ಬಹಳ ವರ್ಷಗಳ ಹಿಂದಿನ ಮಾತು. ಆಗ 40 ವರ್ಷ ವಯಸ್ಸಿನವರಿಗೆ ಹೃದಯಾಘಾತವಾದರೆ, ‘ಇಷ್ಟು ವಯಸ್ಸಿಗೇ ಈ ರೀತಿ ಆಯಿತೇ’ ಎಂದು ಅಚ್ಚರಿಯಿಂದಕೇಳುತ್ತಿದ್ದ ಸಮಯವದು. ಈಗ ನೋಡಿ 25 ವರ್ಷ ವಯಸ್ಸಿನ ಯುವಕರಿಗೇ ಹೃದಯಾಘಾತ! ಇಂಥ ಆಘಾತಕಾರಿ ಸುದ್ದಿಗಳು ಆಗಾಗ್ಗೆಕೇಳಿಬರುತ್ತಲೇ ಇರುತ್ತವೆ.
ಇದಕ್ಕೆ ಕಾರಣ ಬದಲಾಗಿರುವ ಜೀವನ ಶೈಲಿ. ಜೀವನಶೈಲಿಯ ಕಾಯಿಲೆಗಳಲ್ಲಿ ಪ್ರಮುಖ ಸ್ಥಾನದಲ್ಲಿರುವುದು ಮಧುಮೇಹ (ಡಯಾಬಿಟಿಸ್)! ಈ ವ್ಯಾಧಿಯೊಂದಿಗೆ ತಳಕು ಹಾಕಿಕೊಂಡಿರುವ ನಾನಾ ಬಗೆಯ ಸಮಸ್ಯೆಗಳಿಂದ ನರಳುವವರ ಪ್ರಮಾಣ ಭಾರತದಲ್ಲಿ ಕ್ಷಿಪ್ರಗತಿಯಲ್ಲಿ ಏರುತ್ತಿದೆ.
ಹಿಂದೆ ಶ್ರೀಮಂತರಿಗೆ, ನಗರವಾಸಿಗಳಿಗೆ ಹಾಗೂ ವಯೋವೃದ್ಧರಿಗೆ ಬರುತ್ತಿದ್ದ ಮಧುಮೇಹ ಈಗ ಬಡವರು ಹಾಗೂ ಚಿಕ್ಕ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತಿದೆ. ಹಳ್ಳಿಗಳಿಗೂ ಕಾಲಿಡುತ್ತಿದೆ. ಹಳ್ಳಿಗರ ಜೀವನಶೈಲಿಯೂ ನಿಧಾನವಾಗಿ ಬದಲಾಗುತ್ತಿರುವುದರ ಸಂಕೇತವಿದು. ಇದು ಆತಂಕಕಾರಿ ಬೆಳವಣಿಗೆ.
ಮಧುಮೇಹದ ಜೊತೆ ಹಲವು ರೋಗಗಳು ಸೇರಿಕೊಂಡು ಅಗೋಚರ ಶತ್ರುಗಳಾಗಿ ಕಾಡುತ್ತಿವೆ. ಮಧುಮೇಹಿಗಳು ಮೂರು ಪಟ್ಟು ರಕ್ತದೊತ್ತಡ, ನಾಲ್ಕು ಪಟ್ಟು ಹೃದ್ರೋಗ ಮತ್ತು ನಾಲ್ಕು ಪಟ್ಟು ಹೆಚ್ಚು ಪಾರ್ಶ್ವವಾಯು ವ್ಯಾಧಿಗೆ ಒಳಗಾಗುತ್ತಿದ್ದಾರೆ.
ಅಂದಹಾಗೆ; ನ.14ರಂದು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮಧುಮೇಹದ ಸುತ್ತಮುತ್ತಲಿನ ಚಿತ್ರಣ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ. ಮಧುಮೇಹ ತಜ್ಞ ಮೈಸೂರಿನ ಡಾ.ವಿ.ಲಕ್ಷ್ಮೀನಾರಾಯಣ ಅವರು ಹಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಇವರನ್ನು ‘ಕಾಮನ್ ಮ್ಯಾನ್ಸ್ ಸ್ವೀಟ್ ಡಾಕ್ಟರ್’ ಎಂದೂ ಕರೆಯುತ್ತಾರೆ. ಮಧುಮೇಹಕ್ಕೆಕಾರಣಹಾಗೂ ಅದಕ್ಕೆಪರಿಹಾರದ ಬಗ್ಗೆ ವಿವರಿಸಿದ್ದಾರೆ. ಬನ್ನಿ, ತಿಳಿದುಕೊಳ್ಳೋಣ.
