ಪಟಾಕಿ ಹೊಡೆಯುವಾಗ ಕಣ್ಣು ಹಾಗೂ ಚರ್ಮದ ಕಾಳಜಿ ವಹಿಸುವುದು ಮುಖ್ಯ. ಪಟಾಕಿಯಿಂದಾಗುವ ಗಾಯಗಳು ಕಣ್ಣುಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಸ್ಪಾರ್ಕ್ಲರ್‌ಗಳು ಮತ್ತು ಚಕ್ರ ಪಟಾಕಿಗಳಿಂದ ಕಣ್ಣಿಗೆ ಗಾಯಗಳಾಗಬಹುದು.
ಪಟಾಕಿ ಹೊಡೆಯುವಾಗ ನಿಂತು ನೋಡುವವರಿಗೆ ಶೇ 50ರಷ್ಟು ಗಾಯಗಳು ಆಗುತ್ತವೆ. ಯಾವುದೇ ಮುಂಜಾಗ್ರತೆ ಇಲ್ಲದೇ ನಡೆಯುವ ದಾರಿಹೋಕರೇ ಬಹುಪಾಲು ಸಂದರ್ಭಗಳಲ್ಲಿ ಬಲಿಪಶುಗಳಾಗುತ್ತಾರೆ.
ಕಣ್ಣಿನ ಗಾಯಗಳ ತೀವ್ರತೆಯು ಕಾರ್ನಿಯಲ್ ಸವೆತದಿಂದ ಹಿಡಿದು ರೆಟಿನಲ್‌ಗೆ ಹಾನಿ, ಶಾಶ್ವತ ಅಂಧತ್ವವನ್ನು ಉಂಟು ಮಾಡಬಹುದು. ಪಟಾಕಿಗಳಲ್ಲಿರುವ ಗನ್‌ಪೌಡರ್‌ನ ರಾಸಾಯನಿಕ ಅಂಶಗಳು ಕಣ್ಣಿಗೆ ಹಾನಿಯಾಗುವುದಲ್ಲದೇ, ನಿರಂತರ ನೀರು ಬರುವಂತೆ ಮಾಡಬಹುದು.
ಸ್ಪಾರ್ಕ್ಲರ್‌ಗಳು ವಿಶೇಷವಾಗಿ ಅಪಾಯಕಾರಿ. ಚಿನ್ನವನ್ನು ಕರಗಿಸುವಷ್ಟು ಹೆಚ್ಚಿನ ತಾಪಮಾನದಲ್ಲಿ ಉರಿಯುತ್ತವೆ. ಇದು ನೀರಿನ ಕುದಿಯುವ ಬಿಂದುವಿಗಿಂತ ಸುಮಾರು 1,000 ಡಿಗ್ರಿಗಳಷ್ಟು ಬಿಸಿಯಾಗಿರುತ್ತದೆ, ಇದು ಮೂರನೇ ಹಂತದ ಸುಟ್ಟಗಾಯಗಳಿಗೆ ಕಾರಣವಾಗಬಹುದು. ಹೆಚ್ಚಿನ ಪಟಾಕಿಗಳು ಗನ್‌ಪೌಡರ್ ಅನ್ನು ಹೊಂದಿರುತ್ತವೆ. ಇದು ಸ್ಫೋಟಗೊಳ್ಳಲು ಕಾರಣವಾಗುತ್ತದೆ. ಪಟಾಕಿ ಸ್ಫೋಟ ಅನಿರೀಕ್ಷಿತವಾಗಿರುವುದರಿಂದ, ವ್ಯಕ್ತಿ ಎಷ್ಟೇ ಜಾಗರೂಕರಾಗಿದ್ದರೂ ಅಥವಾ ಮೇಲ್ವಿಚಾರಣೆಯಲ್ಲಿದ್ದರೂ ತೀವ್ರ ಗಾಯಗಳು ಸಂಭವಿಸಬಹುದು. ನೈಟ್ರಸ್ ಆಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್ ಹೆಚ್ಚಳವಾಗುವುದರಿಂದ ಬಹುಸಣ್ಣ ಕಣಗಳು ವಾತಾವರಣಕ್ಕೆ ಬಿಡುಗಡೆಯಾಗುತ್ತವೆ.
