ಎಲ್ಲರಂತೆ ಬದುಕಲು ನಾವೆಷ್ಟೇ ಪ್ರಯತ್ನಿಸಿದರೂ ಈ ಸಮಾಜ ನಮ್ಮನ್ನು ನೋಡುವ ರೀತಿ ಭಿನ್ನ. ಜನಸಾಮಾನ್ಯರಂತೆ ನಮ್ಮನ್ನು ನೋಡುವುದಿಲ್ಲ ಎಂಬುದೂ ನಮ್ಮ ಜೀವಿತಾವಧಿಯ ಕೊನೆವರೆಗೂ ಇರುವಂತಹ ಒತ್ತಡ. ಆದ್ದರಿಂದ ಒತ್ತಡ ಎಂಬುದನ್ನು ಒಂದೆರಡು ಘಟನೆಗಳಲ್ಲಿ ಸಮೀಕರಿಸಿ ಹೇಳುವುದು ಕಷ್ಟಸಾಧ್ಯ. ಹಾಗಾಗಿ ನಮ್ಮ ಇಡೀ ಬದುಕೇ ಹಲವು ರೀತಿಯ ಒತ್ತಡಗಳ ಆಗರ.
ಎಲ್ಲಾ ಮಕ್ಕಳಂತೆ ಆಡುತ್ತಾ ಕುಣಿಯುತ್ತಾ ಬೆಳೆಯಬೇಕಿದ್ದ ನನಗೆ, ನನ್ನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಳು ಒತ್ತಡವನ್ನು ಉಂಟುಮಾಡಿತು. ಏನಿದು? ಹೀಗೆಲ್ಲಾ ಯಾಕಾಗುತ್ತಿದೆ? – ಎಂಬುದನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಇಲ್ಲದೇ ಇದ್ದ ಸಮಯದಲ್ಲಿ ‘ನೀನು ಹುಡುಗನು ಅಲ್ಲ; ಹುಡುಗಿಯು ಅಲ್ಲ’ ಎಂದರು ಸ್ನೇಹಿತರು; ಈ ಸಮಾಜದ ನಾಗರಿಕರೆನಿಸಿಕೊಂಡವರು ಛೇಡಿಸುವಾಗ ಗೊಂದಲವಾಗುತ್ತಿತ್ತು. ಏನಾಗುತ್ತಿದೆ? ಇವರೆಲ್ಲರ ಯಾಕೆ ಈ ರೀತಿ ಮಾತನಾಡುತ್ತಿದ್ದಾರೆ? – ಎಂಬುದು ತಿಳಿಯದೇ ಒತ್ತಡದಲ್ಲಿ ಸಿಲುಕಿ ಒದ್ದಾಡಿದ್ದು ಇಂದಿಗೂ ಮಾಸದ ನೆನಪು.
ಇದು ನನ್ನ ಒತ್ತಡ ಮಾತ್ರ ಎಂದು ನನಗನ್ನಿಸುವುದಿಲ್ಲ. ನನ್ನಂತೆ ಬದುಕುತ್ತಿರುವ ನನ್ನ ಸಮುದಾಯದವರ ಬದುಕು ಹೀಗೆ ಇದೆ ಎಂಬುದು ವಾಸ್ತವ.
ನನಗೆ ಈಗಲೂ ನೆನಪಿದೆ. ನಾನು 10ನೇ ತರಗತಿವರೆಗೆ ಮಾತ್ರ ಓದಿದ್ದು. ಆ ನಂತರ ಕೌಶಲ ತರಬೇತಿಗೆ ಸೇರಿಕೊಂಡೆ. ಆ ಸಮಯದಲ್ಲಿ ನನ್ನೊಟ್ಟಿಗೆ ಇದ್ದವರು ನನ್ನನ್ನು ನೋಡಿ ಗೇಲಿ ಮಾಡುತ್ತಿದ್ದರು. ಪ್ರತಿದಿನ ದೈಹಿಕ, ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿದ್ದೆ. ಇವೆಲ್ಲವೂ ಒತ್ತಡವೇ. ಒಂದು ದಿನ ನನ್ನೊಟ್ಟಿಗೆ ತರಬೇತಿ ಪಡೆಯುತ್ತಿದ್ದವರು ನನ್ನನ್ನು ನಗ್ನವಾಗಿಸಿ ದೈಹಿಕ ಹಿಂಸೆ ನೀಡಿದರು. ಮರಳಿ ಮನೆಗೆ ಬಂದ ಮೇಲೆ ಅಪ್ಪ–ಅಮ್ಮನಿಗೂ ವಿಷಯ ಹೇಳಲಾರದೇ, ನಾನು ಅನುಭವಿಸಿದ ಒತ್ತಡ ನನ್ನನ್ನು ಹೈರಾಣ ಮಾಡಿತ್ತು.
