ಆಸ್ತಮಾ ಸಮಸ್ಯೆಯಿಂದ ಸಾಕಷ್ಟು ಜನ ಬಳಲುತ್ತಿದ್ದಾರೆ. ಈ ರೋಗಕ್ಕೆ ಸೂಕ್ತ ಚಿಕಿತ್ಸೆ ಇಲ್ಲದಿದ್ದರೂ ಸಹ, ಶಿಸ್ತುಬದ್ಧ ನಿರ್ವಹಣೆಯಿಂದ, ತಕ್ಕಮಟ್ಟಿಗೆ ತಡೆಗಟ್ಟಲು ಸಾಧ್ಯವಿದೆ. ಒಂದೊಮ್ಮೆ ನಿರ್ಲಕ್ಷಿಸಿದರೆ ಆರೋಗ್ಯದ ಪರಿಸ್ಥಿತಿ ಇನ್ನಷ್ಟು ಹದಗಡೆಲಿದೆ. ಹೀಗಾಗಿ ಆಸ್ತಮಾ ಇರುವವರು ಯಾವ ರೀತಿ ತಮ್ಮ ಜೀವನ ಶೈಲಿ ಹೊಂದಿರಬೇಕು ಹಾಗೂ ಚಿಕಿತ್ಸೆಗಳ ವಿಧಾನ ಕುರಿತು ಫೋರ್ಟಿಸ್ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರ ವಿಭಾಗದ ನಿರ್ದೇಶಕ ಡಾ ವಿವೇಕ್ ಆನಂದ್ ಪಡೆಗಲ್ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.
ಅಸ್ತಮಾ ಲಕ್ಷಣಗಳು
ಅಸ್ತಮಾ ಹೊಂದಿರುವರು ವಿಪರೀತ ಕೆಮ್ಮುತ್ತಿರುತ್ತಾರೆ. ಅದರಲ್ಲೂ ರಾತ್ರಿ ಹೊತ್ತು ಈ ಕೆಮ್ಮು ಹೆಚ್ಚಾಗುತ್ತದೆ. ಉಸಿರಾಟದ ಸಮಸ್ಯೆ, ಉಬ್ಬಸ, ಎದೆ ಬಿಗಿತ, ಹೆಚ್ಚು ಆಯಾಸ, ದೇಹದಲ್ಲಿ ದೌರ್ಬಲ್ಯ ಮೂಡುವುದು, ವ್ಯಾಯಾಮ ಮಾಡುವಾಗ ಉಸಿರು ಕಟ್ಟಿದಂತಾಗುವುದು ಇವೆಲ್ಲ ಅಸ್ತಮಾದ ಲಕ್ಷಣಗಳು. ಇದರ ಜೊತೆಗೆ, ಶ್ವಾಸಕೋಶ ಸರಿಯಾಗಿ ಕಾರ್ಯನಿರ್ವಹಿಸದಿರುವುದು, ಶ್ವಾಸಕೋಶದಲ್ಲಿ ಅಲರ್ಜಿ, ಶೀತದ ಲಕ್ಷಣಗಳು ಕಂಡುಬಂದಾಗ, ಗಂಟಲು ಕಟ್ಟವುದು, ಕಫಾ, ನಿದ್ರಿಸುವಾಗ ಗೊರಕೆ, ತಲೆ ನೋವು, ವೀಸಿಂಗ್.. ಇಂಥವೂ ಅಸ್ತಮಾದ ಲಕ್ಷಣಗಳಾಗಿವೆ.
