ಮಾನಸಿಕ ಒತ್ತಡ ನಿರ್ವಹಣೆ, ಸಮತೋಲಿತ ಆಹಾರ ಸೇವನೆ, ಜೀವನ ಶೈಲಿಯಲ್ಲಿನ ಬದಲಾವಣೆ ಯಿಂದ ದೇಹದಲ್ಲಿ ಹಾರ್ಮೋನು ಪ್ರಮಾಣವನ್ನು ಸುಸ್ಥಿಯಲ್ಲಿಟ್ಟುಕೊಳ್ಳುವ ಮೂಲಕ , ಪಿಸಿಒಡಿ/ಪಿಸಿಒಎಸ್ ಸಮಸ್ಯೆ ನಿವಾರಣೆ ಮಾಡಬಹುದು.
***
ಶಿವಾನಿಗೆ ಒಳ್ಳೆಯ ಕೆಲಸವಿದೆ. ಕೈತುಂಬ ಸಂಬಳವೂ ಇದೆ. ಆದರೆ ಮನೆಯ ವಾತಾವರಣ, ಕೌಟುಂಬಿಕ ಸಮಸ್ಯೆಗಳು ಆಕೆಯನ್ನು ಹೈರಾಣವಾಗಿಸಿತ್ತು. ಮಾನಸಿಕ ಒತ್ತಡಕ್ಕೆ ಒಳಗಾದ ಆಕೆಗೆ ಪಿಸಿಒಡಿ (ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್) ಸಮಸ್ಯೆಯೂ ಬಾಧಿಸುತ್ತಿತ್ತು.
ಪರಿಹಾರಕ್ಕಾಗಿ ನನ್ನ ಬಳಿ ಬಂದ ಆಕೆಗೆ ಮೊದಲು, ಮಾನಸಿಕ ವಾಗಿ ಧೈರ್ಯ ತುಂಬಿದೆ. ಮನಸ್ಸು ಸ್ವಾಸ್ಥ್ಯವಾದ ಮೇಲೆ, ಸರಿಯಾದ ಆಹಾರ ಕ್ರಮ ಪಾಲಿಸಲು ತಿಳಿಸಿದೆ. ಶಿಸ್ತಿನ ಜೀವನ ಶೈಲಿಯ ಅಗತ್ಯವನ್ನು ತಿಳಿಸಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದ ಆಕೆಯ ಆರೋಗ್ಯ ಸುಧಾರಿಸಿತ್ತು.
ಒಮ್ಮೆಲೆ ಈ ಸಮಸ್ಯೆ ಬಗೆಹರಿಯಲಿಲ್ಲ. ನಿರಂತರ ಸಂಪರ್ಕದಿಂದ ಅವರ ಮಾನಸಿಕ ಒತ್ತಡ ಹೇಗಿದೆ ಎಂಬುದನ್ನು ಅರಿತು, ಸಲಹೆ ನೀಡಿದೆ . ಸರಿಯಾದ ಆಹಾರ ಕ್ರಮ ಹಾಗೂ ಚಟುವಟಿಕೆಯ ಜೀವನ ಶೈಲಿ ಅನುಸರಿಸಿದ ಕಾರಣ ಅವರ ಆರೋಗ್ಯ ಸುಧಾರಿಸಿತು.
ಪಿಸಿಒಡಿ/ಪಿಸಿಒಎಸ್‌ಗೆ ಏನು ಕಾರಣ?
ಪಿಸಿಒಡಿ/ಪಿಸಿಒಎಸ್(ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್/ಪಾಲಿಸ್ಟಿಕ್ ಓವೇರಿಯನ್ ಸಿಂಡ್ರೋಮ್ ) ಸಮಸ್ಯೆಗಳು ಹೆಣ್ಣು ಮಕ್ಕಳಲ್ಲಿ ದೇಹದ ತೂಕ ಹೆಚ್ಚಿಸುತ್ತದೆ. ಮಾತ್ರವಲ್ಲ, ಮಾನಸಿಕವಾಗಿ ಕುಗ್ಗಿಸಿಬಿಡುತ್ತದೆ. ಹುಡುಗಿಯ ಮುಖ ಹಾಗೂ ದೇಹ ತೂಕದಲ್ಲಾದ ಬದಲಾವಣೆ ಮದುವೆಗೂ ಅಡ್ಡಗಾಲಾದ ಉದಾಹರಣೆಗಳಿವೆ.
