ADVERTISEMENT

ಮಕ್ಕಳೇಕೆ ಸುಳ್ಳಾಡುತ್ತಾರೆ?

ಕೋಕಿಲ ಎಂ ಎಸ್.
Published 21 ಸೆಪ್ಟೆಂಬರ್ 2020, 19:31 IST
Last Updated 21 ಸೆಪ್ಟೆಂಬರ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಕ್ಕಳು ಸುಳ್ಳು ಹೇಳುವುದು ಸಾಮಾನ್ಯ. ಆದರೆ ಅದೇ ಸುಳ್ಳು ಸರಮಾಲೆಯಾಗಿ ಬೆಳೆಯದೇ ಇರುವಂತೆ ಮಕ್ಕಳನ್ನು ತಿದ್ದುವುದೇ ಪೋಷಕರ ಮುಂದಿರುವ ಬಹುದೊಡ್ಡ ಸವಾಲು.

‘ಅಮ್ಮಾ, ಈ ಬಾರಿ ಟೆಸ್ಟಲ್ಲಿ ನಂಗೆ ಇಪ್ಪತ್ತಕ್ಕೆ ಇಪ್ಪತ್ತು ಅಂಕ ಸಿಕ್ಕಿದೆ’ ಎಂದು ಐದನೇ ತರಗತಿ ಓದುತ್ತಿರುವ ಅನು ಹೆಮ್ಮೆಯಿಂದ ಹೇಳಿದಾಗ ಜಾನಕಿಗೆ ಸಂತೋಷಕ್ಕಿಂತ ಹೆಚ್ಚಾಗಿ ಅನುಮಾನ ಶುರುವಾಯಿತು. ಪ್ರತೀ ಬಾರಿಯೂ ಹನ್ನೆರಡರ ಆಸುಪಾಸಿನಲ್ಲಿ ಬರುತ್ತಿದ್ದ ಅಂಕಗಳು ಇದ್ದಕ್ಕಿದ್ದಂತೆ ಇಪ್ಪತ್ತು ಹೇಗಾಯಿತು, ಅದೂ ಆನ್‌ಲೈನ್ ಕ್ಲಾಸ್ ನಡೆಯುತ್ತಿರುವಾಗ ಎನ್ನುವ ಪ್ರಶ್ನೆ ಕಾಡಿತು. ನಂತರ ಸಮಾಧಾನವಾಗಿ ವಿಚಾರಿಸಿದಾಗ ಗೊತ್ತಾದದ್ದು ಎಲ್ಲ ಉತ್ತರವನ್ನು ಪುಸ್ತಕದಿಂದ ನೋಡಿಯೇ ಬರೆದ ಸತ್ಯ.

ಹೌದು, ಶೇ 95ರಷ್ಟು ಪೋಷಕರ ಬಹುದೊಡ್ಡ ಸಮಸ್ಯೆ ‘ಮಕ್ಕಳು ಹೇಳುವ ಸುಳ್ಳು’. ಮೊದಲು ಅವರೇಕೆ ಸುಳ್ಳುಗಳನ್ನು ಹೇಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.

ADVERTISEMENT

ಸುಳ್ಳುಗಳಿಗೆ ಕಾರಣಗಳು
ಸಾಮಾನ್ಯವಾಗಿ ಮಕ್ಕಳು ಮೂರು ವರ್ಷದವರಿದ್ದಾಗಿನಿಂದಲೇ ಸುಳ್ಳುಗಳನ್ನು ಹೇಳಲು ಪ್ರಾರಂಭಿಸುತ್ತಾರೆ. ಅದನ್ನು ನೀವು ಸಲೀಸಾಗಿ ಗುರುತಿಸಬಹುದು. ನಾಲ್ಕರಿಂದ ಎಂಟು ವರ್ಷದಲ್ಲಿನ ಮಕ್ಕಳು ಅದ್ಭುತವಾದ ಮುಖ ಭಾವಗಳನ್ನು ಬೆರೆಸಿ ಸುಳ್ಳಾಡುತ್ತಾರೆ. ಮಕ್ಕಳು ಬೆಳೆಯುತ್ತಾ ಸುಳ್ಳು ಬೆಳೆಯುತ್ತಾ ಹೋಗುತ್ತದೆ. ಹತ್ತು ವರ್ಷ ದಾಟಿದ ಮಕ್ಕಳು ಸುಳ್ಳನ್ನು ಒಂಚೂರು ಅನುಮಾನ ಬರದ ರೀತಿಯಲ್ಲಿ ಹೇಳಿ ಮುಗಿಸಿರುತ್ತಾರೆ.