ಯೋಗವೇ ಪರಿಹಾರ
ಉಸಿರಾಡುವ ವೇಳೆ ಶ್ವಾಸಕೋಶದಲ್ಲಿ ಆಗುವ ಅಡೆತಡೆಯಿಂದಲೇ ಕೆಮ್ಮು ಹೆಚ್ಚುತ್ತದೆ. ಯಾವಾಗ ಸರಾಗ ಉಸಿರಾಟ ಮಾಡಲು ಸಾಧ್ಯವಾಗುವುದೋ ಆಗ ಅಸ್ತಮಾ ಇರುವವರಿಗೆ ಕ್ರಮೇಣ ಈ ಸಮಸ್ಯೆ ಕಡಿಮೆಯಾಗುತ್ತಾ ಬರಲಿದೆ. ಹೀಗಾಗಿ, ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ 20 ನಿಮಿಷಗಳ ಕಾಲ ಯೋಗ ಅದರಲ್ಲೂ ಪ್ರಾಣಯಾಮ ಮಾಡುವುದು ಅತ್ಯಂತ ಅವಶ್ಯಕ. ಪ್ರಾಣಯಾಮವು ನಿಮ್ಮ ಉಸಿರಾಟವನ್ನು ಸರಾಗಗೊಳಿಸುತ್ತದೆ ಹಾಗೂ ಶ್ವಾಸಕೋಶದ ಕಾರ್ಯವನ್ನು ಸುಲಭಗೊಳಿಸಲಿದೆ. ಜೊತೆಗೆ, ಒಂದಷ್ಟು ಯೋಗಾಭ್ಯಾಸ ಕೂಡ ನಿಮ್ಮ ದೇಹವನ್ನು ಪ್ರಶಾಂತವಾಗಿಡಲಿದೆ.
ವ್ಯಾಯಾಮವಿರಲಿ
ಕೆಲವರಿಗೆ ಯೋಗ ಮಾಡುವ ತಾಳ್ಮೆ ಇರುವುದಿಲ್ಲ. ಅಂಥವರು ತಮಗೆ ಮೆಚ್ಚುಗೆ ಎನಿಸುವ ದೈಹಿಕ ಚಟುವಟಿಕೆ ನಿಭಾಯಿಸಬಹುದು. ಈಜು, ವಾಕಿಂಗ್, ಸೈಕ್ಲಿಂಗ್, ಜಾಕಿಂಗ್, ಬ್ಯಾಡ್‌ಮಿಂಟನ್, ಜಿಮ್ ಹೀಗೆ ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.
ಅಲರ್ಜಿ ನಿರ್ಲಕ್ಷಿಸಬೇಡಿ
ಅಸ್ತಮಾ ರೋಗಿಗಳನ್ನು ಕಾಡುವ ಅತಿದೊಡ್ಡ ಸಮಸ್ಯೆ ಎಂದರೆ, ಅದು ಅಲರ್ಜಿ. ಹೆಚ್ಚು ದೂಳು, ಮಾಲಿನ್ಯ(ಪ್ರದೂಷಣೆ) ಇರುವ ಜಾಗದಲ್ಲಿ ಉಸಿರಾಟ ಮಾಡಿದಾಗ, ಆ ದೂಳಿನ ಕಣಗಳು ಶ್ವಾಸಕೋಶ ಸೇರಿ, ಅಲರ್ಜಿ ಉಂಟು ಮಾಡುತ್ತದೆ. ಇದು ಹೆಚ್ಚು ಕೆಮ್ಮು ಆಗುವುದಕ್ಕೆ ದಾರಿ ಮಾಡಿದಂತೆ. ಹೀಗಾಗಿ ಸಾಧ್ಯವಾದಷ್ಟು ದೂಳು ಇರುವ ಕಡೆ ಓಡಾಟ ಕಡಿಮೆ ಮಾಡಿ ಅಥವಾ ಅನಿವಾರ್ಯವೆನಿಸಿದರೆ ಮಾಸ್ಕ್ ಧರಿಸುವುದನ್ನು ಮರೆಯದಿರಿ.
