಪತುಂಗ
Published 31 ಡಿಸೆಂಬರ್ 2018, 19:30 IST
Last Updated 31 ಡಿಸೆಂಬರ್ 2018, 19:30 IST
ಈಶ್ವರ್ ಸರ್ಜಿ
ಈಶ್ವರ್ ಸರ್ಜಿ   

ಸಾಮಾನ್ಯವಾಗಿ ಕಂಪ್ಯೂಟರ್ ಎಂಜಿನಿಯರ್ ಓದಿದ ಯುವಕರಿಗೆ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ, ಕೈತುಂಬಾ ಸಂಬಳ ಪಡೆಯುವ ಕನಸಿರುತ್ತದೆ. ಆದರೆ, ಶಿವಮೊಗ್ಗದ ಕಂಪ್ಯೂಟರ್‌ ಎಂಜಿನಿಯರ್‌ಗೆ ಈಶ್ವರ್ ಸರ್ಜಿಗೆ, ಅಂಗವಿಕಲ ಮಕ್ಕಳಿಗೆ ಆಸರೆಯಾಗುವ ಮನಸ್ಸಾಗಿದೆ. ಹಣ ಗಳಿಸುವ ಉದ್ಯೋಗ ಬಿಟ್ಟು, ವಿವಿಧ ಅಂಗವೈಕಲ್ಯಗಳಿಂದ ಬಳಲುವ ಮಕ್ಕಳ ಬಾಳಿಗೆ ಬೆಳಕು ನೀಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಎಂಜಿನಿಯರ್ ಪದವಿ ಮುಗಿಸಿದ ಈಶ್ವರ್, ಐಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಪ್ರಯತ್ನದಲ್ಲಿದ್ದರು. ಫಲಕೊಡಲಿಲ್ಲ. ಈ ವೇಳೆ ಸಹೋದರ ಮಕ್ಕಳ ತಜ್ಞ ಡಾ. ಧನಂಜಯ, ’ಸರ್ಜಿ ಆಸ್ಪತ್ರೆ’ ನಿರ್ಮಾಣ ಮಾಡುತ್ತಿದ್ದರು. ಅಲ್ಲಿಗೆ ಬರುತ್ತಿದ್ದ ಅಂಗವಿಕಲ ಮಕ್ಕಳು ಮತ್ತು ಪೋಷಕರ ನೋವನ್ನು ಕಂಡು, ತುಂಬಾ ನೊಂದುಕೊಂಡರು ಈಶ್ವರ. ಆಗಲೇ ಅಂಗವಿಕಲ ಮಕ್ಕಳ ಕಲ್ಯಾಣಕ್ಕಾಗಿ ಸಂಕಲ್ಪ ಮಾಡಿದರು.

ಶಿವಮೊಗ್ಗದ ವಿನೋಬನಗರದ ಬಾಡಿಗೆ ಕಟ್ಟಡವೊಂದರಲ್ಲಿ ‘ಸರ್ಜಿ ಇನ್ಸ್‌ಟಿಟ್ಯೂಟ್’ ಆರಂಭಿಸಿದರು. ಅಲ್ಲಿ ಹಲವು ವಿಕಲಾಂಗ ಮಕ್ಕಳ ಪೋಷಣೆಯಲ್ಲಿ ಈಶ್ವರ್ ಸಕ್ರಿಯರಾದರು. ಶಿವಮೊಗ್ಗದಲ್ಲಿ ಅಂಕವಿಕಲರಿಗಾಗಿ ಹಲವು ಸೇವಾ ಕೇಂದ್ರಗಳಿದ್ದರೂ ಪೋಷಕರು ಹೆಚ್ಚಾಗಿ ‘ಸರ್ಜಿ ಇನ್ಸ್ಟಿಟ್ಯೂಟ್‌’ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕಾರಣ, ಇದು ಹಲವು ಅಂಗವೈಕಲ್ಯಕ್ಕೆ ಆರೈಕೆ ಮಾಡುವ ಏಕೈಕ ಇನ್ಸ್‌ಟಿಟ್ಯೂಟ್ ಆಗಿದೆ.

ADVERTISEMENT

ಜೂನ್ 2017 ರಲ್ಲಿ ಸರ್ಜಿ ಇನ್ಸ್ಟಿಟ್ಯೂಟ್ ಆರಂಭವಾಯಿತು. 8 ಜನ ಶಿಕ್ಷಕರು ಅಂಗವಿಕಲ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶ್ರಮಿಸುತ್ತಿದ್ದಾರೆ. ಇಲ್ಲಿ ಮಕ್ಕಳಿಗೆ ಪ್ರತಿನಿತ್ಯ ವಾಕ್ ಚಿಕಿತ್ಸೆ, ಭೌತ ಚಿಕಿತ್ಸೆ, ದೈಹಿಕ ವ್ಯಾಯಾಮ, ಸಮೂಹ ಚಟುವಟಿಕೆಗಳನ್ನು ಅಭ್ಯಾಸ ಮಾಡಿಸುತ್ತಾರೆ. ಈ ಒಂದು ವರ್ಷದಲ್ಲಿ 35 ಮಕ್ಕಳಿಗೆ ಯಶಸ್ವಿ ಚಿಕಿತ್ಸೆ ನೀಡಲಾಗಿದೆ.

