ಎಲ್ಲರೂ ಸೇರಿ ಮನೆಗೆಲಸವನ್ನು ಮುಗಿಸಿದಲ್ಲಿ, ಬಿಡುವಿನ ವೇಳೆ ಎಲ್ಲರಿಗೂ ಸಿಗುತ್ತದೆ.
***
ವೃತ್ತಿಯಿಂದ ನಿವೃತ್ತಿ ಎಂದರೆ, ನೀವು ಕೆಲಸ ನಿರ್ವಹಿಸಲು ಸಾಧ್ಯವಿಲ್ಲವೆಂದಲ್ಲ. ಹಾಗೆಯೇ ನಿಮಗೆ ವಯಸ್ಸಾಗಿದೆಯೆಂದೂ ಅಲ್ಲ. ಇದೊಂದು ಜೀವನದ ಹೊಸ ಅವಕಾಶಗಳ ಅಧ್ಯಾಯ. ಇದರ ಲೇಖಕರು ನೀವೇ. ನಿಮಗಿಷ್ಟವಾದುದನ್ನು ನೀವು ಬರೆದುಕೊಳ್ಳಬಹುದಾಗಿದೆ. ವೃತ್ತಿಯಿಂದ ನಿವೃತ್ತಿಯಾಗುವ ವೇಳೆಗೆ ಸ್ತ್ರೀಯರಿಗಾಗಲೀ ಪುರುಷರಿಗಾಗಲೀ, ಬಹುಪಾಲು ಜನರಿಗೆ ಬಹಳಷ್ಟು ಜವಾಬ್ದಾರಿಗಳು ಮುಗಿದಿರುತ್ತವೆ. ಇದೊಂದು ಬದಲಾವಣೆಯ ಸಮಯ ಅಷ್ಟೆ. ಈ ಸಮಯದಲ್ಲಿ ನಿಮಗಿಷ್ಟವಾದ ಕೆಲಸಗಳನ್ನು ಮಾಡಬಹುದಾಗಿದೆ. ಮುಖ್ಯವಾಗಿ ಕೆಲಸದ ಒತ್ತಡದಿಂದಾಗಿ ತಡೆಹಿಡಿದ ನಿಮ್ಮ ಆಸೆ-ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವ ಸಮಯ ಇದಾಗಿದೆ. ಇದು ಸ್ತ್ರೀ-ಪುರುಷರಿಬ್ಬರಿಗೂ ಅನ್ವಯಿಸುತ್ತಾದರೂ, ಇದರ ಫಲಾನುಭವಿಗಳು ಪುರುಷರು ಮಾತ್ರ! ಮಹಿಳೆಯರು ವೃತ್ತಿಯಿಂದ ನಿವೃತ್ತರಾದರೂ, ಮನೆಕೆಲಸದಿಂದ ಮಾತ್ರ ಎಂದಿಗೂ ಮುಕ್ತಿ ಸಿಗುವುದಿಲ್ಲ. ಆಕೆಯೂ ಪುರುಷರಂತೆಯೇ, ದುಡಿದಿರುತ್ತಾಳೆ. ತನ್ನ ಬಯಕೆಗಳನ್ನು ಅದುಮಿಟ್ಟು ಅನೇಕ ತ್ಯಾಗಗಳನ್ನು ಮಾಡಿರುತ್ತಾಳೆ. ಆಕೆಗೂ ಅವಳದೇ ಆದ ಸಮಯ ಬೇಕಾಗಿರುತ್ತದೆ. ದೌರ್ಭಾಗ್ಯವೆಂದರೆ, ಮಹಿಳೆಗೆ ನಿವೃತ್ತಿಯ ನಂತರವೂ ಬಿಡುವು ಸಿಗುವುದೇ ಇಲ್ಲ.
