ನಾಯಿಕೆಮ್ಮು ಮಕ್ಕಳಿಗೆ ಮಾರಕವಾಗಿರುವಂತಹ ತೀವ್ರ ಸ್ವರೂಪದ ಸಾಂಕ್ರಾಮಿಕ ರೋಗ. ಇದು ಮೊದಲು ಪ್ರಪಂಚದ ಮೂಲೆ ಮೂಲೆಗಳಲ್ಲಿ ತನ್ನ ಪ್ರತಾಪ ತೋರಿಸುತ್ತಿತ್ತು. ಇಂದು ಅದೆಷ್ಟೋ ದೇಶಗಳಲ್ಲಿ ಸೌಮ್ಯ ಸ್ವರೂಪಕ್ಕೆ ಇಳಿದಿದ್ದು, ಕೆಲವೆಡೆಯಂತೂ ಹೇಳ ಹೆಸರಿಲ್ಲದಂತೆ ಮಾಯವಾಗಿದೆ. ಆದರೆ ನಮ್ಮ ದೇಶದ ಕೆಲವರು ಮದ್ದು, ಮಾಟ, ದೇವರ ಕಾಟ ಎಂಬ ಮೂಢನಂಬಿಕೆಯ ಬಲೆಯಲ್ಲಿಯೇ ಬಂಧಿತರಾಗಿರುವುದರಿಂದ ಈ ರೋಗ ಇಂದಿಗೂ ಪ್ರಭುತ್ವವನ್ನು ಸಾಧಿಸಿಕೊಂಡೇ ಇದೆ. ಈ ರೋಗದ ಬಗ್ಗೆ ಜನಸಾಮಾನ್ಯರಲ್ಲಿರುವ ತಿಳಿವಳಿಕೆಯ ಕೊರತೆ ಇದರ ಪ್ರಭುತ್ವಕ್ಕೆ ಪುಷ್ಟಿಕೊಟ್ಟಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ರೋಗದ ಪ್ರಮಾಣ
ನಾಯಿಕೆಮ್ಮು ಬೊರ‍್ಡೆಟಲ್ಲಾ ಷರ್ಟುನಿಸ್ ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ. ರೋಗದ ಸ್ವರೂಪವು ರೋಗಕಾರಕದ ಸೋಂಕುಗುಣ, ಮಗುವಿನಲ್ಲಿಯ ರೋಗ ಪ್ರತಿರೋಧಕ ಶಕ್ತಿ, ವಾತಾವರಣದ ನೈರ್ಮಲ್ಯವನ್ನು ಅವಲಂಬಿಸಿರುತ್ತದೆ. ಸಮಶೀತೋಷ್ಣ ಪ್ರದೇಶಗಳಲ್ಲಿ, ಪರಿಸರದ ನೈರ್ಮಲ್ಯದ ಅಭಾವ ಹಾಗೂ ಜನನಿಬಿಡ ವಸತಿಗಳಲ್ಲಿ ವಾಸಿಸುವವರಲ್ಲಿ ಇದರ ಉಪಟಳ ಜಾಸ್ತಿ. ಇದು ವರ್ಷದುದ್ದಕ್ಕೂ ಇರಬಹುದಾದರೂ, ಚಳಿಗಾಲದಲ್ಲಿ ಪರಮಾವಧಿಯನ್ನು ತಲುಪುವುದು. ಎಲ್ಲ ವಯಸ್ಸಿನವರಲ್ಲಿ ಈ ರೋಗವನ್ನು ಕಾಣಬಹುದಾದರೂ ಆರು ತಿಂಗಳಿಂದ ನಾಲ್ಕು ವರ್ಷದೊಳಗಿನ ಪುಟಾಣಿಗಳತ್ತಲೇ ಇದರ ಒಲವು ಜಾಸ್ತಿ. ಶೇ 50 ರಷ್ಟು ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಬರುತ್ತದೆ. ನವಜಾತ ಶಿಶುವಿಗೆ ಈ ಕಾಯಿಲೆ ಕೂಡಲೇ ತಗಲುತ್ತದೆ.
