ADVERTISEMENT

ಹೊಸವರ್ಷಕ್ಕೆ ನೇತ್ರ ರಕ್ಷಣೆಯ ಸಂಕಲ್ಪವಿರಲಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 19:30 IST
Last Updated 30 ಡಿಸೆಂಬರ್ 2018, 19:30 IST
   

2019ರ ವರ್ಷಕ್ಕೆ ಸ್ವಾಗತ ಕೋರುವ ಹೊಸ್ತಿಲಲ್ಲಿ ಇದ್ದೇವೆ. ಹೊಸ ವರ್ಷಕ್ಕೆ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುವ ತಯಾರಿಯಲ್ಲಿದ್ದೇವೆ. ಈ ಹೊಸ ನಿರ್ಣಗಳಲ್ಲಿ ನಮ್ಮ ಆರೋಗ್ಯ ಮತ್ತು ಕ್ಷೇಮದ ಕುರಿತು ಗಂಭೀರವಾಗಿ ಯೋಚಿಸುವ ನಿರ್ಧಾರವೂ ಇರಲಿ

ದೇಹದ ಪ್ರಮುಖಅಂಗಾಂಗಳಲ್ಲಿ ಕಣ್ಣುಗಳು ಪ್ರಮುಖವಾದವು. ಆದ್ದರಿಂದ ನಮ್ಮ ಕಣ್ಣಿನ ಆರೈಕೆ ಬಗ್ಗೆ ಒತ್ತು ನೀಡಬೇಕಾದ ಅಗತ್ಯವಿದೆ. ಸಾಮಾನ್ಯವಾಗಿ ಬಹುತೇಕ ಜನ, ಹೊಸ ವರ್ಷ ಬಂತೆಂದರೆ, ಜಿಮ್‌ಗೆ ಹೋಗಬೇಕು, ವ್ಯಾಯಾಮ ಮಾಡಬೇಕು, ತೂಕ ಇಳಿಸಿಕೊಳ್ಳಬೇಕು ಇತ್ಯಾದಿ ನಿರ್ಣಯಗಳನ್ನೇ ತೆಗೆದುಕೊಳ್ಳುತ್ತಾರೆ. ಆದರೆ ಕಣ್ಣುಗಳ ರಕ್ಷಣೆ ಬಗ್ಗೆ ಕಾಳಜಿ ತೋರುವುದಿಲ್ಲ.

ಆರೋಗ್ಯ ಕಾಳಜಿಗೆ ಸಂಬಂಧಿಸಿದಂತೆ ಈ ವರ್ಷ ಯಾವುದೇ ನಿರ್ಣಯಗಳನ್ನು ಕೈಗೊಂಡರೂ ಅದರಲ್ಲಿ ಕಣ್ಣುಗಳ ಕಾಳಜಿ ಬಗ್ಗೆಯೂ ನಿರ್ಣಯವಿರಲಿ. ನೇತ್ರ ರಕ್ಷಣೆಗೆ ನೆರವಾಗುವ ಈ ಅಂಶಗಳನ್ನು ಪಾಲಿಸಿ 2019ರ ಅಂತ್ಯದ ವೇಳೆ ಯಾವುದೇ ಕಣ್ಣಿನ ಸಮಸ್ಯೆ ಇಲ್ಲದ ಜೀವನ ನಡೆಸುವ ಆತ್ಮವಿಶ್ವಾಸ ಮೂಡಿಸಿಕೊಳ್ಳಿ.

ADVERTISEMENT

ಸಮಗ್ರ ನೇತ್ರ ತಪಾಸಣೆ
ಮೊದಲು ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸರಳವಾದ ಒಂದು ಕಣ್ಣಿನ ಪರೀಕ್ಷೆಯಿಂದ ನಿಮ್ಮ ಕಣ್ಣುಗಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಿವೆ ಮತ್ತು ನಿಮಗೆ ಕನ್ನಡಕ ಅಗತ್ಯವಿದೆಯೇ ಇಲ್ಲವೇ ಎಂಬುದನ್ನು ತಿಳಿಯಬಹುದು. ನೇತ್ರ ತಜ್ಞರ ಬಳಿಗೆ ಹೋದರೆ, ಮಧುಮೇಹ, ಗ್ಲುಕೋಮಾ ಮತ್ತು ಯಾವುದಾದರೂ ಸೋಂಕು ಇದೆಯೇ ಎಂಬುದು ತಿಳಿಯುತ್ತದೆ. ಆರಂಭದಲ್ಲೇ ಆರಂಭದಲ್ಲಿಯೇ ಪತ್ತೆ ಮಾಡಿದರೆ, ಚಿಕಿತ್ಸೆ ಮತ್ತು ದೃಷ್ಟಿ ದೋಷ ತಡೆಯುವುದು ಸುಲಭ.

