ADVERTISEMENT

ಕಾಡುವ ನಿದ್ರೆಗೆ ಕಾರಣ ಆಹಾರ: ಉತ್ತಮ ನಿದ್ರೆಗೆ ಅನುಸರಿಸಬೇಕಾದ ಕ್ರಮಗಳು ಇಲ್ಲಿವೆ

ಪ್ರಜಾವಾಣಿ ವಿಶೇಷ
Published 1 ನವೆಂಬರ್ 2021, 21:00 IST
Last Updated 1 ನವೆಂಬರ್ 2021, 21:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಿದ್ರೆಯಿಲ್ಲದ ರಾತ್ರಿಗಳ ಹಿಂದೆ ಹಲವು ಕಾರಣಗಳು ಇಣುಕಿ ಹಾಕುತ್ತವೆ. ಬೆಳಿಗ್ಗೆ ಎದ್ದಾಗ ಕೆಂಪಾದ ಕಣ್ಣು, ಕಾಡುವ ತಲೆನೋವು, ಎಣೆಯಿಲ್ಲದ ಕೋಪ.. ಎಲ್ಲವಕ್ಕೂ ರಾತ್ರಿ ಕೈಕೊಟ್ಟ ನಿದ್ರೆಯೇ ಶತ್ರು. ಇದಕ್ಕೆ ಕಾರಣಗಳನ್ನು ಹುಡುಕುತ್ತ ಹೋದರೆ ಅಸಾಧ್ಯ ಒತ್ತಡ, ಹೆಚ್ಚುವರಿ ಮೊಬೈಲ್‌ ಮತ್ತು ಕಂಪ್ಯೂಟರ್‌ ಬಳಕೆ, ಎರ್ರಾಬಿರ್ರಿ ಆಹಾರ ಸೇವನೆ.. ಹೀಗೆ ಪಟ್ಟಿ ಉದ್ದವಾಗುತ್ತದೆ.
‘ಸಮತೋಲನವಿಲ್ಲದ, ಅಗತ್ಯಕ್ಕಿಂತ ಹೆಚ್ಚು ಅಥವಾ ಕಡಿಮೆಯಾದ ಆಹಾರ ಗುಣಮಟ್ಟದ ನಿದ್ರೆಗೆ ತಡೆಯೊಡ್ಡುತ್ತದೆ’ ಎನ್ನುವ ತಜ್ಞರು, ಸಂಸ್ಕರಿಸಿದ ಆಹಾರವನ್ನು ಹೆಚ್ಚು ಸೇವಿಸುವುದು ಕೂಡ ಇದಕ್ಕೆ ಕಾರಣ ಎನ್ನುತ್ತಾರೆ. ಆದರೆ ಮೀನು, ತರಕಾರಿ ಮೊದಲಾದ ಪೌಷ್ಟಿಕಾಂಶವುಳ್ಳ ಆಹಾರ ಸೇವಿಸಿದರೆ ನಿಶ್ಚಿಂತೆಯಿಂದ ನಿದ್ರೆ ಆವರಿಸಿಕೊಳ್ಳುತ್ತದೆ ಎನ್ನುತ್ತದೆ ಒಂದು ಅಧ್ಯಯನ.

ಹಾಗೆಯೇ ಪ್ರೊಟೀನ್‌ ಅಂಶ ಕಡಿಮೆ ಇರುವ ಊಟ ಮಾಡಿದರೂ ನಿದ್ರೆ ಹತ್ತಿರ ಸುಳಿಯುವುದಿಲ್ಲ. ಇನ್ನೊಂದು ನೆನಪಿಡಿ, ಈ ಪ್ರೊಟೀನ್‌ ಅಂಶ ಹೆಚ್ಚಿದ್ದರೂ ಒಳ್ಳೆಯ ನಿದ್ರೆಯನ್ನು ಬೆಳಗಿನವರೆಗೆ ಮಾಡುವುದು ಕಷ್ಟ. ಸಮಯಕ್ಕೆ ಸರಿಯಾಗಿ, ನಿದ್ರೆ ಹೋಗುವ 2–3 ಗಂಟೆಗಳ ಮೊದಲು ಊಟ ಮಾಡಿದರೆ ಚೆನ್ನಾಗಿ ನಿದ್ರೆ ಮಾಡಬಹುದು. ಕ್ಯಾಲೊರಿ ಹೆಚ್ಚಿರುವ ತಿನಿಸು ಸೇವಿಸಿದರೆ ಹಗಲೇ ತೂಕಡಿಸುತ್ತ, ಕಚೇರಿಯಲ್ಲಿ ಬೈಸಿಕೊಳ್ಳಬೇಕಷ್ಟೆ. ಹಾಗೆಯೇ ಇದರಿಂದ ರಾತ್ರಿ ನಿದ್ರೆ ಕಡಿಮೆಯಾಗಿ ಹೊರಳಾಡುತ್ತ, ಮನೆಯವರಿಂದ ಬೈಸಿಕೊಳ್ಳಬೇಕು. ನಿದ್ರೆ ಬರಲು, ಯಾವುದೇ ತೊಂದರೆಯಿಲ್ಲದೇ ನಿದ್ರಿಸಲು ಆಹಾರದಲ್ಲಿನ ಗ್ಲೈಸಿಮಿಕ್‌ ಸೂಚ್ಯಂಕ ಕೂಡ ಮುಖ್ಯ ಎಂಬುದು ತಜ್ಞರ ಅಂಬೋಣ. ಹೆಚ್ಚು ಜಿಐ ಇರುವ ಆಹಾರವನ್ನು ಮಲಗುವ ನಾಲ್ಕು ತಾಸುಗಳ ಮುಂಚೆ ತಿಂದವರು ಬೇಗ ನಿದ್ರಿಸುತ್ತಾರೆ ಎನ್ನುತ್ತದೆ ಅಧ್ಯಯನವೊಂದು.