ಮಧುಮೇಹ ಎನ್ನುವುದು ಜೀವನವನ್ನು ದುರ್ಬಲಗೊಳಿಸುವ ಸಾಂಕ್ರಾಮಿಕ ಸ್ವರೂಪದ ನ್ಯೂನತೆ. ಇದಕ್ಕೆ ಕಾರಣ ಜೀವನ ಶೈಲಿಯ ಬದಲಾವಣೆ.
21ನೇ ಶತಮಾನದಲ್ಲಿ ಬೊಜ್ಜು ದೇಹ, ಚಟುವಟಿಕೆ ಇಲ್ಲದ ಜೀವನ ಶೈಲಿ ಸರ್ವರೋಗಗಳಿಗೂ ಮೂಲವಾಗಿ ಪರಿಣಮಿಸುತ್ತಿದೆ. ಸಾಂಕ್ರಾಮಿಕ ರೂಪದ ಮಧುಮೇಹಕ್ಕೆ ಮೊದಲನೇ ಕಾರಣ ಪರಿಸರ ಮತ್ತು ಜೀವನ ಶೈಲಿ ಹಾಗೂ ಇವುಗಳ ಪರಸ್ಪರ ಸಂಬಂಧ. ಅದರಲ್ಲೂ ಭಾರತೀಯರಲ್ಲಿ ಹೊಟ್ಟೆ ಭಾಗದ ಸ್ಥೂಲಕಾಯ ಕಾರಣ (Visceral fat).
ದುರದೃಷ್ಟಕರ ಸಂಗತಿ ಎಂದರೆ ಎಲ್ಲಿ ಹೊಟ್ಟೆಯ ಬೊಜ್ಜು ಇರುತ್ತದೆಯೋ ಅಲ್ಲಿ ಇನ್ಸುಲಿನ್ ಪ್ರತಿರೋಧ ಇರುತ್ತದೆ. ಪ್ರತಿರೋಧ ಇರುವುದರಿಂದ ದೇಹದ ಸಕ್ಕರೆ ಅಂಶ ಕ್ರಮೇಣ ಏರುತ್ತಾ ಹೋಗುತ್ತದೆ.
ಸ್ವಾತಂತ್ರ್ಯ ಬಂದ ಆಸುಪಾಸಿನಲ್ಲಿ ದೇಶದ ಜನಸಂಖ್ಯೆ 37 ಕೋಟಿ ಇತ್ತು. 1947ರಲ್ಲಿ ಜೀವಿತಾವಧಿ ಸರಾಸರಿ 30 ವರ್ಷ ಇತ್ತು. ಈಗ 70 ವರ್ಷದ ಆಸುಪಾಸಿಗೆ ಬಂದಿದೆ. ಅಂದರೆ ಜೀವಿತಾವಧಿ ಎರಡು ಪಟ್ಟು ಹೆಚ್ಚಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ಜೀವಿತಾವಧಿಯಿಂದಮಧುಮೇಹಿಗಳ ಸಂಖ್ಯೆ ಏರುತ್ತಲೇ ಇದೆ.
ಅನಾರೋಗ್ಯಕರವಾದ ಅತಿಯಾದ ಆಹಾರ ಸೇವನೆ, ಶ್ರಮರಹಿತ ಜೀವನ ಶೈಲಿಯ ಸಂಗಮದಿಂದ ಬಂದೊದಗುವ ಸ್ಥೂಲಕಾಯ, ಬೊಜ್ಜು ಮಧುಮೇಹಕ್ಕೆ ದಾರಿ ಮಾಡಿಕೊಡುತ್ತಿವೆ.
