ADVERTISEMENT

ಆರೋಗ್ಯ | ಚಳಿಗಾಲದ ಶೀತದಿಂದ ರಕ್ಷಣೆ

ಡಾ.ವಿಜಯಲಕ್ಷ್ಮಿ ಪಿ.
Published 9 ಜನವರಿ 2023, 19:30 IST
Last Updated 9 ಜನವರಿ 2023, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಳಿಗಾಲದಲ್ಲಿ ಬಾಹ್ಯ ತಂಪಿನಿಂದ ರಕ್ಷಿಸಿಕೊಳ್ಳಲು ದೇಹವು ಸಹಜವಾಗಿಯೇ ತನ್ನ ಆಂತರಿಕ ಉಷ್ಣತೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಆದ್ದರಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ. ಹೀಗಾಗಿ ಸಕಾಲದಲ್ಲಿ ಆಹಾರವನ್ನು ಸೇವಿಸುವುದು ಒಳ್ಳೆಯದು.

***

ಚಳಿಗಾಲದಲ್ಲಿ ಶೀತವು ದೇಹದ ಒಳಗೂ ಹೊರಗೂ ವ್ಯಾಪಿಸಿರುತ್ತದೆ. ಗಾಳಿಯೂ ಶೀತವಾಗಿ ಬೀಸುತ್ತದೆ. ಇದರಿಂದಾಗಿ ಗಿಡಮರಗಳು ಎಲೆಗಳನ್ನು ಉದುರಿಸಿ, ತಂಪಿನಿಂದ ರಕ್ಷಣೆ ಪಡೆಯಲು ತನ್ನದೇ ಆದಂತಹ ಹೊಂದಾಣಿಕೆಗಳನ್ನು ಮಾಡಿಕೊಂಡಿರುತ್ತವೆ. ವಾತಾವರಣದ ತಂಪಿನಿಂದ ಮನುಷ್ಯನ ದೇಹದಲ್ಲಿರುವ ಕಫದ ಅಂಶವೂ ಗಟ್ಟಿಯಾಗುತ್ತಾ ಹೋಗುತ್ತದೆ. ವಾಯುವೂ ಶೀತದಿಂದ ತನ್ನ ಗತಿಯನ್ನು ನಿಧಾನಗೊಳಿಸುತ್ತದೆ. ಇದರಿಂದ ಚರ್ಮ ಮತ್ತು ಪುಪ್ಪುಸಗಳಲ್ಲಿ ನಡೆಯುವ ಉಸಿರಾಟದ ಪ್ರಕ್ರಿಯೆಯೂ ನಿಧಾನಗತಿಯನ್ನು ಹೊಂದುತ್ತದೆ. ಇದರಿಂದಾಗಿ ಉಸಿರಾಟಕ್ಕೆ ಮತ್ತು ಚರ್ಮಕ್ಕೆ ಸಂಬಂಧಿಸಿದ ರೋಗಗಳು ಹೆಚ್ಚಾಗುತ್ತವೆ. ಹೀಗಾಗಿ ಈ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ನಾವು ನಮ್ಮ ದಿನಚರಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ.

ADVERTISEMENT

ಉಸಿರಾಟಕ್ಕೆ ಸಂಬಂಧಪಟ್ಟಂತೆ ಕಾಣಿಸಿಕೊಳ್ಳುವ ನೆಗಡಿ ಕೆಮ್ಮು ದಮ್ಮು ತಲೆನೋವುಗಳು ಮತ್ತು ಚರ್ಮ ಒಡೆದು ರಕ್ತ ಬರುವುದು, ಚರ್ಮರೋಗಗಳ ಕಾಟ, ಮೈ ತುರಿಕೆಗಳು ಮತ್ತು ಗಂಟುಗಳಲ್ಲಿ ನೋವು, ಊತ, ಬಿಗಿತಗಳು – ಹೀಗೆ ಈ ಕಾಲದಲ್ಲಿ ಅನೇಕ ರೋಗಗಳು ಉಲ್ಬಣಗೊಳ್ಳಬಹುದು, ಅಥವಾ ಪ್ರಾರಂಭವಾಗಬಹುದು. ಇದಕ್ಕೆಲ್ಲ ವಾತಾವರಣದ ಬದಲಾವಣೆಗೆ ದೇಹ ಒಗ್ಗಿಕೊಳ್ಳಲು ಸಾಧ್ಯವಾಗದಿರುವುದೇ ಮುಖ್ಯ ಕಾರಣ. ಈ ರೋಗಗಳಿಂದ ದೂರವಿರಲು ಮೊದಲು ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದು, ಬೆಚ್ಚಗಿನ ವಾತಾವರಣದಲ್ಲಿ ಇರುವುದು, ಬಿಸಿ ಆಹಾರ ಮತ್ತು ಬಿಸಿ ನೀರಿನ ಸೇವನೆ – ಇವೇ ಮೊದಲ ಚಿಕಿತ್ಸೆ

