‘ನಿನ್ನೆ ಎಂತಹ ಕೆಲಸ ಆಗೋಯ್ತು ಗೊತ್ತಾ? ಕಚೇರಿಯಲ್ಲಿ ಕೆಲಸದ ಮಧ್ಯೆ ಪೀರಿಯಡ್ ಆಗುವ ದಿನ ಬಂತು ಎಂಬುದನ್ನು ಮರೆತೇ ಬಿಟ್ಟಿದ್ದೆ. ಏನೋ ಕಿರಿಕಿರಿ ಅನಿಸಿದರೂ ಲಕ್ಷ್ಯ ಕೊಡಲಿಲ್ಲ. ಎದ್ದು ಹೋಗುವಾಗ ಹಿಂದೆಯೇ ಓಡಿ ಬಂದ ಸಹೋದ್ಯೋಗಿ ‘ನಿನ್ನ ಡ್ರೆಸ್ ಹಿಂಭಾಗ ಕಲರ್ ಆಗಿದೆ ನೋಡು’ ಎಂದಾಗಲೇ ಅರಿವಿಗೆ ಬಂದಿದ್ದು’ ಎಂದು ಸ್ನೇಹಿತೆ ಅಲವತ್ತುಕೊಂಡಾಗ ಬಹುತೇಕ ಯುವತಿಯರು ಒಂದಲ್ಲ ಒಂದು ಬಾರಿ ಇಂತಹ ಮುಜುಗರ ಅನುಭವಿಸಿರುತ್ತಾರೆ ಎಂದೆನಿಸದಿರಲಿಲ್ಲ.
ಮನೆಗೆಲಸ, ಉದ್ಯೋಗ, ಮಕ್ಕಳ ಜವಾಬ್ದಾರಿ... ಹೀಗೆ ಮಹಿಳೆಗೆ ದೈನಂದಿನ ಒತ್ತಡದ ಮಧ್ಯೆ ತನ್ನ ಬಗ್ಗೆ ಕಾಳಜಿ ವಹಿಸಲು ಸಮಯದ ಅಭಾವವಾಗುವುದು ಸ್ವಾಭಾವಿಕ. ಮನೆಯಲ್ಲಿದ್ದಾಗ ಹೇಗೋ ಇದನ್ನೆಲ್ಲ ನಿರ್ವಹಿಸಿದರೂ, ಹೊರಗಡೆ ಹೋದಾಗ ಸ್ವಲ್ಪ ಕಷ್ಟವೇ. ಮಾಸಿಕ ಸ್ರಾವದ ಕಲೆ ಉಡುಪಿನಲ್ಲಾದಾಗ ಗಾಬರಿ, ನಾಚಿಕೆ ಅನುಭವಿಸುವುದಕ್ಕಿಂತ ಇದನ್ನು ತಡೆಗಟ್ಟುವ ಸುಲಭ ಉಪಾಯಗಳ ಮೊರೆ ಹೋಗಬಹುದು. ಇದಕ್ಕೆ ಪರಿಹಾರವೆಂದರೆ ಪ್ಯಾಂಟಿ ಲೈನರ್. ಇದು ಸ್ಯಾನಿಟರಿ ಪ್ಯಾಡ್ ತರಹವೇ. ಆದರೆ ತೆಳುವಾಗಿ ಚಿಕ್ಕದಾಗಿದ್ದು, ಒಳ ಉಡುಪಿಗೆ ಅಂಟಿಸಬಹುದು.