ಧೂಮಪಾನ ನಿಲ್ಲಿಸಿ
ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೂ ಈ ಎಚ್ಚರಿಕೆಯನ್ನು ನಿರ್ಲಕ್ಷಿಸುವವರೇ ಹೆಚ್ಚು. ಧೂಮಪಾನದಿಂದ ಕಣ್ಣಿನ ಮಕ್ಯುಲಾಗೆ ಗಂಭೀರ ಹಾನಿಯಾಗುತ್ತದೆ. ಈ ಮಕ್ಯುಲಾ ಹಾನಿಗೀಡಾದರೆ, ಅಂಧತ್ವ ಉಂಟಾಗುವ ಅಪಾಯವೇ ಹೆಚ್ಚು. ಸಿಗರೇಟಿನ ಬರುವ ಹೊಗೆ ರಾಸಾಯನಿಕಗಳ ಮಿಶ್ರಣ. ಶ್ವಾಸಕೋಶದ ಮೂಲಕ ಈ ರಾಸಾಯನಿಕಗಳು ದೇಹ ಸೇರುತ್ತವೆ. ಇವು ರಕ್ತನಾಳಗಳನ್ನು ಸೇರಿದರೆ ರೆಟಿನಾವನ್ನು ಹಾನಿಗೊಳಿಸುತ್ತವೆ. ಆದ್ದರಿಂದ ಧೂಮಪಾನದಿಂದ ದೂರವಿರುವುದು ಒಳ್ಳೆಯದು.

ಗಾಯವಾಗದಂತೆ ಎಚ್ಚರ ವಹಿಸಿ
ಕಣ್ಣಿಗೆ ಹಾನಿಯಾಗ ಬಾರದು ಎಂದರೆ, ಕನ್ನಡಕ ಧರಿಸುವುದು ಉತ್ತಮ. ಕಣ್ಣಿಗೆ ಗಾಯವಾದರೆಕಾರ್ನಿಯಲ್ ಅಬ್ರಾಷನ್ಸ್, ಕೆಮಿಕಲ್ ಬನ್ರ್ಸ್ ಇತ್ಯಾದಿ ಸಮಸ್ಯೆಗಳಿಂದ ದೃಷ್ಟಿ ದೋಷಗಳು ಆಗಬಹುದು. ಕಣ್ಣಿನಲ್ಲಿ ನೋವು ಕಾಣಿಸಿಕೊಂಡರೆ, ಕೆಲವೊಮ್ಮೆ ಅದು ಶಾಶ್ವತ ಅಂಧಕಾರಕ್ಕೂ ನೂಕಬಹುದು. ಮುಖ್ಯವಾಗಿ ಪಟಾಕಿ ಸಿಡಿಸುವಾಗ ಎಚ್ಚರದಿಂದ ಇರಬೇಕು. ಮಕ್ಕಳು ಹೆಚ್ಚಾಗಿ ಇಂತಹ ಸಮಸ್ಯೆಗಳಿಗೆ ತುತ್ತಾಗುವುದರಿಂದ ಪೋಷಕರು ಎಚ್ಚರ ವಹಿಸುವುದು ಉತ್ತಮ.

ಮೇಕಪ್‌ಗಳಿಂದ ದೂರವಿರಿ‌
ಕಣ್ಣುಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ಮೇಕ್‌ಅಪ್‌ಗಳಿಂದ ದೂರ ಇರುವುದು ಒಳ್ಳೆಯದು. ಕಣ್ಣುಗಳು ತುಂಬಾ ಸೂಕ್ಷ್ಮವಾಗಿರುವುದರಿಂದ ಮೇಕಪ್‌ಗೆ ಬಳಸುವ ರಾಸಾಯನಿಕಗಳ ಬಗ್ಗೆ ಎಚ್ಚರದಿಂದ ಇರಬೇಕು. ಮೇಕಪ್‌ ಅನಿವಾರ್ಯವಾದರೆ, ಗುಣಮಟ್ಟದ ಮತ್ತು ಕಣ್ಣಿಗೆ ಹಾನಿ ಮಾಡದಂತಹ ಪ್ರಸಾಧನ ಉತ್ಪನ್ನಗಳನ್ನು ಬಳಸಿ. ಖರೀದಿಸುವ ಮುನ್ನ ಗಡುವಿನ ದಿನಾಂಕ ಪರಿಶೀಲಿಸಿ.

