ಒತ್ತಡ ಇರುವುದು ನಮ್ಮ ಮನಸ್ಸಿನಲ್ಲೇ ಹೊರತು ಹೊರಗೆ ಅಲ್ಲ. ನಾವು ನಮ್ಮ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಕೆಲಸ ಮಾಡುವಾಗ ಏಕ್ರಾಗತೆ ಬೇಕು.ಬದುಕಿನೊಂದಿಗೆ ಹೊಂದಿಕೊಳ್ಳುತ್ತಾ, ಬಂದ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಸಾಗಿದರೆ, ಒತ್ತಡ ನಮ್ಮನ್ನು ಕಾಡುವುದಿಲ್ಲ – ಎನ್ನುತ್ತಾರೆ, ಸಂಗೀತನಿರ್ದೇಶಕ ಗುರುಕಿರಣ್.
ನಿರೂಪಣೆ:
ಯಾವುದೇ ಕೆಲಸವಾಗಲಿ, ಅದನ್ನು ಮಾಡುವ ಕಾರ್ಯಕ್ಷಮತೆ ನಮ್ಮಲ್ಲಿ ಇಲ್ಲ, ಅದು ನಮ್ಮ ಶಕ್ತಿ ಮೀರಿದ್ದು ಎನ್ನುವುದು ನಮ್ಮನ್ನು ಹೆಚ್ಚಾಗಿ ಕಾಡಲು ಆರಂಭಿಸಿದರೆ ಆಗ ಒತ್ತಡವೂ ಪ್ರಾರಂಭವಾಗುತ್ತದೆ.
ಇನ್ನೂ ಸರಳೀಕರಿಸಿ ಹೇಳುವುದಾದರೆ, ಇದರಲ್ಲಿ ಮೂರು ಬಗೆ: ಒಂದು – ನಮಗೆ ಕೆಲಸ ಮಾಡುವಶಕ್ತಿ ಇಲ್ಲ. ಎರಡು – ನಮಗೆ ಸಮಯ ಇಲ್ಲ, ಮೂರು – ನಮಗೆ ಕೆಲಸ ಗೊತ್ತಿಲ್ಲ. ಈ ಸಂದರ್ಭಗಳಲ್ಲೂ ಒತ್ತಡ ನಮ್ಮನ್ನು ಕಾಡುತ್ತದೆ. ನಮ್ಮ ಅತಿಯಾದ ಆತ್ಮವಿಶ್ವಾಸದ ಗುಣವೂ ನಮ್ಮನ್ನು ಹಾಳು ಮಾಡುತ್ತದೆ. ನಮ್ಮ ಶಕ್ತಿ–ಸಾಮರ್ಥ್ಯದ ಅನುಸಾರವಾಗಿ ಕೆಲಸಗಳನ್ನು ಒಪ್ಪಿಕೊಳ್ಳಬೇಕು.
ಜೀವನದಲ್ಲಿ ನಾನೂ ಹಲವಾರು ಒತ್ತಡದ ಘಟ್ಟಗಳನ್ನು ಸಾಗಿ ಬಂದಿದ್ದೇನೆ. ಒಂದು ಘಟನೆ ನೆನಪಿಗೆ ಬರುತ್ತದೆ. ನನ್ನದು ಮಂಗಳೂರು; ಆದರೆ, ನನ್ನ ಕಾರ್ಯಕ್ಷೇತ್ರ ಬೆಂಗಳೂರು. ಆಗಷ್ಟೇ ನನ್ನ ಮದುವೆ ಆಗಿತ್ತು. ಜೊತೆಗೆ, ನನ್ನ ಕೆಲವು ಹಾಡುಗಳು ಪ್ರಸಿದ್ಧಿ ಗಳಿಸಿದ್ದವು. ಹೆಚ್ಚು ಏಕಾಗ್ರತೆ ಹಾಗೂ ಶ್ರಮ ಬೇಡುತ್ತಿದ್ದ ಕಾಲಘಟ್ಟವದು. ಆದರೆ, ಹೆಂಡತಿ ಮಂಗಳೂರಿನಲ್ಲಿಯೇ ಇದ್ದಳು. ಭವಿಷ್ಯದ ಕುರಿತು ತುಸು ಅನಿಶ್ಚಯತೆ. ಹೆಂಡತಿ, ‘ಮಂಗಳೂರಿಗೆ ಬಂದುಬಿಡಿ’ ಎಂದು ಸಲಹೆ ನೀಡಿದಳು. ಹಾಗೆಂದು ಹೋಗುವುದೂ ಕಷ್ಟ. ಕುಟುಂಬ ಮತ್ತು ಸಿನಿಮಾಸಂಗೀತ – ಎರಡನ್ನೂ ಸರಿತೂಗಿಸಿಕೊಂಡು ಹೋಗುವುದು ಕಷ್ಟವಾಯಿತು. ನಂತರ ಬೆಂಗಳೂರಿಗೆ ಶಿಫ್ಟ್ ಆದೆವು. ದಿನ ಕಳೆದಂತೆ ಕಾಲವೇ ನನ್ನ ಅತಂತ್ರ ಮನಃಸ್ಥಿತಿಯನ್ನು ಸರಿಮಾಡಿತು. ಈ ಒತ್ತಡದ ಸಂದರ್ಭದಲ್ಲಿ ಮೂಡಿದ್ದ ಗಂಟನ್ನು ನನ್ನ ತಾಳ್ಮೆಯೇ ಶಮನ ಮಾಡಿತು.