ಯುವ ಜನಾಂಗದಲ್ಲಿ ಮಾನಸಿಕ ಒತ್ತಡಗಳಿಂದ ಮಧುಮೇಹ ಕಾಡುತ್ತಿರುವುದು ಕಂಡುಬರುತ್ತಿದೆ. ಇದೊಂದು ಅಗೋಚರ ವೇದನೆ. ಅಡ್ರಿನಲಿನ್‌ಎಂಬ ಹಾರ್ಮೋನ್ ಭಯದ ವಾತಾವರಣದಲ್ಲಿ ಉತ್ಪತ್ತಿ ಆಗುತ್ತದೆ. ಜೊತೆಗೆ ಎಪಿನೆಫ್ರಿನ್ ಎಂಬ ಹಾರ್ಮೋನ್ ಮಾನಸಿಕ ಒತ್ತಡಗಳಿಂದ ಉತ್ಪತ್ತಿ ಆಗುತ್ತದೆ. ಇದರ ಹೆಸರೇ ಸ್ಟ್ರೆಸ್ ಹಾರ್ಮೋನ್. ಈ ಸ್ಟ್ರೆಸ್ ಹಾರ್ಮೋನ್‌ಗಳು ಶರೀರದ ಉಗ್ರಾಣಗಳಿಂದ ಗ್ಲುಕೋಸ್ ಅಂಶವನ್ನು ಹೆಚ್ಚು ಹೆಚ್ಚು ಬಿಡುಗಡೆ ಮಾಡುತ್ತಾ ಹೋಗುತ್ತವೆ. ಹೀಗಾಗಿ, ರಕ್ತದಲ್ಲಿ ಗ್ಲುಕೋಸ್ ಅಂಶ ಏರುತ್ತದೆ. ಕೊನೆಗೆ ಮಧುಮೇಹವಾಗಿ ದೇಹದಲ್ಲಿ ಸ್ಥಾನ ಪಡೆಯುತ್ತದೆ.
ದೇಶದ ಯುವ ಜನಾಂಗದಲ್ಲಿ 20 ವರ್ಷ ದಾಟಿದವರು 70 ಕೋಟಿ ಇದ್ದಾರೆ. ಇವರಲ್ಲಿ ಶೇ 12 ಮಂದಿಯಲ್ಲಿ ಮಧುಮೇಹ ಗುಪ್ತವಾಗಿ ಅಡಗಿರುವ ಸಾಧ್ಯತೆ ಇದೆ. ಈ 70 ಕೋಟಿ ಯುವ ಜನತೆಯನ್ನು ಗ್ಲುಕೋಸ್ ಪಂಥ ಪರೀಕ್ಷೆಗೆ (GCT) ಒಳಪಡಿಸಿದರೆ ಗುಪ್ತವಾಗಿರುವ ಗ್ಲುಕೋಸ್ ಗಣನೀಯವಾಗಿ ಮೇಲಕ್ಕೆ ಬರುತ್ತದೆ.
ವಂಶವಾಹಿನಿಯೂ ಕಾರಣ:ಮಧುಮೇಹಕ್ಕೆ ವಂಶವಾಹಿನಿಯೂ ಕಾರಣ. ಕಳೆದ 20 ವರ್ಷಗಳಲ್ಲಿ ಮಧುಮೇಹಿಗಳು ಸಂಖ್ಯೆಯಲ್ಲಿ 20 ಪಟ್ಟು ಹೆಚ್ಚಾಗಿದ್ದಾರೆ. ಆದರೆ, ಇದೇ ವಂಶವಾಹಿನಿಗಳು 20 ವರ್ಷಗಳ ಹಿಂದೆ ಏನು ಮಾಡುತ್ತಿದ್ದವು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಉತ್ತರ; ವಂಶವಾಹಿನಿಗಳು ಹೊಸದಾಗಿ ಬಂದಿಲ್ಲ. ಅವು ಮಾನವ ಸೃಷ್ಟಿಯಷ್ಟೆ ಪ್ರಾಚೀನ.
