ADVERTISEMENT

ಸ್ಕ್ಯಾನಿಂಗ್‌ನ ಮೊದಲು...

ಡಾ.ಕುಶ್ವಂತ್ ಕೋಳಿಬೈಲು
Published 16 ಅಕ್ಟೋಬರ್ 2023, 23:53 IST
Last Updated 16 ಅಕ್ಟೋಬರ್ 2023, 23:53 IST
   

ಆರೋಗ್ಯ ಮತ್ತು ಕಾಯಿಲೆಗಳ ಕುರಿತಾದ ಸ್ಪಷ್ಟ ಮಾಹಿತಿಗಳು ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಬ್ಬರಿಗೂ ಸುಲಭವಾಗಿ ಲಭ್ಯವಾಗುತ್ತವೆ. ಈ ಮಾಹಿತಿಗಳನ್ನು ಜನರು ಕಾಯಿಲೆಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಲು ಬಳಸಿಕೊಂಡರೆ ಅದರಿಂದ ರೋಗಿಗಳಿಗೆ ಮಾತ್ರವಲ್ಲದೆ ವೈದ್ಯರಿಗೂ ಅನುಕೂಲವಾಗುತ್ತಿತ್ತು.

ಅದರೆ ಇತ್ತೀಚಿನ ವರ್ಷಗಳಲ್ಲಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯಿಂದ ಜನರು ತಮ್ಮ ಕಾಯಿಲೆಯನ್ನು ಪತ್ತೆ ಹಚ್ಚಲು ಮತ್ತು ಸ್ವಯಂ ಚಿಕಿತ್ಸೆ ಪಡೆದುಕೊಳ್ಳಲು ಯತ್ನಿಸುವುದರಿಂದ ಅನೇಕ ಅಪಾಯಗಳು ಸಂಭವಿಸುತ್ತಿವೆ. ಶಿಕ್ಷಿತ ಮತ್ತು ಶ್ರೀಮಂತ ವರ್ಗದವರು ತಮ್ಮ ಮನಸ್ಸಿನಲ್ಲಿ ತಮ್ಮ ಆರೋಗ್ಯದ ಕುರಿತು ಅನುಮಾನಗಳು ಬಂದಾಗಲೆಲ್ಲ ಅಂತರ್ಜಾಲದಲ್ಲಿ ತಡಕಾಡಿ ತಾವೇ ಸ್ವಯಂ ಅನೇಕ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಾರೆ. ಜನರ ಈ ಸಂಶಯಗಳ ಮತ್ತು ಅಲ್ಪಜ್ಞಾನದ ಲಾಭವನ್ನು ಉಪಯೋಗಿಸಿಕೊಂಡು ಕಾರ್ಪೊರೇಟ್ ಆರೋಗ್ಯ ಸಂಸ್ಥೆಗಳು ಇಂತಹ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ರೋಗಿಗಳನ್ನು ಪ್ರೋತ್ಸಾಹಿಸುತ್ತಬಂದಿವೆ. ಅತಿ ದುಬಾರಿಯಾದ ಪರೀಕ್ಷೆಗಳು ಕಾಯಿಲೆಗಳನ್ನು ಪತ್ತೆ ಹಚ್ಚುವಲ್ಲಿ ಹೆಚ್ಚು ಉಪಯುಕ್ತವೆಂಬ ತಪ್ಪು ನಂಬಿಕೆ ಜನಸಾಮಾನ್ಯರ ಮನಸ್ಸಿನಲ್ಲಿದೆ. ಹಾಗಾಗಿ ಅವರಲ್ಲಿ ರೋಗಲಕ್ಷಣಗಳು ಕಾಣಿಸಿಕೊಂಡಾಗ ಅವರು ವೈದ್ಯರ ಸಲಹೆಯನ್ನು ಪಡೆದು ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳದೆ ಯಾವುದೋ ದುಬಾರಿ ಪರೀಕ್ಷೆಗಳ ಮೊರೆ ಹೋಗುತ್ತಾರೆ.