ಮಾನಸಿಕ ಒತ್ತಡಕ್ಕೆ ದೈಹಿಕ ಕಾರಣಗಳು ಉಂಟು. ದೇಹ ಸ್ರವಿಸುವ ಹಾರ್ಮೋನಿನಲ್ಲಿ ಉಂಟಾಗುವ ವ್ಯತ್ಯಯವು ದೇಹ ಹಾಗೂ ಮನಸ್ಸನ್ನು ಹಿಂಡಿ ಹೈರಾಣಾಗಿಸುತ್ತದೆ. ಅದರಲ್ಲಿಯೂ ಹೆಣ್ಣುಮಕ್ಕಳ ಆರೋಗ್ಯದಲ್ಲಿ ಹಾರ್ಮೋನ್‌ಗಳು ಪ್ರಮುಖ ಪಾತ್ರವಹಿ ಸುತ್ತವೆ. ಇವೆಲ್ಲವೂ ಪಿಸಿಒಡಿ/ಪಿಸಿಓಎಸ್ ಸಮಸ್ಯೆ ಉಲ್ಬಣಕ್ಕೆ ಮೂಲ ಕಾರಣಗಳು.
ಇದರ ಸಮಸ್ಯೆಗಳ ಲಕ್ಷಣ ಒಬ್ಬೊಬ್ಬರಿಗೆ ಒಂದೊಂದು ತರಹವಿರುತ್ತದೆ. ಬಹುತೇಕ ರಿಗೆ ತಮಗೇನಾಗುತ್ತಿದೆ ಎನ್ನುವುದರ ಅರಿವೂ ಇರುವುದಿಲ್ಲ. ಇದು ಹಾರ್ಮೋನ್‌ನ ಏರುಪೇರಿನಿಂದಾಗುವ ಸಮಸ್ಯೆಯಾದ್ದರಿಂದ ಅನೇಕ ಬಾರಿ ಮಾನಸಿಕ ಒತ್ತಡ ಹೆಚ್ಚುತ್ತದೆ. ಜತೆಗೆ ಅತಿಯಾಗಿ ತಿನ್ನಬೇಕೆಂಬ ತುಡಿತ (ಕ್ರೇವಿಂಗ್ಸ್) ಹೆಚ್ಚುತ್ತದೆ. ಇದು ಪಿಸಿಒಎಸ್ / ಪಿಸಿಒಡಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ. ಮನೆಯ ವಾತಾವರಣವೂ ಹದಗೆಡಲು ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಮನೆ ಮಂದಿಗೂ ಏನೂ ತೋಚದೆ ಇದನ್ನು ಹೇಗೆ ನಿಭಾಯಿಸುವುದೆನ್ನುವುದೂ ತಿಳಿಯದೆ ಸಮಸ್ಯೆ ಇನ್ನಷ್ಟು ಬೆಳೆಯುತ್ತದೆ.
ಆಹಾರ ಕ್ರಮದಲ್ಲಿದೆ ಪರಿಹಾರ
ಪಿಸಿಓಎಸ್/ಪಿಸಿಒಡಿ ನಿಯಂತ್ರಿಸಲು ಮೊದಲು ಬೇಕಿರುವುದೇ ಆಹಾರ ಕ್ರಮ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ. ಆದರೆ ಇಲ್ಲಿ, ತಿನ್ನುವುದನ್ನೇ ಹೆಚ್ಚಿಸುವ ಲಕ್ಷಣ ಕಾಣಿಸಿಕೊಳ್ಳುವುದರಿಂದ ಇದು ಹಲವು ಸಮಸ್ಯೆಯನ್ನು ಸೃಷ್ಟಿಸಬಹುದು. ಈ ಸಮಸ್ಯೆಯ ಮೂಲ ಹುಡುಕಿ ಸರಿಪಡಿಸಿಕೊಳ್ಳುವುದು ಬಹಳ ಮುಖ್ಯ.
ಕ್ರೇವಿಂಗ್ಸ್‌ಗೆ ಮುಖ್ಯ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು.
l→ಸಾಮಾನ್ಯವಾಗಿ ರಕ್ತದಲ್ಲಿನ ಸಕ್ಕರೆಯ ಅಂಶದ ಅಸಮತೋಲನ
l→ಆಹಾರದಲ್ಲಿ ಪ್ರೊಟೀನ್ ಅಂಶದ ಕೊರತೆ
l ದೇಹಕ್ಕೆ ಅಗತ್ಯ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ಸೇರದೇ ಇರುವುದು
l ಅತಿ ಕಡಿಮೆ ಕ್ಯಾಲೊರಿ ಆಹಾರ ಸೇವಿಸುವುದು,
l→ ನಿದ್ದೆಯ ಏರುಪೇರು ಅಥವಾ ಅತಿ ಕಡಿಮೆ ನಿದ್ದೆ ಮಾಡುವುದು
ಈ ಎಲ್ಲ ಅಂಶಗಳು ಪಿಸಿಒಎಸ್ /ಪಿಸಿಒಡಿಯ ಸಮಸ್ಯೆಯನ್ನು ಹೆಚ್ಚಿಸುತ್ತವೆ.
