ADVERTISEMENT

ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನ ಇಂದು | ಹೆಚ್ಚುತ್ತಿರುವ ಶ್ವಾಸಕೋಶ ಕ್ಯಾನ್ಸರ್‌

ಪ್ರಜಾವಾಣಿ ವಿಶೇಷ
Published 31 ಜುಲೈ 2022, 19:45 IST
Last Updated 31 ಜುಲೈ 2022, 19:45 IST
   

ಬೆಂಗಳೂರು: ಅತಿ ಹೆಚ್ಚು ಸಾವಿಗೆ ಕಾರಣವಾಗುವ ಮೊದಲ ಐದು ಕ್ಯಾನ್ಸರ್‌ಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸಹ ಸ್ಥಾನ ಪಡೆದಿದೆ. 20ನೇ ಶತಮಾನದಲ್ಲಿ ಅತಿ ವಿರಳವಾಗಿದ್ದ ಈ ಕಾಯಿಲೆ ಅತಿ ವೇಗವಾಗಿ ಬೆಳೆಯುತ್ತಿರುವ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಕಾಯಿಲೆಗೆ ಅನೇಕ ಕಾರಣಗಳಿದ್ದರೂ, ಧೂಮಪಾನ ಮಾಡುವವರಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.ಪ್ರಮುಖ ನಗರಗಳಲ್ಲಿ ಕಂಡು ಬರುತ್ತಿರುವ ವಾಯುಮಾಲಿನ್ಯದಿಂದಲೂ ಶ್ವಾಸಕೋಶ ಕ್ಯಾನ್ಸರ್ ಉಲ್ಬಣಗೊಳ್ಳುವ ಸಾಧ್ಯತೆಯಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಬಹುತೇಕ ಸಂದರ್ಭಗಳಲ್ಲಿ ಹಲವರು ಆರಂಭಿಕ ಹಂತಗಳಲ್ಲಿ ಈ ಕ್ಯಾನ್ಸರ್‌ ಅನ್ನು ಕ್ಷಯವೆಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಈ ಎರಡು ಕಾಯಿಲೆಗಳ ಲಕ್ಷಣಗಳೂ ಬಹುತೇಕ ಒಂದೇ ರೀತಿ ಇರುವುದು ಇದಕ್ಕೆ ಕಾರಣ. ಎರಡೂ ಪ್ರಕರಣಗಳಲ್ಲಿ, ರೋಗಿಯು ಕೆಮ್ಮು ಹಾಗೂ ರಕ್ತ ಸಹಿತವಾದ ಕೆಮ್ಮನ್ನು ಹೊಂದಿರುತ್ತಾರೆ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.

ADVERTISEMENT

ಈ ಕಾಯಿಲೆಗೆ ಯಾವುದೇ ವಯೋಮಿತಿಯಿಲ್ಲ. ಈ ರೋಗವು ಪುಟ್ಟ ಮಗುವಿನಿಂದ ಹಿಡಿದು ಹಿರಿಯರಲ್ಲೂ ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ 40 ರಿಂದ 60ರ ಪ್ರಾಯದ ವ್ಯಕ್ತಿಗಳಲ್ಲಿ ಅತಿ ಹೆಚ್ಚು ಶ್ವಾಸಕೋಶ ಕ್ಯಾನ್ಸರ್ ಪತ್ತೆಯಾಗಿದೆ. ಇದರ ಹೊರತಾಗಿ 19 ರಿಂದ 40ರ ಹರೆಯದವರಲ್ಲಿ ಈ ರೋಗ ಲಕ್ಷಣಗಳು ವಿಪರೀತವಾಗಿ ಕಂಡು ಬರುತ್ತಿದೆ ಎಂದು ವಿವರಿಸಿದ್ದಾರೆ.

ನಿಯಂತ್ರಣ ಹೇಗೆ?:
ತಂಬಾಕು ಸೇವನೆ ಮತ್ತು ಧೂಮಪಾನ ತ್ಯಜಿಸಬೇಕು. ಮದ್ಯಪಾನ, ವಾಯು ಮಾಲಿನ್ಯದ ವಾತಾವರಣದಿಂದ ದೂರವಿದ್ದಷ್ಟು ಶ್ವಾಸಕೋಶ ಕ್ಯಾನ್ಸರ್‌ ತಡೆಗಟ್ಟಬಹುದು ಎಂದು ತಜ್ಞರು ವಿವರಿಸಿದ್ದಾರೆ.

ಕ್ಯಾನ್ಸರ್‌ ಲಕ್ಷಣಗಳು

*ದೀರ್ಘಕಾಲದ ಕೆಮ್ಮು

*ಕೆಮ್ಮಿನಲ್ಲಿ ರಕ್ತ ಅಥವಾ ಕಫ

*ಉಸಿರಾಟ ತೊಂದರೆ, ನಗುವಾಗ ಅಥವಾ ಕೆಮ್ಮುವಾಗ ಎದೆ ನೋವು

*ಧ್ವನಿಯಲ್ಲಿ ಒರಟುತನ ಹೆಚ್ಚುವುದು

*ಬಳಲಿಕೆ ಮತ್ತು ನಿಶ್ಯಕ್ತಿ

*ಹಸಿವು ಮತ್ತು ತೂಕ ನಷ್ಟ

ತಜ್ಞರ ವಿಶ್ಲೇಷಣೆ

*ಶೇ 80 ರಷ್ಟು ರೋಗಿಗಳು 3 ಮತ್ತು 4ನೇ ಹಂತದಲ್ಲಿ ಚಿಕಿತ್ಸೆ ಪಡೆಯುತ್ತಾರೆ.

*ಶೇ 95 ರಷ್ಟು ಪ್ರಕರಣಗಳು ಶಸ್ತ್ರಚಿಕಿತ್ಸೆ ಮಾಡುವ ಹಂತದಲ್ಲಿ ಇರುವುದಿಲ್ಲ

*ಶೇ 70ರಷ್ಟು ಮಂದಿ ಧೂಮಪಾನದಿಂದ ಶ್ವಾಸಕೋಶ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ.

*ಜಗಿಯುವ ತಂಬಾಕಿನಿಂದ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳ

‘ಮಹಿಳೆಯರಲ್ಲೂ ಕಾಯಿಲೆ ಹೆಚ್ಚುತ್ತಿದೆ’

‘ಶೇ 65ರಷ್ಟು ಪುರುಷರಲ್ಲಿ ಮತ್ತು ಶೇ 35ರಷ್ಟು ಮಹಿಳೆಯರಲ್ಲಿ ಶ್ವಾಸಕೋಶ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲೂ ಈ ಕಾಯಿಲೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಧೂಮಪಾನ ಮಾಡುತ್ತಿರುವವರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ಸಿ. ರಾಮಚಂದ್ರ ವಿವರಿಸಿದ್ದಾರೆ.

‘ತಂಬಾಕು ಜಗಿಯುವವರು, ಸೇವಿಸುವವರು, ಕೈಗಾರಿಕೆ ಮಾಲಿನ್ಯಕ್ಕೆ ಒಳಗಾಗುವವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಆದರೆ, ಶೇ 80ರಷ್ಟು ಮಂದಿ ಮೂರು ಮತ್ತು ನಾಲ್ಕನೇ ಹಂತದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕನೇ ಹಂತದಲ್ಲಿ ಪ್ರತಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ, ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ತಪಾಸಣೆಗೆ ಒಳಗಾಗುವುದು ಉತ್ತಮ’ ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.