ಉಪ್ಪಿನಂಗಡಿ: ಹಲವು ಪೋಷಕರು ತಮ್ಮ ಮಕ್ಕಳಿಗೆ ಬೆಳಿಗ್ಗೆ ಬಾಟಲಿಯಲ್ಲಿ ನೀರು ತುಂಬಿಸಿ ಕೊಟ್ಟಿದ್ದರೂ ಅದನ್ನು ಕುಡಿಯದೆ ಇರುವುದು, ವಿದ್ಯಾರ್ಥಿಗಳಲ್ಲಿ ಕಂಡು ಬರುವ ಜ್ವರ, ಹೊಟ್ಟೆನೋವು, ತಲೆನೋವಿನಂತಹ ಬಾಧೆಗಳಿಗೆ ವಿದ್ಯಾರ್ಥಿಗಳು ಕುಡಿಯುವ ನೀರಿನ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಿರುವುದನ್ನು ಸರಿದೂಗಿಸುವ ನಿಟ್ಟಿನಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ ‘ವಾಟರ್ ಬೆಲ್’ ಮೂಲಕ ಮಕ್ಕಳಲ್ಲಿ ನೀರು ಕುಡಿಯಲು ಪ್ರೇರೇಪಿಸಲು ಪ್ರಯೋಗ ರೂಪಿಸಿದೆ.
ನೀರು ಸಕಲ ಜೀವ ರಾಶಿಗಳ ಜೀವಾಳ. ಆರೋಗ್ಯ ಮತ್ತು ಯೋಗ ಕ್ಷೇಮ ಮನುಕುಲದ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿರುವ ಶುದ್ಧ ಕುಡಿಯುವ ನೀರಿನ ಬಳಕೆ ಮಾನವ ಹಕ್ಕುಗಳಲ್ಲೊಂದು. ಶಾಲೆಗಳಲ್ಲಿ ಶುದ್ಧ ನೀರು, ನೈರ್ಮಲ್ಯದ ಅಭ್ಯಾಸಗಳ ಬಗೆಗಿನ ಕಲಿಕೆ, ಮಕ್ಕಳು ಮನೆಯಲ್ಲಿ ಸಮುದಾಯದಲ್ಲಿ ಹಾಗೆಯೇ ಜೀವನದುದ್ದಕ್ಕೂ ಸಕಾರಾತ್ಮಕ ನಡವಳಿಕೆಯನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಿರುತ್ತದೆ ಎಂಬ ಚಿಂತನೆಯೊಂದಿಗೆ ಇಂದ್ರಪ್ರಸ್ಥ ವಿದ್ಯಾಲಯ ವಾಟರ್ ಬೆಲ್ ಪ್ರಯೋಗದ ಮೂಲಕ ವಿದ್ಯಾಲಯ ವೈಶಿಷ್ಠತೆಗೆ ಇನ್ನೊಂದು ಸೇರ್ಪಡೆಗೊಳಿಸಿ ವಿದ್ಯಾರ್ಥಿಗಳ ಪೋಷಕರಿಂದ ಮೆಚ್ಚುಗೆ ಗಳಿಸಿದೆ.
ಏಕೆ ಅವಶ್ಯಕ?: ನೀರು ಬಾಯಾರಿಕೆ ದಣಿವನ್ನು ನಿವಾರಿಸುವುದಲ್ಲದೆ, ದೇಹದ ಸಮತೋಲನವನ್ನು ಸೂಕ್ತ ಮಟ್ಟದಲ್ಲಿ ಕಾಪಾಡಿಕೊಳ್ಳುತ್ತದೆ. ಶರೀರದ ಉಷ್ಣತೆಯನ್ನು ಕಾಯ್ದುಕೊಳ್ಳುವಲ್ಲಿ, ಚರ್ಮದ ಸೌಂದರ್ಯವನ್ನು ಕಾಪಾಡುವಲ್ಲಿ, ಸ್ನಾಯುಗಳ ಶಕ್ತಿಯನ್ನು ವೃದ್ಧಿಸುವಲ್ಲಿ, ರಕ್ತ ಸಂಚಾರ ಸರಾಗಗೊಳಿಸುವಲ್ಲಿ ಹೀಗೆ ಶರೀರದ ಎಲ್ಲಾ ಚಯಾಪಚಯ ಕ್ರಿಯೆಗಳನ್ನು ಉಲ್ಲಾಸಗೊಳಿಸಿ ವ್ಯಕ್ತಿಯನ್ನು ಕ್ರಿಯಾಶೀಲನನ್ನಾಗಿಸಲು ಸಹಕಾರಿಯಾಗಿದೆ. ನೀರು ಮಕ್ಕಳ ಏಕಾಗ್ರತೆ, ಗಮನವ್ಯಾಪ್ತಿ ಮತ್ತು ನಡವಳಿಕೆಯನ್ನು ಪರಿಣಾಮಕಾರಿಯಾಗಿ ಸುಧಾರಿಸುತ್ತದೆ ಎಂಬ ಅರಿಕೆಯೊಂದಿಗೆ ಮಕ್ಕಳಲ್ಲಿ ನೀರಿನ ಅವಶ್ಯಕತೆಯ ಅರಿವು ಮೂಡಿಸಿ, ಮಕ್ಕಳನ್ನು ನೀರು ಕುಡಿಯುವಂತೆ ಪ್ರೇರೇಪಿಸಿದೆ.