ಕ್ರೇವಿಂಗ್ಸ್ ನಿಭಾಯಿಸುವುದು ಹೇಗೆ?
ನನ್ನಲ್ಲಿ ಬರುವ ಇಂತಹ ಅನೇಕ ಜನರಲ್ಲಿ(ಪ್ರಕರಣಗಳಲ್ಲಿ) ತಿನ್ನುವ ತುಡಿತವನ್ನು ನಿಭಾಯಿಸಲಾರದೆ ಅತಿ ಹೆಚ್ಚು ಸಿಹಿ ಅಥವಾ ಜಂಕ್ ಫುಡ್‌ಗಳನ್ನು ತಿನ್ನುವ ಅಭ್ಯಾಸ ರೂಢಿಸಿಕೊಂಡವರೇ ಹೆಚ್ಚು. ಇಂಥವರಿಗೆ ‘ನೀವು ಮೊದಲು ಸಮತೋಲಿತ ಆಹಾರ ಸೇವಿಸುವುದನ್ನು ಅಭ್ಯಾಸ ಮಾಡಿ’ ಎಂದು ಸಲಹೆ ನೀಡುತ್ತೇನೆ. ಅದಕ್ಕೆ ಅವರು, ‘ಮೊದಲು ತಿನ್ನುವ ಚಟವನ್ನು ಹೇಗೆ ನಿಭಾಯಿಸುವುದು, ಅದರ ಬಗ್ಗೆ ತಿಳಿಸಿ’ ಎಂದು ಕೇಳುತ್ತಾರೆ.
ಅತಿಯಾಗಿ ತಿನ್ನುವ ಚಟ ಕಡಿಮೆ ಮಾಡಲು ಹೀಗೆ ಮಾಡಬಹುದು; ಮೊದಲಿಗೆ ನಿಮ್ಮ ಆಹಾರದಲ್ಲಿ ಅದರಲ್ಲೂ ಬೆಳಗಿನ ಉಪಾಹಾರದಲ್ಲಿ ಅತಿ ಹೆಚ್ಚು ನಾರಿನಂಶವಿರುವ ಆಹಾರವಿರಲಿ. ಜೊತೆಗೆ ಯಾವುದಾದರೂ ಪ್ರೊಟೀನ್ ಅಂಶವಿರುವ ಆಹಾರವನ್ನೇ ಸೇವಿಸಿ. ಉದಾಹರಣೆಗೆ ಬೆಳಗಿನ ಉಪಹಾರದಲ್ಲಿ ಪ್ರೊಟೀನ್‌ಗಾಗಿ ಮೊಟ್ಟೆ, ಮೊಳಕೆ ಕಾಳುಗಳು, ಪನೀರ್, ಬ್ರೊಕೊಲಿಯಂತಹ ತರಕಾರಿಗಳನ್ನು ಆಯ್ಕೆ ಮಾಡಬಹುದು. ಇದರಿಂದ ತಕ್ಕಮಟ್ಟಿಗೆ ಅತಿಯಾಗಿ ಆಹಾರ ತಿನ್ನುವುದನ್ನು ನಿಭಾಯಿಸಬಹುದು.
ಆಹಾರದಲ್ಲಿ ಪ್ರೊಟೀನ್ ಮತ್ತು ನಾರಿನಂಶವಿರುವ ಪದಾರ್ಥಗಳನ್ನು ಸೇರಿಸುವುದರಿಂದ ಕ್ರಮೇಣ ರಕ್ತದಲ್ಲಿನ ಸಕ್ಕರೆಯ ಪ್ರಮಾಣವೂ ಸಮತೋಲನಕ್ಕೆ ಬರುತ್ತದೆ. ದೇಹಕ್ಕೆ ಸರಿಯಾದ ಪೋಶಕಾಂಶಗಳೂ ಲಭ್ಯವಾಗುತ್ತವೆ. ಈ ಅಂಶವೂ ತಿನ್ನುವ ತುಡಿತಕ್ಕೆ ಕಡಿವಾಣ ಹಾಕುತ್ತದೆ. ಸಮತೋಲಿತ ಆಹಾರ ಒಳ್ಳೆಯ ನಿದ್ದೆಗೂ ಸಹಕಾರಿ.
