ಲಾಕ್‌ಡೌನ್ ಅವಧಿಯಲ್ಲಿ ಎರಡ್ಮೂರು ತಿಂಗಳಿನಿಂದ ಮನೆಯೊಳಗೆ ಬಂಧಿಯಾಗಿದ್ದ ಮಹಿಳೆಯರಿಗೆ, ಬ್ಯೂಟಿ ಪಾರ್ಲರ್‌ಗೆ ಹೋಗಿ ಮುಖದ ಅಂದವನ್ನು ವರ್ಧಿಸಿಕೊಳ್ಳಬೇಕೆಂಬ ತವಕ !
ಆದರೆ,ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಮನಿಸಿದಾಗ, ಈ ಸಮಯದಲ್ಲಿ ಹೇರ್ ಸಲೂನ್, ಪಾರ್ಲರ್‌ಗೆ ಹೋಗುವುದು ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಅವರಲ್ಲಿ ಮೂಡುತ್ತಿದೆ.
ಆದರೆ ನಗರದ ಬಹುತೇಕ ಎಲ್ಲಾ ಪಾರ್ಲರ್‌ಗಳು ತಮ್ಮ ಗ್ರಾಹಕರ ಸುರಕ್ಷತೆ ಜೊತೆಗೆ ಸಿಬ್ಬಂದಿ ಆರೋಗ್ಯ ಕಾಳಜಿಗೂ ಹೆಚ್ಚು ಗಮನ ನೀಡಿದ್ದಾರೆ ಎಂಬುದೂ ಸತ್ಯ.
ಸ್ಯಾನಿಟೈಸ್ ಕಡ್ಡಾಯ
ಪಾರ್ಲರ್ ಹೋಗುವವರು ಮಾಸ್ಕ್ ಧರಿಸಬೇಕಾದುದು ಕಡ್ಡಾಯ. ಗ್ರಾಹಕರ ದೇಹದ ಉಷ್ಣತೆ ಚೆಕ್ ಮಾಡಿ ಒಳಗೆ ಬಿಡಲಾಗುತ್ತದೆ. ಸ್ಯಾನಿಟೈಸರ್, ಕಾಲಿಗೆ ಪ್ಲಾಸ್ಟಿಕ್ ಸಾಕ್ಸ್ ನೀಡುತ್ತಾರೆ. ಗ್ರಾಹಕನ ಜೊತೆ ಬೇರೆ ಯಾರಿಗೂ ಪ್ರವೇಶವಿಲ್ಲ.
‘ದೇಹದ ಉಷ್ಣತೆ ಹೆಚ್ಚಿದ್ದರೆ ವಾಪಸು ಕಳುಹಿಸುತ್ತೇವೆ. ಗ್ರಾಹಕರು ಸೇವೆ ಪಡೆದು ತೆರಳಿದ ನಂತರ ಅವರಿಗೆ ಉಪಯೋಗಿಸಿದ ಚಾಚಣಿಗೆ, ನೀರಿನ ಪೈಪ್ ಸೇರಿ ಎಲ್ಲಾ ವಸ್ತುಗಳು, ಕುರ್ಚಿಯನ್ನು ಸ್ಯಾನಿಟೈಸ್ ಮಾಡುತ್ತೇವೆ.ಐಬ್ರೊ ಮಾಡುವಾಗ ಹಲ್ಲು ಉಪಯೋಗಿಸುವ ಬದಲು ಕುತ್ತಿಗೆಗೆ ಗಂಟು ಹಾಕಿ ಮಾಡುತ್ತೇವೆ’ ಎಂದು ಹೇಳಿದರು ಬೆಂಗಳೂರಿನ ಬಸವೇಶ್ವರನಗರದ ಸ್ಟೆಸಿ ಸ್ಟುಡಿಯೊ ಪಾರ್ಲರ್‌ನ ಮುಖ್ಯಸ್ಥೆ ಜಯಾ ವೈಷ್ಣವ್.
‘ಸ್ಟೆಸಿ ಸ್ಟುಡಿಯೊದಲ್ಲಿ 6 ಚೇರ್‌ಗಳಿವೆ. ಒಬ್ಬ ಗ್ರಾಹಕ ಬಂದು ಹೋದ ನಂತರ, ಕುರ್ಚಿಯನ್ನು ಸ್ಯಾನಿಟೈಸ್ ಮಾಡಿ, ಮತ್ತೆ ಅರ್ಧಗಂಟೆ ಅದನ್ನು ಬಳಸುವುದಿಲ್ಲ. ಹಾಗೇ ಫೇಶಿಯಲ್‌ಗೂ ಐದು ಕೋಣೆಗಳಿವೆ. ಒಂದು ಬಾರಿ ಉಪಯೋಗಿಸಿದ ಕೋಣೆಯನ್ನು ಸ್ಯಾನಿಟೈಸ್ ಮಾಡಿ 36 ಗಂಟೆ ಬಳಸುವುದಿಲ್ಲ’ ಎಂಬುದು ಅವರ ವಿವರಣೆ.
