ADVERTISEMENT

ನವಜಾತ ಶಿಶುವಿನ ಆರೈಕೆ: ಬೆಚ್ಚಗಿರಲಿ ಪುಟ್ಟ ಕಂದಮ್ಮ

ಡಾ. ವೀಣಾ ಎನ್‌.ಸುಳ್ಯ
Published 6 ಜನವರಿ 2023, 19:30 IST
Last Updated 6 ಜನವರಿ 2023, 19:30 IST
   

ತಾಯಿಯ ಗರ್ಭದಲ್ಲಿ ಸುರಕ್ಷಿತವಾಗಿರುವ ಪುಟ್ಟ ಕಂದಮ್ಮ, ಅಲ್ಲಿಂದ ಹೊರ ಬರುತ್ತಿದ್ದಂತೆ ಜಗತ್ತಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಎಲ್ಲ ಋತುಗಳಲ್ಲಿಯೂ ಮಗುವನ್ನು ಬೆಚ್ಚಗಿಡುವುದು ಅವಶ್ಯಕ.

***

ಒಂಬತ್ತು ತಿಂಗಳು ತಾಯಿಯ ಗರ್ಭಗೃಹದಲ್ಲಿ ಬೆಚ್ಚಗೆ ಮಲಗಿ ಈಜಾಡುತ್ತಾ ನೆಮ್ಮದಿಯಿಂದ ಇದ್ದ ಮಗು , ದಿನಗಳು ತುಂಬುತ್ತಿದ್ದಂತೆ ಹೆರಿಗೆ ನೋವು ಪ್ರಾರಂಭವಾಗಿ ಈ ಲೋಕಕ್ಕೆ ಅಡಿ ಇಡುವ ಸೂಚನೆ ನೀಡುತ್ತದೆ. ಅಲ್ಲಿಂದಲೇ ಅದರ ಸುರಕ್ಷತೆಗೆ ಒತ್ತು ನೀಡಿ, ಆರೈಕೆಯ ತಯಾರಿ ನಡೆಸಬೇಕಾಗುತ್ತದೆ.

ADVERTISEMENT

ಮಗುವಿನ ಬೆಳವಣಿಗೆ ಕಡಿಮೆಯಿದ್ದಾಗ, ಹೆರಿಗೆ ನೋವು ತೀವ್ರವಾಗಿದ್ದಾಗ, ಗರ್ಭಕೋಶ ಸಂಕುಚಿತಗೊಳ್ಳುತ್ತಿ ದ್ದರೆ, ಕರುಳ ಬಳ್ಳಿಯ ಮೇಲೆ ಅತಿಯಾದ ಒತ್ತಡ ಬಿದ್ದಾಗ ಮಗುವಿಗೆ ಸರಬರಾಜಾಗುವ ರಕ್ತದ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ರಕ್ತಪೂರೈಕೆ ಕಡಿಮೆಯಾಗಿ ಮಗುವಿನ ಹೃದಯಬಡಿತದಲ್ಲಿ ಏರುಪೇರು ಉಂಟಾಗು ತ್ತದೆ. ಇದರಿಂದ ಮಗುವಿಗೆ ಸುಸ್ತಾದ ಸೂಚನೆಗಳು ಕಂಡು ಬರಬಹುದು. ಹಾಗಾಗಿ ಹೆರಿಗೆಯ ನೋವು ಎಂಬ ಹಂತವನ್ನು ತಾಯಿ ಮಗು ಏಕಕಾಲಕ್ಕೆ ದಾಟುವುದು ಅಷ್ಟು ಸುಲಭದ ಮಾತಲ್ಲ.