ಕೇವಲ ಆಹಾರ ಕ್ರಮವನ್ನು ಸರಿಪಡಿಸಿಕೊಂಡರಷ್ಟೇ ಸಾಲದು, ಅದಕ್ಕೆ ತಕ್ಕಂತೆ ದೈಹಿಕ ಶ್ರಮವೂ ಅಗತ್ಯ. ಹಾಗಾಗಿ, ಆಹಾರದ ಜೊತೆಗೆ, ನಿತ್ಯ ನಡಿಗೆ ಮತ್ತು ವ್ಯಾಯಾಮಗಳನ್ನು ಅನುಸರಿಸಿ. ಆಹಾರ ಕ್ರಮದಿಂದ ದೇಹಕ್ಕೆ ಉತ್ತಮ ಪೋಷಕಾಂಶ ಸಿಕ್ಕರೆ, ದೇಹದ ಚಲನೆಯಿಂದ ರಕ್ತ ಸಂಚಾರ ಸಕ್ರಿಯವಾಗುತ್ತದೆ. ತಿಂದ ಆಹಾರ ಶಕ್ತಿಗಾಗಿ ವಿನಿಯೋಗಿಸಲ್ಪಟ್ಟು, ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಭಾಯಿಯಲು ಸಹಕಾರಿಯಾಗುತ್ತದೆ.
ಸುಸ್ಥಿತಿಯಲ್ಲಿರಲಿ ಹಾರ್ಮೋನ್ ಪ್ರಮಾಣ
ದೇಹಾರೋಗ್ಯವನ್ನು ಉತ್ತಮವಾಗಿಡಲು ಹಾಗೂ ದೇಹದಲ್ಲಿನ ಹಾರ್ಮೋನ್ ಪ್ರಮಾಣವನ್ನು ಸಮತೋಲನದಲ್ಲಿಡಲು ಜೀರ್ಣಾಂಗದಲ್ಲಿರುವ ಎಲ್ಲ ಸೂಕ್ಷಾಣುಜೀವಿಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಹೆಚ್ಚು ಹೆಚ್ಚು ಸಕ್ಕರೆಯ ಅಂಶದ ಆಹಾರವನ್ನು ದೇಹಕ್ಕೆ ಸೇರಿಸುವುದರಿಂದ ಅನಗತ್ಯ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಇದು ಮತ್ತೆ ಮತ್ತೆ ಸಕ್ಕರೆಯ ಅಂಶಗಳುಳ್ಳ ಆಹಾರವನ್ನು ತಿನ್ನುವಂತೆ ಉತ್ತೇಜಿಸುತ್ತದೆ.
ಹಾಗಾಗಿ, ಆಹಾರದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆ ಮಾಡಿ. ಕಾರ್ಬೊಹೈಡ್ರೇಟ್‌ನ ಅಂಶವಿರುವ ಆಹಾರವನ್ನು ಕಡಿತಗೊಳಿಸಿ. ಇದರ ಬದಲಿಗೆ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅಗತ್ಯವಾದ ಮತ್ತು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾಗುವ ಪ್ರೊಬಯೋಟಿಕ್ಸ್‌ವುಳ್ಳ ಮೊಸರು ಮತ್ತು ಹುದುಗುವಿಕೆಯ ಪ್ರಕ್ರಿಯೆಗೆ ಒಳಗಾದ ಆಹಾರಗಳು ಅಥವಾ ಫರ್ಮೆಂಟೆಡ್ ಆಹಾರಗಳನ್ನು ಸೇವಿಸುವುದು ಉತ್ತಮ. ಇದರ ಜೊತೆಗೆ, ಶುಂಠಿ, ಗ್ರೀನ್ ಟೀ, ಪಪ್ಪಾಯ, ಮೀನಿನ ಆಹಾರ ಪದಾರ್ಥಗಳನ್ನು ಸೇವಿಸಬಹುದು.
ದೇಹದಲ್ಲಿನ ಹಾರ್ಮೊನಿನ ಏರಿಳಿತವನ್ನು ನಿಭಾಯಿಸಲು ಕುಂಬಳ, ಅಗಸೆಯಂತಹ ವಿವಿಧ ಬೀಜಗಳು, ಮೊಳಕೆ ಕಾಳುಗಳು ಮತ್ತು ಹಣ್ಣುಗಳ ಸೇವನೆ ಅತ್ಯಗತ್ಯ. ಮುಖ್ಯವಾಗಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಭಾಯಿಸಿದಲ್ಲಿ ಈ ಪಿಸಿಒಎಸ್/ಪಿಸಿಒಡಿಯ ಲಕ್ಷಣಗಳು ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ.