ರೋಗ ಪ್ರಸಾರ
ರೋಗದಿಂದ ಬಳಲುತ್ತಿರುವ ರೋಗಿ ರೋಗಾಣುಗಳ ತವರು ಮನೆಯಾಗಿರುವುದರಿಂದ ರೋಗ ಪ್ರಸಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ರೋಗಾಣುಗಳು ಮೂಗು ಹಾಗೂ ಗಂಟಲುಗಳ ಸ್ರವಿಕೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಹೊರಬೀಳುತ್ತವೆ. ರೋಗಿಯು ಸೀನಿದರೆ, ಕೆಮ್ಮಿದರೆ, ಜೋರಾಗಿ ಉಗುಳಿದರೆ ರೋಗಾಣುಗಳು ಪರಿಸರವನ್ನು ಸೇರುತ್ತವೆ. ಹೀಗೆ ಪರಿಸರಕ್ಕೆ ಸೇರಿಕೊಂಡ ರೋಗಾಣುಗಳು ಶ್ವಾಸದ ಮೂಲಕ ನಿರೋಗಿಯ ದೇಹ ಪ್ರವೇಶಿಸಿ ರೋಗದ ಲಕ್ಷಣಗಳನ್ನು ಹೊರಹೊಮ್ಮಿಸುತ್ತವೆ. ರೋಗಿಯ ಎಂಜಲು, ಪಾತ್ರೆ– ಪಗಡೆಗಳು, ಆಟಿಕೆ ಮೊದಲಾದ ವಸ್ತುಗಳೂ ರೋಗ ಪ್ರಸಾರದಲ್ಲಿ ಕೆಲ ಮಟ್ಟಿಗೆ ಸಹಾಯಕವಾಗುತ್ತವೆ.
ರೋಗದ ಆರಂಭಿಕ ಲಕ್ಷಣ ನೆಗಡಿ
ಈ ರೋಗದ ಅಧಿಶಯನ (ಇನ್‌ಕ್ಯುಬೇಶನ್) ಕಾಲ 7– 14 ದಿನಗಳು. ಸಾಮಾನ್ಯವಾಗಿ ಆರು ವಾರಗಳವರೆಗೆ ಈ ಕಾಯಿಲೆಯು ಮಗುವನ್ನು ಪೀಡಿಸುತ್ತದೆ. ರೋಗ ತಗಲಿದ ಮಗುವಿನಲ್ಲಿ ಮೊಟ್ಟ ಮೊದಲು ಕಾಣುವುದು ನೆಗಡಿ, ಕೆಮ್ಮು, ಜ್ವರ, ನಿರಾಸಕ್ತಿ ಮತ್ತು ಚೈತನ್ಯ ಇಲ್ಲದಿರುವುದು. ಪ್ರಾರಂಭದಲ್ಲಿ ರಾತ್ರಿಯಷ್ಟೇ ಕಾಡುವ ಕೆಮ್ಮು ಬರಬರುತ್ತ ಹಗಲು ರಾತ್ರಿಗಳ ಭೇದವಿಲ್ಲದೇ ಬಿಟ್ಟೂಬಿಡದೇ ಬರುತ್ತದೆ. ಕೆಮ್ಮು ದಿನೇ ದಿನೇ ಉಲ್ಬಣಗೊಳ್ಳುತ್ತದೆ. ಕೆಮ್ಮೆಂದರೆ ಅಂತಿಂತಹ ಕೆಮ್ಮಲ್ಲ. ಉಸಿರುಗಟ್ಟಿಸುವಂತಹ ಕೆಮ್ಮು. ಕೆಮ್ಮುವಾಗಲೂ ಮಗುವಿನ ಮುಖ ಮತ್ತು ಕಣ್ಣು ಕೆಂಪಾಗಿ ಕಣ್ಣು ಗುಡ್ಡೆಗಳು ಉಬ್ಬಿದಂತೆ, ಕಿತ್ತು ಬರುವಂತೆ ಕಾಣುತ್ತವೆ. ಉಸಿರಿಗಾಗಿ ಮಗು ತೇಕು ಹತ್ತಿದ ನಾಯಿಯಂತೆ ನಾಲಿಗೆ ಹೊರಚಾಚಿ ಒದ್ದಾಡುತ್ತದೆ. ಈ ಕಾರಣದಿಂದಲೇ ಈ ರೋಗಕ್ಕೆ ನಾಯಿಕೆಮ್ಮು ಎಂದು ಹೆಸರು. ನಾಯಿಕೆಮ್ಮಿನ ವೈಶಿಷ್ಟವೆಂದರೆ ಕೆಮ್ಮಿದಾಗಲೆಲ್ಲಾ ಕೂಗುಸಿರು ಬರುವುದು. ಕೆಮ್ಮಿ ಸುಸ್ತಾದ ಮಗು ವಿಪರೀತ ಬೆವರುತ್ತದೆ. ಆನಂತರ ತಿಂದದ್ದನ್ನೆಲ್ಲ ವಾಂತಿ ಮಾಡುತ್ತದೆ.
ದುಷ್ಪರಿಣಾಮಗಳು
ಶ್ವಾಸನಾಳದ ಉರಿಯೂತ, ಗೂರಲು, ನ್ಯೂಮೋನಿಯಾ, ಶ್ವಾಸಕೋಶದ ಕೆಳಭಾಗದ ಕುಸಿತ, ಶ್ವಾಸನಳಿಕೆಯ ಹಿಗ್ಗುವಿಕೆ, ಪ್ಲೂರಾ (ಶ್ವಾಸಕೋಶದ ಸಮೀಪವಿರುವ ಭಾಗ)ದೊಳಗೆ ಗಾಳಿ, ಕೀವು ಸೇರಿಕೊಳ್ಳವುದು. ಕ್ಷಯರೋಗವಿದ್ದರೆ ಈ ನಾಯಿಕೆಮ್ಮು ಜಾಸ್ತಿಯಾಗುವುದು. ಮೂಗು ಮತ್ತು ಕಣ್ಣುಗಳಲ್ಲಿ ರಕ್ತ ಸುರಿಯಬಹುದು, ಸೆಳೆತ ಬರಬಹುದು. ಬುದ್ಧಿ ಮಂದವಾಗುವಿಕೆ, ಲಕ್ವ ಹೊಡೆಯುವಿಕೆ, ಪಾರ್ಶ್ವವಾಯು, ದೃಷ್ಟಿಮಾಂದ್ಯ, ಮೆದುಳಿನಲ್ಲಿ ರಕ್ತಸ್ರಾವ ತೆಲೆದೋರಬಹುದು. ಗುದನಾಳವು ಕುಸಿಯಬಹುದು.