ಸುಳ್ಳು ಹೇಳುವವರಿಗೆ ಪಾಠ: ಹಲವು ಪೋಷಕರು ‘ನಮ್ಮ ಮಕ್ಕಳು ಬೆಳಿಗ್ಗೆ ಬಾಟಲಿಯಲ್ಲಿ ತುಂಬಿದ ನೀರನ್ನು ಕುಡಿಯದೆ ಹಾಗೆಯೇ ವಾಪಸ್ ತರ್ತಾರೆ’. ಇನ್ನು ಕೆಲವರು ‘ನೀರು ಯಾಕೆ ಕುಡೀಲಿಲ್ಲ ಅಂದ್ರೆ, ಟೈಮೇ ಇರ್ಲಿಲ್ಲ’ , ‘ಶಾಲೆಯಲ್ಲೇ ನೀರಿನ ವ್ಯವಸ್ಥೆ ಇದೆ ಅದನ್ನೇ ಕುಡಿದೆ ಅಂತ ಸುಳ್ಳು ಹೇಳ್ತಾರೆ’ ಎಂಬ ಅಭಿಪ್ರಾಯಗಳಿಗೆ ಅನುಗುಣವಾಗಿ ಇಂದ್ರಪ್ರಸ್ಥ ವಿದ್ಯಾಲಯ ‘ವಾಟರ್ ಬೆಲ್’ ಎಂಬ ನೂತನ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಈ ಮೂಲಕ ಪಠ್ಯ ವಿಷಯಗಳ ಬೆಲ್‌ನೊಂದಿಗೆ ಹೆಚ್ಚುವರಿಯಾಗಿ ದಿನದಲ್ಲಿ ಮೂರು ಬಾರಿ ‘ವಾಟರ್ ಬೆಲ್’ ಕೊಡಲಾಗುತ್ತದೆ. ಮಕ್ಕಳಿಗೆ ನೀರು ಕುಡಿಯುವಂತೆ ಎಚ್ಚರಿಸುವ ಸಲುವಾಗಿ ಈ ಬೆಲ್ ಇದೆ. ಈ ಸಮಯದಲ್ಲಿ ಆಯಾ ತರಗತಿಯ ‘ನೀರು ಮತ್ತು ಬೆಳಕು ಸಚಿವ’ರೊಂದಿಗೆ ಶಿಕ್ಷಕರು ವಿದ್ಯಾರ್ಥಿಗಳೆಲ್ಲರೂ ಕಡ್ಡಾಯವಾಗಿ ನೀರು ಕುಡಿಯುವಂತೆ ಮೇಲ್ವಿಚಾರಣೆ ನಡೆಸಲಾಗುತ್ತದೆ. ಇದು ಕಲಿಕೆಯ ಅಂಶವನ್ನು ಹೆಚ್ಚಿಸುವ ಕಾರ್ಯತಂತ್ರಗಳಲ್ಲಿ ಒಂದಾಗಿದೆ’ ಎಂದು ಸಂಸ್ಥೆ ತಿಳಿಸಿದೆ.
ವಿದ್ಯಾರ್ಥಿಗಳು ನೈಜ ಅನುಭವ, ಸದೃಢ ಮನಸ್ಸು ಹಾಗೂ ಸುಸ್ಥಿರ ಶರೀರದೊಂದಿಗೆ ಕಲಿಕಾ ಚಟುವಟಿಕೆಗಳಲ್ಲಿ ಮುಕ್ತ ಮನದಿಂದ ತೊಡಗಿಕೊಳ್ಳಬೇಕೆಂಬುದು ಸಂಸ್ಥೆಯ ಈ ವಿನೂತನ ಯೋಜನೆಯ ಆಶಯವಾಗಿದೆ ಎಂದು ಸಂಸ್ಥೆಯ ಸಂಚಾಲಕ ಯು.ಎಸ್.ಎ. ನಾಯಕ್ ತಿಳಿಸಿದ್ದಾರೆ.
* ವಿದ್ಯಾರ್ಥಿಗಳು ನೈಜ ಅನುಭವ, ಸದೃಢ ಮನಸ್ಸು ಹಾಗೂ ಸುಸ್ಥಿರ ಶರೀರದೊಂದಿಗೆ ಕಲಿಕಾ ಚಟುವಟಿಕೆಗಳಲ್ಲಿ ಮುಕ್ತ ಮನದಿಂದ ತೊಡಗಿಕೊಳ್ಳಬೇಕೆಂಬುದು ಸಂಸ್ಥೆಯ ಈ ವಿನೂತನ ಯೋಜನೆಯ ಆಶಯವಾಗಿದೆ.
-ಯು.ಎಸ್.ಎ. ನಾಯಕ್, ಸಂಸ್ಥೆಯ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.