ಬದಲಾದ ಜೀವನ ಶೈಲಿಯಿಂದ ಸಾಕಷ್ಟು ಕಾಯಿಲೆಗಳು ಮನುಷ್ಯರನ್ನು ಆವರಿಸಿಕೊಳ್ಳುತ್ತಿದೆ. ಅದರಲ್ಲಿ ಪಾರ್ಶ್ವವಾಯುವು (ಸ್ಟ್ರೋಕ್, ಲಕ್ವ) ಒಂದು. ಪ್ರಪಂಚದಲ್ಲಿ ಪ್ರತಿ 3 ಸೆಕೆಂಡಿಗೆ ಒಬ್ಬರಿಗೆ ಪಾರ್ಶ್ವವಾಯು ಆಗುತ್ತಿರುವುದು ವರದಿಯಾಗುತ್ತಿದ್ದು, ಪ್ರತಿ ವರ್ಷ 12.2 ಮಿಲಿಯನ್ ಜನರು ಪಾರ್ಶ್ವವಾಯುಗೆ ತುತ್ತಾಗುತ್ತಿದ್ದಾರೆ. ಅದರಲ್ಲೂ 25 ವರ್ಷ ಮೇಲ್ಪಟ್ಟ ನಾಲ್ಕು ಜನರಲ್ಲಿ ಒಬ್ಬರಿಗೆ ಪಾರ್ಶ್ವವಾಯು ತಗುಲುತ್ತಿದೆ. ಅಕ್ಟೋಬರ್ 29ರಂದು ವಿಶ್ವ ಪಾರ್ಶ್ವವಾಯು ದಿನವನ್ನಾಗಿ ಆಚರಿಸಲಾಗುತ್ತಿದ್ದು, ಪಾರ್ಶ್ವವಾಯುವಿನ ಬಗ್ಗೆ ಜಾಗೃತಿ ಮೂಡಿಸುವ ಅರಿವಿದೆ. ಪಾರ್ಶ್ವವಾಯು ಮುನ್ಸೂಚನೆ ಹಾಗೂ ಅದರ ಚಿಕಿತ್ಸೆಗಳ ಬಗ್ಗೆ ವೈದ್ಯರು ಸಲಹೆ ನೀಡಿದ್ದಾರೆ.
ಗೋಲ್ಡನ್ ಅವರ್ ಬಗ್ಗೆ ಇರಲಿ ಜಾಗೃತಿ: ಪಾರ್ಶ್ವವಾಯು ಆದ ಬಳಿಕ ಅತ್ಯಂತ ಪ್ರಮುಖ ಅಂಶವೆಂದರೆ ಸಮಯ. ಪಾರ್ಶ್ವವಾಯವಾದ ಕೆಲವೇ ಗಂಟೆಗಳಲ್ಲಿ ಸೂಕ್ತ ಚಿಕಿತ್ಸೆ ನೀಡದೇ ಹೋದರೆ ಮೆದುಳಿನ ನರಗಳು ಹಾನಿಗೊಳಗಾಗುತ್ತವೆ. ಪಾರ್ಶ್ವವಾಯುವಿಗೆ 4 ರಿಂದ 5 ಗಂಟೆಯನ್ನು ಗೋಲ್ಡನ್ ಅವರ್ ಎಂದು ಪರಿಗಣಿಸಲಾಗುತ್ತದೆ. ಪಾರ್ಶ್ವವಾಯು ಆದ ವ್ಯಕ್ತಿಯನ್ನು 60 ನಿಮಿಷದೊಳಗಾಗಿ ಆಸ್ಪತ್ರೆಗೆ ಸೇರಿಸುವುದು ಸೂಕ್ತ. ಇಲ್ಲವಾದರೆ ಆ ರೋಗಿಯು ಪ್ರತಿ ನಿಮಿಷಕ್ಕೆ 1.9 ಮಿಲಿಯನ್ ನ್ಯೂರಾನ್‌ಗಳು, 13.8 ಶತಕೋಟಿ ಸಿನಾಪ್ಸ್‌ಗಳು ಮತ್ತು ಏಳು ಮಿಲಿಯನ್ ಆಕ್ಸಾನಲ್ ಫೈಬರ್‌ಗಳನ್ನು ಕಳೆದುಕೊಳ್ಳುತ್ತಾನೆ. ಹೀಗಾಗಿ ಪ್ರತಿಯೊಬ್ಬರು ಈ ಗೋಲ್ಡನ್ ಅವರ್ ಬಗ್ಗೆ ಜಾಗೃತಿ ಹೊಂದಿದ್ದರೆ ಪಾರ್ಶ್ವವಾಯು ಆದವರನ್ನು ಬದುಕಿಸಬಹುದು.