ಯಾವುದೇ ಒಂದು ಹಾಡು ಪ್ರಸಿದ್ಧವಾಯಿತು ಎಂದುಕೊಳ್ಳಿ; ಆಗ ಸಂಗೀತನಿರ್ದೇಶಕರ ಮೇಲಿನ ಜವಾಬ್ದಾರಿ ಹೆಚ್ಚುತ್ತದೆ. ಮುಂದಿನ ಹಾಡನ್ನು ಗೆಲ್ಲಿಸಿ ಕೊಡಲೇಬೇಕಾಗುತ್ತದೆ! ಆಗ ಬೇಡವೆಂದರೂ ಸಂಗೀತನಿರ್ದೇಶಕ ಒತ್ತಡಕ್ಕೆ ಸಿಲುಕುತ್ತಾನೆ. ರಾಗಸಂಯೋಜನೆ, ಎಡಿಟಿಂಗ್ – ಹೀಗೆ ಹಾಡು ತಯಾರಾಗುವ ಪ್ರತಿ ಹಂತದಲ್ಲೂ ಒತ್ತಡ ಇರುತ್ತದೆ. ಜೊತೆಗೆ ಒಮ್ಮೆ ಜನರ ಬಳಿಗೆ ಹೋದ ನಂತರದಲ್ಲೂ ಒತ್ತಡ ಇದ್ದೇ ಇರುತ್ತದೆ. ಜನರು ನಮ್ಮ ಕೆಲಸವನ್ನು ಹೇಗೆ ಸ್ವೀಕರಿಸುತ್ತಾರೋ ಎನ್ನವ ಭಯಮಿಶ್ರಿತ ಒತ್ತಡ! ಆಮೇಲೆ ಇನ್ನೊಂದು – ಜನ ನಮ್ಮ ಹಿಂದಿನ ಕೆಲಸವನ್ನು ಈಗಿನದನ್ನು ತುಲನೆ ಮಾಡುತ್ತಾರೆ. ಹೀಗಾಗಿ, ಪ್ರತಿ ಬಾರಿಯೂ ಹೊಸದನ್ನು ನೀಡಲೇಬೇಕಾಗಿರುವ ಅನಿವಾರ್ಯತೆ ಮತ್ತು ಇದರಿಂದ ಬರುವ ಒತ್ತಡವನ್ನು ನಾವು ಎದುರಿಸಬೇಕಾಗುತ್ತದೆ.
ಹಿಂದಿನ ಮತ್ತು ಈಗಿನ ಕೆಲಸಗಳಒತ್ತಡದಲ್ಲಿ ಬದಲಾವಣೆ ಏನಿಲ್ಲ ಎಂದೆನಿಸುತ್ತದೆ. ಆದರೆ, ತಂತ್ರಜ್ಞಾನ ನಮ್ಮ ಒತ್ತಡವನ್ನು ಕಡಿಮೆ ಮಾಡಿದೆ ಎನ್ನುವುದೂ ನಿಜವೇ; ಇದನ್ನು ಅಲ್ಲಗಳೆಯುವ ಹಾಗಿಲ್ಲ. ಮೊದಲು ಎಲ್ಲವನ್ನು ನಾವೇ ಖುದ್ದು ಮಾಡಬೇಕಿತ್ತು; ಈಗ ಹಾಗಲ್ಲ, ನಮ್ಮ ಹಲವು ಕೆಲಸಗಳನ್ನು ಕಂಪ್ಯೂಟರ್ ಮಾಡಿಬಿಡುತ್ತದೆ. ಹಾಡುಗಾರರು ಎಲ್ಲೇ ಇದ್ದರೂ, ಅಲ್ಲಿಂದಲೇ ಅವರು ಹಾಡನ್ನು ಹಾಡಿ ನಮಗೆ ಕಳುಹಿಸಬಹುದು; ಸ್ಟುಡಿಯೊದಲ್ಲೇ ಹಾಡಬೇಕು ಎನ್ನುವ ಅವಲಂಬನೆ ಇಲ್ಲ.
ಒತ್ತಡ ಇರುವುದು ನಮ್ಮ ಮನಸ್ಸಿನಲ್ಲಿಯೇ ಹೊರತು ಹೊರಗೆ ಅಲ್ಲ. ಹೀಗಾಗಿ ನಾವು ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಕೆಲಸ ಮಾಡುವಾಗ ಏಕ್ರಾಗತೆ ತುಂಬ ಮುಖ್ಯವಾಗುತ್ತದೆ. ಜೊತೆಗೆ, ಕೆಲಸದ ವೇಳೆ ಅದರ ಫಲಿತಾಂಶವನ್ನು ಹೆಚ್ಚಾಗಿ ತಲೆಕೆಡಿಸಿಕೊಳ್ಳಲು ಹೋಗಬಾರದು. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಕೆಲಸವನ್ನು ಪ್ರೀತಿಸಲು ಪ್ರಾರಂಭಿಸಿದರೆ, ಆಗ ಒತ್ತಡ ಎಂದು ನಿಮಗೆ ಅನ್ನಿಸುವುದೇ ಇಲ್ಲ.ಬದುಕಿನೊಂದಿಗೆ ಹೊಂದಿಕೊಳ್ಳುತ್ತಾ, ಬಂದ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಸಾಗಿದರೆ, ಒತ್ತಡ ನಮ್ಮನ್ನು ಕಾಡುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.