ADVERTISEMENT

ಸ್ಪಂದನ | ಹೆರಿಗೆ ನಂತರ ಹೊಟ್ಟೆ ಇಳಿಸುವುದು ಹೀಗೆ

ವೀಣಾ ಭಟ್
Published 16 ನವೆಂಬರ್ 2024, 0:15 IST
Last Updated 16 ನವೆಂಬರ್ 2024, 0:15 IST
   

ಹೆರಿಗೆ ನಂತರ ಹೊಟ್ಟೆ ಇಳಿಸುವುದು ಹೀಗೆ

ಏಳು ದಿನದ ಹಿಂದೆ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆಯಾಗಿದ್ದು,  ಹೊಟ್ಟೆ ಉಬ್ಬಿದೆ. ಅದನ್ನು ಕಡಿಮೆ ಮಾಡುವುದು ಹೇಗೆ? 

ಇದು ಮೊದಲನೆಯ ಮಗು ಅಥವಾ ಎರಡನೆಯ ಮಗು ತಿಳಿಸಿಲ್ಲ. ಇರಲಿ. ಒಂಬತ್ತು ತಿಂಗಳಲ್ಲಿ ಸರಾಸರಿ ತೂಕ ಎಷ್ಟು ಹೆಚ್ಚಾಗಿದೆ ಎಂಬುದನ್ನು ಗಮನಿಸಿ. ಸಹಜ ತೂಕವಿರುವ ಮಹಿಳೆ ಗರ್ಭಧಾರಣೆಯ ಅವಧಿಯಲ್ಲಿ 10ರಿಂದ 12ಕೆ.ಜಿ ತೂಕಗಳಿಸಬಹುದು. ಗರ್ಭಧಾರಣೆಗೂ ಮೊದಲು ಬೊಜ್ಜಿನ ಸಮಸ್ಯೆ ಇದ್ದರೆ, ಅಂಥವರು 8.ಕೆ.ಜಿ ತೂಕವನ್ನಷ್ಟೆ ಹೆಚ್ಚಿಗೆ ಗಳಿಸಬೇಕು. ಆದರೆ, ಈಚೆಗೆ 15ರಿಂದ 20 ಕೆ.ಜಿ. ಹೆಚ್ಚಾಗುತ್ತಿದೆ. ಹೆರಿಗೆ ನಂತರವೂ 9 ತಿಂಗಳವರೆಗೆ ಬಾಣಂತನವೆಂದು ಕಡಿಮೆ ದೈಹಿಕ ಶ್ರಮ, ಹೆಚ್ಚು ಆಹಾರ ಸೇವನೆ, ಮಗುವಿಗೆ ದೀರ್ಘಾವಧಿಯವರೆಗೆ ಸ್ತನ್ಯಪಾನ ಮಾಡಿಸದೇ ಇರುವುದರಿಂದ ದೇಹದ ತೂಕ ಹೆಚ್ಚುತ್ತದೆ. 