ಸ್ಟ್ರೋಕ್ ವಿಧಗಳು:ಸ್ಟ್ರೋಕ್‌ನಲ್ಲಿ ಇಸ್ಕೆಮಿಕ್ ಸ್ಟ್ರೋಕ್ ಹಾಗೂ ಹೆಮರಾಜಿಕ್ ಸ್ಟ್ರೋಕ್ ಎಂದು ಎರಡು ವಿಧಗಳಿವೆ. ಇಸ್ಕೆಮಿಕ್ ಸ್ಟ್ರೋಕ್, ಸ್ಟ್ರೋಕ್ ಆದ ಸಂದರ್ಭದಲ್ಲಿ ಮೆದುಳಿನ ಒಂದು ಭಾಗಕ್ಕೆ ರಕ್ತ ಹೆಪ್ಪುಗಟ್ಟುವಿಕೆ ಸಂಭವಿಸುತ್ತದೆ. ಇದು ಶೇ 87 ರಷ್ಟು ಸ್ಟ್ರೋಕ್ ಆದವರಲ್ಲಿ ಕಾಣಿಸಿಕೊಳ್ಳುತ್ತದೆ. ಹೆಮರಾಜಿಕ್ ಸ್ಟ್ರೋಕ್ ವಿಧವು ಶೇ 13ರಷ್ಟು ಜನರಲ್ಲಿ ಮಾತ್ರ ಸಂಭವಿಸಲಿದ್ದು, ಇದು ಅತ್ಯಂತ ಅಪಾಯಕಾರಿಯಾಗಿದೆ. ಈ ರೀತಿ ಸ್ಟ್ರೋಕ್ ಆದ ಸಂದರ್ಭದಲ್ಲಿ ಮೆದುಳಿನಲ್ಲಿ ರಕ್ತಸ್ತ್ರಾವವಾಗಲಿದೆ.
ಸ್ಟ್ರೋಕ್‌ನ ಲಕ್ಷಣಗಳು: ಎಲ್ಲಾ ಕಾಯಿಲೆಗಳಿಗಿಂತಲೂ ಪಾರ್ಶ್ವವಾಯು ಸ್ವಲ್ಪ ವಿಭಿನ್ನ ರೀತಿಯದ್ದು. ಯಾವ ವಯೋಮಾನದವರಿಗೆ ಯಾವಾಗ ಪಾರ್ಶ್ವವಾಯು ಆಗುತ್ತದೆ ಎಂದು ಊಹಿಸುವುದು ಕಷ್ಟ. ಸಾಮಾನ್ಯವಾಗಿ ಮೆದುಳಿನ ಜೀವಕೋಶಗಳಿಗೆ ಹಾನಿಯುಂಟಾದಾಗ ಉದ್ಬವಿಸುವ ದೈಹಿಕ ತೊಂದರೆ ಪಾರ್ಶ್ವವಾಯು. ಇದರ ಸಾಮಾನ್ಯ ಲಕ್ಷಣಗಳೆಂದರೆ ಅಂಗಾಂಗಗಳ ಸ್ವಾಧೀನ ತಪ್ಪುವಿಕೆ, ಸಮತೋಲನ, ಮಾತು ಮತ್ತು ದೃಷ್ಟಿ ಸಾಮರ್ಥ್ಯಗಳು ಮಂಕಾಗುವುದು. ಈ ಲಕ್ಷಣಗಳು ಮೆದುಳಿನ ಹಾನಿಯಾದ ಭಾಗ ಮತ್ತು ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಎಲ್ಲ ಪಾರ್ಶ್ವವಾಯು ಪೀಡಿತರಲ್ಲಿ ಒಂದೇ ಬಗೆಯ ಲಕ್ಷಣಗಳು ಕಂಡು ಬರುವುದಿಲ್ಲ. ಮುಖದಲ್ಲಿ ಬದಲಾವಣೆ ಅಥವಾ ಸುಕ್ಕುಗಟ್ಟುವಿಕೆ. ತೋಳಿನ ಬಲ ಕುಂದುವಿಕೆ. ನಿಶ್ಯಕ್ತಿ. ಮಾತನಾಡಲು ತೊಂದರೆ ಆಗುವುದು. ಮುಖ, ತೋಳು, ಕಾಲಿನ ಬಲ ಕ್ಷೀಣಿಸುವುದು. ಅದರಲ್ಲೂ ದೇಹದ ಒಂದು ಬದಿಯ ಅಂಗಾಂಗ ಬಲ ಕ್ಷೀಣಿಸುವುದು. ಗೊಂದಲ, ಮಾತನಾಡಲು ಕಷ್ಟ ಅಥವಾ ಮಾತನ್ನು ಅರ್ಥಮಾಡಿಕೊಳ್ಳಲು ತೊಂದರೆ ಆಗುವುದು, ಕಣ್ಣುಗಳಲ್ಲಿ ಸಮಸ್ಯೆ, ತಲೆತಿರುಗುವಿಕೆ, ಯಾವುದೇ ಕಾರಣವಿಲ್ಲದೆ ತೀವ್ರ ತಲೆನೋವು ಮೊದಲಾದವು ಇದರ ಲಕ್ಷಣಗಳು. ವಯಸ್ಸಾದವರಲ್ಲಿ ಪಾರ್ಶ್ವವಾಯು ಕಂಡುಬಂದರೆ ಆರೈಕೆಯನ್ನು ಹುಷಾರಾಗಿ ಮಾಡಬೇಕು.
