ADVERTISEMENT

ಚಳಿಗಾಲ: ಗರ್ಭಿಣಿಯರಿಗೆ ವೈರಾಣು ಸೋಂಕಿನ ಭೀತಿ!

ಸುಮನಾ ಕೆ
Published 28 ಡಿಸೆಂಬರ್ 2019, 9:54 IST
Last Updated 28 ಡಿಸೆಂಬರ್ 2019, 9:54 IST
ಸಂಗೀತಾ ರಾವ್‌
ಸಂಗೀತಾ ರಾವ್‌   

ಈಗ ಚಳಿಗಾಲದ ಅವಧಿ. ಹವಾಮಾನ ಒಮ್ಮೆಲೇ ಬದಲಾವಣೆಯಾಗಿದ್ದರಿಂದ ನಗರದ ಎಲ್ಲೆಡೆ ವೈರಾಣು ಜ್ವರ ಹರಡಿದೆ. ಕಳೆದ ಒಂದು ತಿಂಗಳಲ್ಲಿ ನಗರದ ಬಹುತೇಕ ಆಸ್ಪತ್ರೆಗಳಲ್ಲಿ ಈ ಜ್ವರಕ್ಕೆ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.

ಅದರಲ್ಲೂ ಚಿಕಿತ್ಸೆಗೆ ಬರುವವರಲ್ಲಿ ಮಕ್ಕಳು ಹಾಗೂ ಗರ್ಭೀಣಿಯರ ಸಂಖ್ಯೆಯೇ ಹೆಚ್ಚು ಎಂದು ವೈದ್ಯರು ಹೇಳುತ್ತಾರೆ. ಗರ್ಭಿಣಿಯರಲ್ಲಿ ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ ಅವರಲ್ಲಿ ಬೇಗನೆ ವೈರಲ್‌ ಸೋಂಕು ಕಾಣಿಸಿಕೊಳ್ಳುತ್ತಿದೆ. ಒಂದು ತಿಂಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಗಾಳಿ ಮತ್ತು ನೀರಿನ ಮೂಲಕ ವೈರಾಣು ಜ್ವರ ಹರಡುತ್ತಿದೆ. ಸೋಂಕಿತ ವ್ಯಕ್ತಿಯಿಂದ ಜ್ವರವು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತದೆ. ಜನರಿಂದ ಕಿಕ್ಕಿರಿದ ಸ್ಥಳಗಳಿಗೆ ಭೇಟಿ ನೀಡಿದಾಗ, ಸೋಂಕು ಸುಲಭವಾಗಿ ಹರಡುತ್ತದೆ. ಹೀಗಾಗಿ ಮಕ್ಕಳು ಹಾಗೂ ಗರ್ಭೀಣಿಯರು ಹೆಚ್ಚು ಜನರಿರುವ ಪ್ರದೇಶಕ್ಕೆ ಹೋಗುವುದು ಆದಷ್ಟು ತಪ್ಪಿಸಿಕೊಳ್ಳಬೇಕು ಎಂದು ವೈದ್ಯೆ ಸಂಗೀತಾ ರಾವ್‌ ಎಚ್ಚರಿಕೆ ನೀಡುತ್ತಾರೆ.

ADVERTISEMENT

ಮಗುವಿಗೂ ಸೋಂಕು

ಈ ಜ್ವರ ಸುಲಭವಾಗಿ ಹರಡುವುದರಿಂದ ಇದರ ಬಗ್ಗೆ ಮುಖ್ಯವಾಗಿ ಗರ್ಭಿಣಿಯರು ಜಾಗರೂಕರಾಗಿರಬೇಕು. ಈ ಜ್ವರ ಬಂದರೆ ತಾಯಿಯ ಜೊತೆಗೆ ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಗರ್ಭಿಣಿಯರು ಆದಷ್ಟು ಹೆಚ್ಚು ಜಾಗರೂಕರಾಗಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬುದು ಅವರ ಸಲಹೆ.

‌ಗರ್ಭಾವಸ್ಥೆಯ ಕೊನೆಯ ಮೂರು ತಿಂಗಳುಗಳಲ್ಲಿ ಜ್ವರ ಬಂದರೆ ಸೋಂಕು ಮಗುವಿಗೂ ಹರಡಬಹುದು.ವೈರಲ್ ಜ್ವರ ಕಾಣಿಸಿಕೊಂಡಾಗ ಚರ್ಮದಲ್ಲಿ ದದ್ದುಗಳು, ದೇಹದಲ್ಲಿ ನೋವು ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಜ್ವರ ಬಂದಾಗ ಆದಷ್ಟು ಬೇಗ ವೈದ್ಯರನ್ನು ಕಾಣಬೇಕು. ಜ್ವರ ಕಡಿಮೆಯಾದ ನಂತರವೂ ವೈದ್ಯರನ್ನು ಒಂದು ಬಾರಿ ಸಂಪರ್ಕಿಸುವುದು ಉತ್ತಮ.

ಜ್ವರ ಬಂದಿದ್ದಾಗ ಚಳಿ ಹೆಚ್ಚಿರುವ ವೇಳೆ ಸಂಜೆ ಹಾಗೂ ಬೆಳಿಗ್ಗೆ ಹೊರಗೆ ಅಡ್ಡಾಡಲೇ ಬಾರದು. ಹಾಗೇ ಮಾಂಸ ಮತ್ತು ಚೀಸ್‌ನಂತಹ ಹೆಚ್ಚು ಕೊಬ್ಬು ಇರುವ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಇದರಿಂದ ಜ್ವರ ಹೆಚ್ಚಾಗುವ ಸಾಧ್ಯತೆ ಇದೆ. ಊಟ, ತಿಂಡಿಗೂ ಮುನ್ನ ಕೈಗಳನ್ನು ಚೆನ್ನಾಗಿ ತೊಳೆದುಕೊಂಡರೆ ಉತ್ತಮ ಎಂದು ವೈದ್ಯರು ಎಚ್ಚರ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.