ಪ್ರತಿವರ್ಷ ಮಾರ್ಚ್ ಎರಡನೇ ಗುರುವಾರ ವಿಶ್ವ ಮೂತ್ರಪಿಂಡ (ಕಿಡ್ನಿ) ದಿನ ಆಚರಿಸಲಾಗುತ್ತದೆ. ಮೂತ್ರಪಿಂಡದ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಈ ದಿನಾಚರಣೆಯ ಮುಖ್ಯ ಉದ್ದೇಶ. 'ಮೂತ್ರಪಿಂಡ ಸಮಸ್ಯೆಗಳೊಂದಿಗೆ ಆರೋಗ್ಯವಾಗಿರುವುದು’(living well with kidney disease) ಈ ಬಾರಿಯ ಧ್ಯೇಯ ವಾಕ್ಯ. ಈ ನೆಪದಲ್ಲಿ ಡಯಾಲಿಸಿಸ್ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ.
***
ಡಯಾಲಿಸಿಸ್... ಕೇಳಿದೊಡನೇ ಎದೆ ಝಲ್ ಎನ್ನುವ ಪದವಿದು. ಆದರೆ ಸರಿಯಾಗಿ ಅರಿತುಕೊಂಡು ನಡೆದರೆ ಇದೊಂದು ಸವಾಲೇ ಅಲ್ಲ. ತಜ್ಞವೈದ್ಯರ ಸಲಹೆ–ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತ, ಸರಿಯಾದ ಸಮಯಕ್ಕೆ ಅಗತ್ಯ ಪರೀಕ್ಷೆಗಳಿಗೆ ಒಳಗಾಗುತ್ತ, ಸೂಕ್ತವಾದ ಆಹಾರ–ಪಥ್ಯಗಳನ್ನು ಅನುಸರಿಸಿದಲ್ಲಿ ಡಯಾಲಿಸಿಸ್ ನಿರ್ವಹಣೆ ಸುಲಭ.
ಏನಿದು ಡಯಾಲಿಸಿಸ್? ಡಯಾಲಿಸಿಸ್ ಹೇಗೆ ಕೆಲಸ ಮಾಡುತ್ತದೆ? ಡಯಾಲಿಸಿಸ್‌ನಲ್ಲಿರುವ ಜನರು ವಹಿಸಬೇಕಿರುವ ಎಚ್ಚರಿಕೆಗಳೇನು ಎಂಬ ಬಗ್ಗೆ ಸವಿವರ ಮಾಹಿತಿ ನೀಡಿದ್ದಾರೆ ಫೋರ್ಟಿಸ್ ಮಲಾರ್ ಆಸ್ಪತ್ರೆಯ ಮೂತ್ರಪಿಂಡಶಾಸ್ತ್ರಜ್ಞ ಡಾ.ಡಿ. ದಿವಾಕರ್.
ಡಯಾಲಿಸಿಸ್ ಎನ್ನುವ ಕೃತಕ ಮೂತ್ರಪಿಂಡ
ಡಯಾಲಿಸಿಸ್ ಬಗ್ಗೆ ತಿಳಿದುಕೊಳ್ಳುವ ಮುನ್ನ ಮೂತ್ರಪಿಂಡಗಳ ಕಾರ್ಯಗಳ ಬಗ್ಗೆ ತಿಳಿಯೋಣ. ರಕ್ತವನ್ನು ಸ್ವಚ್ಛಗೊಳಿಸುವುದು ಮತ್ತು ಮೂತ್ರದ ರೂಪದಲ್ಲಿ ಕಲ್ಮಶಗಳನ್ನು ದೇಹದಿಂದ ಹೊರಹಾಕುವುದು ಆರೋಗ್ಯಕರ ಮೂತ್ರಪಿಂಡಗಳ ಕೆಲಸ. ಮೂತ್ರಪಿಂಡ ವೈಫಲ್ಯವಾದಾಗ ಈ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಲು ಅವುಗಳಿಂದ ಸಾಧ್ಯವಾಗುವುದಿಲ್ಲ. ಆಗ ಡಯಾಲಿಸಿಸ್‌ನ ಅಗತ್ಯ ಬೀಳುತ್ತದೆ.
ದೇಹದಲ್ಲಿ ಸಂಗ್ರಹವಾಗುವ ತ್ಯಾಜ್ಯ ಉತ್ಪನ್ನಗಳನ್ನು, ಕಲ್ಮಶಗಳನ್ನು ಮತ್ತು ಹೆಚ್ಚುವರಿ ದ್ರವವನ್ನು ತೆಗೆದುಹಾಕುವುದು, ಅಗತ್ಯ ಪೋಷಕಾಂಶಗಳನ್ನು ಸುರಕ್ಷಿತ ಮಟ್ಟದಲ್ಲಿ ಇಡುವುದು, ರಕ್ತದೊತ್ತಡವನ್ನು ನಿಯಂತ್ರಿಸುವುದು ಸೇರಿದಂತೆ ಮೂತ್ರಪಿಂಡಗಳು ಮಾಡುವ ಕೆಲವು ಕೆಲಸಗಳನ್ನು ಡಯಾಲಿಸಿಸ್ ಮಾಡುತ್ತದೆ.
