ADVERTISEMENT

ಬದುಕಿನಲ್ಲಿ ಅಭಿವ್ಯಕ್ತಿಯ ಶಕ್ತಿ

ಲಾವಣ್ಯಗೌರಿ ವೆಂಕಟೇಶ್
Published 6 ಜೂನ್ 2022, 19:45 IST
Last Updated 6 ಜೂನ್ 2022, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೊನ್ನೆ ಸ್ನೇಹಿತೆಯ ಮನೆಗೆ ಹೋಗಿದ್ದೆ. ಆಕೆಯ ಹತ್ತು ವರ್ಷದ ಮಗ ಶಾಲೆಯಿಂದ ಬಂದವನೇ, ‘ಅಮ್ಮಾ ನೋಡಮ್ಮಾ, ಚರ್ಚಾ ಸ್ಪರ್ಧೆಯಲ್ಲಿ ನನಗೆ ಮೂರನೇ ಬಹುಮಾನ ಬಂದಿದೆ’ ಎಂದು ಹೆಮ್ಮೆಯಿಂದ ತನ್ನ ತಾಯಿಗೆ ತೋರಿಸಿದ. ಈಕೆ ಅಸಡ್ಡೆಯಿಂದ, ‘ಓ ಮೂರನೇ ಬಹುಮಾನಾನ? ಮೊದಲು ಯಾರಿಗೆ ಬಂತು? ನಿನಗೇಕೆ ಮೊದಲ ಬಹುಮಾನ ಬರಲಿಲ್ಲ’ ಎಂದು ಮುಂತಾಗಿ ಕೇಳತೊಡಗಿದಳು. ಖುಷಿಯಿಂದ ಬಂದ ಹುಡುಗ ಸಪ್ಪೆಮುಖ ಹಾಕಿಕೊಂಡು ಒಳಗೆ ಹೋದ.

ಆ ತಾಯಿ ತನ್ನ ಭಾವನೆಗಳನ್ನು ಆ ರೀತಿ ವ್ಯಕ್ತಪಡಿಸುವುದರ ಬದಲು, ಬಹುಮಾನ ಬಂದಿದ್ದಕ್ಕಾಗಿ ಮೊದಲು ಮಗನನ್ನು ಅಭಿನಂದಿಸಿ, ಮುಂದಿನ ಬಾರಿ ಮೊದಲ ಬಹುಮಾನ ಪಡೆಯುವಂತೆ ಪ್ರೋತ್ಸಾಹಿಸಿದ್ದರೆ, ಆ ಪುಟ್ಟ ಮನಸ್ಸು ಎಷ್ಟು ಸಂತೋಷಪಡುತ್ತಿತ್ತಲ್ಲವೇ? ತಾಯಿಯನ್ನು ಮೆಚ್ಚಿಸಲಾದರೂ ಆತ ಮುಂದಿನ ಬಾರಿ ಹೆಚ್ಚಿನ ಶ್ರಮವಹಿಸುತ್ತಿದ್ದ. ಹಾಗೂ ಇನ್ನೂ ಹೆಚ್ಚಿನದನ್ನು ಸಾಧಿಸಬೇಕೆನ್ನುವ ಆಸೆ ಆತನಲ್ಲಿರುತ್ತಿತ್ತು.

ನನ್ನ ಸ್ನೇಹಿತೆಯಂತೆಯೇ ಬಹಳಷ್ಟು ಜನರು ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ಸೋಲುತ್ತಾರೆ. ಒಬ್ಬ ವ್ಯಕ್ತಿಯ ಬಗ್ಗೆ, ವಸ್ತುವಿನ ಬಗ್ಗೆ, ಅಥವಾ ಸಂದರ್ಭದ ಬಗ್ಗೆ ನಾವು ವ್ಯಕ್ತಪಡಿಸುವ ಅಭಿವ್ಯಕ್ತಿಗೆ ಬಹಳ ಶಕ್ತಿಯಿರುತ್ತದೆ. ಇದು ಮತ್ತೊಬ್ಬರ ಜೀವನದ ದಿಕ್ಕನ್ನೇ ಬದಲಿಸುವ ಮಟ್ಟದ ಸಾಮರ್ಥ್ಯವನ್ನು ಹೊಂದಿರುತ್ತದೆ.

