ಪಂಚೇಂದ್ರಿಯಗಳಲ್ಲಿ ಒಂದಾದ ಮೂಗು ವಾಸನೆಯನ್ನು ಗ್ರಹಿಸಲು ನೆರವಾಗುವುದರ ಜೊತೆಯಲ್ಲಿ ಉಚ್ಛ್ವಾ ಸ-ನಿಃಶ್ವಾಸ ಪ್ರಕ್ರಿಯೆಗೂ ಅಗತ್ಯವಾದ ಅಂಗವಾಗಿದೆ. ಅಪಘಾತಗಳಾದಾಗ ಮೂಗಿನಿಂದ ರಕ್ತ ಅಥವಾ ಇತರ ಸ್ರಾವವಿದ್ದರೆ ವೈದ್ಯರು ತುರ್ತಾಗಿ ತಲೆಯ ಭಾಗದ ಸಿಟಿ ಸ್ಕ್ಯಾನ್ ಮಾಡಿಸಿ ಮೆದುಳು ಮತ್ತು ತಲೆಬುರುಡೆ ಸುರಕ್ಷಿತವಾಗಿದೆಯೇ ಎಂದು ಮೊದಲು ದೃಢಪಡಿಸಿಕೊಳ್ಳುತ್ತಾರೆ. ವ್ಯಕ್ತಿ ಅತಿಯಾದ ಬಿಸಿಲಿಗೆ ಮೈಯೊಡ್ಡಿದಾಗ, ರಕ್ತದೊತ್ತಡ ವಿಪರೀತ ಹೆಚ್ಚಾದಾಗ ಮೂಗಿನಲ್ಲಿ ರಕ್ತಸ್ರಾವವಾಗುವುದೂ ಇದೆ. ಚಳಿಗಾಲದ ದಿನಗಳಲ್ಲಂತೂ ಅಲರ್ಜಿಯಿಂದ ಆರಂಭವಾಗುವ ನೆಗಡಿ, ಸೈನಸ್‍ಗಳ ಉರಿಯೂತಕ್ಕೂ ಕಾರಣವಾಗಬಹುದು. ಕೆಲವೊಮ್ಮೆ ಮೆದುಳಿನ ಒಳಭಾಗದ ರಕ್ತನಾಳಗಳಲ್ಲಿ ಹೆಪ್ಪುಗಟ್ಟುವಿಕೆಗೂ ಕಾರಣವಾಗಬಹುದು. ಹಾಗಾಗಿಯೇ ಮೂಗಿನ ಯಾವ ಸಮಸ್ಯೆಗಳನ್ನೂ ನಿರ್ಲಕ್ಷಿಸುವಂತಿಲ್ಲ.
ಮೂಗಿನ ಸಾಮಾನ್ಯ ಸಮಸ್ಯೆಗಳು
ಸೈನಸ್‍ಗಳ ಉರಿಯೂತ (ಸೈನುಸೈಟಿಸ್): ಮುಖದ ಮೂಳೆಗಳ ಒಳಭಾಗದಲ್ಲಿ ಚಿಕ್ಕ ಪೊಟ್ಟಣದಂತಹ ಕಿರಿದಾದ ಟೊಳ್ಳು ಜಾಗವೇ ಸೈನಸ್. ಸಾಮಾನ್ಯವಾಗಿ ಇದರ ಒಳಭಾಗದಲ್ಲಿ ಲೊಳೆಪದರವಿದ್ದು ಕನಿಷ್ಠ ಪ್ರಮಾಣದ ಲೊಳೆಯಂತಹ ವಸ್ತುವು ಉತ್ಪತ್ತಿಯಾಗುತ್ತದೆ. ವೈರಾಣು ಅಥವಾ ಸೂಕ್ಷ್ಮಾಣುಗಳ ಸೋಂಕು ತಗುಲಿದಾಗ ಉರಿಯೂತ ಪ್ರಕ್ರಿಯೆಯಿಂದಾಗಿ ಇಲ್ಲಿ ಸ್ರವಿಸುವಿಕೆ ಹೆಚ್ಚಾಗುತ್ತದೆ.