ಡಯಾಲಿಸಿಸ್‌ನಲ್ಲಿ ಎರಡು ಮುಖ್ಯ ವಿಧಾನಗಳು: ಹಿಮೊಡಯಾಲಿಸಿಸ್ ಮತ್ತು ಪೆರಿಟೋನಿಯಲ್ ಡಯಾಲಿಸಿಸ್. ದೇಹದ ಹೊರಗಿನಿಂದ ರಕ್ತವನ್ನು ಶುದ್ಧೀಕರಿಸುವ ವಿಧಾನವನ್ನು ಹಿಮೊಡಯಾಲಿಸಿಸ್ ಎನ್ನಲಾಗುತ್ತದೆ. ಇದಲ್ಲದೆ, ಸಿಆರ್‌ಆರ್‌ಟಿ, ಪ್ಲಾಸ್ಮಾಫೆರೆಸಿಸ್, ಪಿಎಲ್ಎಕ್ಸ್, ಇಸಿಎಂಒ ಸೇರಿದಂತೆ ಇನ್ನು ಕೆಲವು ಮುಂದುವರಿದ ಚಿಕಿತ್ಸೆಯ ವಿಧಾನಗಳಿವೆ, ಇವುಗಳನ್ನು ಬಹು ಅಂಗಾಂಗ ವೈಫಲ್ಯದಂತಹ ಹಂತಗಳಲ್ಲಿ ಬಳಸಲಾಗುತ್ತದೆ.
ಡಯಾಲಿಸಿಸ್ಎನ್ನುವ ಪದವನ್ನು ಕೇಳಿದ ಕೂಡಲೇ ಬಹಳಷ್ಟು ಜನರು ಆತಂಕಕ್ಕೆ ಒಳಗಾಗುವುದಿದೆ. ಆದರೆ ಸೂಕ್ತ ಮುನ್ನೆಚ್ಚರಿಕೆ ವಹಿಸುವ ಹಾಗೂ ವೈದ್ಯರು ಸೂಚಿಸುವ ಕ್ರಮಗಳನ್ನು ಸರಿಯಾಗಿ ಅನುಸರಿಸುವ ರೋಗಿಗಳು ಯಾವುದೇ ಅಡ್ಡಿಆತಂಕಗಳಿಲ್ಲದೇ ಗುಣಮಟ್ಟದ ಜೀವನ ನಡೆಸಬಹುದು. ಅವರು ತಮ್ಮ ದೈನಂದಿನ ಕೆಲಸ–ಕಾರ್ಯಗಳನ್ನು ನಿಲ್ಲಿಸುವ ಅಗತ್ಯವೂ ಇಲ್ಲ. ಹಾಗೆಯೇ ದೂರದ ಪ್ರದೇಶಗಳಿಗೆ ಪ್ರಯಾಣಿಸಬೇಕಾದ ಅಗತ್ಯ ಬಿದ್ದಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ತಾವು ಪ್ರಯಾಣಿಸುವ ಸ್ಥಳಗಳಲ್ಲಿ ಡಯಾಲಿಸಿಸ್ ವ್ಯವಸ್ಥೆ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಪ್ರಯಾಣದಲ್ಲಿರುವಾಗ ಆರೋಗ್ಯ ತೊಂದರೆಗಳು ಕಾಣಿಸಿಕೊಂಡರೆ ಕೂಡಲೇ ಸಂಪರ್ಕಿಸಲು ವೈದ್ಯರ ತುರ್ತು ಸಂಪರ್ಕವನ್ನು ಜೊತೆಗಿಟ್ಟುಕೊಳ್ಳಬೇಕು’ ಎನ್ನುವುದು ಡಾ.ಡಿ. ದಿವಾಕರ್ ನೀಡುವ ಸಲಹೆಗಳು.