ಸ್ಕ್ರೀನ್‌ಗಳಿಂದ ದೂರವಿರಿ
ಇಂದಿನ ತಂತ್ರಜ್ಞಾನ ಯುಗದಲ್ಲಿ ಹೆಚ್ಚು ಕಾಲ ಕಂಪ್ಯೂಟರ್ ಮುಂದೆಯೇ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಹೆಚ್ಚು ಹೊತ್ತು ಕಂಪ್ಯೂಟರ್ ಮುಂದೆ ಕುಳಿತರೆ, ಕಣ್ಣುಗಳಷ್ಟೇ ಅಲ್ಲದೇ, ದೇಹದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ದೀರ್ಘಾವಧಿವರೆಗೆ ಕಂಪ್ಯೂಟರ್‌ ಪರದೆ ನೋಡುತ್ತಿದ್ದರೆ, ಕಣ್ಣಗಳಿಗೆ ಆಯಾಸವಾಗುತ್ತದೆ. ಹೀಗಾಗಿ ಆಗಾಗ್ಗೆ ವಿರಾಮ ತೆಗೆದುಕೊಳ್ಳಬೇಕು. ಪ್ರತಿ 20ನಿಮಿಷಕ್ಕೊಮ್ಮೆ ಕಂಪ್ಯೂಟರ್ ಸ್ಕ್ರೀನ್ ಬಿಟ್ಟು ಬೇರೆಡೆಗೆ ದೃಷ್ಟಿ ಹಾಯಿಸಬೇಕು. ಆಗಾಗ್ಗೆ ಕಣ್ಣು ರೆಪ್ಪೆಗಳನ್ನು ಹೊಡೆಯುತ್ತಿರಬೇಕು. ಮನೆಯಲ್ಲಿರುವಾಗ ಹೆಚ್ಚು ಹೊತ್ತು ಸ್ಮಾರ್ಟ್‌ಫೋನ್ ನೋಡುವುದು, ಟಿ.ವಿ ನೋಡುವುದು ನಿಲ್ಲಿಸಬೇಕು. ವಾರಾಂತ್ಯದಲ್ಲಿ ಕಂಪ್ಯೂಟರ್, ಟಿ.ವಿ ನೋಡುವುದು ಸಾಧ್ಯವಾದಷ್ಟು ನಿಲ್ಲಿಸಬೇಕು. ಕಂಪ್ಯೂಟರ್ ನೋಡುವುದು ಅನಿವಾರ್ಯವಾದರೆ ಪ್ರೊಟೆಕ್ಟಿವ್‌ ಗ್ಲಾಸ್ ಬಳಸುವುದು ಉತ್ತಮ.

ಪಥ್ಯಾಹಾರವಿರಲಿ
ಪೌಷ್ಠಿಕ ಆಹಾರ ಸೇವಿಸುವುದರ ಜತೆಗೆ, ಕಣ್ಣಿನ ಆರೋಗ್ಯ ಹೆಚ್ಚಿಸುವಂತಹ ಆಹಾರ ಸೇವಿಸಿ. ಇದರಿಂದ ಡ್ರೈ ಐ ಸಿಂಡ್ರೋಮ್‌ನಂತಹ ರೋಗಗಳಿಂದ ದೂರವಿರಬಹುದು. ಒಮೆಗಾ–3, ಜಿಂಕ್,ವಿಟಮಿನ್ ಸಿ ಮತ್ತು ಇ ಇರುವಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.

ಸಿಟ್ರಸ್‌ ಹಣ್ಣುಗಳು, ತರಕಾರಿಗಳು, ಟೂನಾ ಮತ್ತು ಸಲ್ಮೋನ್‌ನಂತಹ ಮೀನಿನ ಖಾದ್ಯಗಳು ಕಣ್ಣುಗಳ ಆರೋಗ್ಯ ಹೆಚ್ಚು ನೆರವಾಗುತ್ತವೆ. ಸಾಧ್ಯವಾದಷ್ಟು ಕುರುಕಲು ತಿಂಡಿಯಿಂದ ದೂರವಿರಬೇಕು.

ಸುರಕ್ಷಾ ಸಾಧನಗಳನ್ನು ಬಳಸಿ
ಬಿಸಿಲಲ್ಲಿರುವಾಗ ಸನ್‌ಗ್ಲಾಸ್‌ ಧರಿಸುವುದು ಮರೆಯದಿರಿ. ಸಾಧ್ಯವಾದಷ್ಟು, ಶೇ100ರಷ್ಟು ಯುವಿಎ ಮತ್ತು ಯುವಿಬಿ ರೇಸ್‌ ಪ್ರೊಟೆಕ್ಟ್‌ ಗ್ಲಾಸ್‌ಗಳನ್ನು ಬಳಸಿ. ಕಂಪ್ಯೂಟರ್‌ ಮುಂದೆ ಕುಳಿತು ಆರು ಗಂಟೆಗೂ ಅಧಿಕ ಹೊತ್ತು ಕೆಲಸ ಮಾಡುವವರು ಆ್ಯಂಟಿಗ್ಲೇರ್ ಗ್ಲಾಸ್‌ಗಳನ್ನು ಬಳಸಬೇಕು.

ಹೊಸ ವರ್ಷದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಅತ್ಯಂತ ಸುಲಭ. ಆದರೆ, ಪಾಲಿಸುವುದು ಕಷ್ಟದ ಕೆಲಸ. ಆದ್ದರಿಂದ ಪಾಲಿಸಲು ಸಾಧ್ಯವಾಗುವಂತಹ ಸರಳ ನಿರ್ಣಯಗಳನ್ನು ಮಾಡಿ ಅವುಗಳಿಗೆ ಬದ್ಧರಾಗಿ ನಡೆದುಕೊಂಡು, ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಿ.

–ಡಾ.ರಘು ನಾಗರಾಜು, ಡಾ.ಅಗರ್‌ವಾಲ್‌ ಐ ಹಾಸ್ಪಿಟಲ್, ಬೆಂಗಳೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.