ಆರೋಗ್ಯ, ನಮ್ಮ ನಡವಳಿಕೆ ಕೂಡ ಈ ನಿದ್ರೆಯ ಜೊತೆ ಸೇರಿಕೊಂಡಿರುತ್ತದೆ. ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ಚಯಾಪಚಯ ಕ್ರಿಯೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು ಇವೆಲ್ಲ ಆರೋಗ್ಯದ ಗುಟ್ಟು. ಅದರ ಬದಲು ರಾತ್ರಿ ತಿನ್ನುವುದರಿಂದ ಯಕೃತ್ತಿನ ಕಾರ್ಯಕ್ಕೆ ತೊಂದರೆ ಉಂಟಾಗಿ ಜೀರ್ಣಕ್ರಿಯೆ ಏರುಪೇರಾಗುತ್ತದೆ.

ADVERTISEMENT

ಇನ್ನೊಂದು ಮುಖ್ಯವಾದ ಅಂಶವೆಂದರೆ ಕಡಿಮೆ ಅಥವಾ ಜಾಸ್ತಿ ಕಾರ್ಬೊಹೈಡ್ರೇಟ್‌ ಇರುವ ಆಹಾರ ಕೂಡ ನಿದ್ರೆಗೆ ಸಂಬಂಧಪಟ್ಟಿದೆ. ಎಷ್ಟು ಕಾರ್ಬೊಹೈಡ್ರೇಟ್‌ ಸೇವಿಸುತ್ತೇವೆ ಎನ್ನುವುದಕ್ಕಿಂತ ಯಾವ ಗುಣಮಟ್ಟದ ಕಾರ್ಬೊಹೈಡ್ರೇಟ್‌ ಸೇವಿಸುತ್ತೇವೆ ಎನ್ನುವುದು ಮುಖ್ಯ. ಹೆಚ್ಚು ಸಂಸ್ಕರಿಸಿದ ಆಹಾರದಲ್ಲಿರುವ ಕಾರ್ಬೊಹಡ್ರೇಟ್‌, ಅಂದರೆ ಸಕ್ಕರೆ ಅಂಶ ಹೆಚ್ಚಿರುವ ಪಾನೀಯದಿಂದ ನಿದ್ರೆ ಹತ್ತಿರ ಸುಳಿಯಲಾರದು. ಹೀಗಾಗಿ ಪ್ರೊಟೀನ್‌ ಅಂಶವಿರುವ ಸಮತೋಲಿತ ಆಹಾರ ಸೇವಿಸಿದರೆ ಚೆನ್ನಾಗಿ ನಿದ್ರಿಸಬಹುದು.

ಪೌಷ್ಟಿಕಾಂಶಗಳ ಕೊರತೆ ಕೂಡ ನಿದ್ರೆ ಕಡಿಮೆಯಾಗಲು ಕಾರಣ. ವಿಟಮಿನ್‌ ಬಿ1, ಕಬ್ಬಿಣ, ಸತು, ಫೋಲೇಟ್‌ ಮೊದಲಾದ ಅಂಶಗಳ ಕೊರತೆ ಕಡಿಮೆ ನಿದ್ರೆಗೆ ಕಾರಣ ಎನ್ನುತ್ತಾರೆ ಲೈಫ್‌ಸ್ಟೈಲ್‌ ಕಾಯಿಲೆಗಳ ತಜ್ಞ ಡಾ. ಟಿ.ಎಸ್‌. ತೇಜಸ್‌. ಈ ಅಂಶಗಳಿರುವ ಮೈಕ್ರೊನ್ಯೂಟ್ರಿಯಂಟ್‌ಗಳನ್ನು ಸೇವಿಸಿದರೆ ಈ ಸಮಸ್ಯೆ ನಿವಾರಿಸಬಹುದು ಎನ್ನುತ್ತಾರೆ ಅವರು. ಹಾಗೆಯೇ ಮದ್ಯ ಸೇವನೆಯಿಂದಲೂ ನಿದ್ರೆಯ ಅವಧಿ ಹೆಚ್ಚುಕಡಿಮೆಯಾಗುತ್ತದೆ.

ಹಾಲು ಸೇವಿಸಿದರೆ ಚೆನ್ನಾಗಿ ನಿದ್ರಿಸಬಹುದು ಎಂಬುದು ತಜ್ಞರ ಅಭಿಮತ. ಇದರಲ್ಲಿರುವ ಅಮಿನೊ ಆ್ಯಸಿಡ್‌ ಇದಕ್ಕೆ ಕಾರಣವಂತೆ. ಇದು ನಿದ್ರೆ ಬರಿಸುವ ಹಾರ್ಮೋನ್‌ ಉತ್ಪಾದಿಸುತ್ತದೆ. ನಮ್ಮ ಹಿರಿಯರು ಮಲಗುವ 2–3 ಗಂಟೆಗೆ ಮುನ್ನ ಊಟ ಮಾಡಿ, ಮಲಗುವ ಮೊದಲು ಹಾಲು ಸೇವಿಸುವ ರೂಢಿ ಇಟ್ಟುಕೊಂಡಿದ್ದು ಇದೇ ಕಾರಣಕ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.