ಚಳಿಗಾಲದಲ್ಲಿ ನೀರು ಹೆಪ್ಪುಗಟ್ಟುವಂತೆಯೇ ದೇಹದಲ್ಲಿರುವ ದ್ರವಾಂಶ/ಕಫಗಳೂ ಗಟ್ಟಿಯಾಗುತ್ತವೆ. ಇದು ಹೆಚ್ಚಾದಲ್ಲಿ ನೆಗಡಿ, ಕೆಮ್ಮು, ದಮ್ಮು, ಕಫ ಹೆಚ್ಚಾಗಿ ತಲೆನೋವು, ಸೀನು ಇತ್ಯಾದಿ ಕಫಸಂಬಂಧಿ ತೊಂದರೆಗಳು ಕಾಡುತ್ತವೆ. ಒಟ್ಟಾರೆ ಈ ಸಮಯದಲ್ಲಿ ದೇಹದ ಆಂತರಿಕ ಉಷ್ಣತೆ ಕಡಿಮೆಯಾಗದಂತೆ ನೋಡಿಕೊಳ್ಳುವುದು ಮುಖ್ಯ. ಮೈ ಬಿಸಿ ಬರುವವರೆಗೂ ವ್ಯಾಯಾಮ ಮಾಡಬೇಕು; ವ್ಯಾಯಾಮದ ನಂತರ – ಬಜೆ, ಅಗರು, ಅರಿಶಿನ, ಸೀಗೆಪುಡಿಯಂತಹ, ಮೈ ಬಿಸಿ ಬರಿಸುವ, ಕಫವನ್ನು ಕರಗಿಸುವ ಪದಾರ್ಥಗಳಿಂದ – ಮೈ–ಕೈಗಳನ್ನು ತಿಕ್ಕಿಕೊಂಡು ಬಿಸಿನೀರಿನ ಸ್ನಾನವನ್ನು ಮಾಡುವುದು ಅಗತ್ಯ. ದೇಹದಲ್ಲಿ ಕಫ ಗಟ್ಟಿಯಾಗಿ, ಆ ಮೂಲಕ ಬರುವ ಸಮಸ್ಯೆಗಳಿಂದ ದೂರವಿರಲು, ಮುಖಕ್ಕೆ ದಿನವೂ ಹಬೆಯನ್ನು ತೆಗೆದುಕೊಳ್ಳುವುದು, ಹಣೆಗೆ ಬಜೆ–ಶುಂಠಿಗಳ ಲೇಪವನ್ನು ಹಾಕುವುದು, ಶುಂಠಿ–ಅರಿಶಿನಗಳನ್ನು ಹಾಕಿ ಕುದಿಸಿರುವ ಹಾಲನ್ನು ಸೇವಿಸುವುದು, ಓಮದ ಚಟ್ನಿಪುಡಿಯನ್ನು ಆಹಾರದೊಡನೆ ಸೇವಿಸುವುದು – ಇಂಥವುಗಳನ್ನು ಮಾಡಬೇಕು. ಕೆಲವೊಮ್ಮೆ ಇವು ನೆಗಡಿ, ಮೈಕೈ ನೋವು, ತಲೆನೋವು ಮುಂತಾದ ರೋಗಗಳಿಗೆ ಚಿಕಿತ್ಸೆಯೂ ಆಗುತ್ತದೆ. ಕಫದ ರೋಗಗಳನ್ನು ತಡೆಗಟ್ಟಲು ತಂಪಾದ ಪದಾರ್ಥಗಳಾದ ಐಸ್ ಕ್ರೀಂ, ತಂಪು ಪಾನೀಯಗಳು, ಅತಿ ತಂಪಾದ ಕ್ಷಾರೀಯ ಪಾನೀಯಗಳು, ಹಿಮ ಬೀಳುವಾಗ ತಂಪಾದ ವಾತಾವರಣದಲ್ಲಿ ಓಡಾಟ – ಇಂಥವನ್ನು ತ್ಯಜಿಸಬೇಕು. ಅತಿ ತಂಪಾದ ಪದಾರ್ಥಗಳು, ಜೀರ್ಣಕ್ಕೆ ಕಷ್ಟವಾಗುವಂತಹ ಪದಾರ್ಥಗಳು – ಎಂದರೆ ಕರಿದ ತಿಂಡಿಗಳು, ಚೀಸ್–ಪನ್ನೀರ್‌ಗಳಿರುವ ಪದಾರ್ಥಗಳ ಅತಿಯಾದ ಸೇವನೆ, ನಿತ್ಯವೂ ಮಾಂಸಾಹಾರ ಸೇವನೆ, ಅತಿಯಾದ ಮದ್ಯಸೇವನೆಯಿಂದ ದೂರವಿರುವುದು ಅತ್ಯಗತ್ಯ.

