ADVERTISEMENT

ಕಿಮೋಥೆರಪಿ ಬಗ್ಗೆ ಇರುವ ತಪ್ಪು ಕಲ್ಪನೆಗಳೇನು? ನೀವು ತಿಳಿದಿರಬೇಕಾದ ಸಂಗತಿಗಳು

ಲೇಖನ– ಡಾ ಮಂಗೇಶ್ ಪಿ ಕಾಮತ್, ಹೆಚ್ಚುವರಿ ನಿರ್ದೇಶಕರು, ವೈದ್ಯಕೀಯ ಆಂಕಾಲಜಿ, ಫೋರ್ಟಿಸ್ ಆಸ್ಪತ್ರೆ, ಕನ್ನಿಂಗ್ಹ್ಯಾಮ್ ರಸ್ತೆ, ಬೆಂಗಳೂರು.

ಪ್ರಜಾವಾಣಿ ವಿಶೇಷ
Published 10 ಜುಲೈ 2024, 8:06 IST
Last Updated 10 ಜುಲೈ 2024, 8:06 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಅತ್ಯಂತ ಭಯಾನಕ ಕಾಯಿಲೆಗಳಲ್ಲಿ ಕ್ಯಾನ್ಸರ್‌ ಕೂಡ ಒಂದು. ಇದಕ್ಕೆ ಚಿಕಿತ್ಸೆಯ ವರದಾನವಾಗಿರುವ ಕಿಮೋಥೆರಪಿ ಬಗ್ಗೆ ಸಾಕಷ್ಟು ಜನರು ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ. ಕಿಮೋಥೆರಪಿ ಮಾಡಿಸಿಕೊಳ್ಳುವುದರಿಂದ ಹೆಚ್ಚು ದುಷ್ಪರಿಣಾಮಗಳಾಗುತ್ತ ಎನ್ನುವ ಅಂತೆ-ಕಂತೆಗಳಿಂದಲೇ ಜನ ಕಿಮೋಥೆರಪಿ ಮಾಡಿಸಿಕೊಳ್ಳಲು ಭಯ ಪಟ್ಟು ಹಿಂದೇಟು ಹಾಕುತ್ತಾರೆ. ನಿಜಕ್ಕೂ ಕಿಮೋಥೆರಪಿ ಎಂದರೇನು? ಇದರ ಬಗ್ಗೆ ಹುಟ್ಟಿರುವ ಮಿಥ್ಯೆಗಳ ಬಗ್ಗೆ ಡಾ ಮಂಗೇಶ್ ಪಿ ಕಾಮತ್ ಇಲ್ಲಿ ಮಾಹಿತಿ ನೀಡಿದ್ದಾರೆ.

–––––

ADVERTISEMENT

ಕಿಮೋಥೆರಪಿಯಿಂದ ನಿಮ್ಮ ಕೂದಲು ಶಾಶ್ವತವಾಗಿ ಬೋಳಾಗುವುದೇ?

ಕಿಮೋಥೆರಪಿಯಿಂದ ಕೂದಲು ಉದುರಿ, ಕೂದಲು ಮರುಹುಟ್ಟು ಪಡೆಯುವುದೇ ಇಲ್ಲ ಎಂಬ ಅಪನಂಬಿಕೆ ಸಾಕಷ್ಟು ಜನರಲ್ಲಿದೆ. ಇದು ಸುಳ್ಳು. ಕಿಮೋಥೆರಪಿಯಿಂದ ಕೂದಲುಗಳ ಕಿರುಚೀಲದ ಮೇಲೆ ಪರಿಣಾಮ ಬೀರಿ ಕೂದಲು ತಾತ್ಕಾಲಿಕವಾಗಿ ಉದುರುತ್ತದೆ, ಒಮ್ಮೆ ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾದ ಬಳಿಕ ಅವರಲ್ಲಿ ಕೂದಲು ಮರಳಿ ಬೆಳೆಯಲಿದೆ. ಇನ್ನೂ ಕೆಲವರಿಗೆ ನೆತ್ತಿಯ ಕೂಲಿಂಗ್‌ ವ್ಯವಸ್ಥೆಯಿಂದಲೂ ಸಹ ಕೂದಲು ಉದುರುವ ಪ್ರಮಾಣ ಕಡಿಮೆ ಇರುತ್ತದೆ. ಹೀಗಾಗಿ ಕೂದಲು ಮತ್ತೆ ಬೆಳೆಯುವುದೇ ಇಲ್ಲ ಎಂಬ ಅಪನಂಬಿಕೆ ಅಥವಾ ಅಂತೆ-ಕಂತೆ ಮಾತುಗಳಿಗೆ ಕಿವಿಗೊಡಬೇಡಿ.