ಈ ಅವಮಾನಗಳು, ದೈಹಿಕ ಹಾಗೂ ಮಾನಸಿಕ ಹಿಂಸೆಗಳನ್ನು ಅನುಭವಿಸುತ್ತಾ, ಜನರ ನಡುವೆ ಜೀವಿಸುವುದು ಹೇಗೆ? ಯಾವುದನ್ನು ಸ್ವೀಕರಿಸುವುದು ಯಾವುದನ್ನು ಬಿಡುವುದು ಎಂಬ ಗೊಂದಲ ಸೃಷ್ಟಿಯಾಗುತ್ತದೆ. ಕೊನೆಗೆ ಒಬ್ಬಳೇ ಇರುವಾಗ ಯಾಕೆ ಅವರು ನಮ್ಮನ್ನು ನೋಡಿ ನಕ್ಕರು, ಗೇಲಿ ಮಾಡಿದರು, ತಬ್ಬಿಕೊಂಡರು,ನಮ್ಮೊಟ್ಟಿಗೆ ನಿಲ್ಲಬೇಕಿದ್ದವರು ಯಾಕೆ ನಮ್ಮೊಂದಿಗೆ ನಿಂತಿಲ್ಲ – ಹೀಗೆ ಎಲ್ಲವನ್ನೂ ಯೋಚಿಸಿದ್ದೇನೆ.
ಒತ್ತಡದಿಂದ ಹೊರಬರಲು ತಂಬಾಕು ಜಗಿಯುವುದು, ಕುಡಿತ, ನಿದ್ರೆ ಮಾತ್ರೆ ತೆಗೆದುಕೊಳ್ಳುವುದು ಮುಂತಾದ ಹಲವಾರು ಕೆಟ್ಟ ಅಭ್ಯಾಸಗಳು ಸ್ವಲ್ಪ ಕಾಲವಿತ್ತು. ಒತ್ತಡ ತುಂಬಾ ಕೆಟ್ಟದ್ದು. ಎಷ್ಟೇ ಒತ್ತಡ ಇದ್ದರೂ ಅದನ್ನು ಸರಿಯಾಗಿ ನಿಭಾಯಿಸಲು ಬಾರದಿದ್ದರೆ ಅದು ಜೀವಕ್ಕೆ ಕುತ್ತು ತರುತ್ತದೆ. ನನ್ನ ಧ್ವನಿ, ನನ್ನ ಬಟ್ಟೆ – ಇವೆಲ್ಲವನ್ನು ಈ ಸಮಾಜಕ್ಕೆ ಅರ್ಥೈಸುವುದು ಹೇಗೆ ಎಂಬುದು ತಿಳಿಯದೇ ಒತ್ತಡದಿಂದ ಎರಡು ಸಲ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ. ಆ ಕ್ಷಣಕ್ಕೆ ಇದೇ ಸರಿ ಅನ್ನಿಸುತ್ತಿತ್ತು. ಮರುಕ್ಷಣವೇ ಆತ್ಮಹತ್ಯೆ ಮಾಡಿಕೊಳ್ಳಲು ಧೈರ್ಯ ಸಾಲದೇ ನಾನು ಮಾಡುತ್ತಿರುವುದು ತಪ್ಪು ಎಂದು ಅರಿವಾಗ, ಆ ಪ್ರಯತ್ನದಿಂದ ಹಿಂದೆ ಸರಿದಿದ್ದೇನೆ.
