ADVERTISEMENT

ಗರ್ಭಿಣಿಯರಲ್ಲಿ ಮೈಊತ ಏಕೆ?

ಪ್ರಜಾವಾಣಿ ವಿಶೇಷ
Published 14 ಸೆಪ್ಟೆಂಬರ್ 2024, 0:02 IST
Last Updated 14 ಸೆಪ್ಟೆಂಬರ್ 2024, 0:02 IST
   

ಗರ್ಭಾವಸ್ಥೆಯ ನಾನಾ ಹಂತಗಳಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಅವುಗಳಲ್ಲಿ ಪ್ರಿಕ್ಲಾಂಪ್ಸಿಯಾವೂ ಒಂದು. ಗರ್ಭ ಧರಿಸಿ ಸುಮಾರು 20ನೇ ವಾರದಲ್ಲಿ ಕೆಲವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರ ಗುಣಲಕ್ಷಣಗಳು ಕೆಲವೊಮ್ಮೆ ಹೆರಿಗೆಯ ನಂತರವೂ ಮುಂದುವರಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಸೂಕ್ತ ಆರೈಕೆ ಮಾಡದೇ ಹೋದರೆ ತಾಯಿ ಹಾಗೂ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಪ್ರಿಕ್ಲಾಂಪ್ಸಿಯಾ ಎಂದರೆ

ಪ್ರಿಕ್ಲಾಂಪ್ಸಿಯಾ ಎಂಬುದು ಗರ್ಭಿಣಿಯರಲ್ಲಿ ಸದಾ ‘ಅಧಿಕ ರಕ್ತದೊತ್ತಡ’ ಇರುವ ಸ್ಥಿತಿ. ಇದರಿಂದ ದೇಹದಲ್ಲಿ ನಾನಾ ಬಗೆಯ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಕೆಲವೊಮ್ಮೆ ಈ ರೋಗಲಕ್ಷಣಗಳು ಹೆರಿಗೆ ನಂತರವೂ ಉಳಿದುಕೊಳ್ಳುವುದರಿಂದ ಗರ್ಭಿಣಿಯರ ಆರೋಗ್ಯದಲ್ಲಿ ದೊಡ್ಡ ಬದಲಾವಣೆಗಳಾಗಬಹುದು. ಮುಖ್ಯವಾಗಿ ದೇಹದಲ್ಲಿ ಅಧಿಕ ರಕ್ತದೊತ್ತಡ ಹಾಗೂ ಮೂತ್ರದಲ್ಲಿ ಅಧಿಕ ಪ್ರೊಟೀನ್‌ ಅಂಶಗ ಕಾಣಿಸಿಕೊಳ್ಳುತ್ತದೆ.

ಲಕ್ಷಣಗಳೇನು?

ಕೈ, ಕಾಲು, ಹಸ್ತ, ಪಾದಗಳು, ಮುಖ ಎಲ್ಲವೂ ಊದಿಕೊಳ್ಳುತ್ತದೆ. ಜತೆಗೆ ರಕ್ತದೊತ್ತಡ ನಿಯಂತ್ರಣದಲ್ಲಿ ಇರುವುದಿಲ್ಲ. ಹಾಗೂ ಮೂತ್ರದಲ್ಲಿ ಪ್ರೊಟೀನ್‌ ಅಂಶವು ಅಧಿಕವಾಗಿರುತ್ತದೆ. ತೀವ್ರ ತಲೆನೋವು, ಅತಿಯಾದ ವಾಕರಿಕೆ, ದೃಷ್ಟಿದೋಷ, ಯಕೃತ್ತು ಹಾಗೂ ಕಿಡ್ನಿಯ ಕಾರ್ಯವೈಖರಿಯಲ್ಲಿ ತೊಂದರೆಯಾಗುವ ಸಾಧ್ಯತೆ ಇರುತ್ತದೆ.

ADVERTISEMENT

ಕಾರಣಗಳೇನು?

ಪ್ರಿಕ್ಲಾಂಪ್ಸಿಯಾ ಉಂಟಾಗಲು ನಿರ್ದಿಷ್ಟ ಕಾರಣಗಳಿಲ್ಲ. ಆದರೆ, ಇತ್ತೀಚಿನ ಸಂಶೋಧನೆಯ ಪ್ರಕಾರ, ಗರ್ಭ ಧರಿಸಿದ ಆರಂಭಿಕ ಹಂತದಲ್ಲಿ ಮಾಸುಚೀಲ ಸರಿಯಾದ ಸ್ಥಳದಲ್ಲಿ ರೂಪುಗೊಳ್ಳದೇ ಇರುವುದರಿಂದ ಮಾಸುಚೀಲ ಹಾಗೂ ಮೂತ್ರಕೋಶದ ನಡುವಿನ ರಕ್ತನಾಳಗಳಲ್ಲಿ ಅಧಿಕ ಒತ್ತಡ ಉಂಟಾಗುತ್ತದೆ. ಪೋಷಕಾಂಶ ಹಾಗೂ ಆಮ್ಲಜನಕ ಪ್ರಮಾಣದಲ್ಲಿನ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದಲ್ಲದೇ ಆನುವಂಶೀಯ ಕಾರಣಗಳು, ರೋಗನಿರೋಧಕ ಶಕ್ತಿ ಇಲ್ಲದೇ ಇರುವುದು, ಈಗಾಗಲೇ ಮಧುಮೇಹ, ಅತಿಯಾದ ರಕ್ತದೊತ್ತಡ ಇವೆಲ್ಲ ಕಾರಣಗಳಿಂದಲೂ ಪ್ರಿಕ್ಲಾಂಪ್ಸಿಯಾ ಉಂಟಾಗಬಹುದು.

