ADVERTISEMENT

ಯುವತಿಯರನ್ನು ಕಾಡುವ ತೂಕವೆಂಬ ಭೂತ!

ಮೇಘನಾ ಸುಧೀಂದ್ರ
Published 13 ಜುಲೈ 2018, 19:30 IST
Last Updated 13 ಜುಲೈ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

22ರ ಹರೆಯದ ಇಬ್ಬರು ಆಫೀಸಿನ ಸಹೋದ್ಯೋಗಿಗಳು ಊಟದ ಸಮಯದಲ್ಲಿ ಇನ್‌ಸ್ಟಾಗ್ರಾಂನಲ್ಲಿ 40ರ ಹರೆಯದ ಇಬ್ಬರು ಹೀರೋಯಿನ್‌ಗಳ ಪ್ರೊಫೈಲ್ ನೋಡುತ್ತಾ ಕುಳಿತ್ತಿದ್ದಾರೆ. ಅವರ ಹೊಟ್ಟೆ ಸಪೂರವಾಗಿದೆ, ಶೀರ್ಷಾಸನ ಮಾಡುವ ಭಂಗಿ ನೋಡಿ ಬೆಚ್ಚಿ ಬಿದ್ದಿದ್ದಾರೆ. ತಮಗಿಂತ ದುಪ್ಪಟ್ಟು ವಯಸ್ಸಿನವರು, ಮಗುವೂ ಆಗಿದೆ... ಹಾಗಾದ್ರೂ ಅವರು ತಮ್ಮ ದೇಹವನ್ನು ಜತನವಾಗಿ ಕಾಪಾಡಿಕೊಂಡಿರುವುದನ್ನು ನೋಡಿ ಅವರ ಬಗ್ಗೆ ಅಸೂಯೆ ಮೂಡುತಿದೆ. ಸಪೂರ–ದಪ್ಪ – ಎಂಬುದು ಹೆಣ್ಣನ್ನು ಹೀಯಾಳಿಸಲಿಕ್ಕೆ ಬಳಸುವ ಶಬ್ದಗಳಲ್ಲ ಎಂದು ಅವರಿಗೆ ಮನವರಿಕೆಯಾಗಿದೆ. ಆದರೆ, ಆಫೀಸಿನ ಮೂರು ಮಹಡಿಯನ್ನು ಮೆಟ್ಟಿಲಿನಲ್ಲಿ ಹತ್ತಲು ಹೋಗಿ ಮಂಡಿನೋವು ತಂದುಕೊಂಡ ಹುಡುಗಿಯರು ಇವರು. ಇನ್ನು ಮುಟ್ಟಿನ ಸಮಯದಲ್ಲಂತೂ ಕಾಡುವ ವಿಪರೀತ ಹೊಟ್ಟೆನೋವು, ಸೊಂಟದ ನೋವಿಗೆ ವೈದ್ಯರು ತೂಕ ಇಳಿಸಿಕೊಳ್ಳಿ ಅಂದಿದ್ದಾರೆ. ಪಿಸಿಓಡಿ ಸಮಸ್ಯೆಯೂ ಸೇರಿ ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ ಎಂದರೆ ತಪ್ಪಿಲ್ಲ.