ಸಾಮಾನ್ಯವಾಗಿ ನೆಗಡಿ ಅಥವಾ ಶೀತದಂತೆ ಆರಂಭವಾಗುವ ಸೈನಸ್ ಉರಿಯೂತವು ಧೂಮಪಾನಿಗಳನ್ನು ಮತ್ತು ಅಲರ್ಜಿ ಇರುವವರನ್ನು ಪದೇ ಪದೇ ಕಾಡುತ್ತದೆ. ಮೂಗು ಕಟ್ಟುವಿಕೆ, ಮೂಗಿನಿಂದ ವಿಪರೀತ ಸ್ರಾವ (ಶೀತ ಮತ್ತು ಮೂಗಿನ ಹಿಂಭಾಗದಿಂದ ಸ್ರಾವವು ಗಂಟಲಿಗೆ ಇಳಿಯುವುದು), ಮೂಗಿನ ಇಬ್ಬದಿಗಳಲ್ಲಿ ಮತ್ತು ಹಣೆಯ ಭಾಗದಲ್ಲಿ ವಿಪರೀತ ನೋವು, ತಲೆನೋವು, ತಲೆ ಭಾರವಾದಂತೆನಿಸುವುದು, ತಲೆಯನ್ನು ಕೆಳಕ್ಕೆ ಬಗ್ಗಿಸಿದಾಗ ನೋವು ಹೆಚ್ಚಾಗುವುದು ಮೊದಲಾದುವು ಇದರ ಮುಖ್ಯ ಲಕ್ಷಣಗಳು. ಒಮ್ಮೊಮ್ಮೆ ಕೆಮ್ಮು, ಉಸಿರಿನ ದುರ್ನಾತದಂತಹ ಲಕ್ಷಣಗಳೂ ಕಾಣಿಸಿಕೊಳ್ಳಬಹುದು. ಇಂತಹ ಲಕ್ಷಣಗಳು ಬಾಧಿಸಿದಾಗ ಬೆಚ್ಚಗಿನ ನೀರಿನಲ್ಲಿ ಅದ್ದಿದ ಸ್ವಚ್ಛ ಬಟ್ಟೆಯನ್ನು ಹಣೆಯ ಮತ್ತು ಮುಖದ ಮೇಲಿರಿಸಿಕೊಳ್ಳುವುದು ಮತ್ತು ಬಿಸಿನೀರಿನ ಆವಿಯನ್ನು ಉಸಿರಿನ ಒಳಕ್ಕೆ ತೆಗೆದುಕೊಳ್ಳುವುದು ಮೊದಲಾದ ಕ್ರಮಗಳು ಸ್ವಲ್ಪ ಮಟ್ಟಿಗೆ ರೋಗಲಕ್ಷಣಗಳನ್ನು ನಿಯಂತ್ರಿಸಲು ನೆರವಾಗುತ್ತವೆ. ತಣ್ಣನೆಯ ವಾತಾವರಣದಿಂದ ದೂರವಿದ್ದು, ದೇಹವನ್ನು ಆದಷ್ಟು ಬೆಚ್ಚಗಿಟ್ಟುಕೊಳ್ಳಬೇಕು. ಬಿಸಿನೀರು ಮತ್ತು ಬಿಸಿಯಾದ ಆಹಾರ ಪದಾರ್ಥಗಳನ್ನೇ ಸೇವಿಸಬೇಕು. ಒಂದು ವೇಳೆ, ನಿಯಂತ್ರಣಕ್ಕೆ ಬರದಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು.
