ADVERTISEMENT

ಏನಿದು ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್? ಕೊರೊನಾ ಹರಡುವಿಕೆ ತಡೆಗೆ ಪರಿಣಾಮಕಾರಿಯೇ?

ಪ್ರಜಾವಾಣಿ ವಿಶೇಷ
Published 18 ಆಗಸ್ಟ್ 2020, 19:30 IST
Last Updated 18 ಆಗಸ್ಟ್ 2020, 19:30 IST
ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ (ಪ್ರಾತಿನಿಧಿಕ ಚಿತ್ರ)
ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ (ಪ್ರಾತಿನಿಧಿಕ ಚಿತ್ರ)   
""
""

ಭಾರತದಲ್ಲಿ ವೇಗವಾಗಿ ಆಕ್ರಮಿಸಿಕೊಳ್ಳುತ್ತಿರುವ ಕೊರೊನಾ ಹೆಮ್ಮಾರಿಯನ್ನು ಹಿಮ್ಮೆಟ್ಟಲು ತ್ವರಿತ ಆ್ಯಂಟಿಜನ್ ಪರೀಕ್ಷೆಯನ್ನು (ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್) ಪರಿಚಯಿಸಲಾಗಿದೆ. ಅನುಕೂಲಕ್ಕಾಗಿ ಅದನ್ನು ‘ರಾಟ್’ ಎಂದು ಕರೆಯೋಣ. ಅದರ ಬಗ್ಗೆ ನಿಮಗೆ ಒಂದಿಷ್ಟು ಮಾಹಿತಿ ನೀಡಲು ಇಚ್ಛಿಸುತ್ತೇನೆ.

ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ (ರಾಟ್) ಎಂದರೇನು?

ಪ್ರತಿಯೊಬ್ಬರ ದೇಹದಲ್ಲಿಯೂ ಯಾವುದೇ ರೋಗಗಳು ಬರದಂತೆ ತಡೆಯಲು ರೋಗ ನಿರೋಧಕ ವ್ಯವಸ್ಥೆ ಇರುತ್ತದೆ. ಅವುಗಳು ರೋಗ ನಿರೋಧಕ ಪ್ರೊಟೀನುಗಳಾದ ಆ್ಯಂಟಿಬಾಡಿಗಳನ್ನು (ಪ್ರತಿಜನಕಗಳನ್ನು) ತಯಾರು ಮಾಡುತ್ತವೆ. ನಮ್ಮ ದೇಹದಲ್ಲಿ ಯಾವುದೇ ರೋಗಗಳೂ ಬರದಂತೆ ತಡೆಯುವುದೇ ಆ್ಯಂಟಿಬಾಡಿಗಳು (ಪ್ರತಿಜನಕಗಳು). ಆ್ಯಂಟಿಬಾಡಿಗಳು ಎನ್ನುವವು ನಮ್ಮ ದೇಹದಲ್ಲಿರುವ ರೋಗ ನಿರೋಧಕ ಪ್ರೊಟೀನುಗಳು. ಆ್ಯಂಟಿಜನ್ (ಪ್ರತಿಕಾಯಗಳು) ಎನ್ನುವವು ಕೊರೋನಾ ವೈರಸ್ಸಿನಲ್ಲಿ ಇರುತ್ತವೆ. ವೈರಸ್ಸಿನ ಹೊರಭಾಗದಲ್ಲಿರುವ ಚೂಪು ಮೊಳೆಗಳಂತೆ ಇರುವ ಭಾಗಗಳು ವೈರಸ್ಸು ಜೀವಕೋಶಗಳ ಗೋಡೆಗಳನ್ನು ಬೇಧಿಸಿ ಒಳಗೆ ನುಗ್ಗಿ ಹರಡಲು ಸಹಾಯ ಮಾಡುತ್ತವೆ. ಆ್ಯಂಟಿಬಾಡಿಗಳು ಅವುಗಳನ್ನು ತಟಸ್ಥಗೊಳಿಸಿ ಅಥವಾ ತಡೆ ಒಡ್ಡಿ ಅವುಗಳು ನಮ್ಮ ಜೀವಕೋಶಗಳು ಹಾಳಾಗದಂತೆ ಕಾಪಾಡುತ್ತವೆ. ಈ ಕೆಳಗಿನ ಚಿತ್ರಗಳನ್ನು ನೋಡಿದರೆ ನಿಮಗೆ ಸುಲಭವಾಗಿ ಅರ್ಥವಾಗುತ್ತದೆ.

