ADVERTISEMENT

Suicide Prevention Day: ಸಾಯಬೇಕೆನಿಸುತ್ತಿದೆಯೇ ಮಾತಾಡಿ.. ಮಾತಾಡಿಸಿ

ಪ್ರಜಾವಾಣಿ ವಿಶೇಷ
Published 14 ಸೆಪ್ಟೆಂಬರ್ 2024, 1:18 IST
Last Updated 14 ಸೆಪ್ಟೆಂಬರ್ 2024, 1:18 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನೀವು ಯಾವತ್ತಾದರೂ ಬದುಕು ಕೊನೆಗೊಳಿಸುವ ಬಗ್ಗೆ ಯೋಚಿಸಿದ್ದೀರಾ? ಇಂತಹ ವಿಚಾರ ಮಾಡುವವರ ಪೈಕಿ ವಿಶ್ವದಲ್ಲಿ ನೀವು ಒಬ್ಬರೇ ಅಲ್ಲ, ಅನೇಕರು ಒಂದು ಗಳಿಗೆಯಾದರೂ ಇಂತಹ ಹತಾಶೆಯನ್ನು ಅನುಭವಿಸಿರುತ್ತೇವೆ.

‘ನನಗೆ ಈ ತರಹದ ವಿಚಾರಗಳನ್ನು ತಡೆದುಕೊಳ್ಳಲು, ಹತ್ತಿಕ್ಕಲು ಆಗುತ್ತಿಲ್ಲ’, ‘ನಾನು ಸಾಯುವುದು ಬೇಡಾ, ಆದರೆ ಈ ಜಂಜಾಟತದ ಜೀವನದಿಂದ ರೋಸಿ ಹೋಗಿದ್ದೇನೆ’ ಎಂದೆಲ್ಲ ಅನಿಸುತ್ತದೆ. ಆದರೆ ಇದು ಒಳಗಿನ ಮನೋವ್ಯಾಪಾರವಾದರೂ ಬಾಹ್ಯದಲ್ಲಿ ಹಲವು ಲಕ್ಷಣಗಳನ್ನು ಗುರುತಿಸಬಹುದಾಗಿದೆ. ಕುಟುಂಬದವರು, ಸಂಗಾತಿ, ತಾಯಿ, ಸಹೋದರಿ ಮತ್ತಿತರ ಎಲ್ಲ ಸದಸ್ಯರೂ ಈ ಲಕ್ಷಣಗಳನ್ನು ಗುರುತಿಸಿ, ಮಾತನಾಡಲು ಪ್ರೇರೇಪಿಸಿದರೆ ಒತ್ತಾಯದ ವಿದಾಯವೊಂದನ್ನು ದೂರ ಸರಿಸಬಹುದಾಗಿದೆ. 

ADVERTISEMENT

ಈ ಮಾತುಗಳು ಮನೆಯಲ್ಲಿ ಕೇಳಿಬರುತ್ತಿವೆಯೇ? ನನ್ನಿಂದೇನೂ ಉಪಯೋಗವಿಲ್ಲ, ನಾನು ಸತ್ತರೆ ನಿಮಗೆ ಖುಷಿ, ನಾನಿದ್ದಿದ್ದಕ್ಕೆ ಸಮಸ್ಯೆ ತಾನೆ.. ನಾನೇ ಸತ್ತು ಹೋದರೆ ಎಲ್ಲಕ್ಕೂ ಪರಿಹಾರ ಎಂದು ಆಗಾಗ ಮಾತಿನಲ್ಲಿ ಬಳಸುವುದು, ಸುಮ್ಮನೆ ಕಣ್ಣೀರು ಹಾಕುವುದು, ತಡೆಯಲಾಗದ ನೋವಿದೆ ಎಂದು ಹೇಳುವುದು, ಇವೆಲ್ಲವೂ ಎಚ್ಚರಿಕೆಯ ಗಂಟೆಯೆಂದು ಭಾವಿಸಿ. ಸಹಾನುಭೂತಿಯಿಂದ ವರ್ತಿಸಿ. ಅವರ ದಿನಚರಿಯನ್ನು ಗಮನಿಸಿ. 