ಅಲರ್ಜಿ( ರೈನೈಟಿಸ್): ಅಲರ್ಜಿಯಿಂದ ಉಂಟಾಗುವ ಮೂಗಿನ ಉರಿಯೂತದೊಂದಿಗೆ ಕಣ್ಣು, ಕಿವಿ ಹಾಗೂ ಗಂಟಲಿನ ಉರಿಯೂತವೂ ಸಾಮಾನ್ಯ. ಮೂಗು, ಗಂಟಲು ಮತ್ತು ಕಣ್ಣುಗಳಲ್ಲಿ ನವೆ, ಮೂಗು ಕಟ್ಟುವಿಕೆ, ವಿಪರೀತ ಶೀತ, ನಿರಂತರ ಸೀನು, ಧ್ವನಿ ಬದಲಾವಣೆ, ಮೊದಲಾದುವು ಮೂಗಿನ ಉರಿಯೂತದ ಲಕ್ಷಣಗಳು. ಸಾಮಾನ್ಯವಾಗಿ ಅಲರ್ಜಿಗೆ ಕಾರಣವಾಗುವ ವಸ್ತುಗಳೆಂದರೆ, ತಣ್ಣನೆಯ ವಾತವರಣ (ಹವೆ), ಹೂವಿನ ಪರಾಗ, ಕೀಟಗಳ (ಉದಾ: ಜಿರಳೆ) ಉತ್ಪನ್ನಗಳು, ಧೂಳಿನ ಕಣಗಳು, ಹೊಗೆ, ಧೂಮಪಾನ, ಸುಗಂಧ ದ್ರವ್ಯಗಳು, ಪ್ರಾಣಿ/ಸಸ್ಯಗಳ ಕೆಲವು ಉತ್ಪನ್ನಗಳು ಮೊದಲಾದುವು. ಅಲರ್ಜಿ ಇರುವವರು ಯಾವ ವಸ್ತುವಿನ ಸಂಪರ್ಕ ಬಂದರೆ ಸಮಸ್ಯೆ ಆರಂಭವಾಗುವುದು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ ಆ ವಸ್ತುವಿನಿಂದ ಆದಷ್ಟು ದೂರವಿರಬೇಕು. ಕೆಲವು ವಿಶೇಷ ಪ್ರಯೋಗಾಲಯಗಳಲ್ಲಿ ವ್ಯಕ್ತಿಯಲ್ಲಿ ಯಾವ ವಸ್ತುವಿಗೆ ಅಲರ್ಜಿ ಪ್ರಕ್ರಿಯೆ ಆರಂಭವಾಗುತ್ತದೆ ಎಂಬುದನ್ನು ತಪಾಸಣೆ ಮಾಡಲಾಗುತ್ತದೆ. ಅಂತಹ ಪರೀಕ್ಷೆಯ ಸಹಾಯದಿಂದ ಅಲರ್ಜಿಗೆ ಕಾರಣವಾಗುವ ವಸ್ತುವನ್ನು ಗುರುತು ಮಾಡಲು ಪ್ರಯತ್ನಿಸಬಹುದು.
ರಕ್ತಸ್ರಾವ: ಮೂಗಿನಲ್ಲಿ ರಕ್ತಸ್ರಾವಕ್ಕೆ ಕಾರಣಗಳು ಅನೇಕ. ಮುಖ್ಯವಾದುವೆಂದರೆ, ಒಣಹವೆ, ದೀರ್ಘಕಾಲಿಕ ನೆಗಡಿ, ಸೈನಸ್‍ಗಳ ಉರಿಯೂತ, ಜೋರಾಗಿ ಸೀನುವುದು, ಮೂಗು, ತಲೆ ಅಥವಾ ಮುಖಕ್ಕೆ ಪೆಟ್ಟು, ಬೆಟ್ಟ ಗುಡ್ಡಗಳಂತಹ ಎತ್ತರದ ಪ್ರದೇಶಗಳಲ್ಲಿನ ತಿರುಗಾಟ, ಮೂಗಿನ ಹೊಳ್ಳೆಗಳನ್ನು ಪ್ರತ್ಯೇಕಿಸುವ ನಡುತಡಿಕೆ ಡೊಂಕಾದಾಗ (ಡಿ. ಎನ್. ಎಸ್., ಡೀವಿಯೇಟೆಡ್ ನೇಸಲ್ ಸೆಪ್ಟಮ್), ಮೂಗಿನ ಒಳಭಾಗದಲ್ಲಿರಬಹುದಾದ ಗಡ್ಡೆಗಳು, ಅಧಿಕ ರಕ್ತದೊತ್ತಡ, ಅತಿಯಾದ ಮದ್ಯಪಾನ ಮತ್ತು ಧೂಮಪಾನ ಮೊದಲಾದುವು.