* ಮಾಡಿದ ತಪ್ಪನ್ನು ಮುಚ್ಚಿಡಲು, ಮತ್ತದನ್ನು ಸರಿಮಾಡಲು ಇಷ್ಟವಿಲ್ಲದಿದ್ದಾಗ.

* ಕಥೆಗಳನ್ನು/ ವಿಷಯವನ್ನು ಮತ್ತಷ್ಟು ರೋಮಾಂಚನಕಾರಿಯಾಗಿಸಲು - ವಾಸ್ತವಿಕತೆಗೆ ಕೊಂಚ ದೂರವಿರುವ ಫೇರಿಟೇಲ್‌ಗಳನ್ನೇ ಹೆಚ್ಚಾಗಿ ಕೇಳಿ ಬೆಳೆಯುವ ಮಕ್ಕಳು ಯಾವುದೇ ವಿಚಾರಗಳನ್ನು ಹೇಳುವಾಗ ಕಥೆಯ ರೂಪದಲ್ಲಿ ತಮ್ಮ ಕಲ್ಪನೆಗೆ ರೆಕ್ಕೆ ಪುಕ್ಕಗಳನ್ನು ಸೇರಿಸುವುದು ಸಾಮಾನ್ಯ. ಚಿಕ್ಕ ವಯಸ್ಸಿನವರಾದರೆ ಅದನ್ನು ಸೃಜನಶೀಲತೆ ಎಂದರೂ ಬೆಳೆಯುತ್ತಾ ಅದೂ ಬೆಳೆದರೆ ಅದು ಸುಳ್ಳಿನ ಸರಮಾಲೆಯಾಗುತ್ತದೆ.

* ಇಷ್ಟವಿಲ್ಲದ ಕೆಲಸಗಳನ್ನು ಮಾಡದಿರಲು. ಉದಾಹರಣೆಗೆ: ಗಣಿತವೇ ದೊಡ್ಡ ಸಮಸ್ಯೆಯಾದರೆ ಅದರಿಂದ ತಪ್ಪಿಸಿಕೊಳ್ಳಲು ಸುಳ್ಳಿನ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ.

* ಪೋಷಕರ ಹಾಗೂ ಜೊತೆಗಿರುವವರ ಸಾಮಾಜಿಕ ವರ್ತನೆಗಳು. ಎಲ್ಲದಕ್ಕೂ ಕೋಪಿಸಿಕೊಂಡು ಬಯ್ಯುವ ಪೋಷಕರೆದುರು ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದೇ ಸರಿ ಎನಿಸಿಬಿಟ್ಟಿರುತ್ತದೆ.

* ಅನುಕರಣೆ- ಸುಳ್ಳೆಂದರೆ ಏನೂ ಎಂದು ಗೊತ್ತಿರದ ವಯಸ್ಸಿನಲ್ಲಿ ಮಕ್ಕಳು ಅದನ್ನು ಅಳವಡಿಸಿಕೊಳ್ಳುವುದು ಜೊತೆಗಿರುವವರನ್ನು ನೋಡಿಯೇ. ಪೋಷಕರಿಂದಲೆ ಸುಳ್ಳನ್ನು ಕಲಿಯುವ ಸಾಕಷ್ಟು ಉದಾಹರಣೆಗಳಿವೆ.

* ಪ್ರಾಯೋಗಿಕವಾಗಿ ತಿಳಿಯಲು – ಕೆಲವೊಮ್ಮೆ ಇಲ್ಲದ್ದನ್ನು ಊಹಿಸಿ ಹೇಳಿದರೆ ಪೋಷಕರು ಅಥವಾ ಸ್ನೇಹಿತರ ವರ್ತನೆಗಳನ್ನು ಕಣ್ಣಾರೆ ನೋಡಿ ತಿಳಿಯಲು ಸುಳ್ಳುಗಳನ್ನು ಹೇಳುತ್ತಾರೆ.

* ಗಮನ ಸೆಳೆಯಲು.

