ADVERTISEMENT

ಬಡವರಿಗೆ ಶಾಪವಾದ ಕ್ಷಯರೋಗ: ವಿಶ್ವ ಆರೋಗ್ಯ ಸಂಸ್ಥೆ

ಜಾಗತಿಕವಾಗಿ 30 ಲಕ್ಷ ರೋಗಿಗಳು ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 11:39 IST
Last Updated 21 ಅಕ್ಟೋಬರ್ 2019, 11:39 IST
.
.   

ವಿಶ್ವ ಆರೋಗ್ಯ ಸಂಸ್ಥೆ: ಸಾಂಕ್ರಾಮಿಕ ರೋಗವಾದಕ್ಷಯರೋಗ(ಟಿ.ಬಿ)ದಿಂದ ಮುಕ್ತಿ ಪಡೆಯಲು ಜಾಗತಿಕವಾಗಿ 70 ಲಕ್ಷ ಜನ ಜೀವ ರಕ್ಷಕ ಚಿಕಿತ್ಸೆ ಪಡೆದಿದ್ದು, ಇನ್ನೂ 30 ಲಕ್ಷ ಜನ ಈ ರೋಗಕ್ಕೆ ಚಿಕಿತ್ಸೆ ಪಡೆಯುವಲ್ಲಿ ಸಾಧ್ಯವಾಗಿಲ್ಲ.ಬಡತನ ರೇಖೆಯಲ್ಲಿರುವ ಜನರಿಗೆಈ ರೋಗ ಹೊರೆಯಾಗಿ ಪರಿಣಮಿಸಿದೆ.

ಸುಧಾರಿತ ರೋಗ ನಿರ್ಣಯ ಪತ್ತೆ ಕಾರ್ಯವಿಧಾನದಿಂದಾಗಿ 2018ರಲ್ಲಿ ಹಿಂದೆದಿಗಿಂತಲೂ ಹೆಚ್ಚಿನ ಜನರು ಕ್ಷಯರೋಗದಿಂದ ದೂರಾಗಲು ಜೀವ ರಕ್ಷಕ ಚಿಕಿತ್ಸೆಯನ್ನು ಪಡೆದಿದ್ದಾರೆ.

2018ರಲ್ಲಿ ಜಾಗತಿಕವಾಗಿ 70 ಲಕ್ಷ ಜನರಿಗೆ ಕ್ಷಯರೋಗ ಇರುವುದನ್ನು ಸುಧಾರಿತ ಕಾರ್ಯವಿಧಾನದ ಮೂಲಕ ಪತ್ತೆ ಮಾಡಿ, ಚಿಕಿತ್ಸೆಯನ್ನು ನೀಡಲಾಗಿದೆ. ಇದು 2017ರಲ್ಲಿ ಟಿ.ಬಿಗೆ ಚಿಕಿತ್ಸೆ ನೀಡಲಾಗಿದ್ದ 64 ಲಕ್ಷ ರೋಗಿಗಳಿಗಿಂತ ಹೆಚ್ಚಿನದ್ದಾಗಿದೆ. ಈ ಮೂಲಕ ವಿಶ್ವಸಂಸ್ಥೆಯು ಘೋಷಣೆ ಮಾಡಿದ್ದ ‘ಕ್ಷಯರೋಗ ನಿರ್ಮೂಲನೆ‘ಯ ಗುರಿ ತಲುಪಲು ಒಂದು ಮೈಲಿಗಲ್ಲು ಪೂರೈಸಿದಂತಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ.

ADVERTISEMENT

ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಕ್ಷಯರೋಗ ವರದಿ ಪ್ರಕಾರ, 2018ರಲ್ಲಿ ಕ್ಷಯರೋಗ ಸೋಂಕಿನಿಂದ ಸಂಭವಿಸುತ್ತಿದ್ದ ಸಾವಿನ ಸಂಖ್ಯೆಯಲ್ಲೂ ಇಳಿಕೆಯಾಗಿದೆ. 2018ರಲ್ಲಿ 15 ಲಕ್ಷ ಜನ ಈ ರೋಗದಿಂದಮೃತಪಟ್ಟಿದ್ದಾರೆ. 2017ರಲ್ಲಿ 16 ಲಕ್ಷ ಜನ ಈ ರೋಗದಿಂದ ಮೃತಪಟ್ಟಿದ್ದರು. 2016ರಲ್ಲಿ 17 ಲಕ್ಷ ಜನ ಸಾವಿಗೀಡಾಗಿದ್ದರು. ಈ ಸಂಖ್ಯೆಗೆ ಹೋಲಿಸಿದರೆ 2018ರಲ್ಲಿ ಸಾವಿನ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.