ಪಾರ್ಶ್ವವಾಯು ಚಿಕಿತ್ಸೆ: ಪಾರ್ಶ್ವವಾಯು ಚಿಕಿತ್ಸೆ ಲಭ್ಯವಿದೆ. ಮೆದುಳಿನಲ್ಲಿ ಕಟ್ಟಿಕೊಳ್ಳುವ ರಕ್ತದ ಹೆಪ್ಪನ್ನು ಕರಗಿಸಲು ವೈದ್ಯಕೀಯ ಲೋಕದಲ್ಲಿ ಸೂಕ್ತ ಔಷಧಗಳು ಲಭ್ಯವಿದೆ. ಅದರಲ್ಲೂ ಪ್ರಮುಖವಾಗಿ ಆಲ್ಟೆಪ್ಲೇಸ್ ಅಥವಾ ಟೆನೆಕ್ಟೆಪ್ಲೇಸ್ ಚುಚ್ಚುಮದ್ದುಗಳನ್ನು ಬಳಸಲಾಗುತ್ತದೆ.
ಕ್ರಾನಿಯೊಟಮಿ ಎನ್ನುವುದು ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ಯಾವುದೇ ರಕ್ತನಾಳವು ಸ್ಫೋಟಗೊಂಡರೆ ಮೆದುಳಿನಲ್ಲಿರುವ ರಕ್ತವನ್ನು ತೆಗೆದುಹಾಕಲು ಬಳಸಲಾಗುತ್ತದೆ. ಅಂಕಿಅಂಶಗಳ ಪ್ರಕಾರ, ಶೇ 10ರಷ್ಟು ಪಾರ್ಶ್ವವಾಯು ರೋಗಿಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ. ಶೇ 25ರಷ್ಟು ಸಣ್ಣ ದುರ್ಬಲತೆಗಳೊಂದಿಗೆ ಚೇತರಿಸಿಕೊಳ್ಳುತ್ತಾರೆ ಶೇ 40ರಷ್ಟು ಜನರು ಮಧ್ಯಮ-ತೀವ್ರವಾದ ದುರ್ಬಲತೆಗಳೊಂದಿಗೆ ಚೇತರಿಸಿಕೊಳ್ಳುತ್ತಾರೆ. ಶೇ 10ರಷ್ಟು ರೋಗಿಗಳಿಗೆ ದೀರ್ಘಾವಧಿಯ ಆರೈಕೆಯ ಅಗತ್ಯವಿರುತ್ತದೆ ಹಾಗೂ ಶೇ 15ರಷ್ಟು ರೋಗಿಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪುತ್ತಿದ್ದಾರೆ.
ಜೀವನಶೈಲಿ ಮತ್ತು ಪಾರ್ಶ್ವವಾಯು: ಜೀವನಶೈಲಿಯನ್ನು ಉತ್ತಮವಾಗಿಟ್ಟುಕೊಳ್ಳುವುದರಿಂದ ಪಾರ್ಶ್ವವಾಯು ಆಗುವುದನ್ನು ತಡೆಗಟ್ಟಬಹುದು. ಅಧಿಕ ರಕ್ತದೊತ್ತಡ, ಧೂಮಪಾನ, ಮಧುಮೇಹ, ಕೊಲೆಸ್ಟ್ರಾಲ್, ಬೊಜ್ಜು ಮತ್ತು ಹೃದ್ರೋಗದಂತ ಸಮಸ್ಯೆ ಹೊಂದಿರುವವರಿಗೆ ಪಾರ್ಶ್ವವಾಯು ಆಗುವ ಸಾಧ್ಯತೆ ಹೆಚ್ಚು. ಔಷಧಿ, ಸರಿಯಾದ ಆಹಾರ, ಆರೋಗ್ಯ ಪದ್ಧತಿ ಮತ್ತು ನಿಯಮಿತ ವ್ಯಾಯಾಮದಿಂದ ಶೇ. 80 ರಷ್ಟು ಪಾರ್ಶ್ವವಾಯು ತಡೆಯಲು ಸಾಧ್ಯವಿದೆ.
ಅಧ್ಯಯನದ ಪ್ರಕಾರ, ಸುಮಾರು ಶೇ 25ರಷ್ಟು ಜನರು ಸ್ಟ್ರೋಕ್ ಬಳಿಕವೂ ಮತ್ತೊಂದು ಸ್ಟ್ರೋಕ್‌ಗೆ ಒಳಗಾಗುತ್ತಾರೆ ಎನ್ನಲಾಗಿದೆ. ಹೀಗಾಗಿ ಚಿಕ್ಕವಯಸ್ಸಿನಿಂದಲೇ ಜೀವನಶೈಲಿಯನ್ನು ಉತ್ತಮವಾಗಿಟ್ಟುಕೊಳ್ಳುವುದು ಮುಖ್ಯ.
–ಡಾ. ಪಿ ಆರ್. ಕೃಷ್ಣನ್,ನ್ಯೂರಾಲಜಿ ಕನ್ಸಲ್ಟೆಂಟ್,ಫೋರ್ಟಿಸ್ ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.