‘ನಾವು ಯಾರ ಮಾತಿಗೂ ತಲೆಕೆಡಿಸಿಕೊಳ್ಳದ ಧೀರರು’ ಅಂತ ನೀವು ಭುಜ ಕೊಡವಿ ಮುಂದೆ ಸಾಗಬಹುದು. ಆದರೆ ಬಹುಜನರಿಗೆ ಇದು ಸಾಧ್ಯವಾಗದ ಮಾತು. ಅದರಲ್ಲಿಯೂ ವಿಶೇಷವಾಗಿ ಮಹಿಳೆಯರು ‘ಇತರರು ಏನೆನ್ನುತ್ತಾರೋ’ ಎಂದು ಹೆದರಿ, ತಮಗೆ ಬೇಕೆನಿಸಿದರೂ ಅಂತಹ ಸಂಗತಿಗಳಿಂದ ದೂರವಿರುವುದು, ಇತರರ ಟೀಕೆಯನ್ನು ಮನಸ್ಸಿನಲ್ಲಿರಿಸಿಕೊಂಡು ಬಹುಕಾಲ ಅದರ ಬಗ್ಗೆಯೇ ‘ಚಿಂತನ-ಮಂಥನ’ ನಡೆಸುವುದು ಸಾಮಾನ್ಯ. ಆಡುಮಾತಿನಲ್ಲಿ ನಿತ್ಯ ಎದುರಿಸುವ ಟೀಕೆ-ವ್ಯಂಗ್ಯ-ಚುಚ್ಚುಮಾತುಗಳೂ ಇದೇ ವಿಷಯಕ್ಕೆ ಸಂಬಂಧಿಸಿವೆ. ಔಪಚಾರಿಕವಾಗಿ ಕಚೇರಿಗಳಲ್ಲಿ ನಡೆಯುವ ‘ಫೀಡ್‌ಬ್ಯಾಕ್’ ಎಂಬ ‘ಪ್ರತಿಕ್ರಿಯೆ’- ಪ್ರಕ್ರಿಯೆಗಳು ಇದರ ಮತ್ತೊಂದು ಆರೋಗ್ಯಕರ ರೂಪವೆನ್ನಬಹುದು.
ಸಾಮಾನ್ಯವಾಗಿ ಮಕ್ಕಳು ಜಗಳವಾಡುವಾಗ ಒಬ್ಬರನ್ನೊಬ್ಬರು ಟೀಕೆ ಮಾಡುತ್ತಾರಷ್ಟೆ. ಆಗೆಲ್ಲ ಹಿರಿಯರು ಮಕ್ಕಳಿಗೆ ಹೇಳುವುದಿದೆ. ಗೋಡೆಗೆ ಚೆಂಡು ಹೊಡೆದರೆ ಅದು ತಿರುಗಿ ನಮಗೆ ಬಂದು ಬೀಳುತ್ತದಷ್ಟೆ. ಹಾಗೆಯೇ ಸುಮ್ಮನಿದ್ದು ಬಿಟ್ಟರೆ ಇನ್ನೊಬ್ಬರಾಡಿದ ಮಾತು ಅವರಿಗೇ ವಾಪಸ್ ಹೋಗುತ್ತದೆ. ಆದರೆ ಮಕ್ಕಳಿಗೆ ಹೀಗೆ ಸುಮ್ಮನಿರುವಂತೆ ಬೋಧಿಸುವ ನಾವು ನಮಗೆ ಇತರರು ಟೀಕಿಸಿದಾಗ ಮಾತ್ರ ಈ ಸೂತ್ರವನ್ನು ಪಾಲಿಸಲು ಸಾಧ್ಯವಾಗುವುದಿಲ್ಲ. ಏಕೆ?! ಕಚೇರಿಯ ಕೊಠಡಿಯಲ್ಲಿ ಮೇಲಧಿಕಾರಿ ಕೊಡುವ ‘ಫೀಡ್‌ಬ್ಯಾಕ್’ ಎಂಬ ಔಪಚಾರಿಕೆ ರೀತಿಯ ಪ್ರಕ್ರಿಯೆಯಂತೆ ಇತರರ ಟೀಕೆ-ಚುಚ್ಚುಮಾತುಗಳನ್ನು ನಾವು ಗ್ರಹಿಸುವುದಿಲ್ಲ. ಕಚೇರಿ ಮೇಲಧಿಕಾರಿ ಕೆಲಸದ ಭಾಗವಾಗಿ ಅದನ್ನು ಹೇಳಿರಬಹುದಾದರೆ, ಇತರರ ಟೀಕೆ-ಚುಚ್ಚುಮಾತು ನಮ್ಮನ್ನು ನೋಯಿಸಲೆಂದೇ ಹೇಳಿದ, ಕೆಲಸಕ್ಕೆ ಬಾರದ ಕ್ರಿಯೆಗಳು ಎಂಬುದು ನಮ್ಮ ಅನಿಸಿಕೆ.
ಆದರೆ ಸ್ವಲ್ಪ ಯೋಚಿಸಿ ನೋಡಿ. ಟೀಕೆ, ಚುಚ್ಚುಮಾತು, ವ್ಯಂಗ್ಯಗಳೆಲ್ಲ ಸುತ್ತಲ ಸಮಾಜದ ಜತೆಗೆ ನಮ್ಮ ಸಂಬಂಧ ಹೆಣೆದುಕೊಂಡಿರುವ ಗುರುತು. ಅದನ್ನು ಸಮರ್ಪಕವಾಗಿ ಎದುರಿಸುವುದು, ನಿಭಾಯಿಸಲು ಕಲಿಯುವುದು, ಅದರಲ್ಲಿರುವ ಸತ್ಯಾಂಶವನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಮತ್ತಷ್ಟು ಮೇಲೇರಲು ಪ್ರಯತ್ನಿಸುವುದು ಕಲಿಯಲೇಬೇಕಾದ ಜೀವನ ಕೌಶಲಗಳು. ಕಚೇರಿಯಲ್ಲಿ ನಡೆಯುವ ‘ಫೀಡ್‌ಬ್ಯಾಕ್’ ಪ್ರಕ್ರಿಯೆ ಹಿಂದೆ ಈ ಉದ್ದೇಶವೇ ಇರುತ್ತದೆ.
ಯಾವಾಗಲಾದರೊಮ್ಮೆ ಟೀಕೆ-ವ್ಯಂಗ್ಯಗಳನ್ನು ನಾವು ಮನುಷ್ಯ ಸಹಜವಾಗಿ ತೋರಬಹುದು. ಆದರೆ ಕೆಲ ವ್ಯಕ್ತಿಗಳು ಇದರಲ್ಲಿ ಪರಿಣತಿ ಗಳಿಸಿರುತ್ತಾರೆ. ಸುಮ್ಮನೇ ಕಣ್ಣು ಮುಚ್ಚಿ ಅರೆಕ್ಷಣ ಯೋಚಿಸಿ ನೋಡಿ. ಪರಿಚಿತ ವಲಯದಲ್ಲಿ ಕಿರಿಕಿರಿಯುಂಟು ಮಾಡಿರುವ ವ್ಯಕ್ತಿಯೊಬ್ಬರು ಕಣ್ಣಮುಂದೆ ಬಂದೇ ಬರುತ್ತಾರೆ. ಅವರ ಟೀಕೆಗಳಿಂದ ಸಾಕಷ್ಟು ನೋವನ್ನು ಅನುಭವಿಸಿರುತ್ತೀರಿ. ಮಾತನಾಡುವುದನ್ನೇ ಬಿಟ್ಟಿರುತ್ತೀರಿ. ಕೆಲ ಸಮಾರಂಭಗಳಿಗೆ ಅವರು ಬರುತ್ತಾರೆಂದರೆ ಹೋಗುವುದನ್ನೇ ತಪ್ಪಿಸಿಕೊಳ್ಳುತ್ತೀರಿ. ಅವರು ದೂರದಲ್ಲಿ ಕಾಣುತ್ತಿದ್ದಾರೆಂದರೆ ದಾರಿಯನ್ನೇ ಬದಲಿಸಿರುತ್ತೀರಿ. ಇಂತಹ ಹಲವು ವಿಧದ ಕಿರಿಕಿರಿ ನಿಮಗಾಗಿರಬಹುದು. ಚುಚ್ಚುಮಾತಿನಿಂದ ನೋಯಿಸುವ, ಛಲಬಿಡದ ತ್ರಿವಿಕ್ರಮನಂತೆ ಟೀಕಿಸುವ ‘ವಿಶೇಷ ಪ್ರತಿಭೆ’ ಅವರಿಗಿದೆ ಎಂಬುದನ್ನು ನೀವು ಒಪ್ಪುತ್ತೀರಿ.! ಇದನ್ನು ನಿಭಾಯಿಸುವುದು ಹೇಗೆ? ಅವರಿಂದ ‘ನೋವು’ ಪಡೆಯದಿರುವುದು ಹೇಗೆ ? ಎಂಬುದರ ಬಗ್ಗೆ ಗಮನ ಹರಿಸಿ.