ಇಲ್ಲಿವರೆಗೂ ನೋವು, ಅವಮಾನಗಳಿಂದ ಬದುಕುತ್ತಿದ್ದ ನಾನು, ಹೆಣ್ಣಾಗಿ ಬದುಕಬೇಕೆಂದು ದೃಢವಾದ ನಿರ್ಧಾರ ಮಾಡಿದೆ. ಹೀಗೆ ಎಲ್ಲವೂ ನಿಶ್ಚಿತವಾದ ತಕ್ಷಣ ನನ್ನ ಒತ್ತಡಗಳು ಕಡಿಮೆಯಾಗಲಿಲ್ಲ. ನನಗೂ ಬದುಕಲು ಆಸೆಯಿದೆ ಬದುಕಲು ಬಿಡಿ ಎನ್ನುತ್ತಿದ್ದ ನನಗೆ ಉದ್ಯೋಗ ಸಿಗದೇ ಮತ್ತೆ ಒದ್ದಾಡುವಂತಾಯಿತು.ಯಾರು ಕೆಲಸ ಕೊಡುತ್ತಿರಲಿಲ್ಲ. ಕೊನೆಗೆ ಕಬ್ಬನ್ ಪಾರ್ಕ್, ಮಡಿವಾಳ, ಹೊಸೂರು ರಸ್ತೆ – ಹೀಗೆ ಬೆಂಗಳೂರಿನ ಹಲವಾರು ಭಾಗಗಳಲ್ಲಿ ಭಿಕ್ಷೆ ಬೇಡಲು ಆರಂಭಿಸಿದೆ.ಅಲ್ಲಿಯೂ ಒತ್ತಡ ಕಡಿಮೆಯಾಗಲಿಲ್ಲ. ನೀನು ಕಪ್ಪಗಿದ್ದೀಯಾ, ನೀನು ಹೆಣ್ಣಲ್ಲ – ಇಂಥ ಹಲವಾರು ಚುಚ್ಚು ಮಾತುಗಳು ನನ್ನನ್ನು ತಿನ್ನುತ್ತಿದ್ದವು.
ಕುಟುಂಬದವರಿಗೆ ನನ್ನಲ್ಲಾಗಿದ್ದ ಬದಲಾವಣೆಯನ್ನು ತಿಳಿಸಲು ಆಗದೇ, ಕೆಲಸವೂ ಸಿಗದೇ, ಒಂದೇ ಸಮಯದಲ್ಲಿ ಹಲವಾರು ಒತ್ತಡಗಳ ನಡುವೆ ಬದುಕುವಂತಾಗಿತ್ತು.
ಕಾಲ ಉರುಳಿದೆ. ಒತ್ತಡಗಳ ರೂಪವೂಬದಲಾಗಿದೆ. ದೈಹಿಕವಾಗಿ ಹುಡುಗನಾಗಿದ್ದ ನಾನು ಮಾನಸಿಕವಾಗಿ ಹೆಣ್ಣಿನ ಭಾವನೆಗಳು ನನ್ನನ್ನು ಆವರಿಸಿದ್ದವು. ನಾನು ಅದನ್ನು ಒಪ್ಪಿಕೊಂಡೆ. ಆದರೆ ನನ್ನ ಕುಟುಂಬ, ಸ್ನೇಹಿತರ ಬಳಗ, ಈ ಸಮಾಜ ಎಲ್ಲವೂ ನನ್ನಲ್ಲಾಗುತ್ತಿದ್ದ ಬದಲಾವಣೆಯನ್ನು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಅದು ನನ್ನಲ್ಲಿ ಒತ್ತಡ ಉಂಟು ಮಾಡಿತು. ಹೀಗೆ ಆರಂಭವಾದ ನಕರಾತ್ಮಕ ಒತ್ತಡವೇ ಸಕರಾತ್ಮಕ ಒತ್ತಡವಾಗಿ ರೂಪಾಂತರಗೊಂಡು ನನ್ನಂತೆ ಬದುಕುತ್ತಿರುವ ನನ್ನ ಸಮುದಾಯದವರ ಒಳಿತಿಗಾಗಿ ಕೆಲಸ ಮಾಡುವಂತೆ ಪ್ರೇರೇಪಿಸಿದೆ. ನಾನಿಂದು ಏನು ಮಾತನಾಡುತ್ತಿದ್ದೇನೋ ಇದೆಲ್ಲವೂ ಈ ಒತ್ತಡದ ಪರಿಣಾಮವೇ ಆಗಿದೆ ಎಂಬುದು ಸಂತೋಷದ ವಿಷಯ.
ನನ್ನ ಜೀವನದ ದಿಕ್ಕನ್ನು ಬದಲಿಸಿದ್ದು ಸಂಗಮ ಎಂಬುದು ಸರ್ಕಾರೇತರ ಸಂಸ್ಥೆ. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಕೆಲಸ ಮಾಡುತ್ತಿದ್ದ ಈ ಸಂಸ್ಥೆ ನನ್ನ ಬದುಕಿಗೆ ತಿರುವು ನೀಡಿತು.ನನ್ನನ್ನು ಒತ್ತಡ ತಿನ್ನಬಾರದು, ನಾನು ಒತ್ತಡವನ್ನು ತಿನ್ನಬೇಕು – ಎಂಬುದನ್ನು ಪ್ರಾಯೋಗಿಕವಾಗಿ ಅನುಸರಿಸುತ್ತ ಬಂದೆ.