ಕಿಮೋಥೆರಪಿಯಿಂದ ಜೀವನಪೂರ್ತಿ ಅಡ್ಡಪರಿಣಾಮಗಳಿಂದ ನರಳಬೇಕೇ?

ಕಿಮೋಥೆರಪಿ ಮಾಡಿಸಿಕೊಳ್ಳುವುದರಿಂದ ಎಲ್ಲರಿಗೂ ದೇಹದ ನೋವಿನ ಜೊತೆಗೆ ವಾಕರಿಕೆ, ಆಯಾಸ ಮತ್ತು ಬಾಯಿಹುಣ್ಣುಗಳಂತಹ ಅಡ್ಡಪರಿಣಾಮಗಳು ಆಗುತ್ತದೆ ಎಂದು ಭಾವಿಸಿದ್ದಾರೆ, ಆದರೆ ಇದು ಸುಳ್ಳು. ಎಲ್ಲರಿಗೂ ಈ ಅಡ್ಡ ಪರಿಣಾಮ ಆಗುವುದಿಲ್ಲ. ಕಿಮೋಥೆರಪಿ ವೇಳೆ ಸೂಕ್ತ ಔಷಧ ಆರೈಕೆ ಹಾಗೂ ಆತ್ಮಸೈರ್ಯ ಹೊಂದಿದ್ದರೆ ಯಾವುದೇ ಅಡ್ಡ ಪರಿಣಾಮ ಸಂಭವಿಸುವುದಿಲ್ಲ. ಒಂದು ವೇಳೆ ವಾಕರಿಕೆ, ಆಯಾಸ ಉಂಟಾದರೂ ಅದಕ್ಕೆ ವೈದ್ಯರು ಸೂಕ್ತ ಔಷಧಗಳನ್ನು ಶಿಫಾರಸು ಮಾಡಲಿದ್ದಾರೆ. ಇದರಿಂದ ಜೀವನ ಪೂರ್ತಿ ಅಡ್ಡಪರಿಣಾಮಗಳಿಗೆ ಒಳಗಾಗುವ ಅವಶ್ಯಕತೆ ಬರುವುದಿಲ್ಲ.

ಕಿಮೋಥೆರಪಿ ಮಾತ್ರ ಕ್ಯಾನ್ಸರ್‌ಗೆ ಚಿಕಿತ್ಸೆಯೇ?

