ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ಎಂಬ ಮಾತು ಮುನ್ನೆಲೆಗೆ ಬಂದಿದ್ದು ಕೋವಿಡ್ ನಂತರದ ಕಾಲದಲ್ಲಿ. ಮನುಷ್ಯ ತಾನು ತಿನ್ನುವ ಆಹಾರಕ್ರಮದಿಂದಲೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ತಿನ್ನುವ ಆಹಾರದ ಮೂಲಕ ರೋಗ ನಿಯಂತ್ರಣ ಮಾಡುವ ವಿಧಾನವು ಹೆಚ್ಚು ಶಾಶ್ವತ, ಸುರಕ್ಷಿತ ಮತ್ತು ಅಗ್ಗ. ಆಹಾರದ ಮೂಲಕ ಹೆಚ್ಚಿಸಿಕೊಳ್ಳುವ ನಿರೋಧಕ ಶಕ್ತಿಗೆ ವಿಶಾಲವಾದ ಬಾಹುಳ್ಯವಿದೆ. ನಾವು ಸೇವಿಸುವ ಕೆಲವು ಆಹಾರ ಪದಾರ್ಥಗಳಿಂದಲೇ ರೋಗಾಣುಗಾಗಳಿಂದ ಬಂದ ಸಮಸ್ಯೆ ಅಥವಾ ಅಸಮರ್ಪಕ ಜೀವನಶೈಲಿಯಿಂದ ಕಾಣಿಸುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ರೋಗನಿರೋಧಕ ಆಹಾರಗಳು
ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಸ್ಯಾಹಾರಕ್ಕೆ ಹೆಚ್ಚಿನ ಪ್ರಾಶಸ್ಥ್ಯವಿದೆ. ಆ ಕಾರಣಕ್ಕೆ ಬಹಳ ಹಿಂದಿನಿಂದಲೂ ಭಾರತೀಯರ ಆಹಾರ ಕ್ರಮದಲ್ಲಿ ಸಸ್ಯಾಹಾರಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಲಾಗಿದೆ. ಆಹಾರಗಳಲ್ಲಿ ಇರುವ ಕೆಲವು ಅಂಶಗಳನ್ನು ‘ರೋಗ ತಡೆಯುವ ಆಹಾರಾಂಶಗಳು’ ಎನ್ನುತ್ತೇವೆ. ಇಂತಹ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು ಪಟ್ಟಿ ಇಲ್ಲಿದೆ.
ಟೀ, ಸೀಬೆಹಣ್ಣು, ನಕ್ಷತ್ರಹಣ್ಣು, ಕೆಂಪು ಮೆಣಸು, ನೆಲ್ಲಿಕಾಯಿ, ಓಮಕಾಳು, ವೀಳ್ಳೆದೆಲೆ, ಕಿಡ್ನಿ ಬೀನ್ಸ್, ಸೋಯಾ, ಬದನೆ ಮತ್ತು ಸಜ್ಜೆ, ಟೊಮೆಟೊ, ಕಪ್ಪು ಹಾಗೂ ನೀಲಿ ದ್ರಾಕ್ಷಿ, ಕೆಂಪು ಕೋಸು, ಕೆಂಪು ಬಣ್ಣದ ಸೊಪ್ಪು, ಕ್ಯಾರೆಟ್, ಟೊಮೆಟೊ, ಕುಂಬಳಕಾಯಿ, ಕಲ್ಲಂಗಡಿ, ಪರಂಗಿ, ಸೀಬೆ, ನಿಂಬೆ, ಕಿತ್ತಳೆ, ಚಕ್ಕೋತ, ಚೆರ್ರಿ ಮುಂತಾದವುಗಳಲ್ಲಿ ಇರುವ ವಿಶಿಷ್ಟವಾದ ಆಹಾರಾಂಶಗಳು ರೋಗಾಣುಗಳನ್ನು ದೇಹದೊಳಗೆ ಕೊಲ್ಲಲು ಸಹಾಯ ಮಾಡುತ್ತವೆ.