ಮೂಗಿನಿಂದ ರಕ್ತ ಒಸರುವುದನ್ನು ಕಂಡ ಕೂಡಲೇ ಗಾಬರಿಯಾಗಬಾರದು. ನೇರವಾಗಿ ಕುಳಿತು ತಲೆ ಮತ್ತು ಕುತ್ತಿಗೆಯನ್ನು ಸ್ವಲ್ಪ ಮುಂದಕ್ಕೆ ಬಾಗಿಸಬೇಕು. ಇದು ರಕ್ತವು ಗಂಟಲಿಗೆ ಹೋಗುವುದನ್ನು ತಪ್ಪಿಸಿ, ಅದರಿಂದ ಆಗಬಹುದಾದ ವಾಕರಿಕೆ ಮತ್ತು ವಾಂತಿಯನ್ನು ತಪ್ಪಿಸುತ್ತದೆ. ಆ ಸಂದರ್ಭದಲ್ಲಿ ಬಾಯಿಯಿಂದ ದೀರ್ಘವಾಗಿ ಉಸಿರಾಡುತ್ತಾ, ಬಾಯಿಯಲ್ಲಿ ಬರಬಹುದಾದ ರಕ್ತವನ್ನು ಉಗಿಯಬೇಕು. ಸಾಧ್ಯವಾದಷ್ಟೂ ಈ ರಕ್ತವನ್ನು ಒಂದು ಸೀಸೆ ಅಥವಾ ಪಾತ್ರೆಯಲ್ಲಿ ಉಗಿಯಬೇಕು. ಇದು ಎಷ್ಟು ಪ್ರಮಾಣದ ರಕ್ತವು ದೇಹದಿಂದ ನಷ್ಟವಾಗಿದೆ ಎಂಬುದನ್ನು ಅಂದಾಜು ಮಾಡಲು ನೆರವಾಗುತ್ತದೆ. ಟಿಶ್ಯು ಕಾಗದ ಅಥವಾ ಒದ್ದೆಬಟ್ಟೆಯಿಂದ ಮೂಗನ್ನು ಒತ್ತಿ ಹಿಡಿಯಬೇಕು. ಹೆಬ್ಬೆರಳು ಹಾಗೂ ತೋರುಬೆರಳನ್ನು ಉಪಯೋಗಿಸಿ ಮೂಗಿನ ಹೊಳ್ಳೆಗಳನ್ನು ಒತ್ತಿಹಿಡಿಯಬೇಕು. ಹೀಗೆ ಒತ್ತುವಾಗ ಮೂಗಿನ ಮೆದುಭಾಗವನ್ನು ಮಧ್ಯದ ಗಟ್ಟಿಯಾದ ನಡುತಡಿಕೆಗೆ ವಿರುದ್ಧವಾಗಿ ಒತ್ತಬೇಕು. ಸುಮಾರು ಎರಡರಿಂದ ಐದು ನಿಮಿಷಗಳವರೆಗೆ ಒತ್ತಿ ಹಿಡಿದಾಗ ರಕ್ತಸ್ರಾವ ಸ್ಥಗಿತಗೊಳ್ಳುತ್ತದೆ. ಮಂಜುಗಡ್ಡೆಗಳ ತುಂಡುಗಳು ಲಭ್ಯವಿದ್ದಲ್ಲಿ ಅದನ್ನು ಒಂದು ಪಾಲಿಥಿನ್ ಕಾಗದದಲ್ಲಿ ಸುತ್ತಿಕೊಂಡು ಮೂಗಿನ ಹೊಳ್ಳೆಗಳ ಬಳಿ ಇಟ್ಟುಕೊಳ್ಳಬೇಕು. ಇದು ರಕ್ತನಾಳಗಳನ್ನು ಕುಗ್ಗಿಸುವುದರಿಂದ ರಕ್ತಸ್ರಾವ ಬೇಗನೆ ನಿಲ್ಲುತ್ತದೆ. ಕಡಿಮೆಯಾಗದಿದ್ದಲ್ಲಿ ವೈದ್ಯರನ್ನು ಸಂಪರ್ಕ ಮಾಡಬೇಕು.
ವಾಸನೆ ಗ್ರಹಿಕೆಯಲ್ಲಿ ಸಮಸ್ಯೆ: ಮೂಗಿನ ಅಲರ್ಜಿ ಮತ್ತು ಸೈನಸ್ ಉರಿಯೂತಗಳಲ್ಲಿ ತಾತ್ಕಾಲಿಕವಾಗಿ ವ್ಯಕ್ತಿ ವಾಸನೆಗಳನ್ನು ಗ್ರಹಿಸಲು ಕಷ್ಟ ಪಡುತ್ತಾನೆ. ಸಮಸ್ಯೆ ಕಡಿಮೆಯಾದ ಮೇಲೆ ಅದು ತಂತಾನೆ ಸರಿಹೋಗುತ್ತದೆ. ಆದರೆ ಮೆದುಳಿನ ಕೆಲವು ಸಮಸ್ಯೆಗಳಲ್ಲಿ (ಅಲ್ಞೈಮರ್ಸ್, ಪಾರ್ಕಿನ್ಸನ್ ಕಾಯಿಲೆ) ಕೆಲವೊಮ್ಮೆ ಶಾಶ್ವತವಾಗಿ ವ್ಯಕ್ತಿ ವಾಸನೆಯನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳಬಹುದು. ಈ ಸಮಸ್ಯೆಗಳಲ್ಲಿ ನರರೋಗತಜ್ಞರನ್ನು ಸಂಪರ್ಕಿಸಬೇಕು.
