ನನಗೆ 21 ವರ್ಷ. ಸಣ್ಣ ಸಣ್ಣ ವಿಷಯಕ್ಕೂ ಚಿಂತೆಯಾಗುತ್ತದೆ. ಒಮ್ಮೆ ಚಿಂತೆ ತಲೆಗೆ ಹೊಕ್ಕಿತು ಎಂದರೆ ತುಂಬಾ ಭಯವಾಗುತ್ತದೆ. ಅದರಿಂದ ತಲೆ ನೋವು ಬರುತ್ತದೆ. ನನಗಿರುವ ಸಮಸ್ಯೆ ಏನು?
ನಾಝಿಯಾ, ಊರು ಬೇಡ
ನಿಮ್ಮ ಚಿಂತೆಗೆ ಕಾರಣವೇನು ಹಾಗೂ ಅದರ ಹಿಂದಿನ ಪ್ರಚೋದಕ ಅಂಶ ಯಾವುದು ಎಂಬುದನ್ನು ತಿಳಿದುಕೊಳ್ಳಿ. ಅಂತಹ ಪರಿಸ್ಥಿತಿಯನ್ನು ನಿರ್ಲಕ್ಷ್ಯ ಮಾಡಲು ಪ್ರಯತ್ನಿಸಿ. ಕೆಲವುಅನಗತ್ಯ ಹಾಗೂ ಅಹಿತಕರ ಸನ್ನಿವೇಶಗಳಿಂದ ನಿಮ್ಮಲ್ಲಿ ಭಯ ಹುಟ್ಟುತ್ತಿದೆ. ಆ ಭಯ ನಿಮ್ಮನ್ನು ಅಭದ್ರತೆಗೆ ತಳ್ಳುತ್ತಿದೆ. ನಿಮ್ಮೊಳಗಿನ ಚಿಂತೆಯ ಒತ್ತಡದಿಂದ ತಲೆನೋವು ಕಾಣಿಸಿಕೊಳ್ಳುತ್ತಿದೆ. ಜೊತೆಗೆ ಇದರಿಂದ ಕುತ್ತಿಗೆ ಹಾಗೂ ನೆತ್ತಿಯ ಸ್ನಾಯುವಿನಲ್ಲೂ ನೋವುಂಟಾಗುತ್ತದೆ. ಹಾಗಾಗಿ ಅಂತಹ ಸಂದರ್ಭಗಳಿಂದ ದೂರವಿರಿ. ಯೋಗ ಹಾಗೂ ವ್ಯಾಯಾಮ ಮಾಡುವ ಮೂಲಕ ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮ ಪಡಿಸಿಕೊಳ್ಳಲು ಪ್ರಯತ್ನಿಸಿ. ಜೊತೆಗೆ ಇದರಿಂದ ದೈಹಿಕವಾಗಿಯೂ ನೀವು ಸದೃಢರಾಗಿರಬಹುದು. ಜೊತೆಗೆ ಸಣ್ಣ ಸಣ್ಣ ವಿಷಯಕ್ಕೂ ಚಿಂತೆ ಕಾಡುವುದರಿಂದ ತಪ್ಪಿಸಿಕೊಳ್ಳಬಹುದು.
ನಾನು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಯಾವಾಗ್ಲೂ ಸೈಲೆಂಟ್ ಆಗಿ ಇರುತ್ತೇನೆ. ನನಗೆ ಭಯ ಜಾಸ್ತಿ.ಕ್ರಿಯಾಶೀಲನಾಗಿ ಇರಲು ಸಾಧ್ಯವಾಗುವುದಿಲ್ಲ. ನನಗೆ ಯಾರೂ ಸ್ನೇಹಿತರಿಲ್ಲ ಎಂಬ ಬೇಜಾರು. ನಾನ್ಯಾಕೆ ಹೀಗೆ?