ನಿಮ್ಮ ಜೀವನದಲ್ಲಿ ಬೇರೆಯವರ ಸಲಹೆಗಳನ್ನು ತಿರಸ್ಕರಿಸಿದ ಸಂದರ್ಭ ಟೀಕಿಸಿಕೊಂಡ ಯಾವುದಾದರೊಂದು ಸಮಯವನ್ನು ನೆನಪಿಸಿಕೊಳ್ಳಿ. ಆಗ ಸಲಹೆಯನ್ನು ತಿರಸ್ಕರಿಸಲು, ಟೀಕೆಯಿಂದ ಮನಸ್ಸಿಗೆ ಬೇಸರವಾಗಲು ಕಾರಣವಾದರೂ ಏನು? ಆ ಸಲಹೆ, ಟೀಕೆ ಸರಿಯಾಗಿರಲಿಲ್ಲ. ಅದನ್ನು ನೀಡುತ್ತಿರುವ ವ್ಯಕ್ತಿಯ ಮೇಲೆ ನಿಮಗೆ ಭರವಸೆಯಿರಲಿಲ್ಲ. ಅದನ್ನು ನೀಡುವ ಸಂದರ್ಭ, ಸ್ಥಳ ಸರಿಯಾಗಿರಲಿಲ್ಲ ಇತ್ಯಾದಿ. ಇವುಗಳಲ್ಲಿ ಯಾವುದಾದರೊಂದು ಅಂಶವನ್ನೂ ನಿರ್ದಿಷ್ಟವಾಗಿ ನಾವು ಹೇಳುವಂತಿದ್ದರೆ, ಟೀಕೆಯನ್ನು ನಿರ್ಲಕ್ಷಿಸಿ, ಮುಂದುವರಿಯುವುದು ಸರಿಯಾದ ಸಂಗತಿ. ಆದರೆ ಇದು ಶೇ 90ರಷ್ಟು ಮಾತ್ರ ಸತ್ಯ. ಎಷ್ಟೇ ನಿರ್ಲಕ್ಷಿಸಬಹುದಾದ ಟೀಕೆ-ವ್ಯಂಗ್ಯ ಎಂದರೂ ಅದರಲ್ಲಿ ಶೇ10 ರಷ್ಟು ನಿಜಸಂಗತಿಯೂ, ನಾವು ಸರಿಪಡಿಸಿಕೊಳ್ಳಬಹುದಾದ ಅಂಶ ಇರುತ್ತದೆ ಎಂಬುದು ಗಮನಾರ್ಹ.
ನಮ್ಮೆಲ್ಲರಲ್ಲಿಯೂ ನಮ್ಮ ತಪ್ಪುಗಳನ್ನು ಅಲಕ್ಷಿಸಿ ಬಿಡುವ ಕುರುಡುತನ ಇರುತ್ತದೆ. ಟೀಕೆಗಳು ಈ ಕುರುಡುತನಕ್ಕೆ ‘ನೋಡುವ ಸವಾಲು’ ಒಡ್ಡುತ್ತವೆ. ಹಾಗಾಗಿ ಕೊರತೆಗಳನ್ನು ಕನ್ನಡಿಯಲ್ಲಿ ನಾವು ನೋಡಿಕೊಳ್ಳುವ ರೀತಿಯಲ್ಲಿ ಟೀಕೆಗಳು ಕೆಲಸ ಮಾಡುತ್ತವೆ. ಸಹಜವಾಗಿ ನೋವು ನಮ್ಮದಾಗುತ್ತದೆ.
‘ಯಾರು ನಮ್ಮನ್ನು ಟೀಕಿಸುತ್ತಾರೆ’ ಎನ್ನುವ ಅಂಶ ‘ಅವರು ಏನು ಹೇಳುತ್ತಾರೆ’ ಎಂಬುದಕ್ಕಿಂತ ನಮಗೆ ಮುಖ್ಯ ಎನಿಸಿಬಿಡುತ್ತದೆ. ಅಂದರೆ ಟೀಕಿಸುವ ವ್ಯಕ್ತಿಯೊಂದಿಗೆ ನಮಗಿರುವ ಸಂಬಂಧವೂ ಮುಖ್ಯವಾಗುತ್ತದೆ. ಕುಟುಂಬದವರ ಟೀಕೆ ತಟ್ಟುವುದು ಕಡಿಮೆ; ಹಾಗೆಯೇ ಅವರು ನೋವುಂಟು ಮಾಡುವುದೂ ಕಡಿಮೆ; ಏಕೆಂದರೆ ‘ಕುರುಡತನ’ ಅವರಿಗೂ ಇರುತ್ತದೆ!. ನಮ್ಮ ಕೋಪದಿಂದ ಪಾರಾಗಲು ಅವರು ಟೀಕೆಗಳನ್ನು ಮಾಡದೇ ಇರಬಹುದು. ಹಾಗಾಗಿ ಟೀಕೆಗಳನ್ನು ಕುರಿತು ಯೋಚಿಸುವಾಗ ‘ಯಾರು’ ‘ಏನು’ ಎರಡನ್ನೂ ಪ್ರತ್ಯೇಕಿಸಿ ನೋಡುವುದು ಅಗತ್ಯ.
ನಿತ್ಯದ ಸಂತಸದ ಪ್ರಮಾಣವನ್ನು ಒಂದು ಮಾಪಕದ ಮೂಲಕ ಅಳೆದೆವೆನ್ನೋಣ. ಮುಕ್ಕಾಲು ಭಾಗ ಪುರುಷರು, ಕೆಲ ಮಹಿಳೆಯರು ಸಂತಸದ ಒಂದರಿಂದ 10ರ ಅಳತೆಯ ಸ್ಕೇಲಿನಲ್ಲಿ 9ರ ಹಂತದಲ್ಲಿರುತ್ತಾರೆ!. ಎಲ್ಲದರಲ್ಲಿಯೂ ಅವರಿಗೆ ಒಂಥರಾ ಸಂತಸ, ಚಿಕ್ಕ ವಿಷಯ- ಒಂದು ಕಪ್ ಬಿಸಿಬಿಸಿ ಕಾಫಿ ಅವರಿಗೆ ಸಂತೋಷಪಡುವ ಸಂಗತಿ. ನಮಗೆಲ್ಲ ಅವರನ್ನು ಕಂಡರೆ ಅಸೂಯೆಪಡುವಂತಾಗುತ್ತದೆ. ಏಕೆಂದರೆ ಈ ಮಾಪಕದಲ್ಲಿ ನಾವೆಲ್ಲರೂ ಇರುವುದು 2 ರಿಂದ 3 ರ ಸ್ಥಾನದಲ್ಲಿ.
ಅಂದರೆ ನಮಗೆ ಸಾಮಾನ್ಯವಾಗಿ ಕಾಣುವುದು ಅರ್ಧಖಾಲಿಯಾದ ನೀರಿನ ಗ್ಲಾಸು! ಅರ್ಧ ತುಂಬಿದ ಗ್ಲಾಸಲ್ಲ. ಇದಕ್ಕೂ ಟೀಕೆಗೂ ಏನು ಸಂಬಂಧ! ಮೊದಲಿನ ವರ್ಗಕ್ಕೆ ಟೀಕೆಗಳನ್ನು ವ್ಯಂಗ್ಯಗಳನ್ನು ತಳ್ಳಿಹಾಕುವುದು ಸುಲಭ. ಅಥವಾ ತಕ್ಷಣ ‘ಹೌದು’ ಎಂದು ತಲೆಯಾಡಿಸಿ ಸರಿಪಡಿಸಿಕೊಳ್ಳುವುದೂ ಸಾಧ್ಯ. ಅವರು ಇದಕ್ಕೆ ಹೆಚ್ಚು ಸಮಯ ವ್ಯಯಿಸುವ ಗೋಜಿಗೇ ಹೋಗಲಾರರು. ಎರಡನೆಯ ವರ್ಗ ಇದಕ್ಕೆ ಪೂರ್ತಿ ವಿರುದ್ಧ. ಟೀಕೆ ಕೇಳಿದಾಕ್ಷಣ ಎರಡನೆಯ ವರ್ಗದವರು ಮಾಡುವುದು ‘ಗೂಗಲ್ ಸರ್ಚ್’ ತರಹದ ಮಿದುಳಿನ ಸರ್ಚ್. ನಮ್ಮ ಕೊರತೆಗಳ ಬಗ್ಗೆ ಮಿಲಿಯನ್‌ಗಟ್ಟಲೆ ಕಾರಣಗಳು ನಮ್ಮ ತಲೆಯಲ್ಲಿ ತೆರೆದುಕೊಳ್ಳುತ್ತದೆ. ಜೊತೆಗೆ ಆಗಾಗ್ಗೆ ಪರದೆಯ ಮೇಲೆ ತೆರೆದು ಕೊಳ್ಳುವ ‘ಆ್ಯಡ್’ ಗಳಂತೆ ಇತರರು ನಮ್ಮ ಬಗೆ ಮಾಡಿರಬಹುದಾದ ಹಿಂದಿನ ಟೀಕೆಗಳು ಸೇರಿಕೊಳ್ಳುತ್ತವೆ! ಎಲ್ಲವೂ ಸೇರಿ ಗೊಂದಲದ ಮನಃಸ್ಥಿತಿಯನ್ನುಂಟು ಮಾಡುತ್ತವೆ. ನಮ್ಮನ್ನೇ ಹಳಿದುಕೊಳ್ಳುತ್ತಾ, ಟೀಕಿಸಿದವರಿಗೆ ಪ್ರಾಮುಖ್ಯ ಕೊಟ್ಟು ಮತ್ತಷ್ಟು ಕೊರಗುತ್ತಾ ಕುಳಿತಿರುತ್ತೇವೆ.
ಟೀಕೆ-ಚುಚ್ಚುಮಾತು-ವ್ಯಂಗ್ಯಗಳನ್ನು ನಿಭಾಯಿಸುವ ಸರಿಯಾದ ಎರಡು ಮಾರ್ಗಗಳೆಂದರೆ, ಮೊದಲನೆಯದು ಎಷ್ಟೇ ನೋವಾದರೂ, ಅದರಲ್ಲಿ ಕಲಿಯುವುದು ಸಾಧ್ಯವಿದೆಯೇ ಎಂದು ಗಮನಿಸುವುದು; ಎರಡನೆಯದು ಟೀಕಿಸುವ ವ್ಯಕ್ತಿಗೆ ಪ್ರತಿ ವ್ಯಂಗ್ಯ-ಪ್ರತಿ ಟೀಕೆಗಳನ್ನು ಬದಿಗಿಟ್ಟು ನೇರವಾಗಿ ‘ನಮಗೆ ನೋವಾಗಿದೆ’ ಎನ್ನುವುದನ್ನು ಸ್ಪಷ್ಟಪಡಿಸುವುದು. ಎರಡನೆಯ ಅಂಶ ನಮ್ಮನ್ನು ಟೀಕಿಸುವುದರಿಂದ ಆ ವ್ಯಕ್ತಿ ಸಂತಸ ಪಡೆಯುತ್ತಿದ್ದರೆ, ಬಹುಬಾರಿ ಸಂತಸ, ಮಜಾ ಇಲ್ಲವಾಗಿಸಿ, ಟೀಕೆಯನ್ನು ನಿಲ್ಲಿಸಲು ಪ್ರೇರಣೆ ನೀಡುತ್ತದೆ. ಮೊದಲನೆಯ ಅಂಶ ನಮ್ಮನ್ನು ಮತ್ತಷ್ಟು ಸಮರ್ಥರನ್ನಾಗಿಸುತ್ತದೆ. ಟೀಕೆ-ವ್ಯಂಗ್ಯಗಳಿಗೆ ಹೆದರಿ ನಾವು ನಾವಾಗಿ ಬದುಕದಿರುವುದನ್ನು ಇದು ತಡೆಯುತ್ತದೆ. ಬೇರೆಯವರಿಗೆ ಟೀಕೆ ಮಾಡುವ ಮುನ್ನವೂ ಈ ಅಂಶಗಳನ್ನು ನೆನಪಿಸಿಕೊಳ್ಳುವುದು ಒಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.