‘ಜೀವನ ದೊಡ್ಡದಾಗಿರಬೇಕು; ಉದ್ದವಾಗಿಯಲ್ಲ’ ಎಂದೋ, ಅಥವಾ ‘ಜೀವನದಲ್ಲಿ ಎಷ್ಟು ಕ್ಷಣಗಳಿವೆ ಎಂಬುದು ಮುಖ್ಯವಲ್ಲ; ಬದುಕಿರುವ ಪ್ರತಿಯೊಂದು ಕ್ಷಣದಲ್ಲೂ ಎಷ್ಟು ಜೀವನವಿದೆ ಎಂಬುದು ಮುಖ್ಯ’ ಎನ್ನುವ ಕಾವ್ಯಾತ್ಮಕ ಮಾತುಗಳನ್ನು ಕೇಳಿರುತ್ತೇವೆ. ಜೀವನದ ಗುಣಮಟ್ಟ ಎಂದರೇನು; ಅದನ್ನು ನಿರ್ಧರಿಸುವ ಅಂಶಗಳು ಯಾವುವು ಎಂದು ಸಂತರಿಂದ ಹಿಡಿದು ವಿಜ್ಞಾನಿಗಳವರೆಗೆ ಪ್ರತಿಯೊಬ್ಬರೂ ಆಲೋಚಿಸಿರುತ್ತಾರೆ. ಈ ನಿಟ್ಟಿನಲ್ಲಿ ವೈಜ್ಞಾನಿಕ ಅಧ್ಯಯನಗಳು ಏನನ್ನು ಹೇಳುತ್ತವೆ?
1970ರ ದಶಕದಲ್ಲಿ ‘ಜೀವನ ಗುಣಮಟ್ಟದ ಭೌತಿಕ ಸೂಚ್ಯಂಕ’ ಎನ್ನುವ ಮಾಪನ ಚಾಲ್ತಿಗೆ ಬಂದಿತು. ಅಭಿವೃದ್ಧಿಯನ್ನು ಅಳೆಯಲು ಅಲ್ಲಿಯವರೆಗೆ ಆಯಾ ದೇಶದ ಉತ್ಪಾದಕತೆಯನ್ನು ಬಳಸಲಾಗುತ್ತಿತ್ತು. ಆದರೆ, ದೇಶದ ಉತ್ಪಾದಕತೆಗೂ, ಅಲ್ಲಿನ ಜನರ ಜೀವನ ಗುಣಮಟ್ಟಕ್ಕೂ ನೇರ ಸಂಬಂಧವಿಲ್ಲ ಎಂದು ಸಮಾಜವಿಜ್ಞಾನಿಗಳು ಆಗ್ರಹಿಸಿದರು. ಹೀಗಾಗಿ, ಜನರ ಜೀವನಮಟ್ಟದ ಮಾಪನಗಳಾದ ಸಾಕ್ಷರತೆ, ಜೀವಿತಾವಧಿ, ಮತ್ತು ಜನಿಸಿದವರ ಪೈಕಿ ಎಷ್ಟು ಮಕ್ಕಳು ಒಂದು ವರ್ಷದ ನಂತರವೂ ಜೀವಂತ ಇರುತ್ತಾರೆ ಎನ್ನುವ ಲೆಕ್ಕಾಚಾರಗಳ ಸರಾಸರಿಯ ‘ಜೀವನ ಗುಣಮಟ್ಟದ ಭೌತಿಕ ಸೂಚ್ಯಂಕ’ವನ್ನು ಮೋರಿಸ್ ಡೇವಿಡ್ ಅಭಿವೃದ್ಧಿಗೊಳಿಸಿದರು. ಇದರಲ್ಲಿ ಜನರ ಆದಾಯದ ನೇರ ಪ್ರಸ್ತಾಪ ಇಲ್ಲವೆನ್ನುವುದು ಮಹತ್ವದ ವಿಷಯ. ದೇಶದ ಆದಾಯ ಹೆಚ್ಚಿದಂತೆ ಈ ಮೂರೂ ಮಾಪನಗಳೂ ಹೆಚ್ಚಬೇಕು. ಆಗ ಮಾತ್ರ ದೇಶದ ಆದಾಯ ಸಾಮಾನ್ಯ ಜನರ ಅಭಿವೃದ್ಧಿಗೆ ಬಳಕೆ ಆಗುತ್ತಿದೆ ಎಂದರ್ಥ. ಹೀಗಾಗಿ, ‘ಜೀವನ ಗುಣಮಟ್ಟದ ಭೌತಿಕ ಸೂಚ್ಯಂಕ’ ದೇಶದ ಒಟ್ಟಾರೆ ಪ್ರಗತಿಯ ಪರೋಕ್ಷ ಮಾಪನ ಎಂದಾಯಿತು. 2010ರಲ್ಲಿ ವಿಶ್ವಸಂಸ್ಥೆ ‘ಜೀವನ ಗುಣಮಟ್ಟದ ಭೌತಿಕ ಸೂಚ್ಯಂಕ’ವನ್ನು ಬದಲಾಯಿಸಿ, ‘ಮಾನವ ಅಭಿವೃದ್ಧಿಯ ಸೂಚ್ಯಂಕ’ವನ್ನು ತಂದಿತು. ಇದರಲ್ಲಿ ಒಂದು ವರ್ಷದ ಮಕ್ಕಳ ಜೀವಂತತೆಯ ಸಂಖ್ಯೆಯನ್ನು ಕೈಬಿಟ್ಟು, ದೇಶದ ಜನರ ಸರಾಸರಿ ಆದಾಯವನ್ನು ಸೇರಿಸಲಾಯಿತು. ಇದಕ್ಕೆ ಎಷ್ಟೇ ವಿರೋಧಗಳೂ ವಿಮರ್ಶೆಗಳೂ ಇದ್ದರೂ, ಬೇರೊಂದು ಪ್ರಮಾಣವತ್ತಾದ ಸೂಚ್ಯಂಕ ಬರುವವರೆಗೆ ಯಾವುದೇ ದೇಶದ ಅಭಿವೃದ್ಧಿಯ ಸಂಕೇತವಾಗಿ ಇದನ್ನೇ ಬಳಸಲಾಗುತ್ತಿದೆ.
ದೇಶ ಎನ್ನುವುದು ಪ್ರಜೆಗಳ ಸಂಘ. ಇಡೀ ದೇಶದ ಪ್ರಗತಿಯ ಸಂಕೇತವಾಗಿ ನೀಡುವ ಒಂದು ಸೂಚ್ಯಂಕ ಅಪಾರ ವೈವಿಧ್ಯದ ಪ್ರಜೆಗಳ ಬಗ್ಗೆ ವೈಯಕ್ತಿಕ ನೆಲೆಗಟ್ಟಿನಲ್ಲಿ ಹೆಚ್ಚಿನದೇನನ್ನೂ ಸೂಚಿಸುವುದಿಲ್ಲ. ಹೀಗಾಗಿ, ಪ್ರತಿಯೊಬ್ಬ ವ್ಯಕ್ತಿಯ ಮಟ್ಟದಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸಬಲ್ಲ ಮಾಪನಗಳನ್ನು ತಜ್ಞರು ಸೂಚಿಸಿದ್ದಾರೆ. ಈ ಹತ್ತು ಮಾಪನಗಳನ್ನು ಪ್ರತಿಯೊಬ್ಬರೂ ತಂತಮ್ಮ ಪ್ರಯತ್ನಗಳಿಂದ, ವ್ಯವಸ್ಥೆಯ ನೆರವಿಲ್ಲದೆಯೇ ಅಭಿವೃದ್ಧಿಗೊಳಿಸಬಹುದು.
