ADVERTISEMENT

ಮಳೆಗಾಲದಲ್ಲಿ ಇರಲಿ ಮುನ್ನೆಚ್ಚರಿಕೆ

ಪ್ರಜಾವಾಣಿ ವಿಶೇಷ
Published 27 ಜುಲೈ 2024, 0:12 IST
Last Updated 27 ಜುಲೈ 2024, 0:12 IST
   

ಮಳೆಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೆ ಮುಖ್ಯ. ಏಕೆಂದರೆ ಈ ಸಮಯದಲ್ಲಿ ಎಲ್ಲೆಡೆ ಮಳೆ ಹೆಚ್ಚು ಬೀಳುವುದರಿಂದ ಅನೇಕ ರೀತಿಯ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವಿವಿಧ ಆರೋಗ್ಯ ಸಮಸ್ಯೆಗಳು ಎಲ್ಲಾ ವಯೋಮಿತಿಯವರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಳೆಗಾಲದಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳು ಯಾವುವು ? ಅದಕ್ಕಿರುವ ಪರಿಹಾರಗಳೇನು ಮತ್ತು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮ ಎಂಬುದನ್ನು ಪಾಲಿಸಬೇಕು. 

ನೀರಿನಿಂದ ಹರಡುವ ರೋಗಗಳ ಬಗ್ಗೆ ಎಚ್ಚರ

ಮಳೆಗಾಲದಲ್ಲಿ ನಾವು ಕುಡಿಯುವ ನೀರಿನಿಂದಲೇ ಟೈಫಾಯಿಡ್, ಕಾಲರಾದಂತಹ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಇದನ್ನು ತಪ್ಪಿಸಲು ಬಿಸಿ ನೀರಿನ ಸೇವನೆ ಅತ್ಯಗತ್ಯ.

ADVERTISEMENT

ಮಳೆಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುತ್ತದೆ. ನಿಂತ ನೀರಿನಲ್ಲಿ ಸೊಳ್ಳೆ, ಅನೇಕ ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತವೆ. ಇದರಿಂದಾಗಿ ಮಲೇರಿಯಾ, ಡೆಂಗಿ, ಚಿಕುನ್‌ಗುನ್ಯಾ ಗಂಭೀರ ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಉದಾಹರಣೆಯಾಗಿ ಪ್ರಸಕ್ತ ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಡೆಂಗಿ ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ 4,040 ಡೆಂಗಿ ಪ್ರಕರಣಗಳಿವೆ. 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಡೆಂಗಿ ಪ್ರಕರಣಗಳ ಹೆಚ್ಚಳವನ್ನು ತಪ್ಪಿಸಲು ಮನೆ ಸುತ್ತಲು ಸ್ವಚ್ಛವಾದ ವಾತಾವರಣವನ್ನು ಕಾಪಾಡಿಕೊಳ್ಳಬೇಕು ಹಾಗೂ ನೀರು ಶೇಖರಣೆಯಾಗುವುದನ್ನು ತಪ್ಪಿಸಬೇಕು. ಅಲ್ಲದೇ ಶೇಖರಿಟ್ಟ ಆಹಾರ ಸೇವನೆಯನ್ನು ತಪ್ಪಿಸಿ, ಮನೆಯಲ್ಲೇ ತಯಾರಿಸಿದ ತಾಜಾ ಆಹಾರಗಳ ಸೇವನೆ ಮಾಡಿ.

