ADVERTISEMENT

ವೀರ್ಯ ಶೇಖರಣೆಗೆ ಉಂಟು ಹಲವು ಮಾರ್ಗ

ಡಾ.ಎಸ್.ಎಸ್.ವಾಸನ್
Published 26 ಅಕ್ಟೋಬರ್ 2018, 19:34 IST
Last Updated 26 ಅಕ್ಟೋಬರ್ 2018, 19:34 IST
   

ಕಳೆದ ಸಂಚಿಕೆಯಲ್ಲಿ, ಕ್ಯಾನ್ಸರ್‌ಗೆ ತುತ್ತಾದ ಪುರುಷರಿಗೆ ಎದುರಾಗಬಹುದಾದ ಸಂತಾನಹೀನತೆ ಸಮಸ್ಯೆ ಹಾಗೂ ಅದನ್ನು ತಡೆಯಲು ಇರುವ ವೀರ್ಯ ಶೀಥಲೀಕರಣದಂಥ ಆಯ್ಕೆಯ ಕುರಿತು ವಿವರಿಸಲಾಗಿತ್ತು.

ಇದೇ ಸಂದರ್ಭ, ವೀರ್ಯವನ್ನು ಪಡೆಯುವ ಆಯ್ಕೆಗಳೂ ಅತಿಮುಖ್ಯ ಎನಿಸುತ್ತವೆ. ಅದರಲ್ಲಿ ಒಂದು, ವೃಷಣದ ಅಂಗಾಂಶ (ಟೆಸ್ಟಿಕ್ಯುಲರ್ ಟಿಶ್ಯೂ) ಶೀಥಲೀಕರಣ.

ಪ್ರೌಢಾವಸ್ಥೆ ತಲುಪದ ರೋಗಿಗಳಿಗೆ, ಅಂದರೆ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ವೀರ್ಯೋತ್ಪತ್ತಿ ಆರಂಭಗೊಳ್ಳದ ರೋಗಿಗಳಿಗೆ, ಸಂತಾನಶಕ್ತಿಯ ಸಂರಕ್ಷಣೆ ಆಯ್ಕೆಯಾಗಿ, ವೃಷಣದ ಅಂಗಾಂಶದ ಮೇಲೆ ಒತ್ತಡ ಹೇರುವ ಮೂಲಕ ಅಥವಾ ಇಡೀ ಅಂಗಾಂಶವನ್ನೇ ಪಡೆದು ಶೀಥಲೀಕರಣಗೊಳಿಸುವ ಮೂಲಕ ವೀರ್ಯವನ್ನು ಶೇಖರಿಸುವ ಮಾರ್ಗಗಳ ಕುರಿತು ಪರಿಣತರು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.

ADVERTISEMENT

ಈ ಅಂಗಾಂಶವನ್ನು ಚಿಕ್ಕ ಶಸ್ತ್ರಚಿಕಿತ್ಸೆಯಿಂದ ಪಡೆದುಕೊಳ್ಳಬಹುದು. ಪ್ರೌಢಾವಸ್ಥೆಯ ಪೂರ್ವ ಹಂತದಲ್ಲಿ ಪ್ರೌಢ ವೀರ್ಯವನ್ನು ಹೊಂದಿರದೇ ಇದ್ದರೂ ಅವು ಈ ಪ್ರಕ್ರಿಯೆಯಲ್ಲಿ ಪ್ರಮುಖವೇ ಆಗಿರುತ್ತವೆ. ಮುಂದೊಂದು ದಿನ ಈ ಪ್ರೌಢವಲ್ಲದ, ಶೀಥಲೀಕರಣಗೊಳಿಸಿದ ವೃಷಣದ ಅಂಗಾಂಶಗಳನ್ನೂ ಕೃತಕ ಗರ್ಭಧಾರಣೆಗೆ ಒಳಪಡಿಸಿ ಯಶಸ್ವಿಯಾಗಲು ತಂತ್ರಜ್ಞಾನ ಸಹಾಯ ಮಾಡಲಿದೆ ಎಂಬ ಭರವಸೆಯೂ ಇದೆ.

ವೃಷಣದ ಅಂಗಾಂಶವನ್ನು ಸೆಲ್ ಸಸ್ಪೆನ್ಷನ್ ಪ್ರಕ್ರಿಯೆಯಂತೆಯೇ ಪಡೆದು ಭವಿಷ್ಯದಲ್ಲಿ ಅಂಗಾಂಶ ಕಸಿಗೆ ಸಮರ್ಥವಾಗಿ ಬಳಸಬಹುದು.

ಸಂತಾನಶಕ್ತಿ ಸಂರಕ್ಷಣೆಯ ಆಯ್ಕೆಗಳು: ಕ್ಯಾನ್ಸರ್ ಬಂದು, ತಮ್ಮ ವೀರ್ಯವನ್ನು ಸಂರಕ್ಷಿಸಲು ಬಯಸುವ ರೋಗಿಗಳಿಗೆ ಪ್ರಮುಖವಾಗಿ ಎರಡು ಆಯ್ಕೆಗಳು ಇರುತ್ತವೆ.

ಮೊದಲನೆಯದು, ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುವ ಮೊದಲು ವೀರ್ಯ ಶೇಖರಣೆ, ಅಂದರೆ ಸ್ಪರ್ಮ್ ಬ್ಯಾಂಕಿಂಗ್. ಎರಡನೆಯದು, ರೇಡಿಯೇಶನ್ ಥೆರಪಿಯ ಸಮಯದಲ್ಲಿ, ರೇಡಿಯೇಷನ್ ಶೀಲ್ಡಿಂಗ್.

ಅಮೆರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಆಂಕಾಲಜಿ ಹಾಗೂ ಅಮೆರಿಕನ್ ಸೊಸೈಟಿ ಫಾರ್ ರಿಪ್ರೊಡಕ್ಟಿವ್ ಮೆಡಿಸನ್ ಶಿಫಾರಸು ಮಾಡುವ ಪ್ರಕಾರ, ಕ್ಯಾನ್ಸರ್‌ಗೆ ತುತ್ತಾದ ರೋಗಿಗಳು, ಕ್ಯಾನ್ಸರ್‌ನ ಚಿಕಿತ್ಸೆ ಆರಂಭಕ್ಕೂ ಮೊದಲು, ಲೈಂಗಿಕತಜ್ಞರನ್ನು ಭೇಟಿ ಮಾಡಿದರೆ ಒಳಿತು. ಕ್ಯಾನ್ಸರ್ ಪತ್ತೆಯಾದ ನಂತರ, ಕ್ಯಾನ್ಸರ್‌ನ ಪರಿಣಾಮ, ಕ್ಯಾನ್ಸರ್ ಚಿಕಿತ್ಸೆ ಕುರಿತು ರೋಗಿಗಳೊಂದಿಗೆ ಚರ್ಚಿಸಲಾಗುತ್ತದೆ.

ಸಂತಾನಶಕ್ತಿಯನ್ನು ಸಂರಕ್ಷಿಸಲು ಬಯಸುವ ಪುರುಷರು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುವ ಮುನ್ನ ವಿಶ್ಲೇಷಣೆಗೆ ವೀರ್ಯದ ಮಾದರಿಯನ್ನು ನೀಡಬೇಕಾಗುತ್ತದೆ. ಈ ವೀರ್ಯ ವಿಶ್ಲೇಷಣೆಯ ಮೇಲೆ ಕೆಲವು ಆಯ್ಕೆಗಳು ಅವಲಂಬಿತವಾಗುತ್ತವೆ.

ಮೊದಲು ವೀರ್ಯದ ಮಾದರಿಯನ್ನು ತೆಗೆದುಕೊಳ್ಳಲಾಗುತ್ತದೆ. ಅದರಲ್ಲೂ ನಾಲ್ಕು ವಿಧಗಳಿವೆ. ಮೊದಲು ಚಲನಶೀಲ ವೀರ್ಯವಿದ್ದರೆ ಅದನ್ನು ಸ್ಪರ್ಮ್ ಬ್ಯಾಂಕಿಂಗ್‍ಗೆ ಶೇಖರಿಸಿಡಬಹುದು. ಗಣನೀಯವಾಗಿ ವೀರ್ಯ ಕಡಿಮೆಯಾಗಿದ್ದರೆ, ಇರುವಷ್ಟನ್ನು ಪಡೆದುಕೊಳ್ಳುವುದು, ಅದೂ ಸಮರ್ತವಾಗಿಲ್ಲದಿದ್ದರೆ, ಶಸ್ತ್ರಚಿಕಿತ್ಸೆ ಮೂಲಕ ಇರುವಷ್ಟು ವೀರ್ಯವನ್ನು ಪಡೆದುಕೊಳ್ಳುವುದು.

ಸ್ಖಲನದಿಂದ ಮೂಲಕವೂ ವೀರ್ಯವನ್ನು ಪಡೆಯಲು ಸಾಧ್ಯವಾಗದೇ ಇದ್ದರೆ, ಹಿಮ್ಮುಖ ಸ್ಖಲನವನ್ನು ಪರೀಕ್ಷಿಸಿ, ವಿಶ್ಲೇಷಿಸಿ ವೀರ್ಯವನ್ನು ಪಡೆದುಕೊಳ್ಳುವುದು. ಮೂತ್ರದಿಂದ ವೀರ್ಯವನ್ನು ಬೇರ್ಪಡಿಸಿ ಪಡೆದುಕೊಳ್ಳುವುದು. ಸ್ಖಲನವೇ ಸಾಧ್ಯವಾಗದಿದ್ದ ಪಕ್ಷದಲ್ಲಿ, ವಿದ್ಯುತ್ ಅಥವಾ ಕಂಪನದ ಮೂಲಕ ವೀರ್ಯವನ್ನು ಪಡೆದುಕೊಳ್ಳುವುದು. ಇವ್ಯಾವ ಆಯ್ಕೆಯೂ ಸಾಧ್ಯವಾಗದೇ ಇದ್ದರೂ ಶಸ್ತ್ರಚಿಕಿತ್ಸೆ ಮೂಲಕ ವೃಷಣದಿಂದ ನೇರವಾಗಿ ವೀರ್ಯವನ್ನು ಪಡೆದುಕೊಳ್ಳಬಹುದು. ಕ್ಯಾನ್ಸರ್ ಚಿಕಿತ್ಸೆಗೆ ಒಳಗಾದ ಸಂದರ್ಭದಲ್ಲಿ ರೇಡಿಯೇಶನ್ ಶೀಲ್ಡಿಂಗ್ ಮಾಡಲಾಗುತ್ತದೆ.

ಕ್ಯಾನ್ಸರ್‌ಗೆ ತುತ್ತಾದ ಪುರುಷರು, ಸಂತಾನಹೀನತೆಯ ಅಪಾಯ ಹಾಗೂ ಸಾಧ್ಯತೆಯನ್ನು ಕಂಡುಕೊಳ್ಳುವುದೂ ಬಹು ಮುಖ್ಯವಾಗುತ್ತದೆ. ಭವಿಷ್ಯದ ಕುರಿತು ಮುನ್ನವೇ ಯೋಚಿಸಿ ಕ್ರಮ ತೆಗೆದುಕೊಳ್ಳುವುದು ಅಗತ್ಯವೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.