ಚಿಕಿತ್ಸೆ
ಈ ಕಾಯಿಲೆಗೆ ಲಕ್ಷಣಗಳನ್ನು ಕಡಿಮೆ ಮಾಡುವುದು ಸೇರಿದಂತೆ ಸಂಪೂರ್ಣ ಚಿಕಿತ್ಸೆ, ನಿಶ್ಚಿತ ಚಿಕಿತ್ಸೆ ಹಾಗೂ ದುಷ್ಪರಿಣಾಮಗಳನ್ನು ಕಡಿಮೆ ಮಾಡುವ ಚಿಕಿತ್ಸೆಗಳಿವೆ. ಈ ಕಾಯಿಲೆಗೆ ತುತ್ತಾದ ಮಕ್ಕಳು ವಾಂತಿ ಮಾಡಿಕೊಳ್ಳುವುದರಿಂದ ಆಹಾರವನ್ನು ಸ್ವಲ್ಪಸ್ವಲ್ಪವಾಗಿ ಬಿಟ್ಟುಬಿಟ್ಟು ಕೊಡಬೇಕು. ಗಂಟಲಿನಲ್ಲಿ ಸಂಗ್ರಹವಾಗುವಂತಹ ಸ್ರವಿಕೆ, ಜೊಲ್ಲು ಅಥವಾ ಲೋಳೆಯನ್ನು ತೆಗೆದು ಹಾಕಬೇಕು. ಉಸಿರಾಟದ ತೊಂದರೆಯಿಂದ ಮಗುವಿನ ಚರ್ಮದ ಬಣ್ಣ ನೀಲಿಯಾದರೆ ಆಮ್ಲಜನಕವನ್ನು ಕೊಡಬೇಕು. ಕೆಮ್ಮನ್ನು ಹೋಗಲಾಡಿಸಲು ಕೆಮ್ಮಿನ ಉಪಶಮನ ಮಿಶ್ರಣಗಳನ್ನು ಉಪಯೋಗಿಸಬೇಕು.
ನಿಶ್ಚಿತ ಚಿಕಿತ್ಸೆ: ಹಲವು ಆ್ಯಂಟಿಬಯೋಟಿಕ್ಸ್‌ಗಳಿಂದ ಈ ರೋಗದ ಉಪಶಮನಕ್ಕೆ ಪ್ರಯೋಗಗಳು ನಡೆದಿದ್ದು, ಈ ದಿಶೆಯಲ್ಲಿ ಸ್ವಲ್ಪ ಯಶಸ್ಸು ಕಂಡು ಬಂದಿರುವ ಔಷಧಗಳೆಂದರೆ ಟೆಟ್ರಾಸೈಕ್ಲಿನ್ ಮತ್ತು ಕ್ಲೋರೊಫಿನ್ ಕಾಲ್. ಇವುಗಳನ್ನು 5–7 ದಿನಗಳವರೆಗೆ ಉಪಯೋಗಿಸುವುದು ರೂಢಿಯಲ್ಲಿದೆ. ಕೆಲವೊಮ್ಮೆ 14 ದಿನಗಳವರೆಗೂ ಉಪಯೋಗಿಸಬಹುದು.
ಪ್ರತಿಬಂಧಕೋಪಾಯಗಳು
ಶಿಶುವಿಗೆ ಆರು ವಾರಗಳಾದ ನಂತರ 4–6 ವಾರಗಳ ಅಂತರದಲ್ಲಿ ಮೂರು ಬಾರಿ ಪೆಂಟಾವ್ಹೆಲೆಂಟ್ ಲಸಿಕೆಯನ್ನು ನೀಡಬೇಕು. ಮತ್ತು 18–24 ತಿಂಗಳಲ್ಲಿ ಮೊದಲನೇ ತ್ರಿರೋಗ ಚುಚ್ಚುಮದ್ದನ್ನು ಕೊಡಬೇಕು.
ನಾಯಿಕೆಮ್ಮು, ಒಂದು ಸೂಕ್ಷ್ಮಾಣುಜೀವಿಗಳಿಂದ ಬರುವ ರೋಗ ಎಂಬುದರ ಬಗ್ಗೆ ಜನಸಾಮಾನ್ಯರಿಗೆ ಮನವರಿಕೆಯಾಗುವಂತೆ ತಿಳಿಸುವುದು. ಇದಲ್ಲದೆ ರೋಗದ ಸಂಪೂರ್ಣ ಮಾಹಿತಿಯನ್ನು ಕೊಡಬೇಕು.
ರೋಗಿಯನ್ನು ಇತರರಿಂದ ಪ್ರತ್ಯೇಕಿಸುವುದು ಮತ್ತು ಸಂಪೂರ್ಣ ಗುಣವಾಗುವಂತೆ ಔಷಧೋಪಚಾರ ಮಾಡುವುದು ಅತಿ ಅವಶ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.