ADVERTISEMENT

ಮುಟ್ಟಿನಸ್ರಾವ ಎಷ್ಟಿದ್ದರೆ ಆರೋಗ್ಯ?

ಪ್ರಜಾವಾಣಿ ವಿಶೇಷ
Published 15 ಸೆಪ್ಟೆಂಬರ್ 2023, 23:36 IST
Last Updated 15 ಸೆಪ್ಟೆಂಬರ್ 2023, 23:36 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಡಾ. ಸಮೀನಾ ಎಚ್.

ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಮುಟ್ಟಾಗುವುದು ಅಥವಾ ಋತುಸ್ರಾವವಾಗುವುದು ನೈಸರ್ಗಿಕ ಕ್ರಿಯೆ. ಸರಳವಾಗಿ ಹೇಳುವುದಾದರೆ ಅಂಡಾಶಯಗಳು ಬಿಡುಗಡೆ ಮಾಡುವ ಅಂಡಾಣುಗಳು ಫಲಿತಗೊಳ್ಳದೇ ಹೊರಹಾಕುವ ಪ್ರಕ್ರಿಯೆಯನ್ನು ಮುಟ್ಟಾಗುವುದು ಎನ್ನಲಾಗುತ್ತದೆ. ಈ ಋತುಸ್ರಾವದ ಸಮಯದಲ್ಲಿ ಎಷ್ಟು ಪ್ರಮಾಣದ ರಕ್ತಸ್ರಾವವಾದರೆ ಅದು ಸಾಮಾನ್ಯ, ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆದರೆ ಅದನ್ನು ಅಸಹಜವೆಂದೇ ಎಂದು ಪರಿಗಣಿಸಲಾಗುತ್ತದೆ. 

ADVERTISEMENT

ರಕ್ತಸ್ರಾವದ ಸಾಮಾನ್ಯಮಟ್ಟ
ಋತುಸ್ರಾವದ ಸಮಯದಲ್ಲಿ ಸರಾಸರಿ 30 ರಿಂದ 40 ಮಿ.ಲೀಟರ್‌ನಷ್ಟು (ಎಂಎಲ್‌) ರಕ್ತ ನಷ್ಟವಾಗುತ್ತದೆ. ಇದು 2 ರಿಂದ 3 ಟೇಬಲ್‌ ಸ್ಪೂನ್‌ಗೆ ಸಮನಾಗಿರುತ್ತದೆ. ಈ ಅಳತೆಯಲ್ಲಿ ವೈಯಕ್ತಿಕವಾಗಿ ತುಸು ಹೆಚ್ಚು ಕಡಿಮೆಯಾಗಬಹುದು.

ಅತಿ ರಕ್ತಸ್ರಾವವಾಗುತ್ತಿದ್ದರೆ, ಅದನ್ನು ಗುರುತಿಸುವುದು ಮುಖ್ಯವಾಗಿರುತ್ತದೆ. ಅತಿಯಾದ ರಕ್ತಸ್ರಾವವನ್ನು ಮೆನೊರೇಜಿಯಾ ಎಂದು ಕರೆಯಲಾಗುತ್ತದೆ. ಗುರುತಿಸುವಿಕೆಯಿಂದ ಇದು ಸಾಮಾನ್ಯ ಮಟ್ಟದಲ್ಲಿದೆಯೇ? ಅಥವಾ ಬೇರೆ ಆರೋಗ್ಯ ಸಮಸ್ಯೆಗಳನ್ನು ಸೂಚಿಸುತ್ತಿವೆಯೇ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. 

ಅತಿಸ್ರಾವದ ಲಕ್ಷಣಗಳು

l ಗಂಟೆಗೊಮ್ಮೆ ಅಥವಾ ಅದಕ್ಕೂ ಮೊದಲು ಪ್ಯಾಡ್‌ ಅಥವಾ ಟ್ಯಾಂಪೂನ್‌ ಬದಲಾವಣೆ. ಹರಿವನ್ನು ನಿಯಂತ್ರಿಸಲು ದುಪಟ್ಟು ಸಂರಕ್ಷಣೆ (ಎರಡು ಮೂರು ಪ್ಯಾಡ್‌ಗಳ ಬಳಕೆ)