ಈ ಹಂತ ದಾಟಿದ ಮೇಲೆ ಹೊರಜಗತ್ತಿನ ವಾತಾವರಣಕ್ಕೆ ಹಸುಗೂಸಿನ ದೇಹ ಹೊಂದಿಕೊಳ್ಳಬೇಕು. ಉಸಿರಾಟದ ಪ್ರಕ್ರಿಯೆ ಪ್ರಾರಂಭವಾಗಬೇಕು. ರಕ್ತ ಪರಿಚಲನೆಯಲ್ಲಿ ವ್ಯತ್ಯಾಸ ಉಂಟಾದರೂ, ಎರಡು ಗಂಟೆಯಲ್ಲಿ ಸಹಜ ಸ್ಥಿತಿಗೆ ಬರುತ್ತದೆ. ವಾತಾವರಣದ ಉಷ್ಣತೆಯೊಂದಿಗೆ ಹೊಂದಿಕೊಳ್ಳಲು ತ್ರಾಸ ಪಡುತ್ತದೆ. ಬೇಸಿಗೆಯಾಗಲಿ, ಚಳಿಗಾಲವೇ ಆಗಲಿ ವಾತಾವರಣದ ಉಷ್ಣತೆ ನೋಡಿಕೊಂಡು ಅದಕ್ಕೆ ತಕ್ಕುದಾಗಿ ಉಡುಪಿನ ವ್ಯವಸ್ಥೆ ಮಾಡಬೇಕು.

ಚಳಿಗಾಲದಲ್ಲಿ ಥಂಡಿ ಸಮಯದಲ್ಲಿ ಮಗುವಿನ ಕಾಳಜಿ ಹೆಚ್ಚು ಮಾಡಬೇಕು. ಗರ್ಭದಲ್ಲಿರುವಂತೆ ಮಗುವನ್ನು ಬೆಚ್ಚಗೆ ಇಡುವ ಮೂಲಕ ಅದರ ಆರೋಗ್ಯವನ್ನು ಕಾಪಾಡಬಹುದು. ಬೆಚ್ಚಗೆ ಇಡದಿದ್ದರೆ ಲಘೂಷ್ಣತೆಗೆ (ಹೈಪೋಥರ್ಮಿಯ) ಒಳಗಾಗುವ ಸಂಭವ ಇರುತ್ತದೆ.

ಲಘೂಷ್ಣತೆಯ ಲಕ್ಷಣಗಳೇನು?
* ಮಗುವಿನ ದೇಹ ತಂಪಾಗಿರುತ್ತದೆ
* ಕಾಲುಗಳಲ್ಲಿ ಉಷ್ಣತೆ ಕಮ್ಮಿಯಾಗಿರುತ್ತದೆ. ಮಗುವಿನ ಪಾದಗಳನ್ನು ಕೈಯ ಅಂಗೆಯಲ್ಲಿ ಹಿಡಿದಾಗ ಅಂಗೈಯ ಹಾಗೂ ಪಾದದ ಉಷ್ಣತೆ ಒಂದೇ ಇರುವ ಅನುಭವ ಕೊಡಬೇಕು. ದೇಹದ ಉಷ್ಣತೆ ಕಡಿಮೆಯಾಗಲು ಪ್ರಾರಂಭವಾಗಿದ್ದರೆ, ಮೊದಲ ಸೂಚನೆ ಸಿಗುವುದು ಇಲ್ಲಿಯೇ.
* ಮಗು ಹಾಲು ತೆಗೆದುಕೊಳ್ಳುವುದನ್ನು ನಿರಾಕರಿಸುತ್ತದೆ. ಚಟುವಟಿಕೆಯಿಲ್ಲದೆ ಸುಮ್ಮನೆ ಮಲಗಿರುತ್ತದೆ. ಕೈ ಕಾಲುಗಳು ಸಡಿಲವಾಗಿ ಬಲಹೀನವಾಗಿರುತ್ತದೆ. ಹೆಚ್ಚು ಹೊತ್ತು ನಿದ್ದೆಯಲ್ಲಿ ಇರುತ್ತದೆ.
* ಮಗುವಿನ ದೇಹದಲ್ಲಿ ಸಕ್ಕರೆಯ ಅಂಶ ವಿಪರೀತವಾಗಿ (60 gm℅ ಗಿಂತ) ಕಡಿಮೆ ಆಗುತ್ತದೆ.