ನಾನು ಬಾರ್ಸಿಲೋನಾದಲ್ಲಿದ್ದಾಗ ನನ್ನ ಮನೆಯ ಒಡತಿ ‘ಹಾಲು, ಚೀಸ್, ಮೊಸರು – ಇವೆಲ್ಲವೂ ಕಡಿಮೆ ದರದಲ್ಲಿ ಸಿಗುತ್ತದೆ ಎಂಬ ಕಾರಣಕ್ಕೆ ಮನೆಗೆ ತರುವುದು ಬೇಡ’ ಎಂದು ಅನೇಕ ಬಾರಿ ಹೇಳುತ್ತಿದ್ದಳು. ‘ಇವಳಿಗೇನು, ದುಡ್ಡು ಉಳಿಯತ್ತದೆ ಎಂಬ ಕಾರಣಕ್ಕೆ ಹಾಗೆ ಹೇಳುತ್ತಿದ್ದಾಳೆ’ ಎಂದು ನಾನು ಅಂದುಕೊಳ್ಳುತ್ತಿದ್ದರೆ ‘ನೋಡು ಆಮೇಲೆ ಉಳಿಸಿದ ದುಡ್ಡನ್ನೆಲ್ಲಾ ಜಿಮ್‌ಗೆ ಸುರಿಸಬೇಕಾದೀತು, ಆ ಪದಾರ್ಥಗಳಲ್ಲಿ ಹೊಟ್ಟೆಯಲ್ಲಿ ಕೊಬ್ಬು ತುಂಬಿಸುವ ಅಂಶವಿದೆ’ ಎಂಬುದನ್ನು ಮನವರಿಕೆ ಮಾಡಿಕೊಟ್ಟಳು. ಆದರೂ ಮೂರು ತಿಂಗಳು ಸತತವಾಗಿ ಹಾಲು, ಮೊಸರು, ಚೀಸ್ ತಿಂದಿದ್ದಕ್ಕೆ ಹೊಟ್ಟೆ ಕಾಣಿಸತೊಡಗಿತು. ಈ ತೂಕ ಎಂಬುದು ಮಾತ್ರ ‘ಕಟ್ಟೋಕೆ ನಾನಾ ದಿನ, ಕೆಡವೋಕೆ ಮೂರೇ ದಿನ’ ಇದರ ಸಾಲಿಗೆ ಸೇರುವುದಿಲ್ಲ; ಬೇಗ ಬೇಗ ತೂಕ ಜಾಸ್ತಿ ಆಗತ್ತೆ, ಇನ್ನು ಅದನ್ನು ಇಳಿಸೋಕೆ ಪಡುವ ಹರಸಾಹಸ ಇದೆಯೆಲ್ಲಾ ಅದಂತೂ ಭಾರಿ ಕಷ್ಟ. ಬರೀ ಸೊಪ್ಪು–ಸದೆ ತಿನ್ನು; ಅನ್ನ ತಿನ್ನಬೇಡ, ಚಪಾತಿ ತಿನ್ನಬೇಕು – ಹೀಗೆಲ್ಲಾ ಹೇಳುವ ಜನರ ಮಧ್ಯೆ ನಿಜವಾಗಿಯೂ ತೂಕ ಇಳಿಸುವ ದಾರಿ ಕಷ್ಟವೇ ಸರಿ.

ಒಮ್ಮೆ ನನ್ನ ಹಳೆ ಆಫೀಸಿನ ಸಹೋದ್ಯೋಗಿಯಂತೂ ಬರಿ ಸಲಾಡ್ ತಿಂದು, ಹಣ್ಣಿನರಸ ಕುಡಿದು ವೋಲ್ವೋ ಬಸ್ಸಿನಲ್ಲಿ ತಲೆತಿರುಗಿ ಬಿದ್ದಿದ್ದರು; ತೂಕವನ್ನು ಇಳಿಸಿಕೊಳ್ಳಲೇಬೇಕೆಂಬ ಹುಚ್ಚಿನಿಂದ. ‘ಯಾಕಿಷ್ಟು ಕಷ್ಟ ಪಡುತ್ತಿದ್ದೀರಾ?’ ಎಂದು ಅವರನ್ನು ಕೇಳಿದರೆ, ಆಕೆ ಹೇಳಿದ್ದು, ‘ನನ್ನ ಗಂಡನಿಗೆ ನಾನು ಚೆನ್ನಾಗಿ ಕಾಣುತ್ತಿಲ್ಲವಂತೆ, ಅದಕ್ಕೆ ಅವರು ಡೈವೋರ್ಸ್ ಮಾಡುತ್ತಾರಂತೆ’ ಎಂದು. ಗಂಡ ಮತ್ತೊಬ್ಬರ ಕಡೆ ವಾಲಬಾರದು ಎಂಬ ಕಾರಣಕ್ಕೆ ಆಕೆ ಹೀಗೆಲ್ಲಾ ಡಯೆಟ್ ಮಾಡಲು ಶುರು ಮಾಡಿಕೊಂಡಿದ್ದರು.