ಇತ್ತೀಚಿನ ದಿನಗಳಲ್ಲಿ ಟಿ.ಬಿಯ ಹೊಸ ಪ್ರಕರಣಗಳ ಸಂಖ್ಯೆಯೂ ಕಡಿಮೆ ಇದೆ. ಆದರೆ, ಕಡಿಮೆ ಆದಾಯ ಹೊಂದಿದ ಹಾಗೂ ಬಡತನ ರೇಖೆಯಲ್ಲಿರುವ ಜನರಿಗೆ ಈ ರೋಗ ಹೊರೆಯಾಗಿ ಪರಿಣಮಿಸಿದೆ. ಈ ವರ್ಗದ 10 ಲಕ್ಷ ಜನ 2018ರಲ್ಲಿ ಕ್ಷಯರೋಗ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

’ಟಿ.ಬಿಗೆ ಚಿಕಿತ್ಸೆ ನೀಡಿದ ಮತ್ತು ಈ ಚಿಕಿತ್ಸೆಯಿಂದ ವಂಚಿತರಾದ ರೋಗಿಗಳನ್ನು ತಲುಪಿ ಚಿಕಿತ್ಸೆ ನೀಡಲು ಯೋಜಿತ ಗುರಿ ಮುಟ್ಟುವಲ್ಲಿ ನಾವು ಮೊದಲ ಮೈಲಿಗಲ್ಲನ್ನು ತಲುಪಿದ್ದೇವೆ‘ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ಪ್ರಧಾನ ನಿರ್ದೇಶಕ ಡಾ.ಟೆಂಡ್ರೋಸ್ ಅಧನೋಮ್ ಗೆಬ್ರೇಯೆಸಸ್ ಹೇಳಿದ್ದಾರೆ.

’ನಾವು ಒಟ್ಟಾಗಿ ಕೈಜೋಡಿಸಿದರೆ ಜಾಗತಿಕವಾಗಿ ಗುರಿ ತಲುಪಬಹುದು ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ. ’ಪತ್ತೆ, ಚಿಕಿತ್ಸೆ, ನಿರ್ಮೂಲನೆ‘ ಜಂಟಿ ಘೋಷಣೆ ಮೂಲಕ ಟಿ.ಬಿ ನಿರ್ಮೂಲನೆಯತ್ತ ಇಟ್ಟ ಹೆಜ್ಜೆ ಕಾರ್ಯಸಾಧುವಾಗಿದೆ. ಕ್ಷಯರೋಗ ನಿರ್ಮೂಲನೆ ಏಡ್ಸ್‌ ಮತ್ತು ಮಲೇರಿಯಾ ವಿರುದ್ಧ ಹೋರಾಡಲು ಜಾಗತಿಕಮಟ್ಟದಲ್ಲಿ ಯತ್ನ ನಡೆದಿದೆ‘ ಎಂದು ಹೇಳಿದ್ದಾರೆ.

ವರದಿ ಪ್ರಕಾರ, 2030ರ ವೇಳೆಗೆ ಟಿ.ಬಿಯನ್ನು ಕೊನೆಗಾಣಿಸಿ ಸುಸ್ಥಿರ ಅಭಿವೃದ್ಧಿ ಗುರಿಯನ್ನು ತಲುಪಬೇಕಾದರೆ ವಿಶ್ವದಾದ್ಯಂತ ಅತ್ಯಂತ ವೇಗವಾಗಿ ಕೆಲಸ ಆಗಬೇಕಾಗಿದೆ. ವರದಿಯಲ್ಲಿ ಹೇಳಲಾಗಿರುವ ಇನ್ನೂ ಚಿಕಿತ್ಸೆ ಪಡೆಯಲು ಸಾಧ್ಯವಾಗದ 30 ಲಕ್ಷ ಕ್ಷಯರೋಗಿಗಳಿಗೆ ಚಿಕಿತ್ಸೆಯನ್ನು ಒದಗಿಸುವ ತುರ್ತು ಅಗತ್ಯವಿದೆ ಎಂದು ವಿವರಿಸಲಾಗಿದೆ.

ಹೆಚ್ಚಾಗಿ ಕಾಡಿದ 8 ದೇಶಗಳು

2018ರಲ್ಲಿ ಟಿ.ಬಿಹೆಚ್ಚಿನ ಪ್ರಕರಣಗಳು ವರದಿಯಾಗಿ,ಹೊರೆಯಾಗಿ ಕಾಡಿದ 8 ದೇಶಗಳಲ್ಲಿ ಭಾರತ, ಬಾಂಗ್ಲಾದೇಶ, ಚೀನಾ, ಇಂಡೋನೇಷ್ಯಾ, ನೈಜೀರಿಯಾ, ಪಾಕಿಸ್ತಾನ, ಫಿಲಿಪೈನ್ಸ್ ಮತ್ತು ದಕ್ಷಿಣ ಆಫ್ರಿಕಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.