ADVERTISEMENT

ಭಾವನೆಗಳ ವ್ಯಕ್ತಪಡಿಸುವಿಕೆ ಹೀಗೇ ಆಗಬೇಕೆಂದಿಲ್ಲ. ಮಾತಿನ ಮೂಲಕ, ಕೃತಿಯ ಮೂಲಕ, ಗೌರವದ ಮೂಲಕ, ನೋಟದ ಮೂಲಕ ಬೇಕಾದರೂ ವ್ಯಕ್ತಪಡಿಸಬಹುದು. ಯಾವುದೇ ರೀತಿಯ ಸಂಬಂಧವಾದರೂ ಗಟ್ಟಿಯಾಗಿ ಉಳಿಯಬೇಕಾದರೆ, ಪರಸ್ಪರ ಒಳ್ಳೆಯ ಭಾವನೆಗಳ ವಿನಿಮಯ ಅತ್ಯಗತ್ಯ. ನಮ್ಮ ಜೀವನದಲ್ಲಿ ಒದಗುವ ಪ್ರತಿ ಬಾಂಧವ್ಯದ ಬಗ್ಗೆಯೂ ಪ್ರತಿಯೊಬ್ಬರಿಗೂ ಒಂದೊಂದು ರೀತಿಯಾದ ಭಾವನೆಗಳಿರುತ್ತವೆ. ಕೆಲವು ಬಾರಿ ಆ ಭಾವನೆಗಳನ್ನು ಅಭಿವ್ಯಕ್ತಗೊಳಿಸದಿದ್ದಾಗ ಬಾಂಧವ್ಯಗಳು ಅರ್ಥರಹಿತವಾಗುತ್ತವೆ. ಕೆಲವೊಮ್ಮೆ ಯಾರೋ ಮಾಡಿದ ಸಹಾಯಕ್ಕೆ ಧನ್ಯವಾದಗಳನ್ನು ತಿಳಿಸಬೇಕೆನ್ನುವ ಮನಸ್ಸಾಗುತ್ತದೆ. ಆದರೆ ಮನಸ್ಸಿನಲ್ಲೇ ಅಂದುಕೊಂಡು, ಅದನ್ನು ವ್ಯಕ್ತಪಡಿಸದಿದ್ದರೆ ಹೇಗೆ? ಅದು ಉಡುಗೊರೆಯನ್ನು ತಂದು ಚೆಂದದ ಹೊದಿಕೆಯನ್ನು ಹಾಕಿ ಕೊಡದೆ ನಾವೇ ಇಟ್ಟುಕೊಂಡಂತಿರುತ್ತದೆ. ಭಾವನೆಗಳ ಅಭಿವ್ಯಕ್ತಿಗೆ ಸುಲಭವಾದ ಕೊಂಡಿ ಎಂದರೆ, ಮಾತು. ಮಾತಿನ ಮೂಲಕ ಅಭಿವ್ಯಕ್ತಿ ಎಷ್ಟು ಸುಲಭವೋ ಒಮ್ಮೊಮ್ಮೆ ಅಷ್ಟೇ ಕಷ್ಟ. ಆದರೆ ಕೃತಿಯ ಮೂಲಕ ಮಾಡುವ ಅಭಿವ್ಯಕ್ತಿ ಜನರ ಮನದಲ್ಲಿ ನಿಲ್ಲುತ್ತದೆ.

