ADVERTISEMENT

ಹೃದಯಕ್ಕಾಗಿ ಮಿಡಿಯುತ್ತಿವೆ ನೂರಾರು ಜೀವ !

ತುರ್ತಾಗಿ ಕಸಿಗೆ ಎದುರು ನೋಡುತ್ತಿರುವವರ ಸಂಖ್ಯೆ ಏರುಗತಿ *ಕೋವಿಡ್‌ನಿಂದ ಸಮರ್ಪಕವಾಗಿ ನಡೆಯದ ತಪಾಸಣೆ/ ವಿಶ್ವ ಹೃದಯ ದಿನ

ವರುಣ ಹೆಗಡೆ
Published 28 ಸೆಪ್ಟೆಂಬರ್ 2021, 17:26 IST
Last Updated 28 ಸೆಪ್ಟೆಂಬರ್ 2021, 17:26 IST
   

ಬೆಂಗಳೂರು: ಒಂದೂವರೆ ವರ್ಷದಿಂದಅಂಗಾಂಗ ಕಸಿಗೆ ಕೋವಿಡ್ ಅಡ್ಡಿಪಡಿಸಿದ್ದು, ಹೃದಯ ಸಂಬಂಧಿ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ ಏರುಗತಿ ಪಡೆದಿದೆ. ತುರ್ತಾಗಿ 225 ಮಂದಿ ಹೃದಯ ಕಸಿಗೆ ಎದುರು ನೋಡುತ್ತಿದ್ದಾರೆ.

ರಾಜ್ಯ ಅಂಗಾಂಶಕಸಿಸಂಸ್ಥೆ (ಸೊಟೊ) ಅಡಿ 3 ಸಾವಿರಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಳೆದ ವರ್ಷ 8 ಮಂದಿಗೆ ಹಾಗೂ ಈ ವರ್ಷ ಒಂಬತ್ತು ತಿಂಗಳಲ್ಲಿ 13 ಮಂದಿಗೆ ಮಾತ್ರ ಹೃದಯ ಕಸಿ ಮಾಡಲಾಗಿದೆ. ಕೋವಿಡ್ ಪೂರ್ವದಲ್ಲಿ ಪ್ರತಿ ವರ್ಷ ನೂರಕ್ಕೂ ಅಧಿಕ ಮಂದಿಗೆ ಕಸಿ ಮಾಡಲಾಗುತ್ತಿತ್ತು. ಕೋವಿಡ್ ಕಾಣಿಸಿಕೊಂಡ ಬಳಿಕಅಂಗಾಂಗ ದಾನ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಇದರಿಂದ ಸೊಟೊ ಅಡಿ ತುರ್ತಾಗಿ ಹೃದಯಕ್ಕೆ ಹೆಸರು ನೋಂದಾಯಿಸಿದವರೂ ಹಲವು ತಿಂಗಳಿನಿಂದ ಕಸಿಗಾಗಿ ಕಾಯುತ್ತಿದ್ದಾರೆ.

ಹೃದ್ರೋಗ ಸೇರಿದಂತೆ ವಿವಿಧ ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ ಹಾಗೂ ಚಿಕಿತ್ಸೆಗೆ ರಾಜ್ಯದಲ್ಲಿ 273ಸಾಂಕ್ರಾಮಿಕವಲ್ಲದ ರೋಗ ಕ್ಲಿನಿಕ್‌ಗಳು (ಎನ್‌ಸಿಡಿ) ಕಾರ್ಯನಿರ್ವಹಿಸುತ್ತಿವೆ. ಕೋವಿಡ್ ಪೂರ್ವದಲ್ಲಿ ಪ್ರತಿ ವರ್ಷ ಈ ಕ್ಲಿನಿಕ್‌ಗಳಲ್ಲಿ 30 ಲಕ್ಷಕ್ಕೂ ಅಧಿಕ ಮಂದಿಗೆ ತಪಾಸಣೆ ನಡೆಸಿ, ರೋಗ ಪತ್ತೆ ಮಾಡಲಾಗಿತ್ತು.

ADVERTISEMENT

ಕೋವಿಡ್ ಕಾಣಿಸಿಕೊಂಡ ಬಳಿಕ ಈ ಕ್ಲಿನಿಕ್‌ಗಳಿಗೆ ಬರುವವರ ಸಂಖ್ಯೆ ಶೇ 50ರಷ್ಟು ಇಳಿಕೆಯಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಪರೀಕ್ಷೆ ಹಾಗೂ ತಪಾಸಣೆ ನಡೆದಿಲ್ಲ. ಇದರಿಂದಾಗಿ ಚಿಕಿತ್ಸೆ ಪಡೆದವರ ಸಮಗ್ರ ಮಾಹಿತಿ ಆರೋಗ್ಯ ಇಲಾಖೆ ಬಳಿ ಇಲ್ಲದಂತಾಗಿದೆ.

