ಹಾಲೂಡುವ ಮಗುವಿನ ಮುಖ ನೋಡಿದರೆ ಕೂದಲುದುರುತ್ತದೆ ಎಂದು ಹಿರಿಯರು ಹೇಳುವ ಪ್ರತೀತಿ ಇತ್ತು. ಮಗುವಿಗೆ ನೋಡಿದರೆ ಉದುರದಿದ್ದರೂ, ಬಾಣಂತಿಯರು ಸರಿಯಾಗಿ ಉಣ್ಣದೇ ಇದ್ದರೆ ಕೂದಲುದುರುತ್ತದೆ. ತಾಯ್ತನದ ಈ ಹಂತದಲ್ಲಿ ಕೂದಲುದು ರುವುದು ಸಮಸ್ಯೆಯಾಗಿದೆ. ಮಹಿಳೆಯರಲ್ಲಿ ಕೂದಲುದುರುವುದರ ಕಾರಣ ಮತ್ತು ಪರಿಹಾರವನ್ನು ಹುಬ್ಬಳ್ಳಿಯ ತಜ್ಞ ವೈದ್ಯರಾದ ಡಾ. ರಂಜನ್ ಜೀವಣ್ಣವರ್ ತಿಳಿಸಿದ್ದಾರೆ.
ವಿಪರೀತ ಕೂದಲು ಉದುರುವುದು ನಿರಂತರ ಆತಂಕ, ಸಿಟ್ಟು, ದುಃಖವನ್ನು ಅನುಭವಿಸುತ್ತಿರುವ ಸೂಚನೆಯೂ ಇರಬಹುದು ಅಥವಾ ಅಗತ್ಯ ಪೋಷಕಾಂಶಗಳು, ಕಬ್ಬಿಣ, ಸತು, ಪ್ರೊಟೀನ್, ವಿಟಮಿನ್‌ಗಳ ಕೊರತೆಯೂ ಕಾರಣವಾಗಿರಬಹುದು. ಥೈರಾಯ್ಡ್, ಹಾರ್ಮೋನುಗಳ ಏರುಪೇರು, ದೈಹಿಕ ಮತ್ತು ಮಾನಸಿಕ ಒತ್ತಡ, ನಿದ್ರಾಹೀನತೆ, ಪಿಸಿಒಡಿ, ಥೈರಾಯ್ಡ್ ಸಮಸ್ಯೆ ಕೂಡ ಕೂದಲು ಉದುರಲು ಕಾರಣವಾಗುತ್ತದೆ.
ಕೆಲವರಲ್ಲಿ ಮೂರರಿಂದ ಆರು ತಿಂಗಳವರೆಗೆ ಕೂದಲು ನಿಧಾನವಾಗಿ ಉದುರುವುದು ಕಂಡು ಬಂದರೆ, ಇನ್ನು ಕೆಲವರಲ್ಲಿ ಕೆಲವೇ ತಿಂಗಳಲ್ಲಿ ಹೆಚ್ಚು ಕೂದಲು ಉದುರುವ ಸಮಸ್ಯೆ ಕಾಣಿಸುತ್ತದೆ. ಇದಕ್ಕೆ ಕಾರಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ.
ಪ್ರತಿ ಕೂದಲಿನ ಜೀವಿತಾವಧಿಯು ಅವರ ಅನುವಂಶಿಕತೆಯನ್ನು ಅವಲಂಬಿಸಿರುತ್ತದೆ. ಅಂದಾಜಿನ ಪ್ರಕಾರ ಒಂದು ಕೂದಲು ಎರಡ್ಮೂರು ವರ್ಷ ಬದುಕುಳಿಯುತ್ತದೆ. ಅದು ಉದುರಿದ ನಂತರ ಮತ್ತೆ ಅದೇ ಜಾಗದಲ್ಲಿ ಹೊಸ ಕೂದಲು ಬಂದರೆ ಅದು ಸಹಜ ಪ್ರಕ್ರಿಯೆ. ಉದಾಹರಣೆಗೆ ದಿನವೊಂದಕ್ಕೆ ನೂರು ಕೂದಲು ಉದುರಿ ಮತ್ತೆ ಅದೇ ಜಾಗದಲ್ಲಿ ಹೊಸ ಕೂದಲು ಬೆಳೆದರೆ ಅದು ಸಹಜ ಉದುರುವಿಕೆ, ಉದುರಿದ ಜಾಗದಲ್ಲಿ ಹೊಸ ಕೂದಲು ಬೆಳೆಯದಿದ್ದರೆ ಅದು ಅಸಹಜ ಕೂದಲು ಉದುರುವಿಕೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.