ಇಂದಿನ ದಿನಗಳಲ್ಲಿ ನಮ್ಮ ಜನಸಾಮಾನ್ಯರು ಅವರ ದೇಹದ ಯಾವ ಅಂಗಾಂಗಗಳಲ್ಲಿ ಸಮಸ್ಯೆ ಕಾಣಿಸಿಕೊಂಡರೂ, ಕೂಡಲೇ ಅವರು ಆ ಅಂಗಾಂಗದ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಬಯಸುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಯಾವುದೆ ಸ್ಕಾನಿಂಗ್ ಅಗತ್ಯವಿಲ್ಲದಿದ್ದರೂ ತಮ್ಮ ಮನಸ್ಸಿನ ನೆಮ್ಮದಿಗಾಗಿ ಸ್ಕ್ಯಾನಿಂಗ್ ಮೊರೆ ಹೋಗುವವರು ಇದ್ದಾರೆ. ಇಂದು ಒಂದು ಎಕ್ಸ್‌–ರೇ ಮಾಡಿಸಲು ಸುಮಾರು ಮುನ್ನೂರು ರೂಪಾಯಿ ಖರ್ಚು ಮಾಡಬೇಕಾಗಿ ಬಂದರೆ ದೇಹದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಸಾವಿರ ರೂಪಾಯಿಗೂ ಹೆಚ್ಚು ಖರ್ಚಾಗುತ್ತದೆ. ‘ಸಿಟಿ ಸ್ಕ್ಯಾನ್’ (ಕಂಪ್ಯೂಟರೈಸ್ಡ್ ಟೊಮೊಗ್ರಫಿ) ಮಾಡಿಸಿಕೊಳ್ಳಲು ಸುಮಾರು ಮೂರರಿಂದ ನಾಲ್ಕು ಸಾವಿರ ಖರ್ಚು ಬಂದರೆ ದೇಹದ ಯಾವುದೇ ಭಾಗದ ‘ಎಂಆರ್‌ಐ’ (ಮ್ಯಾಗ್ನೆಟಿಕ್ ರೆಸನೆನ್ಸ್ ಇಮೇಜಿಂಗ್) ಮಾಡಿಸಿಕೊಳ್ಳಲು ಸುಮಾರು ಏಳರಿಂದ ಎಂಟು ಸಾವಿರ ರೂಪಾಯಿಗಳಷ್ಟು ಖರ್ಚು ಬರುತ್ತದೆ. ಈ ವಿವಿಧ ಸ್ಕ್ಯಾನಿಂಗ್ ಮಾಡಿಸುವ ಯಂತ್ರಗಳು ಕೋಟ್ಯಂತರ ರೂಪಾಯಿಗಳಷ್ಟು ಬೆಲೆ ಬಾಳುತ್ತದೆ. ಕೆಲವು ದಶಕಗಳ ಹಿಂದೆ ಆಸ್ಪತ್ರೆಯ ಪ್ರತಿಷ್ಠೆಯು ಅಲ್ಲಿ ಕೆಲಸ ಮಾಡುವ ಹೆಸರಾಂತ ವೈದ್ಯರಿಂದ ನಿರ್ಧಾರವಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ದುಬಾರಿ ಯಂತ್ರಗಳನ್ನು ಹೊಂದಿರುವ ಆಸ್ಪತ್ರೆಯು ಹೆಚ್ಚು ಪ್ರತಿಷ್ಠಿತ ಎಂದೆನಿಸಿಕೊಳ್ಳುತಿದೆ. ಈ ಸ್ಕ್ಯಾನಿಂಗ್ ಪರೀಕ್ಷೆಗಳ ವಿಚಾರಕ್ಕೆ ಬಂದಾಗ ದೇಹದ ವಿವಿಧ ಭಾಗಗಳಲ್ಲಿ ಕಂಡುಬರುವ ವಿವಿಧ ರೋಗಗಳನ್ನು ಪತ್ತೆ ಹಚ್ಚುವಲ್ಲಿ ಯಾವ ಮಾದರಿಯ ಸ್ಕ್ಯಾನಿಂಗ್ ಹೆಚ್ಚು ಉಪಯುಕ್ತವೆಂದು ವೈದ್ಯರು ಮಾತ್ರ ಸರಿಯಾದ ನಿರ್ಧಾರಕ್ಕೆ ಬರಬಲ್ಲರು. ಪರೀಕ್ಷೆ ದುಬಾರಿಯಾಗಿರುವ ಏಕೈಕ ಕಾರಣದಿಂದಾಗಿ ಅದು ಉಪಯುಕ್ತ ಪರೀಕ್ಷೆ ಎಂದೆನಿಸಿಕೊಳ್ಳದು.

