ಸ್ಥೂಲಕಾಯ ಹಾಗೂ ಪುರುಷ ಬಂಜೆತನಕ್ಕೆ ಸಂಬಂಧಿಸಿದಂತೆ ಹಲವಾರು ಚಿಕಿತ್ಸೆಗಳು ಲಭ್ಯ ಇವೆ. ತೂಕ ಕಡಿಮೆಯಾದರೆ ಅರ್ಧದಷ್ಟು ಸಮಸ್ಯೆಗಳು ಕಡಿಮೆಯಾದಂತೆಯೇ. ಅದಕ್ಕಾಗಿ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದೇ ಪರಿಣಾಮಕಾರಿಯಾದ ಪರಿಹಾರವಾಗಿದೆ.
ಜೀವನಶೈಲಿ ಬದಲಾವಣೆ
ಜೀವನಶೈಲಿಯಲ್ಲಿ ಬದಲಾವಣೆ ಎಂದರೆ ಮುಖ್ಯವಾಗಿ ಆಹಾರಾಭ್ಯಾಸದಲ್ಲಿ ಬದಲಾವಣೆ ತರಬೇಕು. ಹೆಚ್ಚು ಕ್ಯಾಲರಿ ಇರುವ ಆಹಾರವನ್ನು ಕಡಿಮೆ ಮಾಡಿ, ಹೆಚ್ಚು ಶಕ್ತಿ ನೀಡುವ ಆಹಾರವನ್ನು ಸೇವಿಸುವುದು ಮೊದಲ ಹಂತವಾಗಿರುತ್ತದೆ. ಹೀಗೆ ತೂಕದಲ್ಲಿ ಇಳಿಕೆ ಕಂಡವರಲ್ಲಿ ಬಂಜೆತನ ಕಡಿಮೆಯಾಗಿರುವುದೂ ಕಂಡು ಬಂದಿದೆ. ಬೊಜ್ಜು ಹಾಗೂ ಪುರುಷ ಬಂಜೆತನಕ್ಕೆ ಸಂಬಂಧಿಸಿದಂತೆ ನಡೆಸಿರುವ ಅಧ್ಯಯನಗಳು ಈ ಮಾತಿಗೆ ಸಾಕ್ಷಿ ಒದಗಿಸುತ್ತವೆ. ವ್ಯಾಯಾಮ ಹಾಗೂ ಆಹಾರ ಪದ್ಧತಿಯಿಂದಲೇ ತೂಕ ಕಳೆದುಕೊಂಡರೆ, ತೂಕ ನಿರ್ವಹಿಸಿದವರಲ್ಲಿ ಪೌರುಷ ಸಂಬಂಧಿ ಹಾರ್ಮೋನುಗಳ ಉತ್ಪಾದನೆಯು ಸಮರ್ಪಕವಾಗಿರುವುದೂ ಕಂಡು ಬಂದಿದೆ. ಅಷ್ಟೇ ಅಲ್ಲ ಅವರ ವೀರ್ಯದಲ್ಲಿ ವೀರ್ಯಾಣುಗಳ ಸಂಖ್ಯೆಯೂ, ಗುಣಮಟ್ಟವೂ ಉತ್ತಮವಾಗಿರುವುದು ಕಂಡು ಬಂದಿದೆ.