ಚರ್ಮವು ವಿಪರೀತವಾಗಿ ಒಡೆದಿದ್ದರೆ ಎಳ್ಳೆಣ್ಣೆ ಮತ್ತು ತುಪ್ಪವನ್ನು ಮಿಶ್ರಮಾಡಿ, ಸಾಸಿವೆ, ಒಮ, ಜೀರಿಗೆ, ಮೆಣಸು ಇವುಗಳನ್ನು ಹಾಕಿ ಕಾಯಿಸಿದ ಮಿಶ್ರಣವನ್ನು ಮೈಗೆ ಹಚ್ಚಿ, ತೆಳ್ಳಗಿನ ಬಟ್ಟೆಗಳನ್ನು ಹಾಕಿಕೊಂಡು ಬಿಸಿನೀರಿನಲ್ಲಿ ಸ್ನಾನ ಮಾಡುವುದು ಒಳಿತು. ಕಾಲಿನ ಹಿಮ್ಮಡಿ ಒಡೆದಿದ್ದರೆ ಈ ಮಿಶ್ರಣವನ್ನು ಹಿಮ್ಮಡಿಗೆ ಚೆನ್ನಾಗಿ ತಿಕ್ಕಿ ಕಾಲನ್ನು ಬಿಸಿನೀರಿನಲ್ಲಿ ಸ್ವಲ್ಪ ಸಮಯ ಮುಳುಗಿಸಿ ಇಟ್ಟಕೊಳ್ಳುವುದರಿಂದ ಬಿರುಕುಗಳು ಕಡಿಮೆ ಆಗುತ್ತವೆ. ಗಂಟುನೋವಿಗೆ ಮೇಲೆ ಹೇಳಿದ ಮಿಶ್ರಣವನ್ನು ನೋವಿರುವ ಗಂಟುಗಳಿಗೆ ಹಚ್ಚಿ ತಿಕ್ಕಿ, ಶುಂಠಿ ಮತ್ತು ಬಜೆಪುಡಿಗಳನ್ನು ಬಸಿನೀರಿನಲ್ಲಿ ಕಲಸಿ ದಪ್ಪಗೆ ಲೇಪ ಹಾಕುವುದರಿಂದ ಕಡಿಮೆ ಆಗುತ್ತದೆ.