ಪುರುಷೋತ್ತಮ, ಊರು ಬೇಡ
ಜೀವನದಲ್ಲಿ ಯಾರನ್ನೂ ಇವರು ಅಂತರ್ಮುಖಿ, ಇವರು ಬಹಿರ್ಮುಖಿ ಎಂದು ಬೊಟ್ಟು ಮಾಡಿ ಹೇಳಲು ಸಾಧ್ಯವಾಗದಿದ್ದರೂ, ನಾವು ಅನೇಕರು ಅಂತರ್ಮುಖಿ ಇಲ್ಲವೇ, ಬಹಿರ್ಮುಖಿ ಅಂಶಕ್ಕೆ ಸಾಮೀಪ್ಯರಾಗಿರುತ್ತೇವೆ. ಅಂತರ್ಮುಖಿಯಾಗಿರುವವರಿಗೆ ಸಮಾಜದಲ್ಲಿ ಮನ್ನಣೆ ಜಾಸ್ತಿ. ಆದರೆ ಕೆಲಸದ ವಿಷಯ ಬಂದಾಗ ನಾವು ಹೆಚ್ಚು ಬಹಿರ್ಮುಖಿಯಾಗಿರಬೇಕು. ಅಂತರ್ಮುಖಿಯಾಗಿರುವುದು ಅನೇಕರ ನೈರ್ಸಗಿಕ ಸ್ವಭಾವ ಮತ್ತು ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅಂತರ್ಮುಖತ್ವದಿಂದ ಬಹಿರ್ಮುಖತ್ವಡೆಗೆ ಸಾಗಲು ಸಾಧ್ಯವಾಗದಿದ್ದರೆ ನಿಮ್ಮೊಳಗೆ ನೀವು ಬಹಿರ್ಮುಖತ್ವದ ಗುಣಲಕ್ಷಣಗಳನ್ನು ಸ್ವೀಕರಿಸಿ ಅದನ್ನು ಅಭಿವೃದ್ಧಿಗೊಳಿಸಿಕೊಳ್ಳಬೇಕು. ನೀವು ಅಂತರ್ಮುಖಿಯೇ ಇಲ್ಲ ಸಂಕೋಚ ಸ್ವಭಾವದವರೇ ಎಂಬುದನ್ನು ಮೊದಲು ಕಂಡುಕೊಳ್ಳಿ. ಸಂಕೋಚವು ಕೆಲವೊಮ್ಮೆ ಸಾಮಾಜಿಕ ಸಂವಹನದೊಂದಿಗಿನ ಭಯ ಅಥವಾ ಆತಂಕದಿಂದ ಕಾಣಿಸಿಕೊಳ್ಳಬಹುದು. ಅಂತರ್ಮುಖಿಗಳು ಸಾಮಾಜವನ್ನು ಎದುರಿಸುವಲ್ಲಿ ಕಡಿಮೆ ಅಂಕ ಗಳಿಸುತ್ತಾರೆ. ಆದರೆ ಸಾಮಾನ್ಯವಾಗಿ ಅವರು ಸಮಾಜವನ್ನು ನಿರ್ಲಕ್ಷ್ಯ ಮಾಡುವುದರಲ್ಲೂ ಕಡಿಮೆ ಅಂಕ ಗಳಿಸುತ್ತಾರೆ. ಸಂಕೋಚವು ಆತಂಕದಿಂದ ಬರುವಂತಹದ್ದು ಹಾಗೂ ನೀವು ಮಾಡುವ ಕೆಲಸದಲ್ಲಿ ಆತಂಕವಿದ್ದರೆ ಸಂಕೋಚ ಕಾಣಿಸಿಕೊಳ್ಳುತ್ತದೆ. ಸ್ನೇಹಿತರು ಹಾಗೂ ನಿಮ್ಮ ಆಪ್ತವಲಯದ ಸಹಾಯ ಪಡೆಯಿರಿ. ಜೊತೆಗೆ ಸ್ವ ಇಚ್ಚೆಯಿಂದ ನೀವು ಸಂಕೋಚ ಸ್ವಭಾವದಿಂದ ಹೊರ ಬರಬಹುದು.
ಮೊದಲು ನೀವಿರುವ ಆರಾಮ ವಲಯದಿಂದ ಹೊರ ಬರಲು ಪ್ರಯತ್ನಿಸಿ. ಒತ್ತಾಯಪೂರ್ವಕವಾಗಿ ನೀವು ಆ ವಲಯದಿಂದ ಹೊರ ಬಂದರೆ ನಿಮ್ಮಿಂದ ಸಾಧ್ಯವಾಗದ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ವ್ಯಾಯಾಮ ಹಾಗೂ ಯೋಗದಂತಹ ದೇಹಕ್ಕೆ ಶ್ರಮ ನೀಡುವ ಕೆಲಸ ಮಾಡಿ. ಹೊಸ ವ್ಯಕ್ತಿಗಳನ್ನು ಪರಿಚಯ ಮಾಡಿಕೊಳ್ಳಿ ಹಾಗೂ ಅವರಲ್ಲಿ ಕೆಲವರನ್ನು ಸ್ನೇಹಿತರನ್ನಾಗಿಸಿಕೊಳ್ಳಿ. ಇದರಿಂದ ಅಂತರ್ಮುಖಿ ಗುಣದಿಂದ ಹೊರ ಬರಬಹುದು.