ನಮ್ಮ ಸಮಾಜದಲ್ಲಿ ಮನೆಯಲ್ಲಿದ್ದು ಕೆಲಸ ಮಾಡುವ ಮಹಿಳೆಗೆ ‘ಗೃಹಿಣಿ’ ಎಂಬ ಪಟ್ಟವನ್ನು ನೀಡಲಾಗಿದೆ. ಹಾಗೆಯೇ ಹೊರಗೆ ಹೋಗಿ ದುಡಿಯುವ ಮಹಿಳೆಗೆ ‘ವರ್ಕಿಂಗ್ ವುಮೆನ್’ ಅಥವಾ ‘ದುಡಿಯುವ ಮಹಿಳೆ’ ಎಂದು ಕರೆಯಲಾಗುತ್ತದೆ. ಹಾಗಾದರೆ ಮನೆಯಲ್ಲಿ ಮಾಡುವ ಕೆಲಸ ಕೆಲಸವಲ್ಲವೇ? ಹಾಗೆಂದು ದುಡಿಯುವ ಮಹಿಳೆ ಗೃಹಿಣಿಯಲ್ಲವೇ? ಮಹಿಳೆಯೂ ದಣಿಯುತ್ತಾಳೆ. ಅವಳಿಗೂ ವಿಶ್ರಾಂತಿಯ ಅವಶ್ಯಕತೆಯಿದೆಯೆಂದು ಎಷ್ಟು ಮಂದಿ ಯೋಚಿಸುತ್ತಾರೆ? ಗೃಹಿಣಿಯಾದವಳು ತನ್ನ ಕುಟುಂಬದ ಸದಸ್ಯರನ್ನು ನೋಡಿಕೊಂಡು, ಮಕ್ಕಳನ್ನು ಹೊತ್ತು, ಹೆತ್ತು, ಪೋಷಿಸಿ, ಮನೆಯನ್ನು ನಿರ್ವಹಿಸುವ ನಿರ್ವಾಹಕಿ. ಹೆಣ್ಣಾಗಿ ಹುಟ್ಟಿದ ಮೇಲೆ ಮನೆಯ ನಿರ್ವಹಣೆ ಕಡ್ಡಾಯ ಎಂದು ಬಹಳಷ್ಟು ಮಹಿಳೆಯರೇ ನಂಬಿದ್ದಾರೆ. ಮಹಿಳೆಯರು ಮನೆಯ ಒಳಗೆ ಮಾಡುವ ವೇತನರಹಿತ ಕೆಲಸಗಳನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಸಾಮಾನ್ಯವಾಗಿ ಮಹಿಳೆ ತನ್ನ ಜೀವಿತಾವಧಿಯಲ್ಲಿ ಹಾಸಿಗೆ ಹಿಡಿಯುವವರೆಗೂ ಕೆಲಸ ಮಾಡುತ್ತಲೇ ಇರುತ್ತಾಳೆ. ಎಲ್ಲಾ ವೃತ್ತಿಗೂ ನಿವೃತ್ತಿ ಇರುವಾಗ ಗೃಹಿಣಿಗೇಕಿಲ್ಲ?
ಇತ್ತೀಚೆಗೆ ಮನೆಯಿಂದ ಹೊರಗೆ ಹೋಗಿ ದುಡಿಯುವ ಮಹಿಳೆಗಾದರೂ ಕೆಲವರ ಮನೆಯಲ್ಲಿ ಗಂಡನಿಂದಲೋ ಅಥವಾ ಮನೆಯ ಇತರ ಸದಸ್ಯರಿಂದಲೋ ಸಹಾಯ ಹಸ್ತ ಸಿಗುತ್ತದೆ. ಆದರೆ ‘ಗೃಹಿಣಿ’ ಎಂಬ ಪಟ್ಟ ಹೊತ್ತು ಮನೆಯ ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸುವ ವನಿತೆಗೆ ಸಿಗುವ ಬಿರುದು ‘ಕೆಲಸವಿಲ್ಲದವಳೆಂಬ’ ಮೂದಲಿಕೆಯ ಮಾತು. ಈ ರೀತಿಯ ತಾರತಮ್ಯದಿಂದಲೇ ಇಂದಿನ ಹುಡುಗಿಯರು ಸಣ್ಣ ಪುಟ್ಟ ಕೆಲಸವಾದರೂ ಸರಿ, ಹೊರಗೆ ಹೋಗಿ ದುಡಿಯಲು ಇಚ್ಛಿಸುತ್ತಾರೆ. ಆರ್ಥಿಕ ಸ್ವಾತಂತ್ರ್ಯದ ಜೊತೆಗೇ ಗೌರವ, ಪ್ರತಿಷ್ಠೆ ಕೂಡ ಹೊರಗೆ ಹೋಗಿ ದುಡಿಯುವುದರಿಂದ ಎಂದು ಭಾವಿಸಿದ್ದಾರೆ. ಪ್ರತಿಯೊಬ್ಬ ಹೆಣ್ಣು ವಿದ್ಯಾವಂತೆಯಾಗಬೇಕು, ಆರ್ಥಿಕವಾಗಿ ಸಬಲರಾಗಬೇಕು, ಎಲ್ಲಾ ಸರಿ. ಆ ನಿಟ್ಟಿನಲ್ಲಿಯೇ ಮಹಿಳೆಯರೂ ಓದುತ್ತಿದ್ದಾರೆ. ಪುರುಷರಿಗೆ ಸಮಾನರಾಗಿ ಕೆಲಸವನ್ನೂ ಮಾಡುತ್ತಿದ್ದಾರೆ. ನೈಸರ್ಗಿಕವಾಗಿ ಮಹಿಳೆಯರಿಗೆ ಬರುವ ನೋವುಗಳನ್ನು ನುಂಗಿಕೊಂಡು ಕೆಲಸ ಮಾಡಿದರೂ, ವಿರಾಮದ ವಿಷಯ ಬಂದಾಗ ಅಸಮಾನತೆ ಎದ್ದು ಕಾಣುತ್ತದೆ. ಹೊರಗಿನ ಕೆಲಸ ಮುಗಿಸಿ ಮನೆಗೆ ಬರುವ ಪುರುಷ ಆರಾಮಾಗಿ ಕೂರುತ್ತಾನೆ. ಅದೇ ಮನೆಯ ಮಹಿಳೆ, ಹೊರಗಿನ ಕೆಲಸ ಮುಗಿಸಿ ಬಂದ ಮೇಲೂ ಮನೆಯ ಕೆಲಸಗಳನ್ನು ಮಾಡಲು ಟೊಂಕ ಕಟ್ಟಿ ನಿಲ್ಲುತ್ತಾಳೆ. ನಾವು ಭಾರತೀಯರು ಬಹಳಷ್ಟು ವಿಷಯಗಳಲ್ಲಿ ಪಾಶ್ಚಾತ್ಯರನ್ನು ಅನುಕರಿಸುತ್ತಿದ್ದೇವೆಂಬುದು ಸುಳ್ಳಲ್ಲ. ಹಾಗಾದರೆ ಮಹಿಳೆಗೆ ಮನೆಕೆಲಸದಲ್ಲಿ ಸಹಾಯ ಮಾಡುವುದನ್ನೂ ಅನುಕರಿಸಬಹುದಲ್ಲವೇ?