ಬೆಳ್ಳುಳ್ಳಿ, ಈರುಳ್ಳಿ, ಲೀಕ್ಸ್, ಕೋಸು, ಬ್ರುಸೆಲ್, ಸಾಸಿವೆ ಮುಂತಾದವುಗಳಲ್ಲಿ ರಕ್ತವನ್ನು ಶುದ್ಧೀಕರಿಸಿ ರಕ್ತದ ಆರೋಗ್ಯ ಸುಧಾರಿಸುವ ಅಂಶಗಳಿವೆ.
ಭಾರತೀಯರ ಆಹಾರದಲ್ಲಿ ಸಾಂಬಾರ ಪದಾರ್ಥಗಳ ಬಳಕೆ ಪ್ರಶಂಸನೀಯವಾದದ್ದು.ನಾವು ಸೇವಿಸುವ ಮೂಲಿಕೆ ಮತ್ತು ಸಾಂಬಾರ ಪದಾರ್ಥಗಳಲ್ಲಿ ಹಲವು ಬಗೆಯ ಆಹಾರಾಂಶಗಳಿವೆ. ಈ ಸಾಂಬಾರ ಪದಾರ್ಥಗಳು ಮತ್ತು ಗಿಡಮೂಲಿಕೆಗಳು ಆಹಾರದ ರುಚಿ ಹೆಚ್ಚಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಾಂಬಾರ ಪದಾರ್ಥಗಳು ಹೀಗಿವೆ: ಕೊತ್ತಂಬರಿ ಬೀಜ ಮತ್ತು ಅದರ ಎಲೆಗಳು, ಕರಿಬೇವು, ಅರಿಸಿನ, ಮೆಣಸು, ಜೀರಿಗೆ, ಏಲಕ್ಕಿ, ಮೆಣಸಿನಕಾಯಿ, ಶುಂಠಿ, ಇಂಗು, ಓಮ, ಕಪ್ಪು ಜೀರಿಗೆ, ಅಶ್ವಗಂಧ, ಜೇಷ್ಠಮಧು, ತುಳಸಿ, ದಾಲ್ಚಿನ್ನಿ, ಮಜ್ಜಿಗೆ ಹುಲ್ಲು, ಲವಂಗ ಮುಂತಾದವುಗಳು.
ರೋಗಾಣುಗಳಿಂದ ಹರಡುವ ಕೊರೊನಾ, ನೆಗಡಿ, ಕೆಮ್ಮು, ಕ್ಷಯ, ಜ್ವರದಂತಹ ಕಾಯಿಲೆಗಳಿಗೂ ಮತ್ತು ಅಸರ್ಮಪಕ ಜೀವನಶೈಲಿಯಿಂದ ಕಾಣಿಸುವ ಡಯಾಬಿಟಿಸ್, ಅತಿತೂಕ, ಬಂಜೆತನ, ಕ್ಯಾನ್ಸರ್, ಹೃದ್ರೋಗ, ಬಿ.ಪಿಯಂತಹ ಸಮಸ್ಯೆಗಳಿಗೂ ಈ ಆಹಾರಗಳು ರಾಮಬಾಣ.
ಈ ರೀತಿ ರೋಗನಿರೋಧಕ ಶಕ್ತಿ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ, ಅವು ದೇಹದಲ್ಲಿ ಔಷಧಿಯಂತೆ ಕೆಲಸ ಮಾಡುತ್ತವೆ. ಆದರೆ ಇವುಗಳಿಂದ ಯಾವುದೇ ಅಡ್ಡಪರಿಣಾಗಳಿರುವುದಿಲ್ಲ. ಉತ್ತಮ ಆಹಾರಾಭ್ಯಾಸವಿದ್ದಲ್ಲಿ ಕಾಯಿಲೆಗಳು ಹೆದರಿ ಓಡುತ್ತವೆ. ಏಕೆಂದರೆ ರೋಗಗಳಿಗೆ ಒಳ್ಳೆಯ ಆಹಾರಗಳನ್ನು ಕಂಡರೆ ಭಯ.
(ಲೇಖಕಿ ಆಹಾರತಜ್ಞೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.