ಲಘೂಷ್ಣತೆಯಿಂದಾಗುವ ತೊಂದರೆಗಳೇನು?
* ಮಗುವಿನ ದೇಹದ ಗಾತ್ರ ಮತ್ತು ವಿಸ್ತಾರದ ಅಸಮತೋಲನದಿಂದ ದೇಹದಿಂದ ಹೆಚ್ಚು ಉಷ್ಣತೆ ಹೊರಬೀಳುವಂತಾಗುತ್ತದೆ.
* ಚರ್ಮದ ಕೆಳಗೆ ಇರುವ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ ಮತ್ತು ಚರ್ಮ ಸರಿಯಾಗಿ ಬೆಳೆಯುವುದಿಲ್ಲ.
* ಶರೀರದಲ್ಲಿ ಉಷ್ಣತೆಯನ್ನು ಹೆಚ್ಚು ಮಾಡು ಪ್ರಕ್ರಿಯೆಗಳು ಇನ್ನು ಪೂರ್ಣ ಪ್ರಮಾಣದಲ್ಲಿ ಬೆಳೆದಿರುವುದಿಲ್ಲ.
* ತಕ್ಷಣ ಗುರುತಿಸದೆ ಹೋದರೆ ಮಗುವಿನ ಶರೀರದಲ್ಲಿ ಮೆಟಬಾಲಿಕ್ ಅಸಿಡೋಸಿಸ್ ಆಗಿ ಎಲ್ಲಾ ಜೀವಕೋಶಗಳ ಪ್ರಕ್ರಿಯೆಗಳು ನಿಧಾನಗೊಂಡು. ಸ್ಥಗಿತವಾಗಬಹುದು. ಮಗು ಪ್ರಜ್ಞೆ ಕಳೆದು ಕೊಂಡು ಕೋಮಕ್ಕೆ ಜಾರಬಹುದು. ನಂಜು ಆಗಿ ಮರಣ ಹೊಂದುವ ಸಾಧ್ಯತೆ ಹೆಚ್ಚಿರುತ್ತದೆ.

ಏನೆಲ್ಲ ಮಾಡಬಹುದು?
* ಸ್ನಾನ ಮಾಡಿಸುವಾಗ ಉಗುರುಬಿಸಿ ನೀರಿನಲ್ಲಿ ಮಾಡಿಸುವುದು. ಸ್ನಾನ ಮಾಡಿಸುವಾಗ ಹೆಚ್ಚು ಸಮಯ ತೆಗೆದುಕೊಳ್ಳದಿರುವುದು.
* ಹೆಚ್ಚು ಹೊತ್ತು ಬರಿ ಮೈಯಲ್ಲಿ ಮಗುವನ್ನು ಬಿಡದೆ ಇರುವುದು.
* ತಲೆಗೆ ಕಡ್ಡಾಯವಾಗಿ ಬಟ್ಟೆ ಸುತ್ತುವುದು.
* ಮಗು ಮೂತ್ರ ಮಾಡಿದ್ದರೆ ಒದ್ದೆ ಬಟ್ಟೆಯನ್ನು ಕೂಡಲೇ ಬದಲಾಯಿಸಬೇಕು.
* ಎಷ್ಟೋ ಬಾರಿ ಮಗು ನಿದ್ರಿಸುತ್ತಿದೆ ಎಂದು ತಿಳಿದುಕೊಂಡೇ ಇರುತ್ತಾರೆ. ಮಗುವಿಗೆ ಲಘೂಷ್ಣತೆಯ ಆಗಿರಬಹುದು ಎಂಬ ಅಂದಾಜು ಇರುವುದಿಲ್ಲ. ಮಗುವನ್ನು ಬೆಚ್ಚಗೆ ನೋಡಿಕೊಳ್ಳುವುದು ತೀರ ಅವಶ್ಯಕ.