ಹೃದಯ ಸಮಸ್ಯೆ ಪತ್ತೆ: ಕೋವಿಡ್‌ನಿಂದ ಮೃತಪಟ್ಟವರಲ್ಲಿ ಶೇ 80ಕ್ಕೂ ಅಧಿಕ ಮಂದಿ ಹೃದಯ, ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಸಾಂಕ್ರಾಮಿಕವಲ್ಲದ ರೋಗಗಳನ್ನು ಎದುರಿಸುತ್ತಿದ್ದವರಾಗಿದ್ದಾರೆ.ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕವೂ ವೈರಾಣು ಈ ಮೊದಲು ಉಂಟುಮಾಡಿದ ನಕಾರಾತ್ಮಕ ಪರಿಣಾಮಗಳಿಂದ ಕೆಲವರಿಗೆ ರಕ್ತವು ಹೆಪ್ಪುಗಟ್ಟಿ, ಹೃದಯಾಘಾತ ಸಂಭವಿಸುವ ಸಾಧ್ಯತೆ ಇರುತ್ತದೆ ಎನ್ನುವುದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ.

‘ಬದಲಾದ ಜೀವನಶೈಲಿ ಸೇರಿದಂತೆ ವಿವಿಧ ಕಾರಣಗಳಿಂದ ಹೃದಯ ಸಂಬಂಧಿ ಅನಾರೋಗ್ಯ ಸಮಸ್ಯೆಗೆ ಒಳಪಡುವವರ ಸಂಖ್ಯೆ ಏರುಗತಿ ಕಂಡಿದೆ.ಇತ್ತೀಚಿನ ವರ್ಷಗಳಲ್ಲಿ 20 ರಿಂದ 40 ವರ್ಷದವರೂ ಹೆಚ್ಚಾಗಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಪ್ರಸ್ತುತ ನಗರ ಪ್ರದೇಶದಲ್ಲಿ ಹೃದಯಾಘಾತದ ಪ್ರಮಾಣ ಶೇ 10ರಷ್ಟು ಇದೆ. ಈ ಪ್ರಮಾಣ ಗ್ರಾಮೀಣ ಭಾಗದಲ್ಲಿ ಶೇ 6ರಷ್ಟು ಇದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

‘ಕೋವಿಡ್‌ನಿಂದಾಗಿ ಈ ಬಾರಿ ಹೃದಯ ತಪಾಸಣೆ ಮಾಡಿಸಿಕೊಂಡವರ ಹಾಗೂ ಚಿಕಿತ್ಸೆ ಪಡೆದವರ ಸಮಗ್ರ ದಾಖಲಾತಿ ದೊರೆಯಲಿಲ್ಲ.ಹೃದಯ ಕಾಯಿಲೆಗಳ ಬಗ್ಗೆ ಜನ ಎಚ್ಚರದಿಂದ ಇರಬೇಕು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಹೃದಯಾಘಾತಕ್ಕೆ ಕಾರಣಗಳು

। ಅನಾರೋಗ್ಯಕರ ಆಹಾರ ಪದ್ಧತಿ

। ಜೀವನಶೈಲಿಯಲ್ಲಿನ ಬದಲಾವಣೆ

। ಮದ್ಯಪಾನ, ಧೂಮಪಾನದಂತಹ ವ್ಯಸನಗಳು

। ಮಾನಸಿಕ ಒತ್ತಡ

। ಪರಿಸರದಲ್ಲಿನ ಮಾಲಿನ್ಯ

ಹೃದಯಾಘಾತದ ಲಕ್ಷಣಗಳು

। ಹಠಾತ್ ಎದೆನೋವು, ಉಸಿರಾಟದಲ್ಲಿ ತೊಂದರೆ

। ಅತಿಯಾಗಿ ಬೆವರುತ್ತಿರುವುದು

। ಅಜೀರ್ಣ, ವಾಂತಿ

। ಹಸಿವಾಗದಿರುವುದು

। ದವಡೆಯಲ್ಲಿ ನೋವು

। ನಿದ್ರಾಹೀನತೆ ಸಮಸ್ಯೆ

। ತಾತ್ಕಾಲಿಕ ಪ್ರಜ್ಞಾಹೀನರಾಗುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.