* ಬೇಕಾದ್ದನ್ನು ಪಡೆಯಲು- ತನಗೆ ಬೇಕಾದ ವಸ್ತು ನೇರವಾಗಿ ಕೇಳಿದರೆ ಸಿಗದು ಎಂದು ಗೊತ್ತಾದ ನಂತರ ಸುಳ್ಳನ್ನು ಹೇಳುವುದು.

* ಭಾವನೆಗಳಿಗೆ ನೋವುಂಟು ಮಾಡುವುದನ್ನು ತಪ್ಪಿಸಲು- ಮಾಡಿದ ತಪ್ಪಿನಿಂದ ಅಥವಾ ವರ್ತನೆಯಿಂದ ತಂದೆ ತಾಯಿ, ಸ್ನೇಹಿತರಿಗೆ ಅಥವಾ ಹತ್ತಿರದ ಪ್ರೀತಿಪಾತ್ರರಿಗೆ ನೋವುಂಟು ಮಾಡುವ ಭಯದಿಂದ ಸುಳ್ಳುಗಳನ್ನು ಹೇಳಿಬಿಡುತ್ತಾರೆ. ಇದನ್ನು ಹಸಿ ಸುಳ್ಳು (ವೈಟ್ ಲೈ) ಎನ್ನುತ್ತಾರೆ.

* ತಜ್ಞರ ಪ್ರಕಾರ ಹೆಚ್ಚು ಶಿಸ್ತಿನ ವಾತಾವರಣದಲ್ಲಿ ಬೆಳೆದ ಮಕ್ಕಳು ಬಹುಬೇಗ ಸುಳ್ಳಿನ ದಾಸರಾಗುತ್ತಾರಂತೆ.

ಸುಳ್ಳಿನ ಸರಮಾಲೆಯನ್ನು ಕಡಿತಗೊಳಿಸುವುದಾದರೂ ಹೇಗೆ?

* ಶಾಂತವಾಗಿರಿ- ವಿಷಯ ತಿಳಿದಾಗ ಆದಷ್ಟು ಸಮಾಧಾನವಾಗಿ ವರ್ತಿಸಿ. ಧ್ವನಿ ಮತ್ತು ಮುಖಭಾವಗಳ ಮೇಲೆ ಹಿಡಿತವಿರಲಿ.

* ಸುಳ್ಳಿನ ಕಾರಣವನ್ನು ಪದೇ ಪದೇ ಪ್ರಶ್ನಿಸದಿರಿ. ಕಾರಣ ಕೇಳುವುದೂ ಮಕ್ಕಳು ಖಿನ್ನತೆಗೆ ಒಳಗಾಗುವಂತೆ ಮಾಡಬಹುದು.

* ಮಕ್ಕಳ ಜೊತೆ ಮುಕ್ತವಾಗಿ ಮಾತಾಡಿ- ಮಕ್ಕಳು ಚಿಕ್ಕವರಿದ್ದಾಗಿನಿಂದಲೆ ಅವರೊಟ್ಟಿಗೆ ಒಳ್ಳೆಯ ಆತ್ಮೀಯತೆ ಬೆಳೆಸಿಕೊಳ್ಳುವುದು ಒಳ್ಳೆಯದು.

* ಸತ್ಯ ಹೇಳುವುದನ್ನು ಉತ್ತೇಜಿಸಿ, ಜೊತೆಗೆ ಅದರ ಮಹತ್ವವನ್ನು ವಿವರಿಸಿ. ಮಕ್ಕಳು ತಪ್ಪೊಪ್ಪಿಕೊಂಡಾಗ, ನಿಜ ಹೇಳಿದಾಗ ಅವರನ್ನು ಪ್ರಶಂಸಿಸಿ.

* ಹದಿಹರೆಯದ ಮಕ್ಕಳ ಸುರಕ್ಷತೆಗಾಗಿ ಸದಾ ಅವರೊಟ್ಟಿಗೆ ಇರುವ ಭರವಸೆಯನ್ನು ನೀಡಿ ಸ್ನೇಹಿತರಂತೆ ನಡೆದುಕೊಳ್ಳಿ.

* ಮಕ್ಕಳಿಗೆ ಸುಳ್ಳಿನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಹೇಳಿ.

(ಲೇಖಕಿ: ಉಪನ್ಯಾಸಕಿ, ತುಮಕೂರು ವಿಶ್ವವಿದ್ಯಾಲಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.