ಕಣ್ಣಿನ ಗಾಯಗಳಲ್ಲಿ ತೆರೆದ ಗಾಯಗಳು, ರಂಧ್ರಗಾಯಗಳು ಎಂದು ವಿಂಗಡಿಸಬಹುದು. ಮುಚ್ಚಿದ ಕಣ್ಣಿನ ಗಾಯಗಳಿರುವ ರೋಗಿಗಳಿಗೆ ಸಾಮಾನ್ಯವಾಗಿ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಹೀಗಿದ್ದು, ತೆರೆದ ಕಣ್ಣಿನ ಗಾಯಗಳು, ಕಾರ್ನಿಯಲ್ ಮತ್ತು ಹೈಫೆಮಾಗೆ ಹಾನಿಯಾದರೆ ತಕ್ಷಣವೇ ತಜ್ಞರ ಚಿಕಿತ್ಸೆ ಅಗತ್ಯವಿರುತ್ತದೆ. ಒಂದೊಮ್ಮೆ ರಾಸಾಯನಿಕ ಕಣಗಳು ಕಣ್ಣಿನೊಳಗೆ ಹೊಕ್ಕಿದ್ದರೆ, ಕಣ್ಣುಗಳನ್ನು ಉಜ್ಜುವುದನ್ನು ತಪ್ಪಿಸಿ. ಕಣ್ಣುರೆಪ್ಪೆಗಳನ್ನು ತೆರೆದಿಟ್ಟುಕೊಂಡು ನಿರಂತರವಾಗಿ ನೀರಿನಿಂದ ಕಣ್ಣುಗಳನ್ನು ತೊಳೆಯಿರಿ.ದೊಡ್ಡ ಕಣ ಸಿಲುಕಿಕೊಂಡರೆ, ಅದನ್ನು ತೆಗೆದುಹಾಕಲು ಪ್ರಯತ್ನಿಸಬೇಡಿ. ಬದಲಿಗೆ, ಕಣ್ಣುಗಳನ್ನು ಮುಚ್ಚಿ ಮತ್ತು ವೈದ್ಯಕೀಯ ಆರೈಕೆಯನ್ನು ಪಡೆಯಿರಿ.
ರಾಸಾಯನಿಕಕ್ಕೆ ಒಡ್ಡಿಕೊಂಡ ಸಂದರ್ಭದಲ್ಲಿ, ಕಣ್ಣುಗಳನ್ನು ಮತ್ತು ಕಣ್ಣುರೆಪ್ಪೆಗಳ ಕೆಳಗೆ ಕನಿಷ್ಠ 30 ನಿಮಿಷಗಳ ಕಾಲ ನೀರಿನಿಂದ ತೊಳೆಯಿರಿ ಮತ್ತು ತಕ್ಷಣ ನೇತ್ರ ವೈದ್ಯರನ್ನು ಸಂಪರ್ಕಿಸಿ. ರಕ್ಷಣಾತ್ಮಕ ಕನ್ನಡಕಗಳನ್ನು ಧರಿಸಿ. ಮಕ್ಕಳ ಮೇಲೆ ನಿಗಾ ಇಡುವುದು ಬಹಳ ಮುಖ್ಯ. ಗಾಯಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ.
ಆಕಸ್ಮಿಕ ಬೆಂಕಿ ಹೊತ್ತಿಕೊಂಡರೆ ನೀರು ಮತ್ತು ಮರಳಿನ ಬಕೆಟ್ ಅನ್ನು ಮುಂಜಾಗ್ರತಾ ಕ್ರಮವಾಗಿ ಇಟ್ಟುಕೊಳ್ಳಿ. ಈ ದೀಪಾವಳಿಗೆ ಡಾ. ಅಗರ್ವಾಲ್ಸ್ ಐ ಆಸ್ಪತ್ರೆಯಲ್ಲಿ ತುರ್ತುಸೇವೆಗಳಿಗೆ 83101 60947ಗೆ ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.