ಮಾನವ ದೇಹವು ವಂಶವಾಹಿನಿಗಳನ್ನು ಹೊತ್ತಿರುವ ರೆಫ್ರಿಜಿರೇಟರ್. ರಕ್ತಕಣಗಳು ಮತ್ತು ಇದರಲ್ಲಿರುವ ವಂಶವಾಹಿನಿಗಳು ವ್ಯಾಧಿಗಳ ಸ್ವರೂಪವನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಮುಂದುವರಿಸುತ್ತಿವೆ. ಭಾರತೀಯರು Asian phenotype ಆಗಿರುವುದರಿಂದ ಮಧುಮೇಹ ಮಿತಿಮೀರಿ ಏರಲು ಕಾರಣವಾಗಿದೆ.
20 ವರ್ಷಗಳಿಂದೀಚೆಗೆ ಮಧುಮೇಹ ದಿಢೀರನೇ ಹೆಚ್ಚಾಗಲು ಶ್ರಮ ರಹಿತ ಜೀವನ ಶೈಲಿಯೇ ಕಾರಣ ಎಂಬುದು ಪ್ರಮುಖವಾಗಿ ಗೊತ್ತಾಗುತ್ತದೆ. ವಂಶವಾಹಿನಿಗಳ ಜೊತೆ ಪರಿಸರ ಅಂಶಗಳೂ ಕೈ ಜೋಡಿಸಿರುವುದರಿಂದ ಮಧುಮೇಹಕ್ಕೆ ಸಾಂಕ್ರಾಮಿಕ ಸ್ವರೂಪ ಬಂದಿದೆ. ಇವೆರಡರ ಸಂಯೋಗದಿಂದ ವಿನೂತನ ಇಂಧನ ರಾಸಾಯನಿಕ ಕ್ರಿಯೆಗಳು ಪ್ರಾರಂಭವಾಗಿ ಸ್ಥೂಲಕಾಯ ಬೆಳೆಯುತ್ತಿದೆ.
ವಂಶವಾಹಿಗಳು ಬಂದೂಕಿನಲ್ಲಿರುವ ಮದ್ದುಗುಂಡುಗಳಂತೆ, ಮಾನವ ಪರಿಸರ ಮತ್ತು ಜೀವನಶೈಲಿಯು ಬಂದೂಕಿನ ಟ್ರಿಗರ್‌ನಂತೆ. ಮಧುಮೇಹಕ್ಕೆ ಸಂಬಂಧಿಸಿದ ವಂಶವಾಹಿನಿಗಳು ವ್ಯಾಧಿಯನ್ನು ಸೃಷ್ಟಿಸಬೇಕಾದರೆ ಅದಕ್ಕೆ ಸೂಕ್ತವಾದ ಮಾನವ ಪರಿಸರ ಬೇಕು. ಮಾನವ ಪರಿಸರ ಎಂದರೆ ಸ್ಥೂಲಕಾಯ ಮತ್ತು ಐಷಾರಾಮಿ ಜೀವನಶೈಲಿ. ಈ ಅಂಶಗಳ ಪ್ರಭಾವ ಬಂದೂಕಿನ ಟ್ರಿಗರ್ ಮೇಲೆ ಯಾವಾಗ ಪೂರ್ತಿ ಒತ್ತಡ ತರುತ್ತದೆಯೋ ಆಗ ಮಾನವ ಶರೀರದ ರಾಸಾಯನಿಕ ಕ್ರಿಯೆಯಲ್ಲಿ ಆಗುವ ವ್ಯತ್ಯಾಸದಿಂದ ಅವಕಾಶವಾದಿ ವಂಶವಾಹಿಗಳು ಮಧುಮೇಹ ಮೇಲೇರುವುದಕ್ಕೆ ಕಾರಣವಾಗುತ್ತವೆ. ಹೀಗಾಗಿ, ನಮ್ಮ ಮಾನವ ಪರಿಸರವನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. ಆಗ ಮಧುಮೇಹ ತಡೆಯಬಹುದು.