ನನ್ನ ಇಷ್ಟದಂತೆ ಮದುವೆ ಎಂಬುದು ಒತ್ತಡಗಳ ನಡುವೆ ಘಟಿಸಿದ ಸುಮಧುರ ಕ್ಷಣ. ಇದು ನನಗೆ ಮಾತ್ರವಲ್ಲದೇ ನನ್ನ ಸಂಗಾತಿಯ ಕುಟುಂಬದವರಿಗೂ ಒತ್ತಡವಾಗಿ ಕಾಡುತ್ತಿತ್ತು. ಆದರೆ ಅವರೆಲ್ಲರೂ ಈ ಒತ್ತಡವನ್ನು ಸರಿಯಾಗಿ ನಿಭಾಯಿಸುತ್ತಿದ್ದಾರೆ. ಹಲವಾರು ಬಾರಿ ನನ್ನ ಬಗ್ಗೆ ಯಾರಾದರೂ ತಪ್ಪಾಗಿ ಮಾತನಾಡಿದರೆ ಅವರೇ ಬೈದು ಬರುತ್ತಾರೆ.
ಬಾಲ್ಯದಿಂದಲೂ ಶಾಸ್ತ್ರೀಯ ಸಂಗೀತವೆಂದರೆ ನನಗೆ ಬಲು ಇಷ್ಟ. ಕೆಲವು ದಿನಗಳು ಶಾಸ್ತ್ರೀಯ ಸಂಗೀತ ತರಗತಿಗೂ ಹೋಗಿದ್ದೇನೆ. ಅಲ್ಲಿ ನನ್ನೊಟ್ಟಿಗೆ ಕಲಿಯುತ್ತಿದ್ದ ಸಹಪಾಠಿಗಳು ನನ್ನೊಟ್ಟಿಗೆ ಕಲಿಯಲು ಹಿಂಜರಿದಾಗ ಬೇರೆ ದಾರಿ ಕಾಣದೇ ಸಂಗೀತ ತರಗತಿಯು ಮೊಟಕುಗೊಂಡಿತು. ಆದರೆ ಇಂದಿಗೂ ನಾನು ಹಾಡುತ್ತೇನೆ. ಸಂಗೀತ ಕೇಳುತ್ತೇನೆ. ಸಮಯ ಸಿಕ್ಕಾಗ ರಾತ್ರಿ 9 ಗಂಟೆಗೆ ಚಂದನವಾಹಿನಿಯಲ್ಲಿಬರುವ ಸಂಗೀತ ಕಾರ್ಯಕ್ರಮವನ್ನು ಕೇಳುತ್ತೇನೆ. ಇದು ನನ್ನನ್ನು ಒತ್ತಡವನ್ನು ಕಡಿಮೆ ಮಾಡುತ್ತದೆ.
ಒತ್ತಡವನ್ನು ಸವಾಲಾಗಿ ನೋಡಿದಾಗ ಮಾತ್ರ ಒತ್ತಡದಿಂದ ಆಚೆ ಬರಲು ಸಾಧ್ಯ. ನಮ್ಮನ್ನು ನಾವು ಪ್ರೀತಿಸಬೇಕು. ನಾವಿರುವ ರೀತಿಯನ್ನು ಮೊದಲು ನಾವು ಒಪ್ಪಿಕೊಳ್ಳಬೇಕು. ನಮ್ಮಅಸ್ತಿತ್ವದ ಬಗ್ಗೆ ನಮಗೆ ಖುಷಿಯಿರಬೇಕು. ಹೀಗಿದ್ದಾಗ ಯಾವ ಒತ್ತಡವು ನಮ್ಮ ಆತ್ಮಸ್ಥೈರ್ಯವನ್ನು ಅಲ್ಲಾಡಿಸಲು ಆಗುವುದಿಲ್ಲ. ಸಾವು ಖಚಿತ, ಹಾಗೆಂದು ನಾವೇ ಅದನ್ನು ಬರಮಾಡಿಕೊಳ್ಳುವುದು ಎಷ್ಟು ಸರಿ? ನಮ್ಮ ಕನಸುಗಳ ಬೆನ್ನತ್ತಿ, ಅವುಗಳನ್ನು ಸಾಕಾರಗೊಳಿಸುವತ್ತ ಹೆಜ್ಜೆ ಹಾಕೋಣ...
ನಿರೂಪಣೆ: ಕಾವ್ಯ ಸಮತಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.