ಮಹಿಳೆಯರಲ್ಲಿ ಅತೀ ಹೆಚ್ಚು ಕೂದಲು ಉದುರುವುದು ಕಬ್ಬಿಣಾಂಶದ ಕೊರತೆಯಿಂದ. ಇದರಿಂದ ಕೂದಲು ಶಕ್ತಿ ಕಳೆದುಕೊಂಡು ದುರ್ಬಲವಾಗುತ್ತ ಹೋಗುತ್ತದೆ. ಬರಬರುತ್ತ ಕೂದಲು ತೆಳ್ಳಗಾಗುತ್ತ ಹೋಗುತ್ತದೆ. ಕೂದಲು ಯಾಕೆ ಉದುರುತ್ತಿದೆ ಎಂದು ಸಮಸ್ಯೆಯ ಮೂಲ ಕಂಡು ಹಿಡಿಯುವುದು ತುಂಬಾ ಮುಖ್ಯ. ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ ಕಾರಣಗಳಿರುವುದರಿಂದ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಸೂಕ್ತ. ಅಲ್ಲದೇ ಮನೆಯಲ್ಲಿಯೇ ಕಾಳಜಿ ವಹಿಸಬಹುದಾದ ಕೆಲವು ಪರಿಹಾರೋಪಾಯಗಳು ಇಲ್ಲಿವೆ..
l ವಾರಕ್ಕೆ ಕನಿಷ್ಠ ಎರಡು ಬಾರಿಯಾದರು ತಲೆ ಸ್ನಾನ ಮಾಡಿ. ಪೌಷ್ಟಿಕ ಆಹಾರ, ಸೊಪ್ಪು, ಮೊಳಕೆಕಾಳು, ತರಕಾರಿ, ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ಕಾರ್ಬೋಹೈಡ್ರೇಟ್ಸ್ ಅಂಶವಿರುವ ಅಕ್ಕಿ, ಸಿಹಿ ತಿಂಡಿ ಕಡಿಮೆ ತಿನ್ನಿ, ಪಿಜ್ಜಾ, ಬರ್ಗರ್ ತಿನ್ನದಿರಿ.
l ನೀರನ್ನು ಯಥೇಚ್ಛವಾಗಿ ಕುಡಿಯಿರಿ. ವಿಟಮಿನ್ ಬಿ12 ಹಾಗೂ ವಿಟಮಿನ್ ಡಿ ಇರುವ ಆಹಾರ ಸೇವಿಸಿ.
lವಾರಕ್ಕೊಮ್ಮೆಯಾದರೂ ತಲೆಗೆ ಕೊಬ್ಬರಿ ಎಣ್ಣೆ ಹಚ್ಚಿ, ಅರ್ಧ ಗಂಟೆಯಾದರೂ ಮಸಾಜ್ ಮಾಡುವುದರಿಂದ ನರಗಳು ಸಕ್ರಿಯಗೊಂಡು, ರಕ್ತ ಪರಿಚಲನೆಗೆ ಸಹಕಾರಿಯಾಗುತ್ತದೆ. ಒಂದು ದಿನಕ್ಕಿಂತ ಹೆಚ್ಚು ಸಮಯ ತಲೆಯಲ್ಲಿ ಎಣ್ಣೆ ಇರದಂತೆ ನೋಡಿಕೊಳ್ಳಿ. ಬಿರುಬಿಸಿಲು, ದೂಳಿನಿಂದ ಕೂದಲನ್ನು ರಕ್ಷಿಸಿ.
l→ಅತಿ ಬಿಸಿಯಾದ ನೀರಿನಿಂದ ತಲೆ ಸ್ನಾನ ಮಾಡದಿರಿ. ಸ್ನಾನದ ನಂತರ ಬಿಸಿ ನೀರಿನಲ್ಲಿ ಅದ್ದಿದ ಟವಲ್ ಅನ್ನು ಕೆಲ ಸಮಯ ತಲೆಗೆ ಸುತ್ತಿಕೊಳ್ಳಿ. ಹಸಿ ಕೂದಲನ್ನು ಬಾಚಬೇಡಿ. ಬೇರೆಯವರು ಬಳಸಿದ ಬಾಚಣಿಕೆ, ಮಲಗುವ ದಿಂಬು, ಹಾಸಿಗೆ, ಟವಲ್ ಉಪಯೋಗಿಸದಿರಿ.
l→ಕೆಲವೇ ನಿಮಿಷಗಳಲ್ಲಿ ಕೂದಲಿಗೆ ಬಣ್ಣ ನೀಡುವಂಥ ಹೇರ್ ಡೈಗಳನ್ನು ಬಳಸಲೇಬೇಡಿ. ಇದರಿಂದ ತಲೆಯಲ್ಲಿ ಕೆರೆತ, ಅಲರ್ಜಿ ಆಗಬಹುದು, ಕೂದಲು ಉದುರಬಹುದು. ಪದೇಪದೇ ಹೇರ್ ಸ್ಟ್ರೈಟ್‌ನಿಂಗ್, ಸ್ಮೂತ್‌ನಿಂಗ್ ಮಾಡುವುದರಿಂದ ಕೂದಲು ತುಂಡಾಗಿ, ಶಕ್ತಿ ಕಳೆದುಕೊಂಡು, ದಟ್ಟತೆ ಕಡಮೆಯಾಗುತ್ತದೆ.