ADVERTISEMENT

ತಿನ್ನದೇ ತಿನ್ನದೇ ಮುಖವೆಲ್ಲಾ ಕಳೆಗುಂದಿ ಹೋಗಿತ್ತು. ಗುಂಡು ಗುಂಡಗೆ ಸುಂದರವಾಗಿದ್ದ ಆಕೆ ಈಗ ಖಿನ್ನತೆಯ ಪೇಷೆಂಟ್‌ನ ಹಾಗೆ ಕಾಣಿಸುತ್ತಿದ್ದರು.

ಮಗು ಆದ ನಂತರ ಅಥವಾ ಥೈರಾಯಿಡ್‌ ಸಮಸ್ಯೆಯೋ ಅಥವಾ ಸ್ಟಿರಾಯಿಡ್‌ ಬಳಕೆಯಿಂದಲೋ, ಪಿಸಿಓಡಿ ಕಾರಣದಿಂದಲೋ ಹೆಣ್ಣುಮಕ್ಕಳಲ್ಲಿ ಬಹುಬೇಗ ತೂಕ ಜಾಸ್ತಿಯಾಗುತ್ತದೆ. ತುಂಬಾ ತೆಳ್ಳಗೆ ಇ‌ದ್ದರೂ ಕಷ್ಟ; ಒಮ್ಮೊಮ್ಮೆ ಸ್ವಲ್ಪ ದಪ್ಪಗಿರುವ ಹೆಂಗಳೆಯರು ಅವರನ್ನು ದಪ್ಪ ಆಗುವಂತೆ ಪ್ರೇರೇಪಿಸುತ್ತಾರೆ. ಮನೆಕೆಲಸವನ್ನೇ ನೆಚ್ಚಿಕೊಂಡಿರುವ ಗೃಹಿಣಿಯರು ಮಾಡುವ ಕೆಲಸವಂತೂ ನೋಡಿಯೇ ಸುಸ್ತಾಗುವಂತೆ ಮಾಡುತ್ತದೆ; ಆದರೆ ಅವರ ತೂಕ ಇಳಿಯುವುದೇ ಇಲ್ಲ. ಅದಕ್ಕೆ ಡಾಕ್ಟರ್‌ಗಳು ಹೇಳುವುದು ‘ನಿಂತೇ ಕೆಲಸ ಮಾಡುವುದರಿಂದ ಡಿಸ್‌ಪ್ಲೇಸ್ಮೆಂಟ್ ಆಗುವುದಿಲ್ಲ; ಹಾಗಾಗಿ ತೂಕ ಇಳಿಸುವುದಕ್ಕೆ ದೇಹದಲ್ಲಿ ಚಲನೆ ಇದ್ದರಷ್ಟೇ ಕೊಬ್ಬು ಕರಗೋದು’ ಎಂದು.

ಮನೆಕೆಲಸ ಮಾಡುವಷ್ಟರಲ್ಲಿಯೇ ಹೈರಾಣವಾಗುವ ಅಮ್ಮಂದಿರು, ಅತ್ತೆಯಂದಿರು ಮತ್ತೆ ವಾಕಿಂಗ್‌, ಜಿಮ್‌ ಎಂದು ಹೋಗಲಿಕ್ಕಾದರೂ ಹೇಗೆ ಸಾಧ್ಯ? ಒಂದಷ್ಟು ಹೆಣ್ಣಮಕ್ಕಳು ಮಾತ್ರ ಹಟ ಹಿಡಿದು ಎಲ್ಲ ಕೆಲಸಗಳನ್ನು ಮಾಡಿಕೊಂಡು ವಾಕಿಂಗ್ ಕೂಡ ಹೋಗುತ್ತಾರೆ.