ಮಕ್ಕಳಲ್ಲಿ ಮಧುಮೇಹ:ದೊಡ್ಡವರಲ್ಲಿ ಬರುವ 2ನೇ ನಮೂನೆಯ ಮಧುಮೇಹ (ಟೈಪ್ 2) 10ರಿಂದ 14 ವರ್ಷದ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಮಿಶ್ರ ಮಧುಮೇಹವೆಂದೂ, ಜೋಡಿ ಮಧುಮೇಹವೆಂದೂ ಕರೆಯಲಾಗುತ್ತದೆ. ಇದೊಂದು ಗಂಭೀರ ಸಮಸ್ಯೆ. ಇದಕ್ಕೆ ಕಾರಣಗಳೆಂದರೆ,
1) ಜೀವನ ಶೈಲಿ, 2) ಮಕ್ಕಳಲ್ಲಿ ಬೊಜ್ಜು ಬೆಳೆಯುತ್ತಿರುವುದು, 3) ಮಕ್ಕಳು ತಿನ್ನುವುದು ಹೆಚ್ಚಾಗಿರುವುದು, 4) ಕಸರತ್ತು ಕಡಿಮೆ ಆಗಿರುವುದು, 5) ಫಾಸ್ಟ್ ಫುಡ್ ಸೇವನೆ, 6) ಟಿ.ವಿ ಮುಂದೆ ಕುಳಿತು ತಿನ್ನುವುದು, 7) ಮೈದಾನಕ್ಕಿಳಿದು ಆಟವಾಡದಿರುವುದು, 8) ವಿಡಿಯೋ ಗೇಮ್, ಮೊಬೈಲ್ ಗೇಮ್‌ನಲ್ಲಿ ತೊಡಗಿರುವುದು.
ಇದರಿಂದ ಮಕ್ಕಳಲ್ಲಿ ಬೊಜ್ಜು ಬೆಳೆಯುತ್ತಿದೆ. 2ನೇ ನಮೂನೆಯ ಮಧುಮೇಹ ಇರುವ ಹೆಚ್ಚಿನ ಮಕ್ಕಳಲ್ಲಿ ಬೊಜ್ಜು ದೇಹ ಇರುತ್ತದೆ. ಇಂಥ ಸುಮಾರು 12ರಿಂದ 15 ಪ್ರತಿಶತ ಮಕ್ಕಳಲ್ಲಿ ತಮ್ಮ ಶರೀರಕ್ಕೆ ವಿರುದ್ಧವಾಗಿ ವರ್ತಿಸಬಲ್ಲ ಆಟೊ ಆ್ಯಂಟಿ ಬಾಡೀಸ್ ಕಂಡುಬಂದಿವೆ. ದುರದೃಷ್ಟಕರ ಸಂಗತಿ ಎಂದರೆ ಇಂಥವರಲ್ಲಿ ಇನ್ಸುಲಿನ್ ತಯಾರಾಗುವಕ್ರಿಯೆ ಕ್ಷೀಣಿಸುತ್ತಿದೆ. ಇದರಿಂದ ಮಕ್ಕಳೂ ಇನ್ಸುಲಿನ್ ಮೊರೆ ಹೋಗಬೇಕಾಗಿದೆ.
ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದರೆ ಅದು ನಮಗೆ ಏನೂ ತೊಂದರೆ ಕೊಡಲು ಸಾಧ್ಯವಿಲ್ಲ. ಆದರೆ, ಅದನ್ನು ಅನೇಕ ವರ್ಷಗಳು ನಿರ್ಲಕ್ಷಿಸಿದರೆ ದಶವ್ಯಾಧಿಗಳಿಗೆ ಮೂಲವಾಗುತ್ತದೆ. ಅಂಥ ಸಮಸ್ಯೆಗಳೆಂದರೆ 1) ಹೃದ್ರೋಗ, 2) ಅತಿರಕ್ತದೊತ್ತಡ ಮತ್ತು ಕೊಬ್ಬಿನಂಶದ ಏರುಪೇರು, 3) ಕಿಡ್ನಿ ವೈಫಲ್ಯ, 4) ಅಕ್ಷಿಪಟಲ ವೈಫಲ್ಯ ಮತ್ತು ಮ್ಯೂಕುಲದ ತೇವಾಂಶ, 5) ಗ್ಯಾಂಗ್ರಿನ್, 6) ನರದೌರ್ಬಲ್ಯ ಮತ್ತು ಪಾರ್ಶ್ವವಾಯು, 7) ಲೈಂಗಿಕ ಕ್ರಿಯಾಲೋಪ, 8) ಚರ್ಮವ್ಯಾಧಿಗಳು ಮತ್ತು ಸೋಂಕುಗಳು, 9) ಸ್ನಾಯು ಕೀಲು ವೇದನೆ, 10) ಜೀರ್ಣಾಂಗವ್ಯವಸ್ಥೆಯ ಕಾರ್ಯ ದೌರ್ಬಲ್ಯ.