ಎಷ್ಟೇ ನೆನಪಿಟ್ಟುಕೊಂಡರೂ ಒಮ್ಮೊಮ್ಮೆ ಈ ಋತುಸ್ರಾವದ ದಿನಾಂಕ ಕೈಕೊಟ್ಟು ಬಿಡುತ್ತದೆ. ಒಮ್ಮೊಮ್ಮೆ ನಾಲ್ಕಾರು ದಿನಗಳಿಗಿಂತ ಮೊದಲೇ ಕಾಣಿಸಿಕೊಂಡು ಮುನ್ನೆಚ್ಚರಿಕೆ ವಹಿಸುವಲ್ಲಿ ಎಡವುವಂತೆ ಮಾಡಿಬಿಡುತ್ತದೆ. ಬ್ಯಾಗ್‌ನಲ್ಲಿ ಸ್ಯಾನಿಟರಿ ಪ್ಯಾಡ್, ಕಪ್, ಟ್ಯಾಂಪನ್.. ಹೀಗೆ ಯಾವುದನ್ನು ಬಳಸುತ್ತೇವೆಯೋ ಅದನ್ನಿಟ್ಟುಕೊಂಡಿದ್ದರೂ ಕೂಡ ಪ್ರಯಾಣ ಮಾಡುವಾಗ, ಕಚೇರಿಯಲ್ಲಿ ಕುಳಿತು ಕೆಲಸ ಮಾಡುವಾಗ ಸ್ರಾವ ಶುರುವಾದಾಗ ಕೆಲವೊಮ್ಮೆ ಗಮನಕ್ಕೆ ಬರುವುದಿಲ್ಲ. ಅದು ಉಡುಪಿಗೂ ತಗುಲಿ ಕಲೆಯಾಗಿ ರಂಪಾಟವಾಗಿಬಿಡುತ್ತದೆ. ಹಾಗೆಯೇ ಒಳ ಉಡುಪಿನಲ್ಲಿ ಕೂಡ ಅಸಹ್ಯ ಕಲೆಯಾಗಬಹುದು. ಇನ್ನು ಕೆಲವೊಮ್ಮೆ 4–5 ದಿನಗಳ ಅವಧಿಯಲ್ಲಿ ಸ್ರಾವ ನಿಂತಿದೆ ಎಂದುಕೊಂಡರೆ ಒಂದೆರಡು ದಿನ ಬಿಟ್ಟು ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಪ್ಯಾಂಟಿ ಲೈನರ್ ನೆರವಿಗೆ ಬರುತ್ತದೆ.
ಹಾಗೆಯೇ ತಾಜಾತನ ಕಾಪಾಡಿಕೊಳ್ಳಲು ಕೂಡ ಈ ಪ್ಯಾಂಟಿ ಲೈನರ್ ಸಹಕಾರಿ. ಒದ್ದೆ ಅನುಭವದಿಂದ ಪಾರಾಗಬಹುದು. ಕೆಲವರಿಗೆ ಬಿಳಿ ಮುಟ್ಟಿನ ಸಮಸ್ಯೆ ಇರುತ್ತದೆ. ಇದರಿಂದಲೂ ಒದ್ದೆ ಅನುಭವವಾಗಬಹುದು. ಸಮಸ್ಯೆ ಗಂಭೀರವಾಗಿದ್ದರೆ ವೈದ್ಯರನ್ನು ಕಾಣುವುದು ಉತ್ತಮ. ಆದರೆ ಸಮಸ್ಯೆ ಪರಿಹಾರವಾಗುವವರೆಗೆ ಈ ಪ್ಯಾಂಟಿ ಲೈನರ್ ಬಳಸಬಹುದು. ಮೂತ್ರ ಜನಕಾಂಗದ ಸೋಂಕು (ಯುಟಿಐ) ಬಹುತೇಕ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಕೂಡ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕಾಗುತ್ತದೆ.
ನಿಯಂತ್ರಣವಿಲ್ಲದೆ ಮೂತ್ರ ಸೋರುವ ಸಮಸ್ಯೆಯೂ ಕೆಲವರಲ್ಲಿ ಕಾಣಿಸಿಕೊಳ್ಳಬಹುದು. ಇದು ಪುರುಷರಲ್ಲೂ ಸಾಮಾನ್ಯ. ಆದರೆ ಮಹಿಳೆಯರು ಈ ಸಮಸ್ಯೆಯಿಂದ ಮುಜುಗರವಾಗುವುದರಿಂದ ಪಾರಾಗಲು ಪ್ಯಾಂಟಿ ಲೈನರ್ ಬಳಸಬಹುದು. ಈ ಸಮಸ್ಯೆ ಅತಿಯಾಗಿದ್ದರೆ ವೈದ್ಯರ ಮೊರೆ ಹೋಗಬಹುದು.
ಹಾಗೆಯೇ ಬಾಣಂತಿಯರಲ್ಲಿ ಹಲವು ವಾರಗಳವರೆಗೆ ಸ್ರಾವ ಕಾಣಿಸಿಕೊಳ್ಳುತ್ತದೆ. ಸ್ರಾವ ನಿಂತ ಮೇಲೂ ಅಪರೂಪಕ್ಕೆ ಆಗಬಹುದು. ಆಗ ಕೂಡ ಈ ಪ್ಯಾಂಟಿ ಲೈನರ್ ಬಳಸಬಹುದು. ಆದರೆ ಕೆಲವರಿಗೆ ಇದರ ಬಳಕೆಯಿಂದ ಅಪರೂಪಕ್ಕೆ ನವೆ ಕಾಣಿಸಿಕೊಳ್ಳಬಹುದು. ಆಗ ಇದರ ಬಳಕೆ ನಿಲ್ಲಿಸಿ. ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳುವುದೂ ಸೂಕ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.