l→ಮೆಂತೆಕಾಳು, ಆಲ್ಯುವೆರಾ ಮುಂತಾದ ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಬಳಸಿ ತಯಾರಿಸಿದ ಹೇರ್ ಪ್ಯಾಕ್ ಅನ್ನು ಹದಿನೈದು ದಿನಕ್ಕೊಮ್ಮೆಯಾದರೂ ಹಚ್ಚಿ. ಶಾಂಪು ಬಳಸದೆ, ಶೀಗೆಕಾಯಿ ಹಾಗೂ ಅಂಟವಾಳಕಾಯಿ ಪುಡಿ ಮಾಡಿ ಬಳಸಿ. ಹೇರ್ ಡ್ರೈಯರ್ ಬಳಸಿದರಿ. ಕೊಬ್ಬರಿ ಎಣ್ಣೆಯಲ್ಲಿ ಕರಿಬೇವು, ಕೆಂಪು ದಾಸವಾಳ, ಮೆಂತೆಕಾಳು, ಈರುಳ್ಳಿ, ನಿಂಬೆಯ ಒಣ ಸಿಪ್ಪೆಯನ್ನು ಕುದಿಸಿ ತಯಾರಿಸಿದ ಎಣ್ಣೆಯನ್ನು ನಿರಂತರವಾಗಿ ಕೂದಲಿಗೆ ಹಚ್ಚುತ್ತ ಬಂದರೆ ಕೂದಲು ನುಣುಪಾಗಿ, ಕಪ್ಪಾಗುತ್ತದೆ.
ಪುರುಷರಲ್ಲಿಯೂ ಸಮಸ್ಯೆ..!
ಪುರುಷರಲ್ಲಿ ತಲೆಯ ಸುತ್ತಮುತ್ತ ಕೂದಲಿದ್ದು, ನೆತ್ತಿಯ ಮೇಲೆ ಮಾತ್ರ ಕೂದಲು ಉದುರಿದ್ದರೆ ಅದನ್ನು ಮೇಲ್ ಪಾಟರ್ನ್ ಹೇರ್‌ಲಾಸ್ ಎಂದು ಕರೆಯಲಾಗುತ್ತದೆ. ಇದಕ್ಕೆ ಅನುವಂಶಿಕತೆಯೂ ಕಾರಣವಾಗಿರುತ್ತದೆ. ಮಹಿಳೆಯರಲ್ಲಿ ಇಂಥ ಸಮಸ್ಯೆ ಕಡಿಮೆ. ಆದರೆ ವರ್ಷಗಳ ವರೆಗೂ ನಿಧಾನವಾಗಿ ಕೂದಲು ಉದುರುವುದನ್ನು, ಕೂದಲಿನ ದಟ್ಟತೆ ಕಡಿಮೆಯಾಗುವುದನ್ನು ಕಾಣಬಹುದು. ಇದನ್ನು ಫೀಮೇಲ್ ಪಾಟರ್ನ್ ಹೇರ್‌ಲಾಸ್ ಎನ್ನಲಾಗುತ್ತದೆ. ಬದಲಾದ ಜೀವನ ಶೈಲಿ, ಬೊಜ್ಜಿನ ಸಮಸ್ಯೆಯಿಂದ ಇಂಥ ಸಮಸ್ಯೆಗಳು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿವೆ ಎನ್ನುತ್ತಾರೆ ಹುಬ್ಬಳ್ಳಿಯ ಚರ್ಮರೋಗ ತಜ್ಞ ಡಾ. ರಂಜನ್ ಜೀವಣ್ಣವರ್. ಪುರುಷರಲ್ಲಿ ನಾಣ್ಯದ ರೂಪದಲ್ಲಿಯೂ ತಲೆ ಕೂದಲು ಉದುರುವುದನ್ನು ಕಾಣಬಹುದು. ಆರಂಭದಲ್ಲಿಯೇ ಇದಕ್ಕೆ ಚಿಕಿತ್ಸೆ ಪಡೆಯದಿದ್ದರೆ, ಮತ್ತೊಂದು ಕಡೆ ಅದೇ ಮಾದರಿಯಲ್ಲಿ ಕೂದಲು ಉದುರುವುದು ಹೆಚ್ಚಾಗಿ, ಮುಂದೆ ತಲೆ ಅಷ್ಟೇ ಅಲ್ಲದೆ ಮೈ ಮೇಲಿನ ಕೂದಲು ಸಹ ಉದುರುವ ಸಾಧ್ಯತೆ ಇದೆ ಎನ್ನುವ ಅಭಿಪ್ರಾಯ ವೈದ್ಯರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.