ADVERTISEMENT

ಹೊಟ್ಟೆಯ ಮುಂದಿನ ಭಾಗದ  ಮುಖ್ಯ ಸ್ನಾಯು ರೆಕ್ಟಸ್‌ ಅಬ್ಡಾಮಿನಿಸ್‌ ಮಾಂಸಖಂಡ ಬಲಹೀನಗೊಂಡು, ಅದರ ನಡುವಿನ ಅಂತರ ಹೆಚ್ಚಿ, ಕರುಳುಗಳು ಅವೆರಡರ ನಡುವಿನ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ. ಇದರಿಂದ ಹೊಟ್ಟೆ ಉಬ್ಬಿದ ಹಾಗೆ ಅನಿಸುತ್ತದೆ. ಸಾಮಾನ್ಯವಾಗಿ ಅವಳಿ ಮಕ್ಕಳನ್ನು ಹಡೆದವರಲ್ಲಿ, ಅತಿ ತೂಕದ ಮಗು ಹೊಂದಿದವರಲ್ಲಿ, ನೆತ್ತಿನೀರು ಹೆಚ್ಚಿದವರಲ್ಲಿ ಹೆರಿಗೆ ನಂತರ ಹೀಗೆ ಆಗಬಹುದು. ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳನ್ನು ಮಾಡಿ. ಶಸ್ತ್ರಚಿಕಿತ್ಸೆ ಆಗಿರುವುದರಿಂದ ಕನಿಷ್ಠ 8 ವಾರಗಳ ನಂತರ ಆರಂಭಿಸಬಹುದು. ಅಲ್ಲಿಯವರೆಗೆ ಸೀರೆ ಅಥವಾ ಹತ್ತಿಬಟ್ಟೆಯಿಂದ ಮಾಡಿದ ಬೆಲ್ಟ್‌ ಹೊಲಿಸಿಕೊಂಡು ನಡಿಗೆ ಆರಂಭಿಸಬಹುದು. ಎರಡು ವರ್ಷಗಳವರೆಗೆ ಮಗುವಿಗೆ ಎದೆಹಾಲುಣಿಸಿ. ಹೊಟ್ಟೆಯ ಬೊಜ್ಜಷ್ಟೆ ಅಲ್ಲ, ಇಡೀ ಶರೀರದ ಬೊಜ್ಜು ಕಡಿಮೆಯಾಗುತ್ತದೆ.

ಹೊಟ್ಟೆ ಇಳಿಸುತ್ತದೆ ಎಂದು ಹೇಳಿಕೊಳ್ಳುವ ತರಹೇವಾರಿ ಎಣ್ಣೆಗಳು, ವೈಬ್ರೇಟರ್ ಬೆಲ್ಟ್‌, ಲೈಫೊಸಕ್ಷನ್‌ಗಳಂಥ ಆಲೋಚನೆಗಳಿಂದ ದೂರವಿರಿ. ಹಿತಮಿತವಾದ ಪ್ರೊಟೀನ್‌ಯುಕ್ತ, ಕಡಿಮೆ ಕೊಬ್ಬಿನಾಂಶವಿರುವ ಆಹಾರ ಸೇವಿಸಿ. 

ಹೊಟ್ಟೆಯ ಮಾಂಸಖಂಡಗಳನ್ನ ಬಲಪಡಿಸಿಕೊಳ್ಳಲು ದ್ವಿಪಾದಉತ್ತಾನಾಸನ, ನೌಕಾಸನ, ಸೂರ್ಯನಮಸ್ಕಾರ ನಿಯಮಿತವಾಗಿ ಮಾಡಿ. 

ಹೆರಿಗೆಯಾಗಿ ನಾಲ್ಕು ತಿಂಗಳಿಗೆ ಮೊದಲ ಬಾರಿಗೆ ಮುಟ್ಟು ಆರಂಭವಾಯಿತು. ಈಗ ಮುಟ್ಟಾಗುತ್ತಿಲ್ಲ.  ಕಾರಣವೇನಿರಬಹುದು?

ಮಗುವಿಗೆ  ಸ್ತನ್ಯಪಾನವಷ್ಟೆ ಮಾಡಿಸುತ್ತಿರುವಾಗ ಮೊದಲ ಒಂದು ವರ್ಷದವರೆಗೆ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗದೇ ಮುಟ್ಟಾಗುವ ಪ್ರಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಈ ಅಂಡೋತ್ಪತ್ತಿಯ ಪ್ರಕ್ರಿಯೆ ಯಾವಾಗ ಬೇಕಾದರೂ ಆಗಬಹುದು. ಮೂತ್ರತಪಾಸಣೆಯಿಂದ ಮತ್ತೊಮ್ಮೆ ಗರ್ಭಧಾರಣೆ ಆಗಿದೆಯೇ ಎಂಬುದನ್ನು  ಪರೀಕ್ಷಿಸಿಕೊಳ್ಳಿ. 

ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ.ವೀಣಾ ಎಸ್‌. ಭಟ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.