ಶ್ವಾಸಕೋಶದ ಸೋಂಕುಗಳು ಉಲ್ಬಣ

ಮಳೆಗಾಲದಲ್ಲಿ ವಾತಾವರಣದಲ್ಲಿ ಬದಲಾವಣೆ ಉಂಟಾಗುತ್ತದೆ. ಇದರಿಂದ ಉಸಿರಾಟದ ಸಮಸ್ಯೆ ಉಳ್ಳವರಿಗೆ ಉಸಿರಾಟದ ಸೋಂಕುಗಳು ಉಲ್ಬಣಗೊಳ್ಳುತ್ತವೆ. ಇದು ಶೀತ, ಜ್ವರ, ಸೈನಸಿಟಿಸ್‌ಗಳಂತಹ ಸಮಸ್ಯೆಗೆ ಕಾರಣವಾಗಬಹುದು. ಈ ಸಮಸ್ಯೆಗಳನ್ನು ತಪ್ಪಿಸಲು ಜನಸಂದಣಿ ಇರುವ ಸ್ಥಳಗಳಿಗೆ ಹೋಗದಿರುವುದು, ಮನೆಯ ಸುತ್ತಲು ಶುಚಿತ್ವವನ್ನು ಕಾಪಾಡಿಕೊಳ್ಳುವುದು ಒಳಿತು. ಈ ಸಮಯದಲ್ಲಿ ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುವುದು ಹೆಚ್ಚು. ಇದರಿಂದ ಚರ್ಮದ ರೋಗಗಳು ಕಂಡುಬರುತ್ತವೆ. ಹೀಗಾಗಿ ಈ ರೀತಿಯ ಸಮಸ್ಯೆಗಳನ್ನು ತಪ್ಪಿಸಲು ಇರುವುದೊಂದೇ ಪರಿಹಾರ, ನಾವು ನಮ್ಮ ವಾತಾವರಣದ ನೈರ್ಮಲ್ಯವನ್ನು ಕಾಪಾಡಬೇಕು.

ಅಲರ್ಜಿ ಸಮಸ್ಯೆಗಳು ಹೆಚ್ಚಳ

ಮಳೆಗಾಲದಲ್ಲಿ ಅಲರ್ಜಿ ಸಮಸ್ಯೆಗಳು ಹೆಚ್ಚಾಗಿದ್ದು, ಆಸ್ತಮಾ ಮತ್ತು ಸೈನಸಿಟಿಸ್‌ ಸಮಸ್ಯೆಗಳು ಕಂಡುಬರುತ್ತವೆ. ಈ ಅಲರ್ಜಿ ಸಮಸ್ಯೆಗಳಿಂದ ಉಸಿರಾಟಕ್ಕೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಮನೆಯಲ್ಲಿ ಡಿ ಹ್ಯುಮಿಡಿಫೈಯರ್‌ಗಳನ್ನು ಬಳಸಬೇಕು ಮತ್ತು ಅಲರ್ಜಿಗಳನ್ನು ತಪ್ಪಿಸಲು ಮನೆಯ ಕಿಟಕಿಗಳನ್ನು ಮುಚ್ಚಬೇಕು.

ಈ ರೀತಿಯ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿರುವುದು ಅವಶ್ಯ. ಮೊದಲು ನಾವು ಶುಚಿತ್ವದ ಪಾಲನೆಯನ್ನು ಮಾಡಬೇಕು, ಆಗಾಗ್ಗೆ ನಿಯಮಿತವಾಗಿ ನೀರನ್ನು ಬಳಸಿ ಕೈಗಳನ್ನು ಸ್ಚಚ್ಛಗೊಳಿಸಿಕೊಳ್ಳಬೇಕು. ಮನೆಯ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ನೀರಿನ ಶೇಖರಣೆಯಾಗದಂತೆ ನೋಡಿಕೊಳ್ಳುವ ಮೂಲಕ ಸೊಳ್ಳೆಗಳ ಉತ್ಪತ್ತಿಯಾಗವುದನ್ನು ಕಡಿಮೆ ಮಾಡಬಹುದು ಮತ್ತು ವಾಹಕಗಳಿಂದ ಹರಡುವ ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು. ಅಲ್ಲದೆ ತಾಜಾ ಬೇಯಿಸಿದ ಆಹಾರ ಸೇವನೆ ಮೂಲಕ ಅಜೀರ್ಣ ಸಮಸ್ಯೆಗಳನ್ನು ತಪ್ಪಿಸಬಹುದು. ಒಟ್ಟಾರೆ ಉತ್ತಮ ಆರೋಗ್ಯಕ್ಕೆ ಶುದ್ಧ ನೀರಿನ ಸೇವನೆಯೇ ಅತ್ಯಗತ್ಯ  

ಡಾ. ಶ್ರೀಧರ್ ಶ್ರೀನಿವಾಸನ್‌, ಬೆಂಗಳೂರಿನ ವಾಸವಿ ಆಸ್ಪತ್ರೆಯ ಆಂತರಿಕ ಔಷಧ ವಿಭಾಗ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.