ಸುಡು ಬೇಸಿಗೆಯಲ್ಲಿ ಹರಿವ ನೀರು ಕಾಣಿಸಿದ ಕೂಡಲೇ ಹಿಂದು ಮುಂದು ಯೋಚಿಸದೆ, ನೀರಿಗೆ ಧುಮುಕುವ ಎಂದು ಯೋಚಿಸುವವರು ಇದ್ದಾರೆ. ಬೇಸಿಗೆ ಶಿಬಿರ, ರಜೆ ಎಂದು ನೀರನ್ನೇ ಅರಸಿ ಹೊರಡುವ ಮಂದಿಗೇನು ಕಡಿಮೆ ಇಲ್ಲ. ಆದರೆ, ನೀರಿಗೆ ಇಳಿಯುವ ಮುನ್ನ ಯೋಚಿಸಿ. ಏಕೆಂದರೆ, ಒಮ್ಮೊಮ್ಮೆ ಸ್ವಿಮ್ಮಿಂಗ್ ಪೂಲ್ ಮತ್ತಿತರ ಸ್ಥಳಗಳಲ್ಲಿ ನೀರಿಗಿಳಿದಾಗ ಚರ್ಮ ಕಪ್ಪಾಗಬಹುದು, ಕಳೆ ಹೀನವಾಗಬಹುದು, ಬಿಳಿ ಬಿಳಿಯಾಗಿ, ಬಿರುಕು ಬಿಡಬಹುದು, ಅಲರ್ಜಿಯಾಗಲೂ ಬಹುದು.. ಹಾಗಾಗಿ, ನೀರಿಗೆ ಇಳಿಯುವ ಮುನ್ನ, ಅದರಲ್ಲೂ ಈಜುಕೊಳದಂತಹ ಸ್ಥಳಗಳಲ್ಲಿ ನೀರಿಗೆ ಸಂಬಂಧಿಸಿದ ಆಟಗಳನ್ನು ಆಡುವುದಕ್ಕೂ ಮುನ್ನ ಕೆಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ.
ಸಾಮಾನ್ಯವಾಗಿ ಮಕ್ಕಳಿಗೆ ನೀರಿನ ಆಟ ಬಲು ಪ್ರೀತಿ.. ಹಾಗಂತ ಉರಿ ಬಿಸಿಲಿನಲ್ಲಿ ಅಂದರೆ ಮಧ್ಯಾಹ್ನದ ಸಮಯದಲ್ಲಿ ನೀರಿನ ಆಟ ಅಷ್ಟು ಸೂಕ್ತವಲ್ಲ. ಇದು ಮಕ್ಕಳನ್ನು ಇನ್ನಷ್ಟೂ ಡಿಹೈಡ್ರೇಟ್ ಮಾಡುತ್ತದೆ ಎನ್ನುತ್ತಾರೆ ಪೋರ್ಟೀಸ್ ಆಸ್ಪತ್ರೆಯ ಡಾ. ಆದಿತ್ಯ ಚೌತಿ.
ಹೀಗೊಂದಿಷ್ಟು ಸಲಹೆಗಳು:
* ಈಜುಕೊಳ, ತೊರೆ, ಹಳ್ಳದಲ್ಲಿ ನೀರಿಗೆ ಇಳಿಯುವ ಮುನ್ನ ನೀರಿನ ಸ್ವಚ್ಛತೆಗೂ ಗಮನ ಹರಿಸಿ. ಇಲ್ಲದಿದ್ದರೆ ಚರ್ಮ ಅಲರ್ಜಿ ಆಗುವ ಸಾಧ್ಯತೆ ಇರುತ್ತದೆ.
* ನೀರಿಗೆ ಸಂಬಂಧಿಸಿದ ಫನ್ ಆಟಗಳನ್ನು ಆಡುವವರು ಮೊದಲು ಶುದ್ಧ ನೀರಿನಿಂದ ಮೈ ಒದ್ದೆ ಮಾಡಿಕೊಳ್ಳಬೇಕು.
* ಕೊಳಕ್ಕೆ ಇಳಿಯುವ 10–15 ನಿಮಿಷ ಮುಂಚಿತವಾಗಿ ವಾಟರ್‌ಪ್ರೂಫ್ ಸನ್‌ಸ್ಕ್ರೀನ್ ಲೋಷನ್ ಅನ್ನು ಬಳಸಿ. ಸಾಮಾನ್ಯ ಲೋಷನ್ ಬಳಸಿದರೆ ನೀರಿಗೆ ಇಳಿಯುತ್ತಿದ್ದಂತೆ ತೊಳೆದು ಹೋಗಬಹುದು.
