‘ಆಯುರ್ವೇದದಲ್ಲಿ ‘ಪ್ರಜ್ಞಾಪರಾಧ’ ಎಂಬುದು ಬಳಕೆಯಲ್ಲಿದೆ. ಗೊತ್ತಿದ್ದು ಮಾಡುವ ತಪ್ಪಿಗೆ ಹಾಗೆ ಹೇಳಲಾಗುತ್ತದೆ. ಮೊದಲನೆ ಅಲೆಯಲ್ಲಿ ಸಾಕಷ್ಟು ಪಾಠ ಕಲಿತಿದ್ದೇವೆ. ಆ ವೇಳೆ ಮಾಡಿದ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾಗಿತ್ತು. ಈಗ ಮನೆಯಲ್ಲಿ ಒಬ್ಬರಿಗೆ ಸೋಂಕು ತಗುಲಿದರೆ ಎಲ್ಲ ಸದಸ್ಯರಿಗೆ ಕಾಯಿಲೆ ಹರಡುತ್ತಿದೆ. ಮನೆಯಲ್ಲಿನ ಆರೈಕೆ ಕಡಿಮೆಯಾಗಿರುವುದು ಕೂಡ ಇದಕ್ಕೆ ಕಾರಣ. ಈಗಲಾದರೂ ಎಚ್ಚೆತ್ತುಕೊಂಡು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು.’
ಮುಖಗವಸು ಧರಿಸುವಿಕೆ, ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ವಿವಿಧ ನಿಯಮಗಳು ಮುನ್ನೆಚ್ಚರಿಕೆ ಕ್ರಮಗಳಾಗಿವೆ. ಅವನ್ನು ಪಾಲಿಸಿದರೂ ಸೋಂಕು ತಗುಲಬಹುದು. ಹಾಗಾಗಿ, ರೋಗ ಎದುರಿಸಲು ದೇಹವನ್ನು ಗಟ್ಟಿಗೊಳಿಸಿಕೊಳ್ಳಬೇಕು. ಜೀರ್ಣಕ್ರಿಯೆಗೆ ಸಹಕಾರಿಯಾದ ಮೃದು ಆಹಾರಸೇವಿಸಬೇಕು. ಅರಿಶಿನ, ಕಾಳು ಮೆಣಸು, ಶುಂಠಿ ಸೇರಿದಂತೆ ವಿವಿಧ ಸಾಂಬಾರು ಪದಾರ್ಥಗಳನ್ನು ಅಗತ್ಯ ಪ್ರಮಾಣದಲ್ಲಿ ಬಳಸಬೇಕು. ವೈರಾಣು ರೋಗಗಳಿಗೆ ಆಯುರ್ವೇದದಲ್ಲಿ ಹೇರಳವಾಗಿ ಔಷಧಗಳಿವೆ. ಅವನ್ನು ಬಳಸಿದಲ್ಲಿ ಕೋವಿಡ್ ತಡೆಯಲು ನಮಗೆ ಸಾಧ್ಯವಾಗುತ್ತದೆ.
ಕೋವಿಡ್ ಜಯಿಸಲು ಹೀಗೆ ಮಾಡಿ
* ಒಂದು ಲೀಟರ್ ನೀರನ್ನು ಚೆನ್ನಾಗಿ ಕುದಿಸಿ, ಅದಕ್ಕೆ ಐದು ತುಳಸಿ ಎಲೆ ಹಾಕಬೇಕು. ಮತ್ತೊಮ್ಮೆ ಕುದಿಸಿ, ಬಳಿಕ ಅದನ್ನು ಕುಡಿಯಬೇಕು. ತುಳಸಿ ವೈರಾಣು ನಾಶಕ ಗುಣ ಹೊಂದಿದೆ.
* ಒಂದು ಬೆಟ್ಟದ ನೆಲ್ಲಿಕಾಯಿ ಅಥವಾ ಅದರ ಪುಡಿಯ ಚೂರ್ಣವನ್ನು ಪ್ರತಿನಿತ್ಯ ಸೇವಿಸಿ.
* ಉಸಿರಾಟದ ಸಮಸ್ಯೆಗಳು ಜೀವಕ್ಕೆ ಅಪಾಯ ತರುವ ಸಾಧ್ಯತೆ ಇರುತ್ತದೆ. ಇದನ್ನು ನಿಯಂತ್ರಣಕ್ಕೆ ತರಲು ಹಿಪ್ಪಲಿ ಸಹಾಯಕ. ಆಯುರ್ವೇದ ಗ್ರಂಥದಲ್ಲಿ ‘ಹಿಪ್ಪಲಿ ವರ್ಧಮಾನ ರಸಾಯನ’ ಎಂದು ಹೇಳಲಾಗಿದೆ. 1 ಸೆಂ.ಮೀ. ಉದ್ದದ ಹಿಪ್ಪಲಿಯನ್ನು ದಿನಕ್ಕೆ ಮೂರು ತೆಗೆದುಕೊಳ್ಳಬೇಕು. ಅದನ್ನು ಪುಡಿಮಾಡಿ ಜೇನುತುಪ್ಪದ ಜತೆಗೆ ಅಥವಾ ಹಾಲಿನ ಜತೆಗೆ ಸೇವಿಸಬಹುದು.