ತಡರಾತ್ರಿ ಮಲಗುವುದು, ಬೆಳಗಿನ ಜಾವ ಎದ್ದೇಳುವುದು, ಹಸಿವಿಲ್ಲ ಎನ್ನುವುದು ಅಥವಾ ಅತಿಯಾಗಿ ತಿನ್ನುವುದು, ತೂಕದಲ್ಲಿ ಏರಿಳಿತಗಳು, ತಮ್ಮ ಬಗ್ಗೆ ನಿಷ್ಕಾಳಜಿ, ಒಂಟಿಯಾಗಿರುವುದು, ಸಾಮಾಜಿಕ ಜೀವನದಿಂದ ದೂರ ಇರುವುದು, ಅಕಾಲಿಕವಾಗಿ ಉಯಿಲು ಪತ್ರ ಬರೆಯುವುದು ಇಂಥ ಚಟುವಟಿಕೆಗಳು ಕಂಡು ಬಂದರೆ ಅವರೊಂದಿಗೆ ಹೆಚ್ಚು ಹೆಚ್ಚು ಮಾತಾಡಿ. ಅವರ ಮಾತುಗಳನ್ನು ಅಲ್ಲಗಳೆಯದೇ ಕೇಳಲು ಆರಂಭಿಸಿ. 

ಮಾತಾಡಲು ತಹತಹಿಸುವುದು, ಒತ್ತಡದಲ್ಲಿದ್ದಂತೆ ಕಾಣುವುದು, ಖಿನ್ನರಾಗಿರುವುದು ಈ ಲಕ್ಷಣಗಳು ಕಂಡರೆ ಎಚ್ಚರವಹಿಸಿ. 

ಕೌಟುಂಬಿಕ ದೌರ್ಜನ್ಯ, ಲೈಂಗಿಕ ಕಿರುಕುಳ, ಪತ್ತೆಯಾಗದ ಮನೋರೋಗ, ಮಾನಸಿಕ ಅನಾರೋಗ್ಯ, ಸ್ನೇಹಿತರ ಅತ್ಯಾಪ್ತರ ಸಾವು, ಸಂಬಂಧಗಳಲ್ಲಿ ಬಿರುಕು ಮತ್ತು ಬೇರ್ಪಡುವುದು, ಕ್ಯಾನ್ಸರ್‌, ಏಯ್ಡ್ಸ್‌ನಂಥ ಕಾಯಿಲೆಗಳಿಗೆ, ಸೋಂಕುಗಳಿಗೆ ಒಳಪಟ್ಟಿದ್ದರೆ, ವಿದೇಶ ಅಥವಾ ಅಪರಿಚಿತ ಸ್ಥಾಳಗಳಲ್ಲಿ ಹೊಂದಿಕೊಳ್ಳದೇ ಇರುವುದು, ಆರ್ಥಿಕ ಪರಿಸ್ಥಿತಿ, ಒಂಟಿತನ, ಪ್ರೇಮವೈಫಲ್ಯ, ತಮ್ಮ ಲೈಂಗಿಕತೆಯ ಬಗ್ಗೆ ಸ್ಪಷ್ಟ ಅರಿವಿನ ಕೊರತೆ, ಪರೀಕ್ಷೆಗಳಲ್ಲಿ ಫೇಲಾಗುವ ಭಯ, ವೈಫಲ್ಯ ಸ್ವೀಕರಿಸದ ಮನಸ್ಥಿತಿ ಇವೆಲ್ಲವೂ ತಮ್ಮ ಜೀವನವನ್ನು ಕೊನೆಗೊಳಿಸುವ ನಿರ್ಧಾರ ಕೈಗೊಳ್ಳುವಂತೆ ಪ್ರಚೋದಿಸುವ ಕಾರಣಗಳಾಗಿವೆ. 

ಚಿಕಿತ್ಸೆ ಏನು?

ಮನೋರೋಗ ತಜ್ಞರು ಆತ್ಮಹತ್ಯೆ ವಿಚಾರಗಳಿಗೆ, ತಮ್ಮ ಮಾತುಗಳಿಂದ, ಚಿಕಿತ್ಸೆಯಿಂದ ಸಂಪೂರ್ಣ ವಿರಾಮ ನೀಡಬಲ್ಲರು. ಇಂಥ ವಿಫಲ ಯತ್ನಗಳು ನಡೆದಾಗ ಪೋಷಕರು, ಸಂಬಂಧಿಕರು ಅವರನ್ನು ಕೂಡಲೇ ಮನೋವೈದ್ಯರ ಬಳಿ ಕರೆದುಕೊಂಡು ಹೋಗಬೇಕು. 

ಆಪ್ತ ಸಮಾಲೋಚನೆ, ಔಷಧಿ ಚಿಕಿತ್ಸೆ, ಯೋಗ್ಯ ಮಾರ್ಗದರ್ಶನ, ಕೌನ್ಸಲಿಂಗ್, ಟಾಕ್ ಥೆರಪಿ, ಕಾಗ್ನಿಟಿವ್ ಬಿಹೇವಿಯರ್ ಥೆರಪಿಗಳಿಂದ ವ್ಯಕ್ತಿಯು ಸಂಪೂರ್ಣ ಗುಣ ಹೊಂದುವನು. ಈಗ ಮಾರುಕಟ್ಟೆಯಲ್ಲಿ ಅನೇಕ ‘ಖಿನ್ನತೆ ನಿವಾರಣೆ’ ಔಷಧಿಗಳು ಲಭ್ಯ.  ಆದರೆ ನೀವೇ ಅಂತರ್ಜಾಲ ಅಥವಾ ಗೂಗಲ್‌ನಲ್ಲಿ ತಡಕಾಡಿ ಚಿಕಿತ್ಸೆಯನ್ನು ಆರಂಭಿಸುವದು ಅತ್ಯಂತ ಅಪಾಯಕಾರಿ. ಚಿಕಿತ್ಸೆಗೆ ನಿಮ್ಮ ಮನೋ ವೈದ್ಯರನ್ನೇ ಅವಲಂಬಿಸಿ.