l ಅತಿಯಾದ ಹೆಪ್ಪುಗಟ್ಟಿದ ರಕ್ತದ ತುಣುಕುಗಳು 

l ಏಳು ದಿನಕ್ಕೂ ಹೆಚ್ಚಿನ ಅವಧಿಯ ರಕ್ತಸ್ರಾವ

l ಅತಿಯಾದ ಆಯಾಸ, ದೌರ್ಬಲ್ಯ, ರಕ್ತಹೀನತೆ  ಕೆಲವು ಸಾಮಾನ್ಯ ಕಾರಣಗಳು

l ಹಾರ್ಮೋನ್‌ಗಳಲ್ಲಿ ಅದರಲ್ಲೂ ವಿಶೇಷವಾಗಿ ಈಸ್ಟ್ರೋಜೆನ್‌ ಮತ್ತು ಪ್ರೊಜೆಸ್ಟೆರೋನ್‌ಗಳಲ್ಲಿ ಏರುಪೇರು ಆಗುವುದರಿಂದ ಅತಿಯಾದ ರಕ್ತಸ್ರಾವ ಉಂಟಾಗಬಹುದು.

l ಗರ್ಭಾಶಯದಲ್ಲಿ ಫೈಬ್ರಾಯ್ಡ್‌ ಗಡ್ಡೆಗಳಿಂದ ಅತಿಯಾದ ರಕ್ತಸ್ರಾವ ಮತ್ತು ನೋವಿಗೆ ಕಾರಣವಾಗಬಹುದು.

l ಹಾರ್ಮೋನ್ ಸಂಬಂಧಿತ ಸಮಸ್ಯೆಯಾದ ಪಾಲಿಸಿಸ್ಟಿಕ್ ಒವರಿ ಸಿಂಡ್ರೋಮ್ (ಪಿಸಿಒಎಸ್)ನಿಂದ ಅನಿಗದಿತ ಅವಧಿಗೆ ಅತಿಯಾದ ರಕ್ತಸ್ರಾವವಾಗಬಹುದು.

l ಅಡೆನೊಮಯೋಸಿಸ್: ಗರ್ಭಾಶಯದ ಮಾಂಸಖಂಡಗಳ ಗೋಡೆಯ ಒಳಗೆ ಗರ್ಭಾಶಯ ಪದರಗಳಲ್ಲಿನ ಅಂಗಾಂಶಗಳು ಬೆಳೆಯಲು ಆರಂಭವಾಗುವ ಸ್ಥಿತಿ ಇದಾಗಿದ್ದು, ಮುಟ್ಟಿನ ಅವಧಿಯಲ್ಲಿ ಅತಿಯಾದ ರಕ್ತಸ್ರಾವ ಇರಲಿದೆ.

ಪರಿಹಾರ ಏನು ?

ರಕ್ತವನ್ನು ತಿಳಿಗೊಳಿಸುವ ಮತ್ತು ಹಾರ್ಮೋನ್ ಮಟ್ಟಗಳ ಮೇಲೆ ಪರಿಣಾಮ ಉಂಟುಮಾಡುವ ಔಷಧಗಳು ಅತಿಯಾದ ರಕ್ತಸ್ರಾವಕ್ಕೆ ಕೊಡುಗೆ ನೀಡಬಹುದು.

ರಕ್ತಸ್ರಾವದ ನಿರ್ವಹಣೆ

l ಋತುಸ್ರಾವದ ಸಮಯದಲ್ಲಿ ಸೂಕ್ತ ಪ್ಯಾಡ್‌, ಟ್ಯಾಂಪೂನ್‌, ಮೆನುಸ್ಟ್ರುಯಲ್‌ ಕಪ್‌, ಪಿರಿಯೆಡ್‌ ಅಂಡರ್‌ವೇರ್‌ಗಳ ಬಳಕೆ ಮಾಡಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇದರಿಂದ ಅಪಾಯಕಾರಿ ಸೋಂಕುಗಳನ್ನು ತಪ್ಪಿಸಬಹುದು. 

l ದೈನಂದಿನ ಜೀವನಕ್ಕೆ ತೊಂದರೆ ಉಂಟುಮಾಡುತ್ತಿದ್ದರೆ, ಇದಕ್ಕಾಗಿ ವೈದ್ಯಕೀಯ ಚಿಕಿತ್ಸಾ ವಿಧಾನಗಳಿವೆ. 