ಔಷಧಿಗಳು
ತೂಕ ಕಡಿಮೆಗೊಳಿಸಲು ಹಲವಾರು ತಂತ್ರಗಳನ್ನು ಬಳಸಲಾಗುತ್ತದೆ. ಅವುಗಳಲ್ಲಿ ಹಸಿವು ಹಿಂಗಿಸಲು ಔಷಧಿ ಸೇವಿಸುವುದು, ಕೊಬ್ಬು ಸಂಗ್ರಹಣೆಯಾಗುವ ಸಾಮರ್ಥ್ಯ ಕ್ಷೀಣಿಸುವಂತೆ ಮಾಡುವುದು, ಕ್ಯಾಲರಿಗಳ ಲೆಕ್ಕಾಚಾರದಲ್ಲಿ ಆಹಾರ ಸೇವಿಸುವುದು ಹೀಗೆ ಹತ್ತು ಹಲವು ತಂತ್ರಗಳಿಂದ ತೂಕ ಕಳೆದುಕೊಳ್ಳಬಹುದಾಗಿದೆ. ಆದರೆ ಯಾವುದೇ ತಂತ್ರವು ವೀರ್ಯಾಣುವಿನ ಗುಣಮಟ್ಟದಲ್ಲಿ ಹೇಗೆ ಬದಲಾವಣೆಗಳಾಗುತ್ತವೆ ಎಂಬುದನ್ನು ನಿಖರವಾಗಿ ಹೇಳುವಂತಹ ಯಾವುದೇ ಅಧ್ಯಯನಗಳು ಆಗಿಲ್ಲ. ಪುರುಷ ಬಂಜೆತನಕ್ಕೆ ತೂಕ ಕಳೆದುಕೊಳ್ಳುವುದರೊಂದಿಗೆ ಪರಿಹಾರವಾಗಿ ಇನ್ನಾವುದೋ ಪೂರಕ ಕಾರಣವಿದ್ದೇ ಇರುತ್ತದೆ.
ಬ್ಯಾರಿಯಾಟ್ರಿಕ್ ಸರ್ಜರಿ
ತೂಕ ಕಳೆದುಕೊಳ್ಳಲು ಸಾಕಷ್ಟು ಶಸ್ತ್ರಚಿಕಿತ್ಸೆಗಳು ಸದ್ಯ ಲಭ್ಯ ಇವೆ. ಆಹಾರ ಅಭ್ಯಾಸ, ವ್ಯಾಯಾಮ ಇವುಗಳಿಂದ ಯಾವುದೇ ಪರಿಣಾಮಗಳಾಗದಷ್ಟು ಬೊಜ್ಜು ಹೆಚ್ಚಿರುವ ರೋಗಿಗಳಿಗೆ ಈ ಶಸ್ತ್ರಚಿಕಿತ್ಸೆಗಳು ಸಹಾಯಕವಾಗಿವೆ. ಆರೋಗ್ಯದ ದೃಷ್ಟಿಯಿಂದ ಆಹಾರಾಭ್ಯಾಸ ಅಥವಾ ವ್ಯಾಯಾಮ ಜೀವನಶೈಲಿಯಲ್ಲಿ ಬದಲಾವಣೆ ತರದಂಥ ಪರಿಸ್ಥಿತಿಯಲ್ಲಿದ್ದರೆ ಬ್ಯಾರಿಯಾಟ್ರಿಕ್ ಸರ್ಜರಿ ಕೈಗೊಳ್ಳಲಾಗುತ್ತದೆ. ಈ ಶಸ್ತ್ರಚಿಕಿತ್ಸೆಯ ನಂತರವೂ ಪುರುಷರಲ್ಲಿ ಬಂಜೆತನಕ್ಕೆ ಏನಾದರೂ ಪರಿಹಾರ ದೊರೆತಿದೆಯೇ ಎಂಬುದು ಈಗಲೂ ಚರ್ಚಿಸಬಹುದಾದ ವಿಷಯವಾಗಿಯೇ ಉಳಿದಿದೆ. ನಿಖರವಾಗಿ ಹೇಳಬಹುದಾದಂಥ ಯಾವ ಫಲಿತಾಂಶಗಳೂ ಈವರೆಗೆ ಕಂಡು ಬಂದಿಲ್ಲ.