ಹೀಗಿರಲಿ ಆಹಾರ–ವ್ಯಾಯಾಮ
ಡಯಾಲಿಸಿಸ್ ರೋಗಿಗಳು ತಮ್ಮ ಆಹಾರಪದ್ಧತಿಯಲ್ಲಿ ಕಟ್ಟುನಿಟ್ಟಿನ ಬದಲಾವಣೆಗಳನ್ನು ತಂದುಕೊಳ್ಳಬೇಕು ಎನ್ನುವ ಡಾ. ಮೋಹನ್ ಮಧುಮೇಹ ಕೇಂದ್ರದ ಕನ್ಸಲ್ಟೆಂಟ್ ಮಧುಮೇಹ ತಜ್ಞ ಡಾ. ವಿನೋದ್ ಬಾಬು, ಡಯಾಲಿಸಿಸ್ ರೋಗಿಗಳು ಏನುಣ್ಣಬೇಕು ಯಾವ ಖಾದ್ಯಗಳಿಂದ ದೂರವಿರಬೇಕು ಎನ್ನುವ ಬಗ್ಗೆ ನೀಡಿದ ಸವಿವರ ಮಾಹಿತಿ ಇಲ್ಲಿದೆ–
* ಉಪ್ಪು ಸೇವನೆಯನ್ನು ಕಡಿಮೆ ಮಾಡಿ. ದೇಹದಲ್ಲಿ ದ್ರವ ಶೇಖರಣೆಯನ್ನು ತಗ್ಗಿಸಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
* ಆಹಾರದಲ್ಲಿ ಪ್ರೋಟೀನ್ ಸೇವನೆಯನ್ನು ಹೆಚ್ಚಿಸಿ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಸ್ನಾಯುವಿನ ಶಕ್ತಿ ವೃದ್ಧಿಸುತ್ತದೆ.
* ಹೆಚ್ಚು ಕ್ಯಾಲೊರಿ ಸೇವಿಸಿ. ಕಾಳು, ಧಾನ್ಯ ಮತ್ತು ಬ್ರೆಡ್‌ಗಳಲ್ಲಿ ಸಾಕಷ್ಟು ಕ್ಯಾಲೊರಿ ಇರುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿದ್ದರೆ ಮಾತ್ರ ಇದನ್ನು ನಿರ್ಬಂಧಿಸಬೇಕು.
* ಕಡಿಮೆ ಪೊಟ್ಯಾಸಿಯಮ್ ಇರುವ ಹಣ್ಣುಗಳನ್ನು ಮಾತ್ರ ಸೇವಿಸಿ, ಸೇಬು, ಅನಾನಸ್, ಚೆರ‍್ರಿಗಳು, ಪೇರಲಹಣ್ಣು, ಪ್ಲಮ್, ಕಲ್ಲಂಗಡಿ, ದ್ರಾಕ್ಷಿ, ಪೀಚ್ ಸೇವಿಸಬಹುದು. ಕಿತ್ತಳೆ ಮತ್ತು ಕಿವೀಸ್, ಒಣದ್ರಾಕ್ಷಿ ಮತ್ತು ಬಾಳೆಹಣ್ಣು ಮುಂತಾದವುಗಳಿಂದ ದೂರವಿರುವುದು ಉತ್ತಮ.
* ತರಕಾರಿ ಸೇವಿಸುವಾಗಲೂ ಇದೇ ಎಚ್ಚರಿಕೆಯನ್ನು ಅನುಸರಿಸಬೇಕಾಗುತ್ತದೆ. ಅಂದರೆ ಕಡಿಮೆ ಪ್ರಮಾಣದ ಪೊಟ್ಯಾಸಿಯಮ್ ಇರುವ ತರಕಾರಿಗಳಿಗೆ ಆದ್ಯತೆ ನೀಡಬೇಕು. ಅಂಥವುಗಳೆಂದರೆ: ಕ್ಯಾರೆಟ್, ಹೂಕೋಸು, ಎಲೆಕೋಸು, ಕೋಸುಗಡ್ಡೆ, ಸೌತೆಕಾಯಿ, ಬೆಳ್ಳುಳ್ಳಿ, ಬೀನ್ಸ್, ಈರುಳ್ಳಿ, ಮೆಣಸು, ಮೂಲಂಗಿ. ಆಲೂಗಡ್ಡೆ, ಗೆಣಸು, ಟೊಮೆಟೊ, ಕುಂಬಳಕಾಯಿ, ಬೀಟ್‌ರೂಟ್‌ನಿಂದ ದೂರವಿರಿ.
ಡಯಾಲಿಸಿಸ್ ರೋಗಿಗಳು ಹಾಗೂ ಅವರ ಕುಟುಂಬದವರು ಗಮನದಲ್ಲಿಟ್ಟುಕೊಳ್ಳಬೇಕಾದ ಇನ್ನೊಂದು ಮಹತ್ವದ ಸಂಗತಿ ಎಂದರೆ ಕಿಡ್ನಿ ತೊಂದರೆ ಇರುವ ಯಾವುದೇ ವಯೋಮಾನದ ರೋಗಿಗಳು ಕೋವಿಡ್–19 ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ನ್ಯುಮೋನಿಯಾ, ಇನ್ ಫ್ಲುಯೆಂಜ, ನ್ಯುಮೋಕೊಕಲ್ ಮತ್ತು ಹೆಪಟೈಟಿಸ್ ಬಿ ಗೆ ಲಸಿಕೆಗಳನ್ನು ಪಡೆಯಬೇಕಾಗುತ್ತದೆ. ಹಾಗೆಯೇ ಅವರು ತಮ್ಮ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಿರಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.