ನಮ್ಮ ಪರಿಚಯದ ಒಬ್ಬ ಮಹಿಳೆ ತನ್ನ ಸಂಪರ್ಕಕ್ಕೆ ಬರುವ ಎಲ್ಲರೊಂದಿಗೆ ತುಂಬಾ ಚೆನ್ನಾಗಿ ಹರಟುತ್ತಿದ್ದರು. ಅವರ ಕಷ್ಟ-ಸುಖ ವಿಚಾರಿಸಿ ಕೈಲಾದ ನೆರವು ಕೊಡುತ್ತಿದ್ದರು. ಎಷ್ಟೇ ಅವಸರವಿದ್ದರೂ ಹಾಲಿನವನು, ಪೇಪರಿನವನು, ತರಕಾರಿಯಾಕೆ, ಅಂಗಡಿಯಾತ - ಹೀಗೆ ಅವರಿವರೆನ್ನದೇ ಎಲ್ಲರನ್ನೂ ಮಾತಾಡಿಸುತ್ತಿದ್ದರು. ಲಾಕ್‌ಡೌನ್ ಆದಾಗ ಅವರ ಮನೆಯವರೆಲ್ಲರೂ ಬೇರೆ ಊರುಗಳಿಗೆ ಹೋದವರು ಅಲ್ಲಿಯೇ ಉಳಿಯುವಂತಾಗಿ ಈಕೆ ಒಂಟಿಯಾಗಿ ಬಿಟ್ಟರು. ಆದರೆ ಆಕೆಯ ಸಂಪರ್ಕಜಾಲದಿಂದಾಗಿ ಪ್ರತಿಯೊಬ್ಬರೂ ಆಕೆಯನ್ನು ಹುಡುಕಿಕೊಂಡು ಬಂದು ನೆರವಾದರು. ಎರಡು ತಿಂಗಳುಗಳವರೆಗೂ ಆಕೆಗೆ ಚೂರೂ ಕಷ್ಟವಾಗದಂತೆ ಜನಬೆಂಬಲ ದೊರಕಿತು. ಸಂತೋಷದಿಂದ ಆಕೆ ಉದ್ಗರಿಸಿದರು: ‘ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು’.
ಕಳೆದ ನಾಲ್ಕೈದು ದಿನಗಳಿಂದ ನಾವೆಲ್ಲರೂ ನಮ್ಮ ಪರಿಚಯದವರಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುತ್ತಿದ್ದೇವೆ. ಇನ್ನು ಹತ್ತು ದಿನ ಕಳೆದ ನಂತರ ‘ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡೋಣ’ ಎಂದು ಹಾರೈಸಿಕೊಳ್ಳುತ್ತೇವೆ. ಏನಿದು ಒಳ್ಳೆಯ ಮಾತು? ಎದುರಿಗಿನ ವ್ಯಕ್ತಿಗೆ ಒಳ್ಳೆಯದನ್ನು ಬಯಸುವ ಮಾತೆ? ಎದುರಿಗಿನ ವ್ಯಕ್ತಿ ಒಳ್ಳೆಯ ಭಾವ ತಳೆಯುವಂತೆ ಮಾಡುವ ಮಾತೆ? ಅಥವಾ ಎದುರಿಗಿನ ವ್ಯಕ್ತಿಯನ್ನು ಒಳಗೊಂಡಂತೆ ಸಮಸ್ತ ಲೋಕದ ಒಳಿತಿಗಾಗಿ ಹಂಬಲಿಸುವ ಮಾತೆ?
ಇವೆಲ್ಲವೂ ಹೌದು. ನಾವು ಮನಸ್ಸಿನಲ್ಲಿ ಮೂಡಿದ ಅನಿಸಿಕೆಗಳನ್ನು ಜಗತ್ತಿಗೆ ತೋರಿಸುವ ಕನ್ನಡಿಯೇ ನಾವಾಡುವ ಮಾತು. ವ್ಯಕ್ತಿಯೊಬ್ಬನ ವಿಚಾರದ ಸ್ವಚ್ಛತೆ, ಭಾವನೆಗಳ ಘನತೆ ಮತ್ತು ಅವನ ಚಾರಿತ್ರ್ಯದ ನಿರ್ಮಲತೆ ಅವನ ಮಾತಿನಲ್ಲಿ ಪ್ರತಿಫಲನ ಹೊಂದುತ್ತದೆ. ಸ್ವಾಮಿ ವಿವೇಕಾನಂದರ ಮಾತು ಕೇಳಿ ವಿಶ್ವಧರ್ಮ ಸಮ್ಮೇಳನದ ಸಮಸ್ತ ಪ್ರತಿನಿಧಿಗಳೂ ಕಿವಿಗಡಚಿಕ್ಕುವಂತೆ ಚಪ್ಪಾಳೆ ತಟ್ಟಿದರು. ಪ್ರತಿಯೊಬ್ಬನ ಮಾತು ಆತನ ವ್ಯಕ್ತಿತ್ವವನ್ನು ಕಾಣಿಸುತ್ತದೆ.