ದೇಹದಲ್ಲಿ ತೂಕದಿಂದ ಸಮಸ್ಯೆ ಕಾಣಿಸಿಕೊಂಡಾಗ ಮಾತ್ರ ನಮಗೆ ತೂಕವೂ ಒಂದು ಸಮಸ್ಯೆ ಎಂದು ಅನ್ನಿಸುವುದು.ವಯಸ್ಸು 40 ದಾಟಿದ ಮೇಲೆ ಮಹಿಳೆಯರು ಸೊಂಟನೋವು, ಬೆನ್ನುನೋವು ಅಥವಾ ಕಾಲುನೋವು ಎಂದು ಡಾಕ್ಟರ್ ಬಳಿ ಹೋದರೆ, ಅವರು ಮೊದಲು ಉಸುರುವ ವಾಕ್ಯವೇ ‘ಸ್ವಲ್ಪ ತೂಕ ಕಡಿಮೆ ಮಾಡಿಕೊಳ್ಳಿ’ ಎಂದು. ‘ಇನ್ಮೇಲೆ ನೆಗಡಿ, ಕೆಮ್ಮು ಅಂತ ಹೋದಾಗ್ಲೂ ಅದನ್ನೇ ಹೇಳ್ತಾರೆ ನೋಡು’ ಎಂದು ಸ್ನೇಹಿತೆಯ ಬಳಿ ತಮಾಷೆ ಮಾಡುತ್ತಿ‌ದ್ದೆ. ಕೆಲವೊಮ್ಮೆ ನಿದ್ದೆ ಸರಿಯಾಗಿ ಮಾಡಿಲ್ಲದಿದ್ದರೆ, ನಾರಿನಂಶದ ಪದಾರ್ಥವನ್ನು ಸೇವಿಸದ್ದಿದ್ದರೆ ಅಥವಾ ಗರ್ಭನಿರೋಧಕ ಮಾತ್ರೆಗಳ ಅತಿಯಾದ ಸೇವನೆ – ಇವುಗಳಿಂದಲೂ ತೂಕ ಹೆಚ್ಚುವ ಸಾಧ್ಯತೆಗಳಿವೆ.