ಸಾಕಷ್ಟು ಜನರು ಕ್ಯಾನ್ಸರ್‌ ಬಂತೆಂದರೆ ಅದಕ್ಕೆ ಇರುವ ಏಕೈಕ ಚಿಕಿತ್ಸೆ ಕಿಮೋಥೆರಪಿ ಎಂದು ಭಾವಿಸಿದ್ದಾರೆ, ಇದು ತಪ್ಪು ಗ್ರಹಿಕೆ. ಕ್ಯಾನ್ಸರ್‌ನಲ್ಲಿ ಹಂತದ ಆಧಾರದ ಮೇಲೆ ಚಿಕಿತ್ಸೆ ಇರಲಿದೆ. ಕೆಲವು ಕ್ಯಾನ್ಸರ್‌ಗಳಿಗೆ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ, ಮತ್ತು ಇಮ್ಯುನೊಥೆರಪಿ ಮೂಲಕವೇ ಗುಣಪಡಿಸಬಹುದು. ಕಿಮೋಥೆರಪಿಗೆ ಒಳಗಾಗಬೇಕೆಂದೇನು ಇಲ್ಲ. ಕೆಲವು ಸಂದರ್ಭಗಳಲ್ಲಿ, ವೈದ್ಯರು ಆರಂಭಿಕ ಹಂತದ ಕ್ಯಾನ್ಸರ್ ಹೊಂದಿರುವ ರೋಗಿಗಳಿಗೆ ಕಿಮೊಥೆರಪಿಯ ಬದಲಿಗೆ ಹಾರ್ಮೋನ್ ಥೆರಪಿ ಅಥವಾ ಇಮ್ಯುನೊಥೆರಪಿಯೊಂದಿಗೆ ಚಿಕಿತ್ಸೆ ನೀಡಿ ಗುಣಪಡಿಸಲಿದ್ದಾರೆ.

ಕಿಮೋಥೆರಪಿ ಬಗ್ಗೆ ಇರಲಿ ಜಾಗೃತಿ

ಕಿಮೋಥೆರಪಿ ನೋವಿನ ಚಿಕಿತ್ಸೆ ಎಂದು ದೂರುವವರಿಗೆ ಕಿಮೋಥೆರಪಿಯ ಬಗ್ಗೆ ಒಂದಷ್ಟು ವಿಚಾರಗಳು ತಿಳಿದಿರುವುದು ಅಗತ್ಯವಿದೆ. ಕಿಮೋಥರೆಪಿ ಕ್ಯಾನ್ಸರ್‌ ಗುಣಮುಖರಾಗಲು ಸಹಕಾರಿ. ಹೀಗಾಗಿ ಈ ಚಿಕಿತ್ಸೆಯ ಬಗ್ಗೆ ಭಯ ಹೊಂದುವುದಕ್ಕಿಂತ ಆತ್ಮವಿಶ್ವಾಸದಿಂದ ಕ್ಯಾನ್ಸರ್‌ ಗೆಲ್ಲಲು ಮುಂದಾಗಬೇಕು. ಯಾವುದೇ ಚಿಕಿತ್ಸೆ ಅಡ್ಡಪರಿಣಾಮಗಳನ್ನು ಹೊಂದಿರುತ್ತದೆ, ಇದರಿಂದ ಕಿಮೋಥೆರಪಿಯೂ ಹೊರತಾಗಿಲ್ಲ, ಆದರೆ, ವೈದ್ಯರೊಂದಿಗೆ ಮುಕ್ತ ಸಂವಹನ ಹೊಂದಿದಾಗ ಮಾತ್ರ ನಿಮ್ಮೆಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆಯಲಿದೆ. ಸಾಮಾನ್ಯ ಕಾಯಿಲೆಯಂತೆಯೇ ಕ್ಯಾನ್ಸರ್‌ನನ್ನು ಗುಣಪಡಿಸಲು ಸಾಧ್ಯ ಎಂಬ ಆತ್ಮ ವಿಶ್ವಾಸ ಹೊಂದಿದಾಗ ಮಾತ್ರ ಕಿಮೋಥೆರಪಿಯ ಮೇಲಿರುವ ಭಯ ಆತ್ಮಬಲವಾಗಿ ಬದಲಾಗುತ್ತದೆ. ಕುಟುಂಬದ ಸಹಕಾರದೊಂದಿಗೆ ಕ್ಯಾನ್ಸರ್‌ ಗೆಲ್ಲಲು ಕಿಮೋಥೆರಪಿಯನ್ನು ನಿಮ್ಮ ಗೆಲುವಿನ ಅಸ್ತ್ರವನ್ನಾಗಿಸಿ ಚಿಕಿತ್ಸೆ ಪಡೆಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.