* ನೀರಿನಲ್ಲಿದ್ದರೂ ದೇಹ ಡಿ–ಹೈಡ್ರೇಟ್ ಆಗುತ್ತದೆ. ಹಾಗಾಗಿ ನೀರಿಗೆ ಇಳಿಯುವ ಮುನ್ನ ನೀರು ಕುಡಿಯಿರಿ, ನೀರಿನಲ್ಲಿದ್ದಾಗಲೂ ನೀರು/ ಜ್ಯೂಸ್ ಕುಡಿಯುತ್ತಿರಬಹುದು.
* ಜ್ವರ, ಶೀತ, ಕೆಮ್ಮು ಹಾಗೂ ಇತರ ಚರ್ಮದ ಸಮಸ್ಯೆ ಇರುವವರು ನೀರಿಗೆ ಇಳಿಯದಿದ್ದರೆ ಒಳಿತು.
* ಈಜುಕೊಳ ಅಥವಾ ವಾಟರ್‌ಗೇಮ್ ಪೂಲ್‌ಗಳ ನೀರಿನಲ್ಲಿ ಕ್ಲೋರೈಡ್ ಹೆಚ್ಚಿರುವುದರಿಂದ ಕಣ್ಣಿನ ರಕ್ಷಣೆಯೂ ಅಷ್ಟೇ ಪ್ರಮುಖವಾಗಿದೆ. ಹಾಗಾಗಿ ಈಜು ಕನ್ನಡಕಗಳನ್ನು ಧರಿಸುವುದು ಸೂಕ್ತ.
* ನೀರಿನಿಂದ ಹೊರಬಂದ ಬಳಿಕ ಬಿಸಿಲಿಗೆ ಮೈಯೊಡ್ಡುವುದು ಅಷ್ಟು ಒಳ್ಳೆಯದಲ್ಲ. ಬಿಸಿ ಶಾಖ ನೇರವಾಗಿ ದೇಹವನ್ನು ತಲುಪಿ ಚರ್ಮ ಸಮಸ್ಯೆ ಆಗುವ ಸಂಭವ ಹೆಚ್ಚಿರುತ್ತದೆ.
ಕೂದಲಿನ ಬಗ್ಗೆಯೂ ಇರಲಿ ಎಚ್ಚರಿಕೆ:
* ಸಾಮಾನ್ಯವಾಗಿ ಈಜುಕೊಳಗಳಲ್ಲಿ ಕ್ಲೋರೈಡ್‌ಯುಕ್ತ ನೀರು ಇರುವುದರಿಂದ ಇದು ಚರ್ಮದ ಜೊತೆ ಕೂದಲಿಗೂ ಹಾನಿಕಾರಕ. ಹಾಗಾಗಿ ಈಜುಕೊಳ ಅಥವಾ ನೀರಿನ ಫನ್ ಆಟಗಳನ್ನು ಆಡುವ ಮುನ್ನ ಕೂದಲನ್ನೂ ಶುದ್ಧ ನೀರಿನಿಂದ ತೊಳೆದುಕೊಳ್ಳಬೇಕು.
* ಅಥವಾ ನೀರಿಗೆ ಇಳಿಯುವುದಕ್ಕೂ ಮುನ್ನ ಈಜುಕ್ಯಾಪ್‌ಗಳನ್ನು ಧರಿಸಿ.
* ಕೂದಲು ಒದ್ದೆ ಆಗಿದ್ದರೆ, ನೀರಿನಿಂದ ಹೊರಬಂದ ಕೂಡಲೇ, ಶಾಂಪು ಹಾಗೂ ಕಂಡೀಷನರ್‌ನಿಂದ ಚೆನ್ನಾಗಿ ಕೂದಲು ವಾಶ್ ಮಾಡಿಕೊಂಡು ಒಣಗಿಸಿಕೊಳ್ಳಿ.
ನೀರಿನಿಂದ ಹೊರಬಂದ ಮೇಲೆ..
* ಶುದ್ಧವಾದ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ದೇಹವನ್ನು ಚೆನ್ನಾಗಿ ಒಣಸಿಕೊಳ್ಳಬೇಕು. ನಂತರ ಇಡೀ ದೇಹಕ್ಕೆ ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳಬೇಕು.
* ನೀರಿಗಿಳಿಯುವಾಗ ಆದಷ್ಟು ಬಿಗಿಯಾದ ಉಡುಪುಗಳನ್ನು ಧರಿಸ ಬೇಡಿ. ಸ್ನಾನದ ನಂತರ ಹಣ್ಣಿನ ರಸ/ ಹಣ್ಣಿನ ಸೇವನೆ ಉತ್ತಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.