ದಪ್ಪಗಿರುವ ಹೆಣ್ಣುಮಕ್ಕಳಲ್ಲಿ ಕೀಳರಿಮೆಯೂ ಜಾಸ್ತಿ ಇರುತ್ತದೆ. ಒಂದು ಎನ್‌ಜಿಒನಲ್ಲಿ ಶನಿವಾರ ಪಾಠ ಹೇಳಿಕೊಡುತ್ತಿದ್ದಾಗ ಒಂದು ಹುಡುಗಿ ಮಾತ್ರ ಮೂಲೆಯಲ್ಲಿ ಕೂತು, ಯಾರೊಂದಿಗೂ ಮಾತನಾಡದೆ ತನ್ನ ಪಾಡಿಗೆ ತಾನಿರುತ್ತಿದ್ದಳು. ‘ಡುಮ್ಮಿ ಡುಮ್ಮಿ’ ಎಂದು ಅವಳನ್ನು ಸಹಪಾಠಿಗಳು ಕರೆಯುತ್ತಿದ್ದರು. 12– 13 ವರ್ಷದ ಆ ಹುಡುಗಿ ಹಾರ್ಮೋನ್ ಸಮಸ್ಯೆಯಿಂದ ವಿಪರೀತ ಊದಿಕೊಂಡಿದ್ದಳು.ಅವಳನ್ನು ಅವಳ ಗೆಳೆಯ–ಗೆಳತಿಯರು ರೇಗಿಸುತ್ತಿದ್ದರಿಂದ ಅವಳು ಖಿನ್ನಳಾಗಿ ಕೂರುತ್ತಿದ್ದಳು. ಶಾಲೆಯಲ್ಲಿ ಸಿಗುವ ಬಿಸಿಯೂಟವನ್ನೂ ತಿನ್ನದೇ, ನೀರು ಮಾತ್ರ ಕುಡಿದು ಸುಮ್ಮನಿರುತ್ತಿದ್ದಳು. ತಮ್ಮಂತೆ ಇಲ್ಲದೆ, ದಪ್ಪಗಿದ್ದಾಳೆ ಎಂಬ ಒಂದೇ ಕಾರಣಕ್ಕೆ ಆ ಹುಡುಗಿಯನ್ನು ಹೀಗೆಲ್ಲಾ ಕರೆಯುವ ವಿಕಾರ ಮನಃಸ್ಥಿತಿ ಮಕ್ಕಳಲ್ಲಿ ಹೇಗೆ ಬಂತು! ಎಂದು ನಾನು ಯೋಚಿಸುತ್ತಿದ್ದೆ.ನಮ್ಮ ಜೊತೆ ಬರುತ್ತಿದ್ದ ಸೈಕ್ಯಾಟಿಸ್ಟ್‌ ‘ನಮ್ಮಂತೆ ಇಲ್ಲದವರನ್ನು ಹೀಗೆಳೆಯುವುದು ನಾವು ದಿನನಿತ್ಯ ಧಾರಾವಾಹಿ ಅಥವಾ ಸಿನಿಮಾಗಳಲ್ಲಿ ನೋಡುತ್ತಿರುತ್ತೇವೆ. ಮಕ್ಕಳಿಗೆ ಮನೆಯಲ್ಲಿಯೋ ಅಥವಾ ವಾಹಿನಿಗಳಿಂದಲೋ ಈ ಮಾತುಗಳು ಬಹಳ ಸಹ್ಯವಾಗುತ್ತದೆ ನೋಡು’ ಎಂದಿದ್ದರು. ನಂತರ ಅವರೇ ಆ ತರಗತಿಯ ಎಲ್ಲಾ ಮಕ್ಕಳನ್ನು ಕರೆಸಿ, ಕೌನ್ಸಿಲಿಂಗ್ ಮಾಡಿ ಮತ್ತೆ ಅವಳನ್ನು ಎಲ್ಲರೊಂದಿಗೂ ಸೇರುವಂತೆ ಮಾಡಿದ್ದರು.

