ಐ ದು ಸಾವಿರ ವರ್ಷಗಳ ಹಿಂದೆ ಪತಂಜಲಿ ಎಂಬ ಮಹಾನ್ ಯೋಗಿ, ಋಷಿ ಮನುಷ್ಯನ ಸೃಷ್ಟಿ ಮತ್ತು ಶಕ್ತಿ ಎರಡರ ಬಗ್ಗೆಯೂ ಆಳವಾದ ಅಧ್ಯಯನ ಮಾಡಿದಾಗ ದೊರೆತ ಮಾಣಿಕ್ಯವೇ ‘ಯೋಗ’. ಮನುಷ್ಯನು ಸೇರಿದಂತೆ ಎಲ್ಲಾ ಜೀವಿಗಳು ತನ್ನಲ್ಲಿ ಮತ್ತು ತನಗೆ ಹೊರಗಿನಿಂದ ಉಂಟಾಗುವ ರೋಗಗಳಿಗೆ ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ. ಈ ಶಕ್ತಿಯನ್ನು ವೃದ್ಧಿಸುವ ಮೂಲಕ ಯಾವುದೇ ಕಾಯಿಲೆಯನ್ನು ಗುಣಪಡಿಸಬಹುದು ಮತ್ತು ಆರೋಗ್ಯಸ್ಥಿತಿಯನ್ನು ಹೆಚ್ಚಿಸಬಹುದಾಗಿದೆ. ಈ ಶಕ್ತಿಯನ್ನು ವೃದ್ಧಿಸುವ ಸಾಧನವೇ ಯೋಗ.
ಯೋಗದಲ್ಲಿ ಮುಖ್ಯವಾಗಿ ನಾಲ್ಕು ಪಥಗಳು
ವ್ಯಕ್ತಿಯ ಸಾಮರ್ಥ್ಯ ಶಕ್ತಿಗೆ ಅನುಸಾರವಾಗಿ ನಾಲ್ಕು ಪಥಗಳಲ್ಲಿ ಯಾವುದಾದರೂ ಒಂದು ಎರಡು ಅಥವಾ ಎಲ್ಲಾ ಮಾರ್ಗಗಳನ್ನು ಅನುಸರಿಸಿ ಜೀವನ್ಮುಕ್ತಿ ಸಾಧಿಸಬಹುದಾಗಿದೆ.
* ಕಾಯಕಯೋಗ: ಕಾಯಕ ಯೋಗಿಗಳಾಗಿ ಫಲಾಪೇಕ್ಷೆಯಿಲ್ಲದೆ ಮಾಡುವ ಕಾಯಕ ಅತ್ಯಂತ ಸಂತೋಷವನ್ನು ಸಮಾಧಾನವನ್ನು ಉಂಟುಮಾಡುತ್ತದೆ ಮತ್ತು ದೈಹಿಕ ಮಾನಸಿಕ ಆರೋಗ್ಯ ವೃದ್ಧಿಸುವುದೇ ಕರ್ಮಯೋಗ.
* ಜ್ಞಾನಯೋಗ: ಜ್ಞಾನವಿಲ್ಲದೆ ಅರಿವಿಲ್ಲ ಅರಿವಿಲ್ಲದೆ ಅನುಭವವಿಲ್ಲ ಅನುಭವವಿಲ್ಲದೆ ಸಂತೋಷವಿಲ್ಲ. ಜ್ಞಾನಯೋಗ ಮಾರ್ಗ ಸತ್ಯ ಅಸತ್ಯಗಳ ಅರಿವನ್ನು ಮಾಡಿಸಿ ಪರಿಶುದ್ಧ ಮನಸನ್ನು ನಿರ್ಮಿಸುತ್ತದೆ.
* ಭಕ್ತಿಯೋಗ: ಭಕ್ತಿಯೆಂದರೆ ದೇವರ ಕೋಣೆಯಲ್ಲಿ ಕೂರುವುದಲ್ಲ, ದೇವರನ್ನು ಸುತ್ತುವುದಲ್ಲ. ಅದು ಭಾವನೆಗಳ ಸಂಸ್ಕಾರ. ಪ್ರೀತಿ, ಅನುಕಂಪ ಮತ್ತು ಶರಣಾಗತಿಯ ವಿಲೀನ. ಪ್ರತಿ ಜೀವಿಯಲ್ಲೂ ನಾನು ಮತ್ತು ನನ್ನಲ್ಲಿ ಪ್ರತಿಜೀವಿ ಎನ್ನುವ ಭಾವವೇ ಭಕ್ತಿಯ ಸುಂದರತೆ.
*ರಾಜಯೋಗ ಅಥವಾ ಅಷ್ಟಾಂಗ ಯೋಗ: ಪತಂಜಲಿ ಮಹರ್ಷಿ ಹೇಳುವ ಹಾಗೆ ರಾಜಯೋಗ ಅಥವಾ ಅಷ್ಟಾಂಗಯೋಗ ಮಾನವನ ಸರ್ವತೋಮುಖ ಅಭಿವೃದ್ಧಿಗೆ ಉತ್ತಮ ಸಾಧನ.