* ಆಯುರ್ವೇದದಲ್ಲಿ ಷಡಂಗ ಪಾನೀಯವಿದೆ. ಬದ್ರಮುಷ್ಠಿ, ಪರ್ಪಟಕ, ಲಾವಂಚ, ಉದೀಚ, ಶುಂಠಿ ಹಾಗೂ ಚಂದನದ ತಲಾ ಎರಡು ಗ್ರಾಂ ಪುಡಿಯನ್ನು 3 ಲೀಟರ್ ನೀರಿನಲ್ಲಿ ಕುದಿಸಬೇಕು. ಅದು ಅರ್ಧದಷ್ಟು ಆವಿಯಾಗಬೇಕು. ಬಳಿಕ ತಣ್ಣಗಾದ ಮೇಲೆ ಕುಡಿಯಬೇಕು. ಇದು ಜ್ವರ ಕಡಿಮೆ ಮಾಡುವ ಜತೆಗೆ ದೇಹವನ್ನು ತಂಪು ಮಾಡುತ್ತದೆ.
* ನೆಲನೆಲ್ಲಿ, ಭದ್ರಮುಷ್ಠಿ ಅಥವಾ ಅಮೃತಬಳ್ಳಿಯಿಂದ ಗ್ರೀನ್ ಟಿ ಮಾಡಿ, ದಿನಕ್ಕೆ ಎರಡು ಬಾರಿ ಸೇವಿಸಬೇಕು.
ರೋಗ ಬಂದಾಗ ಏನು ಮಾಡಬೇಕು?
* ಕೆಮ್ಮು, ಶೀತ, ಜ್ವರ ಬಂದಾಗ ಅಷ್ಟಗುಣ ಮಂಡವನ್ನು ತಯಾರಿಸಬೇಕು. ಅದರಲ್ಲಿ 8 ಸಾಮಗ್ರಿಗಳಿರುತ್ತವೆ. 8 ಗ್ರಾಂ ಅಕ್ಕಿ, 8 ಗ್ರಾಂ ಉದ್ದು, ಸ್ವಲ್ಪ ಸೈಂದಲವಣ ಅಥವಾ ಕಲ್ಲು ಉಪ್ಪು, ಶುಂಠಿ, ಹಿಪ್ಪಲಿ ಮತ್ತು ಕಾಳು ಮೆಣಸಿನ ಎರಡೆರಡು ಚಿಟಕಿಯಷ್ಟು ಹಾಕಬೇಕು. ಕೊತ್ತಂಬರಿ, ಇಂಗನ್ನೂ ಸೇರಿಸಬೇಕು. ಇದಕ್ಕೆ 225 ಎಂ.ಎಲ್. ನೀರು ಹಾಕಿ ಕುದಿಸಬೇಕು. ಅಕ್ಕಿಯು ಬೆಂದಮೇಲೆ ನೀರನ್ನು ಬೇರ್ಪಡಿಸಬೇಕು. ಆಗ 50 ಎಂ.ಎಲ್. ಗಂಜಿ ಸಿಗುತ್ತದೆ. ಅದನ್ನು ಬಿಸಿ ಇರುವಾಗಲೇ ಸೇವಿಸಬೇಕು. ಇದು ಜ್ವರ ಕಡಿಮೆ ಮಾಡಲು ಅನುಕೂಲ ಮಾಡುವ ಜತೆಗೆ ಶಕ್ತಿಯನ್ನು ನೀಡುತ್ತದೆ.
* ಆಯುರ್ವೇದದಲ್ಲಿ ‘ವ್ಯೂಶ’ ಎಂಬ ವಿಧಾನವಿದೆ. ಸಾಂಬಾರಿನ ರೀತಿ ತಯಾರಿ ಮಾಡಿ, ಸೇವಿಸುವುದು. ಹುರುಳಿ ಕಾಳು, ಹೆಸರು ಕಾಳು, ಚೆನ್ನಂಗಿ ಬೇಳೆಯ ಕಟ್ಟನ್ನು ಮಾಡಿ, ಬಿಸಿ ಇರುವಾಗಲೇ ಸೂಪು ರೀತಿಯಲ್ಲಿ ಕುಡಿದರೆ ಜ್ವರ ಹಾಗೂ ರೋಗ ಲಕ್ಷಣಗಳು ಕಡಿಮೆಯಾಗುತ್ತವೆ.
* ‘ಉಷ್ಣೋದಕ ಕೂಡ ಕಾಯಿಲೆ ನಿವಾರಿಸಲು ಸಹಕಾರಿ. ಒಂದು ಲೀಟರ್ ನೀರನ್ನು ಸಣ್ಣ ಬೆಂಕಿಯಲ್ಲಿ ಅರ್ಧವಾಗುವಷ್ಟು ಕುದಿಸಬೇಕು. ಅದನ್ನು ಸೇವಿಸುವುದರಿಂದ ಜ್ವರ ಸೇರಿದಂತೆ ವಿವಿಧ ಸಮಸ್ಯೆಗಳು ನಿವಾರಣೆಯಾಗುತ್ತವೆ.
* ನೆಲನೆಲ್ಲಿ, ಅಮೃತಬಳ್ಳಿ ಅಥವಾ ಭದ್ರಮುಷ್ಠಿಯನ್ನು ಚಹ ಮಾಡಿ ಕುಡಿಯಬಹುದು.
-ಡಾ. ಗಿರಿಧರ ಕಜೆ, ಆಯುರ್ವೇದ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.