ಚಳಿಗಾಲದಲ್ಲಿ ಬಾಹ್ಯ ತಂಪಿನಿಂದ ರಕ್ಷಿಸಿಕೊಳ್ಳಲು ದೇಹವು ಸಹಜವಾಗಿಯೇ ತನ್ನ ಆಂತರಿಕ ಉಷ್ಣತೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಆದ್ದರಿಂದ ಜೀರ್ಣಕ್ರಿಯೆ ತ್ವರಿತವಾಗುತ್ತದೆ, ಎಂದರೆ ಹೆಚ್ಚಾಗುತ್ತದೆ. ಸಕಾಲದಲ್ಲಿ ಆಹಾರ ಸೇವಿಸದಿದ್ದರೆ ಅಮ್ಲಪಿತ್ತ ರೋಗಿಗಳಲ್ಲಿ ಅಮ್ಲತೆ ಹೆಚ್ಚಾಗಿ ಅಜೀರ್ಣ, ಆಂತರಿಕ ಅಂಗಗಳಲ್ಲಿ ಉರಿಯೂತ, ಮೂತ್ರದ ತೊಂದರೆಗಳು ಹೆಚ್ಚಾಗುತ್ತವೆ. ಗಂಟುಗಳಲ್ಲಾಗುವ ಉರಿಯೂತದಿಂದಾಗಿ ಸಂದುನೋವು, ಊತಗಳು ಹೆಚ್ಚಾಗುತ್ತವೆ. ಇವನ್ನು ತಡೆಗಟ್ಟಲು ಮತ್ತು ಚಿಕಿತ್ಸೆಯಾಗಿ ಪುನರ್ಪುಳಿಯ (ಕೋಕಮ್) ಬಿಸಿ ಪಾನಕ ಮತ್ತು ಸಾರು, ಕಬ್ಬನ್ನು ತಿನ್ನುವುದು, ಕಬ್ಬಿನ ಹಾಲು (ತಂಪಾಗಿ, ಅಥವಾ ಮಂಜುಗಡ್ಡೆ ರಹಿತವಾಗಿ) ಬೆಲ್ಲ, ಕಾಕಂಬಿ, ಬೆಲ್ಲದಿಂದ ತಯಾರಿಸಿರುವ ಪದಾರ್ಥಗಳ ಸೇವನೆ ಒಳ್ಳೆಯದು. ಅಮ್ಲಪಿತ್ತ, ಉರಿಶೀತಗಳಿಂದ ರಕ್ಷಿಸಿಕೊಳ್ಳಲು ದೊಡ್ಡಬೋರೆ ಹಣ್ಣು, ಅಂಜೂರ, ಕುದಿಸಿ ತಣಿಸಿದ ದ್ರಾಕ್ಷರಸ/ ಪಾನಕದ ಸೇವನೆ ಒಳ್ಳೆಯದು.

ಈ ಕಾಲದಲ್ಲಿ ಶರೀರದ ಮತ್ತು ಚರ್ಮದ ಸ್ನಿಗ್ಧತೆಯನ್ನೂ ಬಲವನ್ನೂ ಕಾಪಾಡಿಕೊಳ್ಳಲು ದೇಹದಲ್ಲಿ ಜಿಡ್ಡಿನ ಅಂಶ ಕಡಿಮೆ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಎಣ್ಣೆಕಾಳುಗಳಾದ ಬಾದಾಮಿ, ಕಡಲೆಬೀಜ, ಎಳ್ಳು ಮೊದಲಾದವುಗಳನ್ನೂ ಮತ್ತು ಹೆಸರುಕಾಳು, ಉದ್ದು, ಅವರೆ, ತೊಗರಿ ಮುಂತಾದ ಕಾಳುಗಳನ್ನೂ ಉಪಯೋಗಿಸುವುದು ಉತ್ತಮ. ಆದ್ದರಿಂದಲೇ ನಮ್ಮ ಹಿರಿಯರು ಧನುರ್ಮಾಸ, ಸಂಕ್ರಾಂತಿಯಂದು ಹುಗ್ಗಿ, ಸಿಹಿ ಪೊಂಗಲ್, ಎಳ್ಳುಂಡೆ, ಎಳ್ಳುಬೆಲ್ಲ, ಕಬ್ಬು – ಇಂಥವುಗಳ ಸೇವನೆಯನ್ನು ಸಾಂಪ್ರದಾಯಿಕವಾಗಿ ವಿಧಿಸಿದ್ದಾರೆ. ಆದರೆ ‘ಅತಿಯಾದರೆ ಅಮೃತವೂ ವಿಷ’ ಎನ್ನುವಂತೆ, ಯೋಗ್ಯವಾದ ಪದಾರ್ಥಗಳನ್ನು ಹಿತವಾಗಿ, ಮಿತವಾಗಿ ಜೀರ್ಣಶಕ್ತಿಗೆ ಅನುಗುಣವಾಗಿ ಸೇವಿಸುವುದು ಒಳ್ಳೆಯದು.

ಪ್ರತಿವರ್ಷ ಚಳಿಗಾಲದಲ್ಲಿ ಮಾತ್ರವೇ ಕಾಡುವ ರೋಗಗಳು ಇದ್ದರೆ, ಶರತ್ ಋತುವಿನಲ್ಲೇ ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.