ವೈಯಕ್ತಿಕ ಸಂಬಂಧಗಳು: ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಅತ್ಯಂತ ಮಹತ್ವದ ಅಂಶ ಸಂಬಂಧಗಳು. ಇದು ಕೌಟುಂಬಿಕ, ವೃತ್ತಿಸಂಬಂಧಿ, ಸ್ನೇಹ, ಪರಿಚಯ ಯಾವುದಾದರೂ ಆಗಬಹುದು. ಸಂಬಂಧಗಳ ಸೂಕ್ಷ್ಮತೆಯನ್ನು ಗುರುತಿಸಿ, ಅದಕ್ಕೆ ತಕ್ಕಂತೆ ನಡೆದುಕೊಳ್ಳಬಲ್ಲ ಸಾಮರ್ಥ್ಯ ಇರುವವರು ತಂತಮ್ಮ ಜೀವನದ ಗುಣಮಟ್ಟವನ್ನು ಬಹುವಾಗಿ ಹೆಚ್ಚಿಸಬಲ್ಲರು. ತಮ್ಮ ಜೀವನದಲ್ಲಿ ಒಂದೇ ಒಂದು ಬದಲಾವಣೆಯನ್ನು ಮಾಡಿಕೊಳ್ಳಲು ಇಚ್ಛಿಸುವವರು ವೈಯಕ್ತಿಕ ಸಂಬಂಧಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂಬುದನ್ನು ಅಧ್ಯಯನಗಳು ಕಾಣಿಸಿವೆ. ಸಾಕಷ್ಟು ಏರಿರುವ ವೈಯಕ್ತಿಕ ಆದಾಯ, ಬೇಕಬೇಕಾದ ವಸ್ತುಗಳು ಮನೆಬಾಗಿಲಿಗೆ ಬರುವ ಸೌಲಭ್ಯಗಳ ಇಂದಿನ ದಿನಗಳಲ್ಲಿ ‘ನನಗೆ ಬದುಕಲು ಯಾರ ಅವಶ್ಯಕತೆಯೂ ಇಲ್ಲ’ ಎನ್ನುವ ಹುಂಬತನ ಬೆಳೆಯುತ್ತಿದೆ. ಈ ಮನೋಭಾವ ದೀರ್ಘಕಾಲಿಕ ನೆಲೆಯಲ್ಲಿ ಅನೇಕ ಸಮಸ್ಯೆಗಳನ್ನು ತರುತ್ತದೆ. ಅವಲಂಬನೆಯ ಹೊರತಾಗಿಯೂ ಮಧುರವಾದ ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಜೀವನದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಅತ್ಯಂತ ಸಮಂಜಸ ವಿಧಾನ.
ಕೆಲಸ ಮತ್ತು ವೃತ್ತಿ: ಕೆಲಸವಿಲ್ಲದ ಮಿದುಳು ಸೈತಾನನ ಕಾರ್ಯಾಗಾರ ಎನ್ನುವ ಮಾತಿದೆ! ಕೆಲಸವೆನ್ನುವುದು ಯಾಂತ್ರಿಕವಲ್ಲ; ಅದು ನಮ್ಮ ದೇಹ, ಮನಸ್ಸು, ಬುದ್ಧಿ ಮತ್ತು ಚಿಂತನೆಗಳನ್ನು ಏಕತ್ರಗೊಳಿಸುವ ಸಾಧನ. ಸಫಲವಾಗಿ ಮಾಡಿದ ಕೆಲಸ ಈ ನಾಲ್ಕೂ ವಿಭಾಗಗಳಿಗೆ ಸಮಾಧಾನ ನೀಡುತ್ತದೆ. ಇದರಿಂದ ಆರೋಗ್ಯ ಸುಧಾರಿಸಿ, ಜೀವನದ ಗುಣಮಟ್ಟ ವೃದ್ಧಿಸುತ್ತದೆ.
ಹಣಕಾಸು: ಜೀವನದಲ್ಲಿ ಹಣಕಾಸಿನ ಸ್ಥಿರತೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉತ್ತಮ ಗುಣಮಟ್ಟಕ್ಕೆ ಕಾರಣವಾಗುತ್ತದೆ. ಯಾವುದೇ ರೀತಿಯಿಂದ ಹಣ ಮಾಡುವ ಗೀಳು ಹಾನಿಕಾರಕವಾಗಬಲ್ಲದು. ಆದರೆ, ಮಾಡಿದ ಕೆಲಸಕ್ಕೆ ಪಡೆಯುವ ಸೂಕ್ತ ಸಂಭಾವನೆ ನೆಮ್ಮದಿಗೆ ಕಾರಣವಾಗುತ್ತದೆ. ಜೀವನದ ಅವಶ್ಯಕತೆಗಳನ್ನು ಪೂರೈಸುವ ಹಂತದವರೆಗೆ ಹಣ ಸಂಪಾದನೆ ಮಾಡುವುದು ಒಳ್ಳೆಯ ಬದುಕಿಗೆ ಆಧಾರ.