ಮಾತಿನಲ್ಲಿ ಏನಿದೆ? ಮನುಷ್ಯನ ಮಾತಿನಲ್ಲಿ ಕೇವಲ ಶಬ್ದ ಇರುವುದಿಲ್ಲ. ಶಬ್ದದ ಜೊತೆಗೆ ಅರ್ಥ ಇರುತ್ತದೆ. ಆ ಅರ್ಥವು ಸೂಚಿಸುವ ಭಾವಪ್ರಪಂಚವಿರುತ್ತದೆ. ಸತ್ಯವಾನನ ಜೀವ ತೆಗೆಯಲು ಬಂದ ಯಮನನ್ನು ಹಿಂಬಾಲಿಸಿದ ಸಾವಿತ್ರಿ ತನ್ನ ಮಾತಿನಿಂದಲೇ ಅವನನ್ನು ಸೋಲಿಸುತ್ತಾಳೆ; ಪತಿಯ ಪ್ರಾಣವನ್ನು ಹಿಂದೆ ಪಡೆಯುತ್ತಾಳೆ. ಮಹಾತ್ಮ ಗಾಂಧೀಜಿಯವರು ಊರೂರಿಗೆ ಹೋಗಿ ಕರೆ ಕೊಟ್ಟೊಡನೆ ಅವರ ಮಾತು ಕೇಳಿದ ಜನರು ಮನೆ ಬಿಟ್ಟು ಚಳವಳಿಗೆ ಧುಮುಕುತ್ತಿದ್ದರು. ದೇಶಪ್ರೇಮ ಉಕ್ಕೇರಿ ಒಡವೆ-ವಸ್ತುಗಳನ್ನು ದಾನ ಮಾಡುತ್ತಿದ್ದರು. ಮಾತು ಬಲ್ಲವನಿಗೆ ಜಗವೆಲ್ಲ ನೆಂಟರು ಎಂಬ ಒಂದು ಗಾದೆ. ಬಂಧುತ್ವಕ್ಕಾಗಿ ನಾವೇನು ಒಬ್ಬರಿಗೊಬ್ಬರಿಗೆ ಆಸ್ತಿ-ಹಣ ಕೊಟ್ಟುಕೊಳ್ಳಬೇಕಾಗಿಲ್ಲ; ಅವರ ಕಷ್ಟ-ಸುಖವನ್ನು ಕೇಳಿದರೂ ಸಾಕು ಅವರಿಗೆ ಎಷ್ಟೋ ನಿರಾಳವೆನಿಸುತ್ತದೆ. ಪ್ರೀತಿ ತುಂಬಿದ ಎರಡು ಮಾತು ನುಡಿದರೆ ಹಾಯೆನಿಸುತ್ತದೆ.
ವಿಶ್ವಾಸದ ನಾಲ್ಕು ಮಾತುಗಳು ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತವೆ. ಹಾಗೆಯೇ ಆಕ್ರೋಶದ ಒಂದು ನುಡಿ ಕೇಳಿದಾಗ ದ್ವೇಷ ಕೆರಳಿ ಕೊಲೆ-ಆತ್ಮಹತ್ಯೆಯಂತಹ ಪಾತಕಗಳು ನಡೆದಿವೆ. ವರಕವಿ ದ.ರಾ. ಬೇಂದ್ರೆಯವರು ‘ಮಾತು ಮಾತು ಮಥಿಸಿ ಬಂದ ನಾದದ ನವನೀತ’ ಎಂದರು. ಕಡೆದಾಗ ಬೆಣ್ಣೆ ಬರಬೇಕೆಂದರೆ ಮೊಸರಿನಲ್ಲಿ ಹೈನು ಅಥವಾ ಕೆನೆಯ ಅಂಶ ಚೆನ್ನಾಗಿರಬೇಕು. ಸಂಭಾಷಣೆ ಎನ್ನುವ ಮಂಥನದಿಂದ ಅತ್ಯುತ್ತಮ ಯೋಜನೆಯೊಂದು ಹುಟ್ಟಬೇಕೆಂದರೆ ಎರಡು ಮನಸ್ಸುಗಳೂ ನಿರ್ಮಲ ಅಂತಃಕರಣವನ್ನು ಹೊಂದಿರಬೇಕು. ನಮ್ಮ ನಾಡಿನ ಬಹಳಷ್ಟು ಉದ್ದಿಮೆಗಳ ಕನಸುಗಳು ಇಂತಹ ಸಂಭಾಷಣೆಯಲ್ಲಿಯೇ ಕಸುವು ಪಡೆದುಕೊಂಡು ಮೈತಾಳಿವೆ. ಚರಿತ್ರೆಯುದ್ದಕ್ಕೂ ಗಮನಿಸಿದರೆ ಸಂಧಾನವೇ ಇರಲಿ, ಸಂಗ್ರಾಮವೇ ಇರಲಿ, ಮಾತಿನಿಂದಲೇ ಸಂಭವಿಸಿವೆ. ಹಠದ, ಸಿಟ್ಟಿನ ದೊಡ್ಡ ದೊಡ್ಡ ಬೆಟ್ಟಗಳನ್ನು ಅನುನಯದ ಮಾತಿನಿಂದ ಕರಗಿಸಿದಾಗ ಕರುಣೆಯ ಹೊಳೆಯೇ ಹರಿದದ್ದು ಇತಿಹಾಸದಲ್ಲಿ ದಾಖಲಾಗಿದೆ. ಪರಿಣಾಮಕಾರಿಯಾದ ಮಾತನ್ನು ಮಾತಿಗೆ ಪೋಣಿಸುತ್ತ ವಾದ ಮಂಡಿಸಿದಾಗ ನೀಡಬೇಕಾದ ಗಲ್ಲುಶಿಕ್ಷೆಯೂ ರದ್ದಾದ ಪ್ರಕರಣಗಳಿವೆ. ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನಾದ ಪರಮಾತ್ಮನಿಗೂ ಒಳ್ಳೆಯ ಮಾತುಗಳಿಂದ ಮಾಡುವ ಸ್ತುತಿ-ಸ್ತ್ರೋತ್ರಗಳೆಂದರೆ ಇಷ್ಟವಂತೆ. ಹಾಗಿದ್ದರೆ ಮನುಷ್ಯನಿಗೆ ಪ್ರೀತಿ-ಕಾಳಜಿ ತುಂಬಿದ ನುಡಿಗಳ ಅವಶ್ಯಕತೆ ಇರದಿರುತ್ತದೆಯೆ?
