ADVERTISEMENT

ವೈರಾಣು ಜ್ವರಕ್ಕೆ ಮುಂಜಾಗ್ರತೆಯೇ ಮದ್ದು

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 19:30 IST
Last Updated 28 ಜೂನ್ 2024, 19:30 IST
   

ಮಳೆಗಾಲದಲ್ಲಿ ಜ್ವರ, ಶೀತ, ನೆಗಡಿ, ಕೆಮ್ಮಿನ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಬದಲಾದ ಹೊರಗಿನ ವಾತಾವರಣಕ್ಕೆ ತಕ್ಕಂತೆ ದೇಹ ತನ್ನ ತಾಪಮಾನವನ್ನು ಹೊಂದಾಣಿಕೆ ಮಾಡಿಕೊಳ್ಳಬೇಕು. ಅದರಲ್ಲಿಯೂ ಮಕ್ಕಳು, ವಯೋವೃದ್ಧರು, ರೋಗದಿಂದ ಬಳುತ್ತಿರುವವರಿಗೆ ಬದಲಾದ ವಾತಾವರಣ ಹಲವು ಸವಾಲುಗಳನ್ನು ತಂದೊಡ್ಡಬಹುದು. ಬಿಸಿಲಿನಿಂದ ಇದ್ದಕ್ಕಿದ್ದ ಹಾಗೆ ಮಳೆಯ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾಗಬಹುದು. ಆದರೆ, ಹೊಂದಾಣಿಕೆಯೆಂಬುದನ್ನು ವ್ಯವಸ್ಥಿತವಾಗಿ ಮಾಡುವುದು ಕೂಡ ಮಳೆಗಾಲದ ಆದ್ಯತೆಗಳಲ್ಲಿ ಒಂದಾಗಬೇಕು.

ಬೇಸಿಗೆಯಲ್ಲಿ ಅತಿ ಹೆಚ್ಚು ತಾಪಮಾನದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುವಂತೆ ಮಳೆಯ ವಾತಾವರಣದಿಂದಾಗಿ ಸಾಮಾನ್ಯ ಜ್ವರ ಹಾಗೂ ಶೀತದ ಭಾದೆ ಹೆಚ್ಚಿರುತ್ತದೆ. ಅದರಲ್ಲಿಯೂ ಮಕ್ಕಳಿಗೆ ನೆಗಡಿ, ಕಫ, ಮೂಗು ಸೋರುವಿಕೆ, ಕೆಮ್ಮಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ವೈರಾಣು ಜ್ವರ

ADVERTISEMENT

ಈ ವೈರಾಣು ಜ್ವರ ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತದೆ. ಅದರಲ್ಲಿಯೂ ಶಾಲೆಗೆ ಹೋಗುವ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮಕ್ಕಳ ಉಸಿರಾಟ ಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪದೇ ಪದೇ ಮಳೆಯಲ್ಲಿ ನೆನೆಯುವ ಮಕ್ಕಳು ವೈರಾಣು ಜ್ವರದಿಂದ ಬಳಲುತ್ತಾರೆ. ಆಟ, ಪಾಠ, ಊಟವನ್ನು ಹಂಚಿಕೊಳ್ಳುವ ಶಾಲಾ ಮಕ್ಕಳಲ್ಲಿ ಈ ವೈರಾಣು ಜ್ವರ ಸರ್ವೇ ಸಾಮಾನ್ಯವಾಗಿರುತ್ತದೆ.

ಮಳೆಗಾಲವೆಂದರೆ ವೈರಾಣುಗಳಿಗೆ ಇಷ್ಟವಾದ ಕಾಲ. ತಮ್ಮ ಸಂಖ್ಯೆ ಹೆಚ್ಚಳ ಮಾಡಿಕೊಂಡು ಒಮ್ಮೆಲೆ ಮನುಷ್ಯನ ಆರೋಗ್ಯದ ಮೇಲೆ ದಾಳಿ ನಡೆಸುತ್ತವೆ. ಹಾಗಾಗಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದರಿಂದ ವೈರಾಣುವಿನ ದಾಳಿಯಿಂದ ತಪ್ಪಿಸಿಕೊಳ್ಳಬಹುದು.

ಏನು ಮಾಡಬಹುದು?

* ನೀರನ್ನು ಚೆನ್ನಾಗಿ ಕುದಿಸಿ, ಆರಿಸಿ, ಕುಡಿಯಬೇಕು. ಮನೆಯಲ್ಲಿ ತಯಾರಿಸಿದ ಆಹಾರ ಸೇವನೆಗೆ ಆದ್ಯತೆ ನೀಡಬೇಕು.

* ಒದ್ದೆಯಾದ ಬಟ್ಟೆಗಳನ್ನು ಧರಿಸಬೇಡಿ.

* ಜನಸಾಂದ್ರತೆ ಇರುವ ಪ್ರದೇಶಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಬೇಡಿ.

* ಮನೆಯೊಳಗೆ ಹಾಗೂ ಸುತ್ತಮುತ್ತಲು ಪ್ರದೇಶಗಳನ್ನು ಆದಷ್ಟು ಸ್ವಚ್ಛವಾಗಿಟ್ಟುಕೊಳ್ಳಿ.

* ಆದಷ್ಟು ಅಂತರ ಕಾಯ್ದುಕೊಳ್ಳಿ. ಮಾಸ್ಕ್‌ ಧರಿಸಿ. ಸ್ಯಾನಿಟೈಸ್‌ ಬಳಸಿ.ವೈರಾಣು ಜ್ವರಗಳಿಗೆ ಆ್ಯಂಟಿಬಯಾಟಿಕ್ಸ್‌ ಔಷಧಿಗಳ ಬಳಕೆ ಬೇಡ. ಅದರಲ್ಲಿಯೂ ಮಕ್ಕಳಿಗೆ ಪದೇ ಪದೇ ಕೆಮ್ಮು, ಜ್ವರ, ಶೀತದ ಔಷಧಿಗಳನ್ನು ಹಾಕುವುದಕ್ಕಿಂತ, ಆದಷ್ಟು ಜ್ವರ ಬಾರದಂತೆ ಮುಂಜಾಗ್ರತೆ ವಹಿಸುವುದು ಒಳ್ಳೆಯದು.–

–ಡಾ.ರವಿಕಿರಣ್‌, ಮಕ್ಕಳತಜ್ಞ ಸಾಕ್ರಾ ವರ್ಲ್ಡ್‌ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.