ADVERTISEMENT

ಉದಾಹರಣೆಗೆ, ಎಲುಬುಗಳ ಸಮಸ್ಯೆಗಳನ್ನು, ಎಕ್ಸ್‌–ರೇ ಮತ್ತು ಸಿಟಿ ಸ್ಕ್ಯಾನಿಂಗ್ ಹೆಚ್ಚು ಸಮರ್ಪಕವಾಗಿ ಪತ್ತೆ ಹಚ್ಚಬಲ್ಲದು ಮತ್ತು ಮೃದು ಅಂಗಾಂಗಗಳು ಎಂಆರ್‌ಐ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನಿನಲ್ಲಿ ಉತ್ತಮವಾಗಿ ಕಾಣಿಸುತ್ತದೆ. ಕರುಳಿನಲ್ಲಿ ಛೇದವಾಗಿರುವ ಕಾರಣದಿಂದ ಹೊಟ್ಟೆಯೊಳಗೆ ಗಾಳಿ ತುಂಬಿಕೊಂಡಿದ್ದರೆ ಅದರ ಲಕ್ಷಣಗಳು ಸರಳವಾದ ಎಕ್ಸ್–ರೇಯಲ್ಲಿ ಕಾಣಸಿಗುವಷ್ಟು ಉತ್ತಮವಾಗಿ ಹೊಟ್ಟೆಯ ಸ್ಕ್ಯಾನಿಂಗ್‌ನಲ್ಲಿ ಕಾಣಿಸುವುದಿಲ್ಲ. ಅತ್ಯಂತ ಅಗ್ಗದಲ್ಲಿ ಲಭ್ಯವಿರುವ ‘ಇಸಿಜಿ’ ಪರೀಕ್ಷೆಯು ‘ಎಕೋ ಸ್ಕ್ಯಾನಿಂಗ್‌’ಗಿಂತ ಹೆಚ್ಚು ನಿಖರವಾಗಿ ಹೃದಯ ಬಡಿತದ ಸಮಸ್ಯೆಗಳನ್ನು ಪತ್ತೆ ಹಚ್ಚಬಲ್ಲದು. ತಲೆಗೆ ಏಟು ಬಿದ್ದಾಗ ಮೆದುಳಿನೊಳಗಡೆ ಉಂಟಾಗುವ ರಕ್ತಸ್ರಾವವನ್ನು ಸಿಟಿ ಸ್ಕ್ಯಾನ್ ಕೆಲವೇ ನಿಮಿಷಗಳಲ್ಲಿ ಪತ್ತೆ ಹಚ್ಚಬಲ್ಲದು. ಎಂಆರ್‌ಐ ಸ್ಕ್ಯಾನ್ ಮೆದುಳಿನ ಬಗ್ಗೆ ಹೆಚ್ಚು ಸ್ಪಷ್ಟವಾದ ಮಾಹಿತಿಯನ್ನು ನೀಡಬಲ್ಲದು, ನಿಜ. ಆದರೆ ಈ ಪರೀಕ್ಷೆಯನ್ನು ನಡೆಸಲು ಹಲವು ಗಂಟೆಗಳು ತಗಲುವುದರಿಂದ ರೋಗಿಯ ತಲೆಗೆ ಪೆಟ್ಟು ಬಿದ್ದ ತುರ್ತುಸ್ಥಿತಿಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಮಾಡುತ್ತ ಕಾಲಹರಣವನ್ನು ಮಾಡಲಾಗುವುದಿಲ್ಲ. ಸುಮಾರು ಐವತ್ತು ರುಪಾಯಿಗೆ ಲಭ್ಯವಿರುವ ಮೂತ್ರಪರೀಕ್ಷೆಯು ಕಿಡ್ನಿಯ ಆರೋಗ್ಯ ಮತ್ತು ಕಾಯಿಲೆಗಳ ಬಗ್ಗೆ ನೀಡಬಲ್ಲ ಮಾಹಿತಿಯನ್ನು ಯಾವ ದುಬಾರಿ ಸ್ಕ್ಯಾನಿಂಗ್ ಕೂಡ ನೀಡಲಾರದು. ಮೆದುಳಿನ ಜ್ವರ ಮತ್ತು ಸೋಂಕಿನ ಸಂದರ್ಭದಲ್ಲಿ ಬೆನ್ನಿನ ಹುರಿಯಿಂದ ಸೂಜಿಯ ಮೂಲಕ ದ್ರವವನ್ನು ತೆಗೆದು ಅದರಲ್ಲಿ ಸೂಕ್ಷ್ಮಜೀವಿಗಳನ್ನು ಪತ್ತೆ ಹಚ್ಚಬೇಕಾಗಿ ಬರುತ್ತದೆ. ರೋಗವನ್ನು ಪತ್ತೆ ಹಚ್ಚುವಲ್ಲಿ ಮತ್ತು ಮುಂದಿನ ಚಿಕಿತ್ಸೆ ನೀಡುವ ಬಗ್ಗೆ ಈ ಪರೀಕ್ಷೆ ಕೊಡುವಷ್ಟು ನಿಖರ ಮಾಹಿತಿ ಸ್ಕ್ಯಾನಿಂಗ್‌ನಿಂದ ಲಭ್ಯವಾಗದು. ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ಉಂಟಾಗುವ ಹೊಟ್ಟೆಯೊಳಗಿನ ಹುಣ್ಣನ್ನು ಯಾವ ಸ್ಕ್ಯಾನಿಂಗ್ ಮೂಲಕವೂ ನೋಡಲಾಗದು. ಹೊಟ್ಟೆಯಲ್ಲಿ ಆ್ಯಸಿಡ್ ಉತ್ಪಾದನೆಯನ್ನು ಕಡಿಮೆ ಮಾಡಬಲ್ಲ ಔಷಧಗಳನ್ನು ಬಳಸಿದಾಗ ರೋಗಿಯು ಗುಣಮುಖವಾಗುವ ಆಧಾರದಲ್ಲಿ ಈ ರೋಗವನ್ನು ಪತ್ತೆ ಮಾಡಬೇಕಾಗುತ್ತದೆ.