ಆರೋಗ್ಯ: ಸಕ್ಷಮವಾದ ದೈಹಿಕ ಮತ್ತು ಮಾನಸಿಕ ಆರೋಗ್ಯಗಳು ಸಂತೃಪ್ತ ಬದುಕಿಗೆ ಪ್ರಮುಖ ಒತ್ತಾಸೆಗಳು. ಒಳ್ಳೆಯ ಆರೋಗ್ಯ ಜೀವನದ ಗುಣಮಟ್ಟವನ್ನು ಬೆಳೆಸಿದರೆ, ಅನಾರೋಗ್ಯದ ಸ್ಥಿತಿ ಅದನ್ನು ಇಳಿಸಬಲ್ಲದು. ಹೀಗೆ, ಆರೋಗ್ಯಕ್ಕೂ, ಜೀವನದ ಗುಣಮಟ್ಟಕ್ಕೂ ನೇರವಾದ ಸಂಬಂಧವಿದೆ.
ವಿರಾಮ: ಜಡವಾಗಿ ಬಿದ್ದುಕೊಳ್ಳುವುದು ವಿರಾಮವಲ್ಲ! ದೇಹಕ್ಕೆ ಮತ್ತು ಮನಸ್ಸನ್ನು ನಿರಾಳಗೊಳಿಸುವ ಚಟುವಟಿಕೆಗಳು ವಿರಾಮ ಎನಿಸಿಕೊಳ್ಳುತ್ತವೆ. ಹಿತವೆನಿಸುವ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು, ಸಂಗೀತ ಕೇಳುವುದು, ವಿಶೇಷ ಅಡುಗೆ ಮಾಡುವುದು, ಕುಟುಂಬದ ಸದಸ್ಯರ, ಸ್ನೇಹಿತರ ಜೊತೆಯಲ್ಲಿ ಯಾವುದಾದರೂ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳುವುದು, ಮೊದಲಾದುವು ಜೀವನದ ಗುಣಮಟ್ಟವನ್ನು ಬೆಳೆಸಲು ಕಾರಣವಾಗುತ್ತವೆ.
ಮಾನಸಿಕ ನೆಮ್ಮದಿ: ಏಕಾಗ್ರತೆ, ಧ್ಯಾನ, ಪ್ರಾಣಾಯಾಮ, ವ್ಯಾಯಾಮ ಮೊದಲಾದುವುಗಳು ಮಾನಸಿಕ ನೆಮ್ಮದಿಗೆ, ಆತ್ಮಾವಲೋಕನಕ್ಕೆ, ಸ್ವ-ನಿಯಂತ್ರಣಗಳಿಗೆ, ತನ್ಮೂಲಕ ದೈಹಿಕ ಆರೋಗ್ಯಕ್ಕೆ ಮತ್ತು ಗುಣಮಟ್ಟದ ಜೀವನಕ್ಕೆ ರಹದಾರಿ.
ಆತ್ಮಗೌರವ: ಒಳ್ಳೆಯ ನಡವಳಿಕೆ, ಧನಾತ್ಮಕ ಮನೋಭಾವಗಳು, ಸಂತೃಪ್ತ ಜೀವನಶೈಲಿ ನೀಡುವ ಆತ್ಮಗೌರವದ ಭಾವಜೀವನದ ಗುಣಮಟ್ಟಕ್ಕೆ ಕಾರಣವಾಗುತ್ತದೆ. ಬೇರೆಲ್ಲವೂ ಇದ್ದೂ ಆತ್ಮಗೌರವದ ಭಾವ ಇಲ್ಲದಿದ್ದರೆ ಖಿನ್ನತೆಯೇ ಮೊದಲಾದ ಮಾನಸಿಕ ಅನಾರೋಗ್ಯಗಳಿಗೆ ತುತ್ತಾಗಬಹುದು ಎಂದು ಹಲವಾರು ಅಧ್ಯಯನಗಳು ತೋರಿವೆ.