ನೆನಪಿಡಬೇಕಾದ ಅಂಶಗಳು

l ನಾಲ್ಕು ಗಂಟೆಗಳಿಗೊಮ್ಮೆ ಸ್ಯಾನಿಟರಿ ನ್ಯಾಪ್‌ಕಿನ್‌ ಬದಲಿಸಿ. ಸೂಕ್ತ ರೀತಿಯಲ್ಲಿ ಸ್ಚಚ್ಛಮಾಡಿಕೊಳ್ಳಿ. ಯೋನಿಯ ಒಳಗೆ ಸೋಂಕಾಗಾದಂತೆ ನೋಡಿಕೊಳ್ಳಿ. ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಿ. 

l ಅತಿಯಾದ ರಕ್ತಸ್ರಾವವಾಗುತ್ತಿದ್ದರೆ ಮನೆಮದ್ದು ಎಂದು ಸುಮ್ಮನೆ ಕೂರಬೇಡಿ. ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ. 

l ವಾರಕ್ಕೆ ಕನಿಷ್ಠ ಮೂರು ಬಾರಿ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿರಿ. ದೈಹಿಕವಾಗಿ ಚಟುವಟಿಕೆ ಹೊಂದಿರುವಾಗ ಅದರಿಂದ ದೇಹ ದಾರ್ಢ್ಯತೆ  ಹೆಚ್ಚುತ್ತದೆ. ಆತ್ಮವಿಶ್ವಾಸ ಬರುತ್ತದೆ. ಆತಂಕ, ಖಿನ್ನತೆ ಕಡಿಮೆಯಾಗುತ್ತದೆ. 

ಬಣ್ಣದ ಬದಲಾವಣೆಯಲ್ಲಿದೆ ಆರೋಗ್ಯ !

ಋತುಸ್ರಾವದ ಸಮಯದಲ್ಲಿ ರಕ್ತದ ಬಣ್ಣದಲ್ಲಿ ಬದಲಾವಣೆ ‌ಸಹಜ. ಆರಂಭದಲ್ಲಿ ಅದು ಪ್ರಖರ ಕೆಂಪು ಬಣ್ಣ ಹೊಂದಿರುತ್ತದೆ. ಗರ್ಭಾಶಯದ ಆರಂಭಿಕ ಹೊರಪದರ ಕಳಚಿಹೋಗುತ್ತಿರುವುದರಿಂದ ಈ ಬಣ್ಣ ಪ್ರಖರವಾಗಿರುತ್ತದೆ. ದಿನಗಳದಂತೆ ದೇಹದ ಹಳೆಯ ರಕ್ತ ಹೊರಹೋಗುವುದರಿಂದ ಗಾಢವಾದ ಕೆಂಪು ಅಥವಾ ಕಂದು ಬಣ್ಣಕ್ಕೆ ತಿರುಗುತ್ತದೆ.

ಅಲ್ಪಪ್ರಮಾಣದ ಋತುಸ್ರಾವವಿರುವಾಗ ಗುಲಾಬಿ ಬಣ್ಣ ಇರಬಹುದು. ಅತಿಯಾದ ಋತುಸ್ರಾವವಿದ್ದರೆ ಗಾಢ ಹೆಪ್ಪುಗಟ್ಟಿದ ರೀತಿಯಲ್ಲಿ ರಕ್ತಸ್ರಾವವಾಗಬಹುದು. ಆ ಐದು ಅಥವಾ ಏಳು ದಿನಗಳ ಅಂತರದಲ್ಲಿ ತಿಳಿ ಗುಲಾಬಿ ಅಥವಾ ಕಂದುಬಣ್ಣದ ರಕ್ತವಿರಬಹುದು. ಹಾರ್ಮೋನ್‌ನಲ್ಲಿನ ವ್ಯತ್ಯಾಸ, ಹರಿವಿನ ಪ್ರಮಾಣದಿಂದ ಅದರ ಬಣ್ಣ ಬದಲಾಗುತ್ತಿರುತ್ತದೆ. ಇದಲ್ಲದೇ ರಕ್ತದ ಬಣ್ಣದಲ್ಲಿ ಬೇರೆ ವ್ಯತ್ಯಾಸ ಕಂಡುಬಂದರೆ ಆರೋಗ್ಯತಜ್ಞರ ಸಲಹೆ ಪಡೆಯುವುದು ಒಳಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.