ಅಷ್ಟ ಎಂದರೆ ಎಂಟು. ಅಂಗ ಎಂದರೆ ಪಾದಗಳು ಅಥವಾ ಮೆಟ್ಟಿಲುಗಳು ಎಂದರ್ಥ. ಈ ಎಂಟು ಮೆಟ್ಟಿಲುಗಳನ್ನು ಯಾವುದೇ ವ್ಯಕ್ತಿ ಜೀವನಮುಕ್ತ ಅಥವಾ ಶ್ರೇಷ್ಠತೆಯಡೆಗೆ ಸಾಗಲು ಸಾಧ್ಯ.
ಆ ಅಷ್ಟಾಂಗಗಳೆಂದರೆ
* ಯಮ: ಸಾಮಾಜಿಕ ನಿಬಂಧನೆಗಳು ಸತ್ಯ, ಅಹಿಂಸಾ, ಅಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯ ಈ ಐದು ಸಾಧನಗಳು ವ್ಯಕ್ತಿಯ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
*ನಿಯಮ: ಸ್ವಯಂಶಿಸ್ತು ರೂಪಿಸಿಕೊಳ್ಳದ ಹೊರತು ವ್ಯಕ್ತಿ ಪರಿಪೂರ್ಣತೆ ಹೊಂದಲು ಸಾಧ್ಯವಿಲ್ಲ. ಶೌಚ, ಸಂತೋಷ, ಸ್ವಅಧ್ಯಾಯ ತಪಸ್ಸು ಮತ್ತು ಈಶ್ವರ ಫಣಿದಾನ ಎಂಬ ಐದು ಸಾಧನಗಳು ಬಲಿಷ್ಠವಾದ ವ್ಯಕ್ತಿತ್ವವನ್ನು ರೂಪಿಸುತ್ತದೆ.
* ಪ್ರಾಣಾಯಾಮ: ದೇಹ ಎಷ್ಟೇ ಬಲಿಷ್ಠವಾಗಿದ್ದರೂ ಅದರಲ್ಲಿ ಪ್ರಾಣಶಕ್ತಿ ಇಲ್ಲದಿದ್ದರೆ ವಿದ್ಯುತ್ ಇಲ್ಲದ ತಂತಿಯ ಹಾಗೆ ಬೆಳಕು ಪ್ರಕಾಶಿಸಲು ಸಾಧ್ಯವಿಲ್ಲ. ಪ್ರಾಣದ ಸಮಷ್ಟಿಗೆ ಪ್ರಾಣಾಯಾಮ ಅಭ್ಯಾಸ.
* ಆಸನಗಳು: ದೇಹ ಸಾಮರ್ಥ್ಯಕ್ಕೆ ವಿಶೇಷ ಭಂಗಿಯಲ್ಲಿ ನಿಲ್ಲಿಸುವ ಸೆಳೆಯುವ, ತಿರುಗಿಸುವ, ಹಿಗ್ಗಿಸುವ, ಕುಗ್ಗಿಸುವ ಆಸನಗಳ ಅಭ್ಯಾಸ ಮುಖ್ಯ
* ಪ್ರತ್ಯಾಹಾರ: ಇಂದ್ರಿಯಗಳ ನಿಗ್ರಹ ಅರೋಗ್ಯ ಬದುಕಿಗೆ ದಾರಿ. ಪ್ರತ್ಯಾಹಾರ ಜ್ಞಾನ ಇಂದ್ರಿಯ ನಿಗ್ರಹದ ಪರಿಪಾಠವನ್ನು ಕಲಿಸುತ್ತದೆ.
* ಧಾರಣ: ಮನಸಿನ ಏಕಾಗ್ರತೆಯೇ ಧಾರಣ. ಚೆಲ್ಲಾಪಿಲ್ಲಿಯಾಗಿ ಸಾಗುವ ನೀರು ವ್ಯರ್ಥವಾಗುತ್ತದೆ. ಹಾಗೆಯೇ ಏಕಾಗ್ರತೆಯಿಲ್ಲದ ಮನಸು ಗುರಿ ಮುಟ್ಟಲು ಸಾಧ್ಯವಿಲ್ಲ. ಧಾರಣ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
* ಧ್ಯಾನ: ಏಕಾಗ್ರಚಿತ್ತತೆಯನ್ನು ಸುಲಭಗೊಳಿಸಿ ಮನಸನ್ನು ವಿಶಾಲಗೊಳಿಸಿ ಸುಪ್ತ ಮನಸ್ಸಿನ ಅರಿವಿಗೆ ಬರುವುದೇ ಧ್ಯಾನ.
* ಸಮಾಧಿ: ಧ್ಯಾನದ ಉತ್ತುಂಗ ಸ್ಥಿತಿಯೇ ಸಮಾಧಿ. ವಿಶಾಲ ನಿರಾಧಾರ, ನಿರಾಕಾರ, ಆತ್ಮ ಸಾಕ್ಷಾತ್ಕಾರವೇ ಸಮಾಧಿಯ ಸ್ಥಿತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.