ಹಾರ್ಮೋನು ಮಾತ್ರೆಗಳು
ದೇಹದಲ್ಲಿ ಅಗತ್ಯವಿರುವ ಪ್ರಮಾಣದ ಹಾರ್ಮೋನು ಸ್ರವಿಸಲು ಅನುಕೂಲವಾಗುವಂತೆ ಹಲವಾರು ಮಾತ್ರೆಗಳ ರೂಪದಲ್ಲಿ ಔಷಧಿಗಳನ್ನು ನೀಡಲಾಗುತ್ತದೆ. ಇವೆಲ್ಲವೂ ನಮ್ಮಲ್ಲಿ ಪುರುಷ ಹಾರ್ಮೋನು ಸ್ರವಿಸುವುದು ಹೆಚ್ಚಾಗುವಂತೆಯೂ, ಹೆಣ್ತನದ ಹಾರ್ಮೋನುಗಳ ಸ್ರವಿಸುವಿಕೆಯನ್ನು ನಿಯಂತ್ರಿಸುವಂತೆಯೂ ಕಾರ್ಯನಿರ್ವಹಿಸುತ್ತವೆ. ಆದರೆ ಇವೆಲ್ಲವೂ ಸೂಕ್ತ ತಜ್ಞವೈದ್ಯರ ನಿರ್ದೇಶನದಂತೆಯೇ ಸೇವಿಸಬೇಕು ಎನ್ನುವುದು ನೆನಪಿರಲಿ. ಇವೆಲ್ಲವೂ ಪೌರುಷವನ್ನು ಹೆಚ್ಚಿಸುತ್ತವೆ ಎಂದೆಣಿಸುವುದು ತಪ್ಪು. ಇವೆಲ್ಲವೂ ವೀರ್ಯಾಣುವಿನ ಗುಣಮಟ್ಟವನ್ನು ಹೆಚ್ಚಿಸುತ್ತವೆ ಎಂದೂ ಹೇಳಲಾಗದು. ಅಂತಿಮವಾಗಿ ಬಂಜೆತನಕ್ಕೆ ಪರಿಹಾರ ಆರೋಗ್ಯವಂತ ಜೀವನಶೈಲಿಯೇ ಎಂಬುದು ಮಾತ್ರ ಸ್ಫಟಿಕದಷ್ಟು ಸ್ಪಷ್ಟವಾಗಿದೆ ಎಂದಷ್ಟೇ ಹೇಳಬಹುದು.
ಎಆರ್‌ಟಿ
ಸಂತಾನೋತ್ಪತ್ತಿಗಾಗಿ ಸಹಾಯಕ ತಂತ್ರಗಳೆಂದೇ ಇದನ್ನು ಕರೆಯಲಾಗುತ್ತದೆ. ಇಲ್ಲಿ ವೀರ್ಯಾಣುವನ್ನು ಅಂಡಾಣುವಿನೊಂದಿಗೆ ಸಂಯೋಗಗೊಳಿಸಿ, ಫಲಿತಗೊಳಿಸಲಾಗುತ್ತದೆ. ಸ್ಥೂಲಕಾಯದಿಂದಾಗಿ ಮಿಲನದಿಂದ ಸಹಜವಾಗಿ ಫಲಿತವಾಗದ ಬಂಜೆತನದಲ್ಲಿ ಎಆರ್‌ಟಿ ಸಹಾಯಕ ತಂತ್ರವಾಗಿದೆ. ವೀರ್ಯಾಣುವಿನ ಚಲನೆ, ಆರೋಗ್ಯ, ಸಾಮರ್ಥ್ಯ ಇವುಗಳನ್ನೆಲ್ಲ ಪರಿಗಣಿಸಿಯೇ ಈ ತಂತ್ರವನ್ನು ಅನುಸರಿಲು ವೈದ್ಯರು ಸೂಚಿಸುತ್ತಾರೆ. ಯಾವುದೇ ಕಾರಣಕ್ಕೂ ಪುರುಷ ಬಂಜೆತನಕ್ಕಾಗಿ ಸ್ವಯಂ ವೈದ್ಯಕೀಯ ಮಾಡಿಕೊಳ್ಳುವುದಾಗಲೀ, ತಾಂತ್ರಿಕ್ ಬಾಬಾಗಳ ಬಳಿ ಸಹಾಯ ಪಡೆಯುವುದಾಗಲೀ ಮಾಡಬಾರದು. ಈ ಬಗ್ಗೆ ನಿಮ್ಮ ವೈದ್ಯರ ಬಳಿ ಚರ್ಚಿಸಿ, ಮುಕ್ತವಾಗಿ ಮಾತಾಡಿ, ಆರೋಗ್ಯವಂತ ಪರಿಹಾರ ಕಂಡುಕೊಳ್ಳುವುದು ಒಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.