ಏನಾಗಬಹುದು?

ಪ್ರಿಕ್ಲಾಂಪ್ಸಿಯಾ ಇರುವ ಗರ್ಭಿಣಿಯರ ಅಪಧಮನಿಗಳಲ್ಲಿ ಸಮರ್ಪಕವಾಗಿ ರಕ್ತ ಹರಿಯದೇ ಇರಬಹುದು. ಇದರಿಂದ ರಕ್ತದೊತ್ತಡ ಉಂಟಾಗುತ್ತದೆ. ಮುಖವೆಲ್ಲ ಊದಿಕೊಳ್ಳುವುದರ ಜತೆಗೆ ಅಂಗಾಂಗಗಳಿಗೆ ಸಮರ್ಪಕವಾಗಿ ರಕ್ತ ಪೂರೈಕೆಯಾಗದೇ ಹೋಗಬಹುದು.

ಜತೆಗೆ ಗರ್ಭದಲ್ಲಿರುವ ಮಗುವಿಗೂ ಸಮರ್ಪಕವಾಗಿ ರಕ್ತ ‍‍ಪೂರೈಕೆಯಾಗದೇ ಇರಬಹುದು.

ಸಕಾಲದಲ್ಲಿ ಚಿಕಿತ್ಸೆ ಮಾಡದೇ ಹೋದರೆ ತಾಯಿ ಹಾಗೂ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅಧಿಕ ರಕ್ತದ ಒತ್ತಡದಿಂದಾಗಿ ಪಾರ್ಶ್ವವಾಯುವಿನಂಥ ಸಮಸ್ಯೆ ಕಾಣಿಸಿಕೊಳ್ಳಬಹುದು.

ಯಾರೆಲ್ಲ ಹೆಚ್ಚು ಜಾಗೃತರಾಗಬೇಕು?

ಈ ಹಿಂದಿನ ಗರ್ಭಧಾರಣೆಯಲ್ಲಿ ಪ್ರಿಕ್ಲಾಂಪ್ಸಿಯಾ ಸಮಸ್ಯೆ ಇದ್ದವರು, ಅಧಿಕ ರಕ್ತದ ಒತ್ತಡ ಇರುವವರು, ಅಧಿಕ ತೂಕ ಹೊಂದಿರುವವರು ಹೆಚ್ಚು ಜಾಗೃತರಾಗಬೇಕು. ಹೆರಿಗೆಯಾಗುವವರೆಗೂ ತಾಯಿಯ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ. ರಕ್ತದ ಒತ್ತಡ ಹಾಗೂ ಮೂತ್ರದಲ್ಲಿ ಪ್ರೊಟೀನ್‌ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಆಗಾಗ್ಗೆ ತಪಾಸಣೆ ನಡೆಸಬೇಕು. ಹೆರಿಗೆಯಾದ ನಂತರ ಬಹುತೇಕರು ಪ್ರಿಕ್ಲಾಂಪ್ಸಿಯಾ ಸಮಸ್ಯೆಯಿಂದ ಚೇತರಿಸಿಕೊಂಡ ಉದಾಹರಣೆಗಳಿವೆ. ತೂಕ ನಿರ್ವಹಣೆ, ನಿಯಮಿತ ವ್ಯಾಯಾಮ, ಹಿತಮಿತ ಆಹಾರ ಸೇವನೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಉತ್ತಮ. ಆಹಾರದಲ್ಲಿ ಉಪ್ಪಿನಂಶವನ್ನು ಕಡಿಮೆ ಮಾಡಿ. ಧೂಮಪಾನ ಹಾಗೂ ಮದ್ಯಪಾನಗಳಿಂದ ದೂರವಿರಿ. ಇಲ್ಲವಾದರೆ ಹೆರಿಗೆಯ ನಂತರ ಹೃದ್ರೋಗ ಸಮಸ್ಯೆಗಳು ಬರುವ ಸಾಧ್ಯತೆ ಅಧಿಕವಾಗಿರುತ್ತದೆ.

ಲೇಖಕಿ: ಹಿರಿಯ ಸ್ತ್ರೀರೋಗತಜ್ಞೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.