ಕೆಟಮಿನ್ ಚಿಕಿತ್ಸೆ

ಇತ್ತೀಚಿನ ದಿನಗಳಲ್ಲಿ, ಅತ್ಯಂತ ತೀವ್ರವಾಗಿ ಆತ್ಮಹತ್ಯೆ ವಿಚಾರಗಳನ್ನು ತಡೆಗಟ್ಟಬಲ್ಲ ಒಂದು ಸಂಜೀವಿನಿ ಅಥವಾ ರಾಮಬಾಣದ ಚಿಕಿತ್ಸೆ ಎಂದರೆ ‘ಕೆಟಮಿನ್ ಚಿಕಿತ್ಸೆ’. ಅಮೆರಿಕ ಹಾಗೂ ಅನೇಕ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈಗ ‘ಕೆಟಮಿನ್ ಕ್ಲಿನಿಕ್‌’ಗಳು  ಈಗ ಅಣಬೆಯಂತೆ ತಲೆ ಎತ್ತುತ್ತಲಿವೆ.  

ಕೆಟಮಿನ್ ಎಂಬ ದ್ರವವನ್ನು, ವ್ಯಕ್ತಿಯ ರಕ್ತನಾಳದಲ್ಲಿ, ಸಲೈನ್ ಬಾಟಲಿ ಮುಖಾಂತರ ಸುಮಾರು 40 ನಿಮಿಷಗಳವರೆಗೆ ಮನೋ ವೈದ್ಯರು ನೀಡಿ, ಅದೇ ಸಮಯದಲ್ಲಿ ನಿಖರವಾಗಿ ‘ಕೌನ್ಸಲಿಂಗ್’ ಮಾಡುವರು. ಇಂತಹ ಚಿಕಿತ್ಸೆಯನ್ನು ಸುಮಾರು 6-8 ಬಾರಿ, ದಿನ ಬಿಟ್ಟು ದಿನ ಮಾಡುವರು. ಇದು ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದೆ.

ಸಹಾಯವಾಣಿಗಳು ಲಭ್ಯವೇ?

ಅನೇಕ ಮಾನಸಿಕ ಆಸ್ಪತ್ರೆಗಳಲ್ಲಿ, ಎನ್.ಜಿ.ಒ. ಗಳಲ್ಲಿ, ಮನೋ ವೈದ್ಯರ ಬಳಿ ಆತ್ಮಹತ್ಯೆ ತಡೆಗಟ್ಟಬಲ್ಲ ಸಹಾಯವಾಣಿ ಲಭ್ಯ ಇವೆ. 

ಇಂತಹ ವಿಚಾರಗಳು ತಲೆ ದೋರಿದಾಗ, ‘ಮಾತನಾಡಿ’- ನಿಮ್ಮ ಸಂಬಂಧಿಗಳ ಜೊತೆಗೆ, ಸ್ನೇಹಿತರ ಜೊತೆಗೆ, ನಿಮ್ಮ ಹತ್ತಿರದವರೊಟ್ಟಿಗೆ, ನಿಮ್ಮ ಕುಟುಂಬ ವೈದ್ಯರ ಜೊತೆಗೆ ಮತ್ತು ಅತ್ಯಂತ ತ್ವರಿತವಾಗಿ ಪರಿಹಾರ ನೀಡಬಲ್ಲ ನಿಮ್ಮ ಮನೋ ವೈದ್ಯರ ಬಳಿ!.

 ಸಾಯಬೇಕೆನ್ನುವ ವಿಚಾರ ನಿಮ್ಮನ್ನು ಸೆಳೆಯುವಾಗ ಸಹಾಯ ಕೇಳಿ, ‘ಸಂಭಾಷಣೆ’ಯಲ್ಲಿ ತೊಡಗಿಸಿಕೊಳ್ಳಿ, ‘ಮಾತನಾಡಿ’. ಈ ದಿಶೆಯಲ್ಲಿ ಮೌನ ಬಂಗಾರವಲ್ಲ, ಮಾತೇ ಬಂಗಾರ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.