ಗತಿಸಿದ ಘಟನೆಗಳ ಬಗೆಗಿನ ಮನೋಧರ್ಮ: ಜೀವನವೆನ್ನುವುದು ಸರಳರೇಖೆಯಲ್ಲ. ಅದು ಹಲವಾರು ಬೆಟ್ಟ-ಇಳಿಜಾರುಗಳ ಮೂಲಕ ಕ್ರಮಿಸುವ ಪಯಣ. ಜೀವನದ ವಾಸ್ತವಗಳ ಜೊತೆಗೆ ಎಷ್ಟು ಬೇಗ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂಬುದು ನಮ್ಮ ಸ್ತಿಮಿತವನ್ನು ನಿರ್ಧರಿಸುತ್ತದೆ. ಸಂಗಾತಿಯ ಅಗಲಿಕೆ, ಕೆಲಸ ಕಳೆದುಕೊಳ್ಳುವುದು, ಆರ್ಥಿಕ ನಷ್ಟ ಮೊದಲಾದ ಸಂದರ್ಭಗಳಲ್ಲಿ ಮಾನಸಿಕ ಸಂತುಲನ ಉಳಿಸಿಕೊಳ್ಳುವವರ ಜೀವನದ ಗುಣಮಟ್ಟ ಅಧಿಕವಾಗಿರುತ್ತದೆ ಎಂದು ಮಾನಸಿಕ ತಜ್ಞರ ಅಭಿಪ್ರಾಯ.
ಮಾನಸಿಕತೆ: ಸಂತಸ ಎನ್ನುವುದು ಮಾನಸಿಕ ಸ್ಥಿತಿ. ಎಲ್ಲವೂ ಇದ್ದೂ ಏನೂ ಇಲ್ಲವೆಂದು ಕೊರಗುವವರಿಗಿಂತ ಇದ್ದ ಸ್ವಲ್ಪದಲ್ಲೇ ನೆಮ್ಮದಿ ಕಾಣುವವರ ಜೀವನದ ಗುಣಮಟ್ಟ ಹೆಚ್ಚು. ಜೀವನಪ್ರೀತಿ ಬೆಳೆಸುವ ಮಾನಸಿಕತೆಗಳು ಬದುಕಿನ ಸ್ತರವನ್ನು ಏರಿಸುತ್ತವೆ.
ಜೀವನನಿರ್ವಹಣೆಯ ಕೌಶಲಗಳು: ಬದುಕು ಸಾಗಿದಂತೆಲ್ಲಾ ಅನಿವಾರ್ಯವಾಗುವ ಬದಲಾವಣೆಗಳಿಗೆ ಯಾವ ರೀತಿ ಸ್ಪಂದಿಸುತ್ತಾ ಜೀವನವನ್ನು ಸುಖಮಯವಾಗಿಸುತ್ತೇವೆ ಎಂಬುದು ಗುಣಮಟ್ಟದ ಮಾಪನ. ಬದುಕಿನ ಗಮ್ಯಗಳ ನಿರ್ಧಾರ, ಅವುಗಳ ಸಾಧನೆ, ವೃತ್ತಿಜೀವನದ ಹೊಸತುಗಳ ಕಲಿಕೆ, ಪ್ರಪಂಚದ ನಾವೀನ್ಯಗಳಿಗೆ ತೆರೆದುಕೊಳ್ಳುವಿಕೆಗಳು ಸಂತಸದಾಯಕ ಅನುಭವಗಳು.
ಅಧ್ಯಯನಗಳ ಮೂಲಕ ಕಂಡುಕೊಂಡ ಈ ಪಟ್ಟಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ತಲೆತಲಾಂತರಗಳಿಂದ ಇದರಂತೆಯೇ ಬಾಳಿ ಬದುಕಿದ ನಮ್ಮ ಹಿರಿಯರ ಜೀವನ ನಮ್ಮಲ್ಲಿ
ಬೆರಗು ಮೂಡಿಸುತ್ತದೆ. ಸಾಂಘಿಕ ಬದುಕಿಗೆ ಬಹಳ ಮಹತ್ವ ನೀಡಿದ ತಲೆಮಾರುಗಳು ನಮ್ಮ ದೇಶದ ಸಾಮಾಜಿಕ ಏಕತೆಗೆ ಕಾರಣವಾಗಿದ್ದವು. ಆಧುನಿಕ ಕಾಲದಲ್ಲೂ
ಇದು ಜೀವನದ ಗುಣಮಟ್ಟವನ್ನು ಎತ್ತರಿಸಬಲ್ಲವು
ಎಂದು ಸಿದ್ಧವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.