ನೆನಪಿಡಿ
l ಮೂಗಿನಲ್ಲಿ ಕೈ ಬೆರಳನ್ನು ಅಥವಾ ಪೆನ್ನು, ಪೆನ್ಸಿಲ್‍ನಂತಹ ಯಾವುದೇ ವಸ್ತುವನ್ನು ತೂರಿಸದಿರಿ.
l ಅಲರ್ಜಿ ಇರುವವರು ಚಳಿಗಾಲದಲ್ಲಿ ಬಿಸಿನೀರು ಮತ್ತು ಬಿಸಿ ಆಹಾರ ಪದಾರ್ಥಗಳನ್ನೇ ಸೇವಿಸಿ.
lಫ್ರಿಜ್‍ನಲ್ಲಿರಿಸಿದ ತಣ್ಣನೆಯ ಆಹಾರ ಪದಾರ್ಥಗಳ ಸೇವನೆ ಬೇಡ.
lರೋಗನಿರೋಧಕ ವ್ಯವಸ್ಥೆಯನ್ನು ಸಬಲಗೊಳಿಸಿಕೊಳ್ಳಿ. ಅಧ್ಯಯನಗಳು ಹೇಳುವಂತೆ ವಿಟಮಿನ್ ಸಿ, ವಿಟಮಿನ್ ಡಿ ಮತ್ತು ಸತು (ಝಿಂಕ್) ಹೇರಳವಾಗಿರುವ ಆಹಾರವು ದೇಹದ ರಕ್ಷಣಾವ್ಯವಸ್ಥೆಯನ್ನು ಸದೃಢಪಡಿಸುತ್ತದೆ. ಆದ್ದರಿಂದ ವಿಟಮಿನ್ ಸಿ ಹೇರಳವಾಗಿರುವ ನಿಂಬೆ, ಕಿತ್ತಳೆ, ಪೇರಲೆ, ನೆಲ್ಲಿಕಾಯಿ, ವಿಟಮಿನ್ ಡಿ ಹೇರಳವಾಗಿರುವ ಮೊಟ್ಟೆ, ಮೀನು, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು, ಸತುವಿನ ಅಂಶ ಹೇರಳವಾಗಿರುವ ಬೇಳೆಕಾಳುಗಳು, ಸಿಹಿಗೆಣಸು, ಹಾಲಿನ ಉತ್ಪನ್ನಗಳು, ಬಾದಾಮಿ, ಶೇಂಗಾ, ಗೋಡಂಬಿ, ಕುಂಬಳ ಮತ್ತು ಅಗಸೆ ಬೀಜ ಮೊದಲಾದುವುಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ಬಳಸಿ.
ಸೂರ್ಯನ ಬಿಸಿಲಿನಲ್ಲಿ (ಬೆಳಿಗ್ಗೆ ಹನ್ನೊಂದರಿಂದ ಮಧ್ಯಾಹ್ನ ಮೂರರವರೆಗಿನ ಸಮಯ) ಕಡ್ಡಾಯವಾಗಿ ವಾರದಲ್ಲಿ ಮೂರು ದಿನಗಳಾದರೂ ಓಡಾಡಿ.
l ಪದೇ ಪದೇ ಮೂಗಿನ ಅಲರ್ಜಿಯಿಂದ ಬಳಲುವವರು ವಾತಾವರಣದ ದೂಳು, ಕಣಗಳಿಂದ ಮತ್ತು ಸೂಕ್ಷ್ಮಾಣುಗಳಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಬಳಸುವುದು ಸೂಕ್ತ.
l ಸಾಬೂನಿನಿಂದ ಕೈಗಳನ್ನು ಸ್ವಚ್ಛವಾಗಿ ಆಗಾಗ್ಗೆ ತೊಳೆದುಕೊಳ್ಳಿ.
ಮೂಗಿನಿಂದ ರಕ್ತ ಒಸರುವುದನ್ನು ಕಂಡ ಕೂಡಲೇ ಗಾಬರಿಯಾಗಬಾರದು. ನೇರವಾಗಿ ಕುಳಿತು ತಲೆ ಮತ್ತು ಕುತ್ತಿಗೆಯನ್ನು ಸ್ವಲ್ಪ ಮುಂದಕ್ಕೆ ಬಾಗಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.