ಹೆಣ್ಣು ಸುಂದರವಾಗಿರುವುದು ಕೇವಲ ಸಪೂರದೇಹದಿಂದ ಮಾತ್ರವಲ್ಲ; ದೇಹ ಎಂಬುದು ಪ್ರತಿಭೆಗೆ ಅಡ್ಡಿಯಲ್ಲ ಎಂಬುದನ್ನು ನಟಿ ವಿದ್ಯಾ ಬಾಲನ್ ನಿರೂ‍ಪಿಸಿದ್ದರು. ಸಿನಿಮಾರಂಗದ ರೂಪುರೇಷೆಗಳಿಗೆ ಹೊಂದಿಕೊಳ್ಳಲು ಪ್ರಯ್ನತಿಸಿ, ಯಾವ್ಯಾವ ರೀತಿಯ ಬಟ್ಟೆಗಳಿಗೆ ತನ್ನ ದೇಹವನ್ನು ಹೊಂದಿಸಿಕೊಳ್ಳಲು ಹೊರಟ ವಿದ್ಯಾ ಸಿಕ್ಕಾಪಟ್ಟೆ ಟೀಕೆಗೆ ಒಳಾಗಿದ್ದರು. ಅದರಿಂದ ಅವರು ಖಿನ್ನತೆಗೂ ಒಳಗಾಗಿದ್ದರು. ನಂತರದ ದಿನಗಳಲ್ಲಿ ತನ್ನ ದೇಹಪ್ರಕೃತಿ ಇರುವುದೇ ಹೀಗೆ, ಎಂಬುದನ್ನು ಅರಿತ ಅವರು ತಾನು ತೆಳ್ಳಗಾಗಲು ಮಾಡಬೇಕಾದ ವ್ಯಾಯಾಮಗಳನ್ನು ಶುರು ಹಚ್ಚಿಕೊಂಡಿದ್ದರು. ಅದರ ಬಗ್ಗೆ ಅನೇಕ ಕಡೆ ಮಾತನಾಡಿದ್ದರು ಕೂಡ. ಸೌಂದರ್ಯವನ್ನೇ ಬಂಡವಾಳ
ವಾಗಿಟ್ಟುಕೊಂಡ ಉದ್ಯಮದಲ್ಲಿ ಇಂತಹವೆಲ್ಲಾ ಸಿಕ್ಕಾಪಟ್ಟೆ ಮಾಮೂಲಿನ ಸಂಗತಿಗಳು. ಸೈಜ್ ಜೀರೋ, ಕ್ರಾಪ್ ಡಯೆಟ್, ಕೀಟೋ ಡಯೆಟ್‌ ಇನ್ನು ಎಂಥದ್ದೋ ಡಯೆಟ್‌ಗಳನ್ನು ಅನುಸರಿಸಿ ಕೆಲವರು ತೂಕ ಇಳಿಸಿಕೊಂಡಿದ್ದರೆ, ಇನ್ನೂ ಕೆಲವರು ರೋಗಿಷ್ಠರೂ ಆಗಿದ್ದಾರೆ. ಆದರೆ ಉತ್ತಮ ಡಾಕ್ಟರ್‌ಗಳು ಸಲಹೆ ನೀಡುವುದೇನೆಂದರೆ ‘ಪ್ರತಿಯೊಬ್ಬ ಮನುಷ್ಯನೂ ದಿನದಲ್ಲಿ ಒಂದು ಗಂಟೆ ವ್ಯಾಯಾಮಕ್ಕಾಗಿ ಮೀಸಲಿಡಬೇಕು, ಹಿತ–ಮಿತವಾಗಿ ತಿನ್ನಬೇಕು, ಬಾಯಿ ಕಟ್ಟಾಕಿದರಷ್ಟೇ ಸಣ್ಣ ಆಗೋದು’ ಎಂದು.