ಈ ಸಂದರ್ಭದಲ್ಲಿ ನನ್ನ ತಾಯಿ ಹಾಗೂ ನನ್ನ ಅಜ್ಜಿಯ ನಡುವಿದ್ದ ಸಂಬಂಧ ನೆನಪಾಗುತ್ತಿದೆ. ಗೌರವ ಸೂಚಿಸುವ ಅಭಿವ್ಯಕ್ತಿಯೂ ಎಷ್ಟೊಂದು ಬಗೆಯಲ್ಲಿರುತ್ತದೆ ಎಂದು ತಿಳಿದದ್ದು ನನ್ನ ತಾಯಿಯಿಂದ. ನನ್ನ ತಾಯಿ ಏನೇ ಕೆಲಸ ಮಾಡಬೇಕಾದರೂ ನನ್ನ ಅಜ್ಜಿಯನ್ನು ಕೇಳುತ್ತಿದ್ದರು. ನನ್ನ ಅಜ್ಜಿಯೂ ತಾಯಿ ಕೇಳಿದ ಎಲ್ಲಕ್ಕೂ ಅಸ್ತು ಎನ್ನುತ್ತಿದ್ದರು. ಅಜ್ಜಿ ಹೀಗೆ ಹೇಳುತ್ತಾರೆಂದೂ ಗೊತ್ತಿದ್ದೂ ನನ್ನ ತಾಯಿ ಆಕೆಯನ್ನು ಪದೇ ಪದೇ ಎಲ್ಲಕ್ಕೂ ಅನುಮತಿ ಕೇಳುತ್ತಿದ್ದದ್ದು ನನ್ನಲ್ಲಿ ಆಶ್ಚರ್ಯವನ್ನುಂಟುಮಾಡಿತ್ತು. ಈ ಬಗ್ಗೆ ನನ್ನ ತಾಯಿಯನ್ನು ವಿಚಾರಿಸಿದೆ. ನನ್ನ ತಾಯಿಯ ಜವಾಬು ಈ ರೀತಿ ಇತ್ತು. ‘ನಿನ್ನ ಅಜ್ಜಿಯನ್ನು ಏನು ಕೇಳಿದರೂ, ಆಕೆ ಬೇಡವೆನ್ನುವುದಿಲ್ಲ, ಆದರೂ ಕೇಳುತ್ತೇನೆ. ಇದು ಮನೆಗೆ ಹಿರಿಯಳಾದ ಆಕೆಗೆ ನಾನು ಕೊಡುವ ಗೌರವ! ಕೇಳುವುದರಿಂದ ನಾನೇನನ್ನೂ ಕಳೆದುಕೊಳ್ಳುವುದಿಲ್ಲ. ಆದರೆ ಕೇಳದಿದ್ದರೆ, ಖಂಡಿತ ಆಕೆಯ ಮನಸ್ಸಿಗೆ ಬೇಸರವಾಗುತ್ತದೆ. ಹಿರಿಯಳಾದ ನನ್ನನ್ನು ಮೂಲೆಗುಂಪು ಮಾಡಿದರೆನ್ನುವ ಭಾವನೆ ಆಕೆಗೆ ಬರುತ್ತದೆ’. ಇದು ನನ್ನ ತಾಯಿಯ ಅಭಿವ್ಯಕ್ತಿಯ ರೀತಿ!

ಕೆಲವೊಮ್ಮೆ ಅಭಿವ್ಯಕ್ತಿಯ ಕೊರತೆ ಎಷ್ಟೋ ಸಂಬಂಧಗಳನ್ನು ದೂರ ಮಾಡುತ್ತದೆ. ಹೇಳಬೇಕಾದ ಹಾಗೂ ಕೃತಿಯಲ್ಲಿ ತೋರಿಸಬೇಕಾದ ಬಹಳಷ್ಟು ವಿಷಯಗಳು ತಡ ಮಾಡಿದಷ್ಟೂ ಸಂದರ್ಭಗಳು ಹಾಗೂ ಸಂಬಂಧಗಳು ಬೇರೆಯೇ ಆಗಿಹೋಗಿರುತ್ತವೆ. ವ್ಯಕ್ತಿ ವ್ಯಕ್ತಿಯ ನಡುವಿನ ಬಾಂಧವ್ಯದ ಮಾಧ್ಯಮವೇ ಈ ಅಭಿವ್ಯಕ್ತಿ. ಬದುಕಿನಲ್ಲಿ ನಾವು ಅಭಿವ್ಯಕ್ತಿಸುವ ಸದ್ಭಾವನೆಗಳು ಮಹತ್ತರ ಬದಲಾವಣೆಗಳನ್ನು ತರುತ್ತವೆ. ಮಾನವೀಯ ಸಂಬಂಧಗಳು ಸುಧಾರಿಸುತ್ತವೆ. ನಾವು ಎಷ್ಟೇ ವಿದ್ಯಾವಂತರಾದರೂ ಬುದ್ಧಿವಂತರಾದರೂ ಶ್ರೀಮಂತರಾದರೂ, ಜನರ ಬಗೆಗಿರುವ ನಮ್ಮ ವರ್ತನೆ ಹಾಗೂ ಅಭಿವ್ಯಕ್ತಿ, ನಾವೇನು ಎನ್ನುವುದನ್ನು ತೋರಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.