ಕಿರಿದಾದ ಜಾಗದಲ್ಲಿ ವೈರಸ್ ಸೋಂಕು ತಗುಲುವ ಅಪಾಯ ಹೆಚ್ಚು. ಆದರೆ ಗ್ರಾಹಕನನ್ನು ಮುಟ್ಟದೇ ಸೇವೆ ನೀಡುವುದೂ ಸಾಧ್ಯವಿಲ್ಲ.ಹಾಗಾಗಿ ಎಲ್ಲಾ ಪಾರ್ಲರ್‌ಗಳಲ್ಲಿ ಸಿಬ್ಬಂದಿ ಮಾಸ್ಕ್, ಫೇಸ್‌ಶೀಲ್ಡ್, ಗ್ಲೌಸ್, ಪಿಪಿಇ ಕಿಟ್ ಬಳಸುತ್ತಿದ್ದಾರೆ.
ಗ್ರಾಹಕರೇ ಎಚ್ಚರಿಕೆ ವಹಿಸಿ
ಪಾರ್ಲರ್‌ಗಳಲ್ಲಿ ಎಷ್ಟೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೂ ಪರಿಶೀಲನೆ ನಡೆಸಿಹೋಗಬೇಕಾದ ಕೆಲಸ ಗ್ರಾಹಕನದು. ಈ ಹಿನ್ನೆಲೆಯಲ್ಲಿ ಪಾರ್ಲರ್‌ಗೆ ಹೋಗುವ ಗ್ರಾಹಕರಿಗೆ ಜಯಾ ವೈಷ್ಣವ್ ನೀಡಿದ ಕೆಲ ಸಲಹೆ ಇಲ್ಲಿವೆ.
* ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳುವ ಮುನ್ನ ಪಾರ್ಲರ್‌ನ ವೆಬ್‌ಸೈಟ್ ಹೋಗಿ ಅಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿತಿಳಿದುಕೊಳ್ಳಬೇಕು. ಫೋನ್ ಮೂಲಕವೂ ಮಾಹಿತಿ ಪಡೆದುಕೊಳ್ಳಬಹುದು.
* ಸಲೂನ್‌ಗೆ ಹೋಗುವಾಗ ಮಾಸ್ಕ್ ಕಡ್ಡಾಯ ಬಳಸಿ. ಸ್ಯಾನಿಟೈಸರ್ ಬಳಸಿ. ಆ ಜಾಗ ಆರಾಮದಾಯಕವಾಗಿದೆಯೇ ಎಂದು ಚೆಕ್ ಮಾಡಿಕೊಳ್ಳಿ. ಸಿಬ್ಬಂದಿ ಫೇಸ್‌ಮಾಸ್ಕ್, ಫೇಸ್ ಶೀಲ್ಡ್, ಗ್ಲೌಸ್ ಬಳಸುತ್ತಾರೆಯೇ ಗಮನಿಸಿ.
* ಹೋಗುವ ಮುಂಚೆ ಯಾವ ಏರಿಯಾದ ಪಾರ್ಲರ್, ಆ ಪ್ರದೇಶದಲ್ಲಿ ಕೊರೊನಾ ಸೋಂಕು ಪರಿಸ್ಥಿತಿ ಹೇಗಿದೆಎಂದು ತಿಳಿದುಕೊಳ್ಳುವುದು ಉತ್ತಮ.
* ಪಾರ್ಲರ್‌ಗೆ ಹೋದವರು, ಅಲ್ಲಿನ ಬಾತ್‌ರೂಮ್, ಟಾಯ್ಲೆಟ್ ಉಪಯೋಗಿಸಬಾರದು.
* ಮನೆಯಿಂದಲೇ ನೀರು, ಜ್ಯೂಸ್ ತೆಗೆದುಕೊಂಡು ಹೋಗಿ. ಪಾರ್ಲರ್‌ನಲ್ಲಿ ಬಾಗಿಲ ಹಿಡಿ, ಮ್ಯಾಗಜೀನ್ಸ್ ಏನನ್ನೂ ಮುಟ್ಟಬಾರದು.
* ಯಾವುದೇ ವಸ್ತುಗಳನ್ನು ಮುಟ್ಟಿದರೂ ಸ್ಯಾನಿಟೈಸರ್‌ನಿಂದ ಕೈತೊಳೆದುಕೊಳ್ಳುತ್ತಿರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.