ನಾನು ಎಂಜಿನಿಯರಿಂಗ್ ವಿದ್ಯಾರ್ಥಿ. ನನ್ನ ಸಮಸ್ಯೆ ಎಂದರೆ ಓದಲು ಶುರು ಮಾಡುವ ಸಮಯಕ್ಕೆ ನನ್ನ ಏಕಾಗ್ರತೆ ಕಡಿಮೆ ಆಗುತ್ತದೆ. ಓದುವ ಸಮಯದಲ್ಲಿ ಟೆನ್ಷನ್ ಆರಂಭವಾಗುತ್ತದೆ. ಅದರಿಂದ ನನಗೆ ಓದುವುದು ಕಷ್ಟವಾಗಿದೆ. ತುಂಬಾ ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದೇನೆ. ಓದಿನಲ್ಲಿ ಆಸಕ್ತಿ ಬೆಳೆಸಿಕೊಂಡು ಏಕಾಗ್ರತೆ ಹೆಚ್ಚಲು ಏನು ಮಾಡಬೇಕು?
ಭಾಸ್ಕರ ರೆಡ್ಡಿ, ಬೆಂಗಳೂರು
ನೀವು ಹಾಸ್ಟೆಲ್‌ನಲ್ಲಿದ್ದುಕೊಂಡು ಓದುತ್ತಿದ್ದೀರಾ? ಇಲ್ಲ ಮನೆಯಲ್ಲಿ ಓದುತ್ತಿದ್ದೀರಾ? ಎಂಬುದನ್ನು ಇಲ್ಲಿ ತಿಳಿಸಿಲ್ಲ. ಅದೇನೆ ಇರಲಿ, ನೀವು ಈಗ ಓದಿಗೆ ಪ್ರಾಮುಖ್ಯತೆ ನೀಡಬೇಕು. ಮನೆ ಅಥವಾ ಹಾಸ್ಟೆಲ್‌ನಲ್ಲೇ ನಿಮ್ಮ ಕಾಲೇಜಿನ ದೈನಂದಿನ ಚಟುವಟಿಕೆಗಳು ನಡೆಯಬೇಕು. ಮೊದಲು ನೀವು ಬಾಕಿ ಉಳಿಸಿಕೊಂಡ ವಿಷಯವನ್ನು ಪಾಸ್ ಮಾಡಿಕೊಳ್ಳಿ. ಆ ವಿಷಯದ ಮೇಲೆ ಹೇಗೆ ಓದಬೇಕು ಎಂಬುದರ ಬಗ್ಗೆ ಪ್ರಾಧ್ಯಾಪಕರು ಹಾಗೂ ಸ್ನೇಹಿತರ ಬಳಿ ಟಿಪ್ಸ್ ಕೇಳಿ ತಿಳಿದುಕೊಳ್ಳಿ. ಅದರೊಂದಿಗೆ ನೀವು ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬೇಕು. ಧ್ಯಾನ ಮಾಡುವುದರಿಂದ ನಿಮ್ಮಲ್ಲಿ ಏಕಾಗ್ರತೆ ಹೆಚ್ಚಬಹುದು. ಹಾಗಾಗಿ ಪ್ರತಿದಿನ 20 ನಿಮಿಷಗಳ ಕಾಲ ಧ್ಯಾನ ಮಾಡಿ. ಇದರಿಂದ ನಿಮ್ಮ ನೆನಪಿನ ಶಕ್ತಿ ಹಾಗೂ ಗಮನಶಕ್ತಿ ಎರಡೂ ಸುಧಾರಿಸುತ್ತದೆ. ನಿಮ್ಮ ಓದಿನ ಗಮನಕ್ಕೆ ಯಾವ ಅಂಶ ಅಡ್ಡಿ ಪಡಿಸುತ್ತಿದೆ ಎಂಬುದನ್ನು ಗಮನಿಸಿ. ಒಂದು ವೇಳೆ ಅದು ನಿಮ್ಮ ಮೊಬೈಲ್ ಪೋನ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಾಗಿರಬಹುದು. ಓದುವಾಗ ಅದರಿಂದ ದೂರವಿರಬೇಕಾದ್ದು ನಿಮ್ಮ ಕರ್ತವ್ಯ. ನೀವು ಡಿಗ್ರಿ ಓದುತ್ತಿದ್ದೀರಿ, ಹಾಗಾಗಿ ಯಾವುದು ಸರಿ, ಯಾವುದು ತಪ್ಪು ಎಂಬುದರ ಅರಿವು ನಿಮಗಿದೆ. ನಿಮ್ಮನ್ನು ನೀವು ಒತ್ತಾಯಪೂರ್ವಕವಾಗಿ ಓದಿನಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ. ಮತ್ತು ಇದೇ ಸದ್ಯಕ್ಕೆ ನಿಮಗೆ ಮುಖ್ಯ ಎಂಬುದರ ಅರಿವಿರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.