ಮಧುಮೇಹಕ್ಕೆ ಪರಿಹಾರ:ಮಧುಮೇಹವನ್ನು ಉತ್ತಮ ಜೀವನ ಶೈಲಿಯಿಂದ ಆರಂಭದಿಂದಲೇ ಹಿಮ್ಮೆಟ್ಟಿಸಬಹುದು. ದೇಹದಲ್ಲಿ ಇದ್ದರೂ ಹಿಮ್ಮೆಟ್ಟಿಸಬಹುದು. ಸ್ವಸ್ಥ ಜೀವನಕ್ಕೆ ಜೀವನಶೈಲಿಯ ನಿಯಮಗಳೇನು ಎಂಬುದು 2,300 ವರ್ಷಗಳ ಹಿಂದೆ ’ಚರಕ ಸಂಹಿತೆ’ಯಲ್ಲಿ ಹೇಳಿರುವುದನ್ನು ಈ ನಾಲ್ಕು ಪದಗಳಿಂದ ಅರ್ಥೈಸಬಹುದು.
1) ಆಚಾರ: ನಮ್ಮ ದೈನಂದಿನ ಆಚಾರಗಳು, 2) ಆಹಾರ: ಸೇವಿಸುವ ಪೌಷ್ಟಿಕ ಹಾಗೂ ಸಮತೋಲಿತ ಆಹಾರ, 3) ವ್ಯಾಯಾಮ, 4) ಯೋಗ
ಮನಸ್ಸು ಹಾಗೂ ಇಂದ್ರೀಯಗಳನ್ನು ನಿಗ್ರಹಿಸುವುದರ ಮೂಲಕ ನಿಯಂತ್ರಣಕ್ಕೆ ತರಬಹುದು. ಜಗತ್ತಿನಾದ್ಯಂತ ಯಾರು ಈ ನಾಲ್ಕು ನಿಯಮಗಳನ್ನು ಅನುಸರಿಸುವವರೋ ಅಂಥವರಿಗೆ ಆಧುನಿಕ ಪ್ರಪಂಚದಲ್ಲಿ ವ್ಯಾಧಿಗಳು ವಿರಳ. ವಿಶೇಷವಾಗಿ ಮಧುಮೇಹ ಹತ್ತಿರ ಸುಳಿಯುವುದಿಲ್ಲ.
ಮಧುಮೇಹ ನಿಯಂತ್ರಣ ಕುರಿತು ಅನೇಕ ಸಂಶೋಧನೆಗಳು ನಡೆದಿದ್ದರೂ ಆದಿಯಿಂದ ಇರುವ ಮುಕ್ಕೂಟ (Triad of treatment) ಇಂದಿಗೂ ಪ್ರಸ್ತುತ. ಏಕೆಂದರೆ ಈ ಮುಕ್ಕೂಟವು ತ್ರಿಯೋಗ ಶಕ್ತಿಯಂತೆ ಕಾರ್ಯನಿರ್ವಹಿಸುತ್ತದೆ. ಮುಕ್ಕೂಟದ ಆಧಾರಸ್ತಂಭಗಳೆಂದರೆ 1) ಆಹಾರ, 2) ವ್ಯಾಯಾಮ, 3) ಔಷಧ. ಆಹಾರದಿಂದ ಉತ್ಪತ್ತಿಯಾಗುವ ಗ್ಲುಕೋಸ್‌ಅನ್ನು ವ್ಯಾಯಾಮವು ಭಸ್ಮ ಮಾಡಿ ಶರೀರಕ್ಕೆ ಅಗತ್ಯವಾದ ಇಂಧನ ಶಕ್ತಿ ಒದಗಿಸುತ್ತದೆ. ಔಷಧಗಳಿಂದಲೂ ವ್ಯಾಧಿನಿಯಂತ್ರಿಸಬಹುದು.