ADVERTISEMENT

ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಅನ್ನು ನಮ್ಮ ದೇಹದಲ್ಲಿ ಕೊರೊನಾ ವೈರಸ್ಸಿನ ಸೋಂಕು ಇದೆಯೇ ಇಲ್ಲವೇ ಎಂದು ಕಂಡು ಹಿಡಿಯಲು ಬಳಸುತ್ತಾರೆ. ಮೂಗಿನ ದ್ರವವನ್ನು ಹತ್ತಿ ತುಂಡುಗಳಿಂದ ಸಂಪೂರ್ಣ ವೈದ್ಯಕೀಯ ಪರಿಸರದಲ್ಲಿ ಸಂಗ್ರಹಿಸಿ ಪರೀಕ್ಷೆಯನ್ನು ಮಾಡುತ್ತಾರೆ. ದ್ರವವನ್ನು ಸಂಗ್ರಹಿಸಿದ ಒಂದು ಗಂಟೆಯೊಳಗೆ ಈ ಪರೀಕ್ಷೆಯನ್ನು ಮಾಡಿಬಿಡಬೇಕು. ಹಾಗಾಗಿ ಜನವಸತಿ ಭಾಗಗಳಿಗೇ ಹೋಗಿ ಕೂಡ ಈ ಪರೀಕ್ಷೆಯನ್ನು ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಪರೀಕ್ಷೆಯ ಫಲಿತಾಂಶ ಅತಿ ಶೀಘ್ರವಾಗಿ ಅಂದರೆ ಮೂವತ್ತು ನಿಮಿಷಗಳ ಒಳಗೆ ದೊರಕುತ್ತದೆ. ಇದರಿಂದಾಗಿ ಕೊರೊನಾ ವೈರಸ್ಸನ್ನು ತ್ವರಿತವಾಗಿ ಪತ್ತೆ ಹಚ್ಚಿ, ತಕ್ಷಣವೇ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಖಚಿತವಾದ ನಿರ್ಣಾಯಕ ಪರೀಕ್ಷೆ ಎಂದು ಹೇಳಲಾಗುವುದಿಲ್ಲ. ಆದರೂ ಮೊದಲ ಹಂತದಲ್ಲಿ ಸುಲಭವಾಗಿ ಈ ಪರೀಕ್ಷೆ ಬಹಳ ಸಹಕಾರಿಯಾಗುತ್ತದೆ. ಈ ಪರೀಕ್ಷೆಯಲ್ಲಿ ಸೋಂಕು ಇರುವುದು ಕಂಡುಬಂದಲ್ಲಿ ನಿರ್ಣಾಯಕವಾದ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ನಡೆಸುತ್ತಾರೆ. ಆರ್‌ಟಿ‌-ಪಿಸಿಆರ್ ಪರೀಕ್ಷೆಯನ್ನು ಗಂಟಲಿನ ದ್ರವವನ್ನು ತೆಗೆದುಕೊಂಡು ಪರೀಕ್ಷಿಸುತ್ತಾರೆ. ಇದು ನಿರ್ಣಾಯಕ ಪರೀಕ್ಷೆ. ವೈರಸ್ಸಿನಲ್ಲಿರುವ ರಿಬಾಕ್ಸಿ ನ್ಯೂಕ್ಲಿಯಿಕ್ ಆಮ್ಲವೆನ್ನುವ ವಂಶವಾಹಿನಿ ತಂತುಗಳನ್ನು ಗಮನಿಸಿ ಸೋಂಕನ್ನು ದೃಢಪಡಿಸಿಕೊಂಡು ಚಿಕಿತ್ಸೆಯನ್ನು ಪ್ರಾರಂಭಿಸುತ್ತಾರೆ. ಈ ಪರೀಕ್ಷೆಗೆ ಕನಿಷ್ಠ ಪಕ್ಷ ಎರಡರಿಂದ ಐದು ಘಂಟೆಗಳ ಸಮಯ ಹಿಡಿಯುವುದರಿಂದ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ 30 ನಿಮಿಷಗಳಲ್ಲಿ ಫಲಿತಾಂಶ ಕೊಡುವುದರಿಂದ ಮೊದಲ ಹಂತದ ಪರೀಕ್ಷೆಯಾಗಿ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಬಹಳ ಪರಿಣಾಮಕಾರಿಯಾಗಿದೆ. ಆದುದರಿಂದ ಪ್ರಜ್ಞಾವಂತ ನಾಗರಿಕರು ಆತಂಕಕ್ಕೊಳಗಾಗದೆ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್‌ಗಳನ್ನು ಮಾಡಿಸಿಕೊಂಡರೆ ಬೇಗ ಬೇಗ ಕೊರೊನಾ ಹೆಮ್ಮಾರಿಯನ್ನು ಹೊಡೆದೋಡಿಸಲು ಸಾಧ್ಯವಾಗುತ್ತದೆ.

- ಶಾಲಿನಿ ರಜನೀಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.