ಎಕ್ಸ್‌–ರೇ ಮತ್ತು ಸಿಟಿ ಸ್ಕ್ಯಾನ್‌ಗಳ ಸಮಯದಲ್ಲಿ ಹೊರಬರುವ ವಿಕಿರಣಗಳು ದೇಹದ ಮೇಲೆ ಮಾರಕ ಪರಿಣಾಮಗಳನ್ನು ಉಂಟುಮಾಡಬಹುದು. ಒಂದು ಸಿಟಿ ಸ್ಕ್ಯಾನಿನ ಸಮಯದಲ್ಲಿ ಹೊರಬರುವ ವಿಕಿರಣಗಳು ಸುಮಾರು ನೂರು ಎಕ್ಸ್‌–ರೇ ಮಾಡಿಸಿದಾಗ ಹೊರಬರುವ ವಿಕಿರಣಗಳಿಗೆ ಸಮವಾಗಿರುವ ಕಾರಣದಿಂದ ಯಾವುದೇ ರೋಗಿಯು ವೈದ್ಯರ ಸಲಹೆ ಪಡೆಯದೆ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಬಾರದು. ಈ ವಿಕಿರಣಗಳು ದೇಹದೊಳಗೆ ವಿವಿಧ ದುಷ್ಪರಿಣಾಮಗಳನ್ನು ಬೀರುವುದರ ಜೊತೆಗೆ ಕ್ಯಾನ್ಸರ್ ರೋಗಕ್ಕೂ ಕಾರಣವಾಗುತ್ತದೆ. ಗರ್ಭಿಣಿಯರಲ್ಲಿ ಬೆಳೆಯುತ್ತಿರುವ ಶಿಶುವಿಗೆ ವಿಕಿರಣದಿಂದ ಅತಿ ಹೆಚ್ಚು ಅಪಾಯವಾಗುವ ಸಾಧ್ಯತೆಯಿರುವುದರಿಂದ ಗರ್ಭಿಣಿಯರು ಯಾವುದೇ ಪರೀಕ್ಷೆ ಮಾಡಿಸಿಕೊಳ್ಳುವ ಮೊದಲು ಅಥವಾ ಯಾವುದೇ ಔಷಧವನ್ನು ಸೇವಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆಯುವುದು ಅತ್ಯಗತ್ಯ. ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಮಾಹಿತಿಯನ್ನು ತಜ್ಞವೈದ್ಯರ ಸಲಹೆಯನ್ನು ಪಡೆಯದೆ ಮತ್ತು ವಿವೇಕವನ್ನು ಉಪಯೋಗಿಸದೆ ಬಳಸಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.