ಚಿಕಿತ್ಸೆ, ಸವಾಲು:ಮಧುಮೇಹವೆಂದರೆ ಮಧುವಿನಂತೆ ಸಿಹಿಯಾಗಿರುವ ಸಕ್ಕರೆ ಅಂಶ ಮೂತ್ರದ ಮೂಲಕ ವಿಸರ್ಜನೆ ಆಗುತ್ತಿರುವುದು ಎಂದರ್ಥ.
ಅನೇಕರಲ್ಲಿ ಮಧುಮೇಹ ಚಿಕಿತ್ಸೆ ಬೇಕೇ ಅಥವಾ ಬೇಡವೇ ಎಂಬ ಜಿಜ್ಞಾಸೆ ಇದೆ. ಈ ವ್ಯಾಧಿಗೆ ಚಿಕಿತ್ಸೆ ಬೇಕು. ಏಕೆಂದರೆ ಮಿತಿ ಮೀರಿದ ಸಕ್ಕರೆ, ಅಂಶ ದೇಹದಲ್ಲಿರುವ ಸಮಗ್ರ ಅಂಗಾಂಗಗಳಿಗೆ ಹಾನಿ ಮಾಡುವುದರಿಂದ ಮಾನವನಲ್ಲಿ ಹತ್ತು ಹಲವು ವ್ಯಾಧಿಗಳು ಹುಟ್ಟುತ್ತವೆ.
ಮಧುಮೇಹ ಕುರಿತಂತೆ ಉತ್ತಮ ಚಿಕಿತ್ಸೆ ಹಾಗೂ ಸವಾಲು ಅಥವಾ ಸಲಹೆಗಳು
1) ಸರಿಯಾದ ಮಟ್ಟದಲ್ಲಿ ರಕ್ತದಲ್ಲಿ ಗ್ಲುಕೋಸ್ ಅಂಶವನ್ನೂ, ರಕ್ತದೊತ್ತಡವನ್ನು, ಜಿಡ್ಡಿನ ಅಂಶವನ್ನು ಇಟ್ಟುಕೊಂಡಿದ್ದರೆ ಆಗ ಮಧುಮೇಹದಿಂದ ಆಗಬಹುದಾದ ಹಲವು ತೊಡಕುಗಳನ್ನು ಕಡಿಮೆ ಮಾಡಬಹುದು. 2) ಮಧುಮೇಹ ಕುರಿತು ಮಧುಮೇಹಿಗಳಿಗೆ ತಿಳಿವಳಿಕೆ ಕೊಡುವುದರಿಂದ ಮಧುಮೇಹ ಎದುರಿಸಲು ಸಿದ್ಧಗೊಳಿಸಬಹುದು. 3) ಮಧುಮೇಹಿಗಳ ಜೀವನಶೈಲಿ ಉತ್ತಮಪಡಿಸುವುದು, ಮಧುಮೇಹಿಗಳು ಮಧುಮೇಹದೊಂದಿಗೆ ಸಹ ಜೀವನ ನಡೆಸುವ ಕಲೆಯನ್ನು ತಿಳಿಸಿಕೊಡಬೇಕು. 4) ನೂರು ಮಂದಿ ಯುವ ಜನಾಂಗದಲ್ಲಿ ಒಬ್ಬರು ಪೂರ್ವಭಾವಿ ಮಧುಮೇಹಿ ಇದ್ದಾರೆ ಎಂಬ ನಿಜಾಂಶ ಶೇ 7ರಿಂದ 10 ಮಂದಿಗೆ ಮಾತ್ರ ತಿಳಿದಿರುತ್ತದೆ. ಆದ್ದರಿಂದ ಅವರು ಮುಂದಿನ ಮೂರು ವರ್ಷಗಳಲ್ಲಿ ಮಧುಮೇಹಿಗಳಾಗುತ್ತಾರೆ. ಇದನ್ನು ತಿಳಿವಳಿಕೆಯಿಂದ ಹಿಮ್ಮೆಟ್ಟಿಸಬಹುದು, 5) ಮಧುಮೇಹದ ಔಷಧಿಗಳನ್ನು ಕ್ರಮಬದ್ಧವಾಗಿ ಅನುಸರಿಸಬೇಕು. ಇದರಿಂದ ಆರೋಗ್ಯ ಲಾಭ ಸಿಗುತ್ತದೆ
ಕೋವಿಡ್ ಮತ್ತು ಮಧುಮೇಹ
ಕೋವಿಡ್‌ನಿಂದ ಮೃತರಾದ ಬಹುತೇಕ ಮಂದಿಯಲ್ಲಿ ಮಧುಮೇಹ ಇರುವುದು ಗೊತ್ತಾಗಿದೆ. ಸೋಂಕಿತರಾಗಲು ಹಾಗೂ ಸೋಂಕಿನಿಂದ ಪ್ರಾಣಹಾನಿ ಉಂಟಾಗಲು ಪ್ರಮುಖ ಕಾರಣ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವುದು. ಹೀಗಾಗಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಅವಶ್ಯವಿದೆ.