ಚಿಕಿತ್ಸೆಪಡೆದ ಬಹುಪಾಲು ಮಕ್ಕಳು ತಮ್ಮ ವೈಕಲ್ಯದಿಂದ ದೂರ ಸರಿದು ಎಲ್ಲರಂತೆ ಜೀವಿಸುತ್ತಿದ್ದಾರೆ. ಇದರಿಂದ ಪ್ರೇರೇಪಿತಗೊಂಡ ಶಿವಮೊಗ್ಗದ ಆಸುಪಾಸಿನ ಜಿಲ್ಲೆಗಳಾದ ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗದಿಂದಲೂ ಪೋಷಕರು ತಮ್ಮ ಮಕ್ಕಳನ್ನು ಕರೆತಂದು ಇಲ್ಲಿಗೆ ಸೇರಿಸುತ್ತಿದ್ದಾರೆ.

‘ಇನ್ನೇನು ನಮ್ಮ ಮಕ್ಕಳ ಬದುಕೇ ಮುಗಿದು ಹೋಯಿತು’ ಎಂದು ತೀರ್ಮಾನ ಮಾಡಿಕೊಂಡ ಪೋಷಕರಿಗೆ, ಮಕ್ಕಳಿಗೆ ಸರ್ಜಿ ಸಂಸ್ಥೆಯ ಮೂಲಕ ಹೊಸ ಬದುಕು ಸಿಕ್ಕಿದ ಉದಾಹರಣೆಗಳಿವೆ. ’ಇಲ್ಲಿಗೆ ಸೇರಿಸುವ ಮುನ್ನ ಮಕ್ಕಳು, ತಂದೆ–ತಾಯಿಯನ್ನು ಗುರುತಿಸುತ್ತಿರಲಿಲ್ಲ. ಅಂಥ ವೈಕಲ್ಯದಿಂದ ಬಳಲುತ್ತಿದ್ದರು. ಇಲ್ಲಿ ಸಿಕ್ಕ ಪ್ರೋತ್ಸಾಹ, ಚಿಕಿತ್ಸೆ, ಕಾಳಜಿಯಿಂದಾಗಿ ಮಕ್ಕಳು ಗುಣಮುಖರಾಗುತ್ತಿದ್ದಾರೆ. ಎಲ್ಲರನ್ನು ಗುರುತಿಸುವುದರ ಜತೆಗೆ ಮಾತನಾಡಲು ಕಲಿಯುತ್ತಿದ್ದಾರೆ’ ಎಂದು ಪೋಷಕರು ಸಂತಸ ವ್ಯಕ್ತಪಡಿಸುತ್ತಾರೆ.

ಅಡಿಕೆ ವ್ಯಾಪಾರದ ಕುಟುಂಬದ ಹಿನ್ನೆಲೆಯ ಈಶ್ವರ್ ಎಂಜಿನಿಯರ್ ಆದರೂ, ಮಕ್ಕಳಿಗೆ ಸೇವೆ ಮಾಡುತ್ತಾ ಮಾಡುತ್ತಾ, ಮಕ್ಕಳೇ ಇವರಿಗೆ ‘ಡಾಕ್ಟರ್ ಸರ್ಜಿ’ಯನ್ನಾ ಗಿಸಿದ್ದಾರೆ. ಈ ಹಂತಕ್ಕೆ ಬರುವ ಹೊತ್ತಿಗೆ, ಅವರು ಅಂಗವಿಕಲ ಮಕ್ಕಳನ್ನು ಆರೈಕೆ ಮಾಡುವುದರ ಬಗ್ಗೆ ಸಾಕಷ್ಟು ತರಬೇತಿ ಪಡೆದಿದ್ದಾರೆ. ಇವರ ಸೇವೆಗೆ ಸಹೋದರ ಡಾ.ಧನಂಜಯ ಸರ್ಜಿ ಬೆನ್ನುಲುಬಾಗಿ ನಿಂತಿದ್ದಾರೆ.

ಸರ್ಜಿ ಸಂಸ್ಥೆಯ ಸಮಾಜ ಮುಖಿ ಕಾರ್ಯದಿಂದಾಗಿ ಅನೇಕ ಅಂಗವಿಕಲ ಮಕ್ಕಳು ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಸರ್ಜಿ ಇನ್ಸ್ಟಿಟ್ಯೂಟ್‌ನ ತನ್ನ ಕಾರ್ಯವೈಖರಿಯಿಂದ ಅಂಗವಿಕಲ ಮಕ್ಕಳ ಬಾಳಲ್ಲಿ ಹೊಸ ಭರವಸೆಯೊಂದನ್ನು ಮೂಡಿಸಿದೆ.

ಕೇಂದ್ರಕ್ಕೆ ಕರೆತರುವ ಮಕ್ಕಳಿಗೆ, ಚಿಕಿತ್ಸೆ ನೀಡುವ ಜತೆಗೆ, ಪೋಷಕರಿಗೆ ಮಕ್ಕಳನ್ನು ಬೆಳೆಸುವ ಕುರಿತು ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಕಡ್ಡಾಯವಾಗಿ ಪೋಷಕರು ಭಾಗವಹಿಸಬೇಕು. ಅದಕ್ಕಾಗಿ ಕೇಂದ್ರದಲ್ಲೇ ಇರಬೇಕು. ‘ಹೀಗಾಗಿ ಹೊರಗಿನಿಂದ ನಮ್ಮ ಸಂಸ್ಥೆಗೆ ಬರುವ ಮಕ್ಕಳಿಗೆ ಮತ್ತು ಪೋಷಕರ ವಾಸ್ತವ್ಯವಕ್ಕಾಗಿ ವಸತಿ ನಿಲಯ ನಿರ್ಮಿಸಬೇಕು. ಈ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಹೊಸ ವರ್ಷದ ರೆಸಲ್ಯೂಷನ್’ ಎನ್ನುತ್ತಾರೆ ಈಶ್ವರ್ ಸರ್ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.