ಸೋಂಕಿನಿಂದ ರಕ್ಷಿಸಿ
ಇದು ವೈರಸ್‌ಗಳ ಕಾಲ. ಯಾವಾಗ ಎಲ್ಲಿ ಹೇಗೆ ವೈರಸ್‌ಗಳು ಆಕ್ರಮಣ ಮಾಡುತ್ತವೆಯೆಂದು ಹೇಳಲು ಬರುವುದಿಲ್ಲ. ಹಾಗಾಗಿ ವೈರಸ್‌ ಹಾವಳಿಯಿಂದ ನವಜಾತ ಶಿಶುವಿಗೆ ತೊಂದರೆಯಾಗುವುದನ್ನು ತಪ್ಪಿಸಬೇಕು. ಇದರಲ್ಲಿ ತಾಯಿಯ ಜತೆ ಮನೆಯವರು, ಮಗುವನ್ನು ನೋಡಲು ಬರುವ ಸಂದರ್ಶಕರ ಪಾತ್ರವೂ ಹೆಚ್ಚಿರುತ್ತದೆ.

ಹಿಂದಿನ ಕಾಲದಲ್ಲಿ ಬಾಣಂತಿ ಹಾಗೂ ಮಗುವಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಇರುತ್ತಿತ್ತು. ಬಾಣಂತಿಗೆ ನಂಜು ಆಗಬಾರದು ಎನ್ನುವುದು ಒಂದು ಕಾರಣವಾದರೆ, ನವಜಾತಶಿಶುವಿಗೆ ನಂಜು(ಸೋಂಕು) ಆಗಬಾರದು ಎನ್ನುವ ಉದ್ದೇಶ ಇತ್ತು. ಹಾಗಾಗಿ, ಯಾವುದೇ ವ್ಯಕ್ತಿ ಶೀತ, ಕೆಮ್ಮಿನಿಂದ ಬಳಲುತ್ತಿದ್ದರೆ ಅಂತಹವರು ಮಗುವಿನ ಸಂಪರ್ಕಕ್ಕೆ ಬಂದರೆ ಮಗುವಿಗೆ ಶ್ವಾಸಕೋಶದ ನಂಜು ಆಗಬಹುದು. ಮನೆಗೆ ಬರುವ ನೆಂಟರು- ಇಷ್ಟರು ಬಂದು ಮಗುವನ್ನು ಎತ್ತಿಕೊಂಡಾಗ ಅವರಿಂದಲೂ ಮಗುವಿಗೆ ಸೋಂಕು ಉಂಟಾಗಬಹುದು.

ಹೀಗೆ ಮಾಡಿ...
ಸಂದರ್ಶಕರ ಸಂಖ್ಯೆಯನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಮಗುವನ್ನು ಮುಟ್ಟುವ ಮೊದಲು, ತಾವು ಧರಿಸಿದ್ದ ಬಟ್ಟೆ ಬದಲಾಯಿಸಿಕೊಳ್ಳಬೇಕು

ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು. ಮಗುವಿನ ಮುಖವನ್ನು ತಮ್ಮ ಮುಖದ/ ಮೂಗಿನ ಹತ್ತಿರ ತೆಗೆದುಕೊಂಡು ಹೋಗಬಾರದು. ಬಾಯಿಯ/ಮೂಗಿನಿಂದ ಬ್ಯಾಕ್ಟೀರಿಯಾ/ವೈರಸ್ ಗಳು ನೇರವಾಗಿ ಮಗುವಿನ ಶ್ವಾಸಕೋಶವನ್ನು ತಲುಪುವ ಸಾಧ್ಯತೆಗಳಿವೆ.
(ಲೇಖಕರು ಸ್ತ್ರೀ ಆರೋಗ್ಯ ತಜ್ಞರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.