ಸಮತೋಲಿತ ದೇಹತೂಕ
ಮದುವೆ ಹಾಗೂ ಮಕ್ಕಳಾದ ಮೇಲೆ ಹೆಣ್ಣುಮಕ್ಕಳ ದೇಹತೂಕದಲ್ಲಿ ಬದಲಾವಣೆಯಾಗುತ್ತದೆ. ಹಾಗಂತ ಸುಮ್ಮನಿರಬಾರದು. ದೇಹತೂಕ ಹೆಚ್ಚಾದಾಗ, ತೂಕ ಹೆಚ್ಚಾಗಿದ್ದಕ್ಕೆ ಕಾರಣವನ್ನು ತಿಳಿಯಲು ಪ್ರಯತ್ನಿಸಬೇಕು. ಪಿಸಿಒಎಸ್/ಪಿಸಿಒಡಿಯಿಂದ ದೇಹದ ತೂಕ ಹೆಚ್ಚುತ್ತದೆ. ದೇಹ ತೂಕ ಹೆಚ್ಚಲು ಇದೇ ಕಾರಣವಾದರೆ, ಮೊದಲು ತೂಕ ಕಡಿಮೆ ಮಾಡಿಕೊಳ್ಳಲು ಮೇಲೆ ತಿಳಿಸಿದ ಆಹಾರ ಕ್ರಮದ ಜೊತೆಗೆ ನಡಿಗೆ, ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳನ್ನು ಅನುಸರಿಸಿ.
ಓಟ್ಸ್ ಪುಡ್ಡಿಂಗ್
ಬೇಕಾಗುವ ಸಾಮಗ್ರಿಗಳು: ಅರ್ಧ ಕಪ್ ರೋಲ್ಡ್ ಓಟ್ಸ್, ಒಂದು ಟೇಬಲ್ ಸ್ಪೂನ್ ಚಿಯಾ ಬೀಜಗಳು, ಕಾಲು ಕಪ್ ಹಾಲು ಅಥವಾ (ಕೊಬ್ಬರಿ ಹಾಲು), ಒಂದು ಟೇಬಲ್ ಸ್ಪೂನ್ ತುರಿದ ಕಾಯಿ, ಜೇನು ತುಪ್ಪ, ಚಕ್ಕೆ ಪುಡಿ, ಕಳಿತ ಬಾಳೆಹಣ್ಣು.
ಮಾಡುವ ವಿಧಾನ: ಕಳಿತ ಬಾಳೆಹಣ್ಣು ಬಿಟ್ಟು ಎಲ್ಲವನ್ನು ಮಿಕ್ಸಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಅದನ್ನು ರಾತ್ರಿ ಇಡೀ ಫ್ರಿಜ್‌ನಲ್ಲಿಡಿ. ಬೆಳಿಗ್ಗೆ ಇದಕ್ಕೆ ಕಳಿತ ಬಾಳೆಹಣ್ಣನ್ನು ಹಾಕಿ, ಡ್ರೈಫ್ರೂಟ್ಸ್, ಹಣ್ಣುಗಳನ್ನು ಮಿಕ್ಸ್ ಮಾಡಿಕೊಂಡು ತಿನ್ನಿ.
ಸ್ಮೂದಿ
ಬೇಕಾಗುವ ಸಾಮಗ್ರಿಗಳು : ಒಂದು ಚಮಚದಷ್ಟು ಕುಂಬಳಬೀಜ. ಆರು ಬಾದಾಮಿ ಬೀಜ. ಆರು ಒಣದ್ರಾಕ್ಷಿ. ಈ ಮೂರನ್ನೂ ನೆನೆಸಿಟ್ಟಿರಬೇಕು. ನಂತರ ಒಂದು ಲೋಟ ನೀರು. ಒಂದು ಚಮಚ ಕೊಕೊ ಪೌಡರ್, ಒಂದು ಬಾಳೆಹಣ್ಣು, ಒಂದು ಟೇಬಲ್ ಸ್ಪೂನ್ ಅಗಸೆ ಬೀಜ ತೆಗೆದುಕೊಳ್ಳಿ.
ಮಾಡುವ ವಿಧಾನ: ಮೇಲೆ ಹೇಳಿರುವ ಎಲ್ಲ ವಸ್ತುಗಳನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಕತ್ತರಿಸಿದ ಬಾದಾಮಿ, ಕುಂಬಳಬೀಜವನ್ನು ಸೇರಿಸಿ. ಈಗ ಸ್ಮೂದಿ ಸವಿಯಲು ರೆಡಿ.
(ಲೇಖಕಿ ಆಹಾರತಜ್ಞೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.