ಒಂದಷ್ಟು ದಿನಗಳ ಹಿಂದೆ ಟೆಡ್‌ಟಾಲ್ಕ್‌ನಲ್ಲಿ ಕೆಲ್ಲಿ ಜೀನ್ ಡ್ರಿಂಕ್ ವಾಕರ್ ಎನ್ನುವ ಹುಡುಗಿ ತಾನು ದಪ್ಪಗಿರುವ ಬಗ್ಗೆ ಹಾಗೂ ಇನ್ನೂ ಅನೇಕ ವಿಷಯಗಳ ಬಗ್ಗೆ ಹಂಚಿಕೊಂಡಿದ್ದಳು. ‘ಫ್ಯಾಟ್ ಫೋಬಿಯಾ’ ಎನ್ನುವ ಸಂಕೀರ್ಣ ವಿಷಯದ ಬಗ್ಗೆ ಮಾತನಾಡಿದ್ದಳು. ಚಿಕ್ಕ ವಯಸ್ಸಿನಲ್ಲೇ ಬ್ಯಾಲೆ ಕ್ಲಾಸಿನಲ್ಲಿ ತನಗೆ ಧರಿಸಲಾಗದಿದ್ದ ಫ್ರಾಕ್‌ನಿಂದ ಕ್ಲಾಸಿನಿಂದ ಹೊರದೂಡಿದ್ದು, ಚಿಕ್ಕ ವಯಸ್ಸಿನಿಂದಲೂ ಪ್ಲಸ್ ಸೈಜಿನ ಬಟ್ಟೆಯನ್ನೇ ಹಾಕಿಕೊಳ್ಳುತ್ತಿದ್ದುದು ಹಾಗೂ ದಪ್ಪಗಿದ್ದಳು ಎನ್ನುವ ಕಾರಣಕ್ಕೆ ಜನ ಅವಳನ್ನು ತಮಾಷೆಯಾಗಿ ಕಾಣುತ್ತಿದ್ದದ್ದು – ಇವೆಲ್ಲದರ ಬಗ್ಗೆ ಅವಳು ವಿಸ್ತೃತವಾಗಿ ಮಾತನಾಡಿದ್ದಾಳೆ. ದಪ್ಪ–ಸಣ್ಣ ಎನ್ನುವ ಪದಗಳು ಕೆಲವೊಮ್ಮೆ ಹೆಣ್ಣನ್ನು ಎಷ್ಟು ಘಾಸಿಗೊಳಿಸುತ್ತವೆ ಎಂದು ಬರೆಯುತ್ತಾ ಕೂತರೆ ಅದು ಮುಗಿಯವುದೇ ಇಲ್ಲ. ತೆಳ್ಳಗೆ–ಬೆಳ್ಳಗೆ ಇದ್ದು ಹೀರೋಯಿನ್ ಪಾತ್ರ ಮಾಡುವವಳು ಕೊಂಚ ದಪ್ಪಗಾದಳು ಎಂದರೆ ಅವಳಿಗೆ ಅಮ್ಮನ ಪಾತ್ರ, ಇಲ್ಲ ಅಕ್ಕನ ಪಾತ್ರ! ಸಣ್ಣ ಇರುವವರು ಹೀರೋಯಿ‌ನ್ ಆಗಲಿಕ್ಕೆ ಲಾಯಕ್ಕು, ದಪ್ಪ ಇರುವವರು ವಿಲನ್ ಪಾತ್ರಕ್ಕೆ ಮೀಸಲು ಎಂಬ ಮನೋಭಾವ ಹಾಗೂ ಕಲ್ಪನೆಗಳು ನಮ್ಮಗಳ ಜೀವನ ನಡುವೆಯೂ ಇರುವುದು ವಿಚಿತ್ರವೇ ಸರಿ.

ಹೌದು, ನಮ್ಮ ಆರೋಗ್ಯದ ಏರುಪೇರಿಗೆ ನಮ್ಮ ತೂಕ ಕಾರಣವಾದರೆ ತಕ್ಷಣ ಇಳಿಸಬೇಕು, ಅದರಲ್ಲೂ ಹೆಣ್ಣುಮಕ್ಕಳಿಗೆ ಇದರಿಂದ ಸಾವಿರಾರು ಸಮಸ್ಯೆಗಳು ಎದುರಾಗುತ್ತವೆ. ಆದರೆ ‘ಡುಮ್ಮಿ’ ಎಂದು ಕರೆದು, ಸಣ್ಣಗಾಗಲು ಏನೂ ಸಹಾಯ ಮಾಡದೆ, ಖಿನ್ನತೆಗೆ ದೂಡುವವರಿಂದ ದೂರ ಇರುವುದೇ ಒಳಿತು. 40 ವರ್ಷದಲ್ಲೂ ಫಿಟ್ ಆಗಿರುವ ಜನರಿಂದ ನಾವೆಲ್ಲಾ ಸಣ್ಣ ಆಗುವುದು ಹೇಗೆಂದು ಕಲಿಯೋಣ. ಅಂದರೆ ನಾಲ್ಕು ಕಾಜು ಬರ್ಫಿ ತಿನ್ನುವ ಕಡೆ ಅರ್ಧ ತಿಂದು, ನಾಲ್ಕು ಸುತ್ತು ಹೆಚ್ಚು ಓಡೋಣ!

ಏನು ಫ್ರೆಂಡ್ಸ್, ಸಣ್ಣಾ ಆಗೋಕೆ ರೆಡಿ ಆದ್ರಾ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.