ವೃತ್ತಿಯಿಂದ ನಿವೃತ್ತಿ ಹೊಂದಿದ ಹಲವರು ಪುರುಷರನ್ನು ಖಿನ್ನತೆ ಆವರಿಸುತ್ತದೆ. ಕಾರಣ, ನಿವೃತ್ತಿಯಾದ ಮರುದಿನದಿಂದಲೇ ಬಹುತೇಕರಿಗೆ ಮಾಡಲು ಏನೂ ಕೆಲಸವಿರುವುದಿಲ್ಲ. ಆದರೆ ಮಹಿಳೆಗೆ ಹಾಗಲ್ಲ. ಆಕೆ ಹೊರಗಿನ ವೃತ್ತಿಯಿಂದ ನಿವೃತ್ತಳಾದರೂ ಕೂಡ ಮನೆ ಕೆಲಸದಿಂದ ಆಕೆಗೆ ವಿಶ್ರಾಂತಿ ಸಿಗುವುದೇ ಇಲ್ಲ. ಮನೆಯ ಮುಖ್ಯ ಆಧಾರಸ್ತಂಭ ಮಹಿಳೆ. ಸ್ತ್ರೀಯರಿಗೆ ವಿರಾಮ ಎಂಬುದು ದೂರದ ಮಾತಾಗಿದೆ. ಮಹಿಳೆಯೂ ನಿವೃತ್ತ ಜೀವನದ ಸವಿಯನ್ನು ಸವಿಯಬೇಕು. ಎಲ್ಲಾ ಕೆಲಸದಂತೆ ಗೃಹಿಣಿಗೂ ಮನೆ ಕೆಲಸದಿಂದ ವಿಶ್ರಾಂತಿ ಕೊಡಿಸುವುದು ಮನೆಯ ಇತರ ಸದಸ್ಯರ ಜವಾಬ್ದಾರಿ ಕೂಡ ಹೌದು. ಮಹಿಳೆಯರಿಗೂ ವಯಸ್ಸಾಗುತ್ತಾ ಹೋದಂತೆ ಅನಾರೋಗ್ಯ ಕಾಣಿಸಿಕೊಳ್ಳತೊಡಗುತ್ತದೆ. ಆಕೆಗೂ ಆಯಾಸವಾಗುತ್ತದೆ. ಇದನ್ನು ಕುಟುಂಬದ ಸದಸ್ಯರು ಅರಿತುಕೊಳ್ಳಬೇಕು. ಇದು ಯಾವ ಶಾಸಕಾಂಗ ಸಭೆಯಲ್ಲೂ ಚರ್ಚೆಯಾಗಿ, ಮಸೂದೆಯಾಗಿ ಹೊರ ಹೊಮ್ಮ ಬೇಕಾದ ವಿಚಾರವವೇನಲ್ಲ. ಮನೆಕೆಲಸದಲ್ಲಿ ಕುಟುಂಬದ ಪ್ರತಿಯೊಬ್ಬರೂ ತೊಡಗಿಕೊಂಡರೆ ಮಾತ್ರ ಆ ಮನೆಯ ಗೃಹಿಣಿಗೂ ವಿಶ್ರಾಂತಿ ಸಿಗುತ್ತದೆ. ನಮ್ಮ ಮನೆಯ ಕೆಲಸವನ್ನು ನಾವೇ ಮಾಡಿಕೊಳ್ಳಲು ನಾಚಿಕೆಯೇಕೆ? ಎಲ್ಲರೂ ಸೇರಿ ಕೆಲಸವನ್ನು ಮುಗಿಸಿದಲ್ಲಿ, ಬಿಡುವಿನ ವೇಳೆ ಎಲ್ಲರಿಗೂ ಸಿಗುತ್ತದೆ. ಮನೆಯೊಂದರಲ್ಲಿ ಮನೆಯೊಡತಿ ಸಂತೋಷದಿಂದಿದ್ದಾಗ ಮಾತ್ರ ಆ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.