ದೀರ್ಘಕಾಲ ಗ್ಲುಕೋಸ್ ನಿಯಂತ್ರಣದಲ್ಲಿಲ್ಲದ ಸ್ಥಿತಿಯಲ್ಲಿರುವ ಮಧುಮೇಹವು, ರೋಗ ನಿರೋಧಕ ಪ್ರಕ್ರಿಯೆ ನಡೆಯದಂತೆ ತಡೆಯೊಡ್ಡುತ್ತದೆ. ಇದರಿಂದ ದೇಹ ಮತ್ತಷ್ಟು ದುರ್ಬಲವಾಗುತ್ತದೆ.
ಸಮತೋಲಿತ ಆಹಾರ, ಚಟುವಟಿಕೆಯಿಂದ ಕೂಡಿದ ಜೀವನ ಶೈಲಿ, ವ್ಯಾಯಾಮ ಹಾಗೂ ಯೋಗದಿಂದ ರೋಗ ನಿರೋಧಕ ಶಕ್ತಿಯನ್ನು ಪಡೆಯಬಹುದು. ಜಂಕ್‌ಫುಡ್, ಅತಿಯಾದ ಸಕ್ಕರೆ ಅಂಶವಿರುವ ಆಹಾರ, ಪಾನೀಯದಿಂದ ದೂರ ಇರಬೇಕು.
ಮಧುಮೇಹ ಕೈಪಿಡಿ
ಮಧುಮೇಹ ತಜ್ಞ ಮೈಸೂರಿನ ಡಾ.ವಿ.ಲಕ್ಷ್ಮೀನಾರಾಯಣ ಅವರು ‘ಮಧುಮೇಹ–ಮನುಕುಲದ ಅಗೋಚರ ಶತ್ರು’ ಎಂಬ ಪುಸ್ತಕ ಕೂಡ ಬರೆದಿದ್ದಾರೆ. ಮಧುಮೇಹ ಕುರಿತ ಸಮಗ್ರ ಕೈಪಿಡಿ ಕೂಡ. ಇದಕ್ಕೆ ಅವರ ಪುತ್ರ ಡಾ.ಸೂರಜ್ ತೇಜಸ್ವಿ ಕೂಡ ಕೈಜೋಡಿಸಿದ್ದಾರೆ. ಇದು ಆರು ಮುದ್ರಣ ಕಂಡಿದೆ.
320 ಪುಟಗಳ ಈ ಪುಸ್ತಕದ ಬೆಲೆ ₹ 250. ಸ್ವಪ್ನ ಬುಕ್ ಹೌಸ್‌ನಿಂದ ಈ ಕೃತಿ ಪ್ರಕಟಿಸಲಾಗಿದೆ. ಮಧುಮೇಹದ ನಿವಾರಣೋಪಾಯಗಳು ಈ ಕೃತಿಯಲ್ಲಿವೆ. ಮಧುಮೇಹಿಗಳಿಗೆ ಹಾಗೂ ಮಧುಮೇಹ ಬಾರದಂತೆ ತಡೆಯಲು ಬಯಸುವವರಿಗೆ ಉಪಯುಕ್ತ. ಜನಸಾಮಾನ್ಯರಿಗೆ ಅರ್ಥವಾಗುವಂತೆ ವಿವರಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ: ಡಾ.ವಿ.ಲಕ್ಷ್ಮೀನಾರಾಯಣ, ಮೊ: 9449824994, ಇ-ಮೇಲ್: drvln7733@gmail.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.