ದುಡುಕಿನ ಹೇಳಿಕೆಗಳಿಂದ ಅನೇಕರು ಹುದ್ದೆಗಳನ್ನೇ ಕಳೆದುಕೊಂಡಿದ್ದಾರೆ. ಆದ್ದರಿಂದ ಮಾತು ತುಟಿ ಮೀರುವುದಕ್ಕಿಂತಲೂ ಮೊದಲೇ ಅದರ ಪರಿಣಾಮದ ಕುರಿತು ಒಮ್ಮೆ ಆಲೋಚಿಸಿಕೊಳ್ಳುವುದು ಜಾಣರ ಲಕ್ಷಣ. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಅನ್ನುತ್ತಾರೆ. ನಾವಿರುವ ದೇಶ-ಕಾಲ-ಸಂದರ್ಭಗಳನ್ನು ಸದಾ ನೆನಪಿನಲ್ಲಿಟ್ಟುಕೊಂಡು ನಮ್ಮ ಮಾತು ಉಂಟು ಮಾಡಬಹುದಾದ ಸಾಮಾಜಿಕ, ನೈತಿಕ ಪರಿಣಾಮಗಳನ್ನು ಊಹಿಸಿಕೊಂಡು ಶಬ್ದಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಸಂಭಾಷಣೆಯಲ್ಲಿ ಮಾತು ಎಂದರೆ ಅದು ಕೇವಲ ಶಬ್ದವಲ್ಲ, ಅದು ಧ್ವನಿಯ ಏರಿಳಿತ, ಶಾರೀರಿಕ ಚಲನೆ, ಅಂಗವಿನ್ಯಾಸ ಇವೆಲ್ಲವನ್ನೂ ಒಡಗೂಡಿದ ಒಂದು ಪ್ರಕ್ರಿಯೆಯಾಗಿದೆ. ಕೆಲವು ಸಂದರ್ಭಗಳಲ್ಲಿ ಒಂದು ಸ್ಪರ್ಶವೇ ಮಾತಿನ ಪರಿಣಾಮವನ್ನು ದಾಟಿಸಿಬಿಡಬಹುದು. ಆತ್ಮೀಯರ ಸಾವಿನಲ್ಲಿ ಒಂದು ಹಸ್ತಲಾಘವ ಅಥವಾ ಅಪ್ಪುಗೆ ಅಥವಾ ತಲೆಸವರುವಿಕೆಯೇ ಮೌನದಲ್ಲಿ ನಮ್ಮ ಸಾಂತ್ವನವನ್ನು ದಾಟಿಸುತ್ತವೆ. ಈ ಎಲ್ಲ ಕಾರಣಗಳಿಂದ ಮಾತಿಗೂ ಒಂದು ಪೂರ್ವ ತಯಾರಿಯಿದೆ ಎಂದಾಯಿತು.
ನಮ್ಮ ಮನಸ್ಸಿನ ಭಾವವನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವುದಕ್ಕೆ ಸೂಕ್ತವಾದ ಶಬ್ದಗಳ ಆಯ್ಕೆ, ಸಂದರ್ಭಕ್ಕೆ ಯೋಗ್ಯವಾದ ಧ್ವನಿಯ ಏರಿಳಿಸುವಿಕೆ, ಎದುರಿಗಿನ ವ್ಯಕ್ತಿಗೆ ಸಮರ್ಥವಾಗಿ ಅರ್ಥ ಮಾಡಿಸಲು ಅಗತ್ಯವಾದ ಹಾವಭಾವಗಳು ಇವೆಲ್ಲವನ್ನೂ ಆಯ್ಕೆ ಮಾಡಿಕೊಳ್ಳುವುದು ಬಹುಮುಖ್ಯವಾದ ಸಂಗತಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.