ಇನ್ನೂ ಕೆಲವರು, ಸಾಕುಪ್ರಾಣಿಗಳನ್ನು ಹೆಚ್ಚಾಗಿ ಮುದ್ದಿಸುತ್ತಾರೆ. ಪ್ರಾಣಿಗಳು ಕೂದಲು ಸಹ ಅಲರ್ಜಿ ಉಂಟು ಮಾಡುವ ಸಾಧ್ಯತೆ ಇದೆ. ಹೀಗಾಗಿ ಸಾಕು ಪ್ರಾಣಿ, ಮಲಗುವ ಹೊದಿಕೆ ಇದರಲ್ಲಿ ಕೂದಲು ಉದರಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳಿ ಅಥವಾ ಜಾಗವನ್ನು ಸ್ವಚ್ಛಗೊಳಿಸಿ.
ಧೂಮಪಾನ ತ್ಯಜಿಸಿ
ಅಸ್ತಮಾ ಬರಲು ಧೂಮಪಾನವೂ ಒಂದು ಕಾರಣ. ಧೂಮಪಾನದಲ್ಲಿರುವ ನಿಕೋಟಿನ್‌ನಿಂದ ಶ್ವಾಸಕೋಶ ತನ್ನ ಆರೋಗ್ಯ ಕಳೆದುಕೊಳ್ಳಲಿದೆ. ಇದರಿಂದ ಶ್ವಾಸಕೋಶದ ಅಲರ್ಜಿ, ಕೆಮ್ಮು ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ. ಹೀಗಾಗಿ ಧೂಮಪಾನ ನಿಲ್ಲಿಸಿ ಹಾಗೂ ಧೂಮಪಾನ ಮಾಡುವವರ ಬಳಿ ನಿಲ್ಲುವುದನ್ನು ಕಡಿಮೆ ಮಾಡಿ.
ಔಷಧಿ ತೆಗೆದುಕೊಳ್ಳಿ
ಕೆಲವರಿಗೆ ಆಸ್ತಮಾ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆ ಉಂಟು ಮಾಡುತ್ತಿದ್ದರೆ, ವೈದ್ಯರು ಸೂಚಿಸಿದ ಔಷಧಿ ಗಳನ್ನು ನಿರ್ಲಕ್ಷಿಸಬೇಡಿ. ಕೆಲವೊಮ್ಮೆ ವಾತಾವರಣದ ಮೇಲೂ ನಿಮ್ಮ ಉಸಿರಾಟದ ಮೇಲೆ ಸಮಸ್ಯೆ ಆಗಬಹುದು, ಹೀಗಾಗಿ ಸದಾ ಇನ್‌ಹೇಲರ್ ಅನ್ನು ಜೊತೆಯಲ್ಲಿಯೇ ಇಟ್ಟುಕೊಳ್ಳಿ.
ಮನೆಯ ವಾತಾವರಣ ಚೆನ್ನಾಗಿಲಿ
ಇನ್ನು, ಮನೆಯಲ್ಲಿನ ಸಣ್ಣ ಕಣಗಳಿಂದಲೂ ಉಸಿರಾಟದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಏರ್‌ಫಿಲ್ಟರ್ ಬಳಸುವುದು ಕಡಿಮೆ ಮಾಡಿ, ಮನೆಯನ್ನು ಸ್ವಚ್ಛವಾಗಿಡಿ, ಗಾಢ ಸುವಾಸನೆ ಇರುವ ರಾಸಾಯನಿಗಳನ್ನು ಬಳಸದಿರಿ. ಇವೆಲ್ಲ ನಿಮ್ಮ ಉಸಿರಾಟವನ್ನು ಶುಚಿಯಾಗಿಡುತ್ತದೆ.
ಆರೋಗ್ಯಕರ ಆಹಾರವನ್ನು ಸೇವಿಸಿ
ಸಂಸ್ಕರಿಸಿದ ಆಹಾರಗಳು ಮತ್ತು ಸಕ್ಕರೆ ಪಾನೀಯಗಳನ್ನು ಸೀಮಿತಗೊಳಿಸುವುದು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಉತ್ತಮ. ಇದು ಅಸ್ತಮಾದ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.